ಗುರುವಾರ, ಡಿಸೆಂಬರ್ 28, 2017

ಬುದ್ಧನಿಂದ ಅಂಗುಲಿಮಾಲನವರೆಗೆ

ಹಿಂಸೆಯಿಂದ ಅಹಿಂಸೆಯತ್ತ ಹೊರಳಲು, ತಾನೇ ಸೃಷ್ಟಿಸಿಕೊಂಡ ಅಹಮ್ಮಿನ ಕೋಟೆಯಿಂದ ಹೊರಬರಲು, ಬದುಕಿನ ಎಲ್ಲಾ ಲಕ್ಸುರಿಗಳೂ ಕ್ಷುಲ್ಲಕ ಅನಿಸಲು, ತಾನು-ತನ್ನದು-ತನ್ನವರು ಅನ್ನುವ ಭ್ರಮೆಗಳೆಲ್ಲಾ ಕಳಚಿ ಬೀಳಲು ಅನಾಥ ಭಾವವೊಂದೇ ಸಾಕಾಗುತ್ತದೆ.

ಸಿದ್ದಾರ್ಥ ಬುದ್ದನಾಗಲು ಕಾರಣವಾದದ್ದು, ಬಾಹುಬಲಿ ರಾಜ್ಯ ತೊರೆಯಲು ಕಾರಣವಾದದ್ದೂ ಈ ಅನಾಥ ಭಾವವೇ. ಜ್ಞಾನೋದಯ, ಬೋಧಿ ವೃಕ್ಷ, ವೈರಾಗ್ಯ ಇವೆಲ್ಲಾ ಶಬ್ಧವೈಭವಗಳಷ್ಟೇ. ನಿಜಕ್ಕೂ ಮನುಷ್ಯ ಆತ್ಮವಿಮರ್ಶೆ ಮಾಡಿಕೊಂಡಷ್ಟು, ಒಂಟಿತನದ ಸಂಕಟವನ್ನು ಅನುಭವಿಸಿದಷ್ಟು , ಯಾವುದೂ ಶಾಶ್ವತವಲ್ಲ ಅನ್ನುವ ಭಾವ ಗಟ್ಟಿಯಾದಷ್ಟು, ಬದುಕಿನ ಬರ್ಬರತೆಯನ್ನೂ ಎಂಜಾಯ್ ಮಾಡುವಷ್ಟು ಪಕ್ವವಾದಂತೆ ಅವನ ಮನಸ್ಸು ಸೂಕ್ಷ್ಮವಾಗುತ್ತಾ ಹೋಗುತ್ತದೆ, ಸುತ್ತಲಿನ ಪ್ರತೀ ಕ್ರಿಯೆಗಳಿಗೂ ಸ್ಪಂದಿಸುತ್ತಾ ಹೋಗುತ್ತಾನೆ. ಕಣ್ಣೆದುರಿಗೆ ವಿಲ ವಿಲ ಒದ್ದಾಡುತ್ತಾ ಗುಬ್ಬಿ ಮರಿಯೊಂದು ಪ್ರಾಣ ಬಿಟ್ಟಾಗ ಎಷ್ಟು ನೋವಾಗುತ್ತೋ ಅದೇ ತೀವ್ರತೆಯನ್ನು ಕೋಳಿ ಮರಿ ಸತ್ತಾಗಲೂ ಅನುಭವಿಸುತ್ತಾನೆ. ಆಗ ಅವನೊಳಗೇ ಒಂದು ಬೋಧಿ ವೃಕ್ಷ ಚಿಗುರುತ್ತದೆ, ಅರಿವಿನ ಜ್ಞಾನ ತನ್ನಿಂತಾನಾಗಿಯೇ ಹಬ್ಬಿಕೊಳ್ಳುತ್ತದೆ. ಬಹುಶಃ ಬುದ್ಧನಿಗೂ, ಬಾಹುಬಲಿಗೂ ಕೊನೆಗೆ ಅಂಗುಲಿ ಮಾಲನಿಗೂ ಆದದ್ದು ಇದೇ ಇರಬೇಕು.

ಧ್ಯಾನವೆಂಬುವುದು ಹಿಮಾಲಯ ಏರಿ ಯಾವುದೋ ವೃಕ್ಷದಡಿಯಲ್ಲಿ ವರ್ಷಗಟ್ಟಲೆ ಕಣ್ಣು ಮುಚ್ಚಿ ಕೂತು ಒಳಗಿನ ಆಗುಹೋಗುಗಳನ್ನು ಅರಿತುಕೊಳ್ಳುವುದಷ್ಟೇ ಅಲ್ಲ. ಅದು ನಮ್ಮ ಪ್ರತೀ ಕ್ರಿಯೆಗಳ ಬಳಿಕ ಉಳಿದು ಬಿಡುವ ಒಂದು ಕ್ಷಣದ ನಿಶಬ್ದ. ದಿನದ ಯಾವುದೋ ಒಂದು ತಿರುವಿನಲ್ಲಿ ಸುಮ್ಮನೆ ಕಾಡುವ ಚಣ ಹೊತ್ತಿನ ಮೌನ. ಎರಡು ನಿಡಿದಾದ ಉಸಿರಿನ ಮಧ್ಯೆ ಕಣ್ಣು ಬಿಡುವ ಪುಟ್ಟ ನೀರವತೆ. ಶಬ್ದಗಳ ಸಂತೆಯೊಳಗೂ ಹುಟ್ಟುವ ಶಾಂತತೆ.  ಜಗತ್ತಿನ ಮಹಾನುಭಾವರೆಲ್ಲರ ಭಾವಗಳು ಪರಿಪಕ್ವವಾದದ್ದು ಇಂತಹ ಕೆಲವು ನೀರವ, ನಿಶಬ್ದ,  ಮೌನ ಮತ್ತು ಶಾಂತತೆಯಲ್ಲೇ.  ಕಣ್ಣಿಗೆ ಕಾಣದ ಮಾನವತಾ ಲೋಕದ ಅರಿವು ಒಳಗಣ್ಣುಗಳಲ್ಲಿ ಪ್ರತಿಬಿಂಬಿಸುವುದು ಇಂತಹ ಕ್ಷಣಗಳಲ್ಲೇ.

ಎಲ್ಲಾ ಇದ್ದೂ ಯಾವುದೂ ತನ್ನದಲ್ಲ ಅನ್ನುವ ಭಾವ ಬಲಿತಂತೆ ಮನುಷ್ಯನ ಅಹಂಕಾರ ಇಂಚು ಇಂಚಾಗಿ ಸಾಯತೊಡಗುತ್ತದೆ. ಕೊನೆಗೊಂದು ದಿನ ಎಲ್ಲಾ ಅಹಂ, ಸಿಟ್ಟು, ಸೆಡವು, ಅನಗತ್ಯದ ಆವೇಶ ಎಲ್ಲಾ ಖಾಲಿಯಾಗುತ್ತದೆ. ಆಗವನು ನಿಜಾರ್ಥದಲ್ಲಿ ಮನುಷ್ಯನಾಗುತ್ತಾನೆ, ಬುದ್ಧ ಅರಮನೆ ತೊರೆದು ಹೊರಟದ್ದೂ ಎಲ್ಲಾ ಬರಿದಾದ ಒಂದು ಸಂಧಿಕಾಲದಲ್ಲೇ. ರೋಗ, ಮುಪ್ಪು, ಸಾವು ಇವೆಲ್ಲಾ ಬರೀ ನೆಪಗಳಷ್ಟೇ.

ಹಾಗೆ ಬರಿದಾಗಲು, ಖಾಲಿಯಾಗಲು ಬೇಕಾಗಿರುವುದು ಬೋಧಿವೃಕ್ಷವಲ್ಲ, ಇತರರೂ ತಮ್ಮಂತೆಯೇ ಅನ್ನುವ ಸಣ್ಣ ಅರಿವು. ಆ ಅರಿವು ಎಲ್ಲರಲ್ಲೂ ಮೂಡಬೇಕಾಗಿರುವುದು, ಎಲ್ಲರನ್ನೂ ಒಳಗೊಳ್ಳಬೇಕಾಗಿರುವುದು ಈ ಹೊತ್ತು ಜಗತ್ತು ಬಯಸುತ್ತಿರುವ ತುರ್ತು.

ಎಲ್ಲರನ್ನೂ ಅಂದರೆ, ಬುದ್ಧನ ಅನುಯಾಯಿ ಅನ್ನುತ್ತಲೇ ಅಮಾಯಕರ ಮಾರಣ ಹೋಮ ನಡೆಸುತ್ತಿರುವ ಮಯನ್ಮಾರಿಗರನ್ನೂ, ಪ್ರವಾದಿಯವರ ಸಂದೇಶ ಪಾಲಿಸುತ್ತೇನೆ ಅನ್ನುತ್ತಲೇ ರಕ್ತಕಾಲುವೆ ಹರಿಸುವ ಹಿಂಸಾಪ್ರಶುಗಳನ್ನೂ, ಗುರುನಾನಕರ ಕರುಣೆ ಮರೆತ ಅವರ ಶಿಷ್ಯರನ್ನೂ, ಏಸುವಿನ ಹಿಂಬಾಲಕರಾಗಿದ್ದೂ ದ್ವೇಷ ಹರಡುವವರನ್ನು, ಕೃಷ್ಣನ ಭಕ್ತರೆನ್ನುತ್ತಲೇ ಮುಗ್ಧರ ಪ್ರಾಣ ಬಲಿಪಡೆಯುವವರನ್ನು ...  ಎಲ್ಲರನ್ನೂ ಒಳಗೊಳ್ಳಬೇಕು.

ಆಗಷ್ಟೇ ಪ್ರತಿ ಅಂಗುಲಿಮಾಲನಲ್ಲೂ ಗುಪ್ತವಾಗಿ ಪ್ರವಹಿಸುವ ಬುದ್ದರು ಪ್ರಕಟಗೊಳ್ಳಲು ಸಾಧ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ