ಬುಧವಾರ, ಡಿಸೆಂಬರ್ 13, 2017

ಪ್ರತೀ ರಾಜಕುಮಾರಿಯ ಬದುಕೂ ಬೆಳಗಲಿ.

ಹಾಡು, ಹಸೆ, ರಂಗೋಲಿ, ಓದು , ಮನೆ ಮುಂದಿನ ಗಾರ್ಡನ್, ಬಾಲ್ಕನಿಯ ಮೂಲೆಯಲ್ಲಿನ ಗುಬ್ಬಚ್ಚಿ ಗೂಡು, ಮೋಡದ ಮರೆಯ ಸೂರ್ಯ ಇವೆಷ್ಟೇ ಪ್ರಪಂಚ ಅಂದುಕೊಂಡಿದ್ದ ಅವಳ ಬದುಕು ನಾಳೆ ಬೆಳಗಾಗುವ ಹೊತ್ತಿಗೆ ಬದಲಾಗಲಿದೆ. ಹಗಲುಗನಸು, ಹುಸಿಮುನಿಸು, ಕೀಟಲೆ, ಅಧಿಕಪ್ರಸಂಗಿತನ ಇಷ್ಟಕ್ಕೇ ಸೀಮಿತವಾಗಿದ್ದ ಅವಳ ಜಗತ್ತು ನಾಳೆ ಆಗುವಷ್ಟರಲ್ಲಿ ಬದಲಾಗಲಿದೆ.  ಕನ್ನಡಿಯ ಮುಂದೆ ನಿಂತಿರುವವಳ ಕಣ್ಣುಗಳಲ್ಲೀಗ ನೂರು ಕನಸು, ರೆಪ್ಪೆಗಳೊಳಗೆ ಸುಳ್ಳೇ ಸುಳ್ಳು ಆತಂಕ. ಇಡೀ ರಾತ್ರಿ ಸುರಿದ ಮಳೆಗೆ ಹಸನಾದ ಒದ್ದೆ ಮಣ್ಣಿನ ಕಂಪು ಅವಳನ್ನೊಮ್ಮೆ ಬಳಸಿ ಅಲ್ಲೇ ಅಂತರ್ಧಾನವಾಯಿತು. ನಾಳೆ ಹಸೆಯೇರುವವಳ ಮುಂದೀಗ ನೆನಪುಗಳ ರಾಶಿ.

ಮನೆ ಪಕ್ಕದ ಚಿಲ್ಟೆ ಪಲ್ಟೆಗಳನ್ನೆಲ್ಲಾ ಸೇರಿಸಿ ಕಾಡಿಗೆ ಅಣಬೆ ಹೆಕ್ಕಲು ಹೋದದ್ದು, ಒಂದಿಡೀ ದಿನವನ್ನು ನದಿ ತೀರದಲ್ಲಿ ನವಿಲುಗರಿ ಹುಡುಕುತ್ತಾ ಕಳೆದದ್ದು, ಹರಿವ ತೊರೆಯ ಮುಂದೆ ಹೊಂಬಣ್ಣದ ಮೀನಿಗಾಗಿ ಗಂಟೆಗಟ್ಟಲೆ ಕಾದು ಕೂತದ್ದು, ಮಣ ಭಾರದ ಕಿರೀಟ, ಸುತ್ತಿದಷ್ಟೂ ಮುಗಿಯದ ಸೀರೆ ಉಟ್ಟುಕೊಂಡು ಶಾಲೆಯ ವೇದಿಕೆಯಲ್ಲಿ ರಾಣಿ ಅಬ್ಬಕ್ಕನಾಗಿ ಅಬ್ಬರಿಸಿದ್ದು, ಉದ್ದ ಲಂಗಕ್ಕಾಗಿ ಅಪ್ಪನ ಜೊತೆ ಜಗಳ ಮಾಡಿದ್ದು,  ಮಂಡಿ ಮೇಲಾದ ತರಚು ಗಾಯವನ್ನು ಅಮ್ಮನಿಂದ ಮುಚ್ಚಿಡಲು ಪಟ್ಟ ಪರಿಪಾಡಲು... ಎಲ್ಲಾ ನಿನ್ನೆ ಮೊನ್ನೆ ನಡೆದದ್ದೇನೋ ಅನ್ನುವಷ್ಟು ಹಸಿರಾಗಿರುವಾಗಲೇ ಅವಳ ಮುಂದೆ ಈಗ ರಾಜಕುಮಾರನೊಬ್ಬ ಬಿಳಿ ಕುದುರೆ ಏರಿ ಬರುವ ಕನಸು, ಅಥವಾ ಬರಲೇಬೇಕಾದ ಅನಿವಾರ್ಯತೆ.

ಶಾಲೆ, ಕಾಲೇಜು, ಓದು, ಬದುಕಿನ ಅನಿವಾರ್ಯತೆಗಳು, ಅಗತ್ಯದ ಹೊಂದಾಣಿಕೆ, ಅಥವಾ ಇನ್ಯಾವುದೇ ಚೆಂದದ ಹೆಸರಿಟ್ಟರೂ ಒಂದು ದಿನ ಎಲ್ಲರೂ ತಮ್ಮಲ್ಲಿನ ಮುಗ್ಧತೆಯನ್ನು ಕಳೆದುಕೊಳ್ಳಲೇಬೇಕಾಗುತ್ತದೆ. ಹಾಡಿ, ಕುಣಿದು, ನಲಿದ ದಿನಗಳು ಬರಿ ನೆನಪಾಗಿಯೇ ಉಳಿದುಬಿಡುತ್ತವೆ. ಬಹುಶಃ ದೊಡ್ಡವರಾಗುವ, ಬದುಕುವ ಪ್ರಕ್ರಿಯೆಗೆ ನಾವು ತೆರಬೇಕಾಗಿರುವ ಬಹುದೊಡ್ಡ ಬೆಲೆ ಮುಗ್ಧತೆಯನ್ನು ಕಳೆದುಕೊಳ್ಳುವುದೇ ಆಗಿದೆ.

ಮನೆ, ಸುತ್ತಲಿನ ಪ್ರಕೃತಿ, ಅದರ ಚೈತನ್ಯ, ಅದು ಉಕ್ಕಿಸುವ ಹುಮ್ಮಸ್ಸು ಒಂದು ರೀತಿಯಲ್ಲಿ ಪ್ರತಿಯೊಬ್ಬರ ಬದುಕಲ್ಲೂ ಪ್ರಭಾವ ಬೀರಿದಂತೆ, ಹಾಸ್ಟೆಲ್, ಪಿ.ಜಿ ಗಳು ಮತ್ತೊಂದು ರೀತಿಯ ಪ್ರಭಾವ ಉಳಿಸಿಬಿಡುತ್ತದೆ. ಅದರಲ್ಲೂ ಹುಡುಗಿಯರ ಹಾಸ್ಟೆಲ್, ಪಿ.ಜಿಗಳೆಂದರೆ ಅದೊಂದು ಕಲರ್ಫುಲ್ ಲೋಕ.

ರಾಶಿ ರಾಶಿ ಗೊಂದಲಗಳು, ಸಣ್ಣ ಮಟ್ಟಿಗಿನ ಅಸೂಯೆ, ತಣ್ಣಗೆ ಹೊಗೆಯಾಡುವ ಮತ್ಸರ, ಗೋಡೆಗಳಿಗೂ ಗೊತ್ತಾಗದಂತೆ ಹುಟ್ಟಿಕೊಳ್ಳುವ ಗಾಸಿಪ್ ಗಳು, ಅದು ಸರಿಯಿಲ್ಲ, ಇದು ಸರಿಯಾಗಿಲ್ಲ ಎಂದೆಲ್ಲಾ ಗೊಣಗುವ ಮನಸ್ಸುಗಳು, ಮೂರ್ಹೊತ್ತೂ ಕನ್ನಡಿಗೆ ಅಂಟಿಕೊಂಡಿರುವ ಜೀವಗಳು, ಆಗಾಗ ಕಣ್ಣಕೊಳವ ಕದಡುವ ಕಾಡಿಗೆ, ಕಣ್ಣು ಒಂದಿಷ್ಟು ದೊಡ್ಡದಾಗಿದ್ದಿದ್ದರೆ, ಮೂಗು ತುಸು ನೀಳವಾಗಿದ್ದಿದ್ದರೆ, ಸ್ವಲ್ಪ ಬೆಳ್ಳಗಿದ್ದಿದ್ದರೆ... ಗಳಂತಹ 'ರೆ' ಸಾಮ್ರಾಜ್ಯದ ಹಳಹಳಿಕೆಗಳು, ಇವೆಲ್ಲದರ ನಡುವೆ 'ಮೊದಲಿನಂತೆ ಸ್ವಚ್ಛಂದವಾಗಿ ಇರಲಾಗುತ್ತಿಲ್ಲ, ನಾನು ಇನ್ಯಾರದೋ ಬದುಕನ್ನು ಬದುಕುತ್ತಿದ್ದೇನೆ' ಅನ್ನುವ ಕೊರಗು ಅವಳ ಮನಸ್ಸನ್ನು ಒಡೆದ ಕನ್ನಡಿಯಾಗಿಸುತ್ತದೆ; ಮುಟ್ಟಿದಲ್ಲೆಲ್ಲಾ ಸೂಕ್ಷ್ಮ ಗೀರುಗಳು.

ಕಾಣದ ನೋವು, ಹತಾಶೆಗಳನ್ನು ಪಿ.ಜಿಯ ಹೊಸ್ತಿಲೊಳಗೆ ಹೂತಿಡಬೇಕಾದ ಅಸಹಾಯಕತೆಯ ಮಧ್ಯೆಯೇ ಒಂದು ದಿನ ಅಪ್ಪನೋ, ಅಮ್ಮನೋ ಕರೆ ಮಾಡಿ ನಾಳೆ ವರಪರೀಕ್ಷೆಗೆ ರೆಡಿಯಾಗು ಅನ್ನುತ್ತಾರೆ. ಅವಳೂ ತನ್ನ ಹೊಯ್ದಾಟಗಳನ್ನೆಲ್ಲಾ ಮುಚ್ಚಿಟ್ಟು, ಸೀರೆ ಉಟ್ಟು, ಮಲ್ಲಿಗೆ ಮುಡಿದು ರೆಡಿಯಾಗುತ್ತಾಳೆ. ಹುಡುಗ ಒಪ್ಪಿ, ಅವಳಿಗೂ ಇಷ್ಟವಾದರೆ ಭಾವನದಿಯ ಹರಿವು ಸರಾಗ. ಒಪ್ಪದಿದ್ದರೆ ಮತ್ತೊಂದು ಪರೀಕ್ಷೆವರೆಗೂ ಅದೇ ಹೊಯ್ದಾಟ. ಕೆಲವೊಮ್ಮೆ ಯಾರದೋ ಒತ್ತಾಯಕ್ಕೆ ಕಟ್ಟುಬಿದ್ದು ಇಷ್ಟವಿಲ್ಲದ ಹುಡುಗನ‌ ಕೈ ಹಿಡಿಯಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗುತ್ತದೆ. ಆಗಲೇ ಅವಳ ಮನದ ಕನ್ನಡಿಯ ಗೀರು ಸ್ಪಷ್ಟವಾಗುವುದು, ಅವಳೆದೆಯ ನದಿ ಸದ್ದಿಲ್ಲದೆ ಬತ್ತಿ ಹೋಗುವುದು.

ಎಲ್ಲಾ ನೋವುಗಳ ಮೀರಿ ಜಗತ್ತನ್ನು ಚೆಂದಗಾಣಿಸುತ್ತೇನೆಂದು ಹೊರಡುವ ಪ್ರತಿ ಹೆಣ್ಣುಮಗಳ ಮನಸ್ಸೂ ಮದುವೆಯ ಹೊಸ್ತಿಲಲ್ಲೊಮ್ಮೆ ಗೊಂದಲಕ್ಕೆ ಬಿದ್ದು ಬಿಡುತ್ತದೆ. ಅದು 'ಅಡುಗೆ ಬರಲ್ಲ' ಅನ್ನುವಲ್ಲಿಂದ ಹಿಡಿದು, 'ಪರಿಚಯವಿರದವರ ಮಧ್ಯ ಹೇಗಪ್ಪಾ ಬದುಕಲಿ?' ಅನ್ನುವವರೆಗಿನ ಹಿಂಜರಿಕೆ. 'ಮನೆಯವರನ್ನೆಲ್ಲಾ ಬಿಟ್ಟು ಹೇಗಿರಲಿ?' ಎಂಬಲ್ಲಿಂದ 'ಎಲ್ಲಿ, ಏನು ಮಾತಾಡಿದರೆ ತಪ್ಪಾಗಿಬಿಡುತ್ತೋ' ಎಂಬಲ್ಲಿವರೆಗಿನ ಕಳವಳ. 'ಹವ್ಯಾಸಗಳನ್ನೆಲ್ಲಾ ಬಿಡಬೇಕಾಗುತ್ತದೇನೋ?' ಅಂತನ್ನುವಲ್ಲಿಂದ 'ಅಡುಗೆ ಮನೆಗಷ್ಟೇ ಸೀಮಿತವಾಗಿಬಿಡುತ್ತೇನೇನೋ?' ಅಂತನ್ನುವವರೆಗಿನ ದಿಗಿಲು. ಸರ್ವ ಆತಂಕ, ಹಿಂಜರಿಕೆ, ದಿಗಿಲು, ಕಳವಳಗಳ ಮೀರಿ, ಎಲ್ಲಾ ಬಂಧಗಳನ್ನು ತೊರೆದು, ಎಲ್ಲಾ ನೆನಪುಗಳನ್ನು ಕಟ್ಟಿಹಾಕಿ ಮತ್ತೊಂದು ಮನೆ ಬೆಳಗ  ಹೊರಡುವ ಪ್ರತಿ ಮನೆಯ ರಾಜಕುಮಾರಿಯ ಬದುಕೂ ಬೆಳಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ