ಬುಧವಾರ, ಸೆಪ್ಟೆಂಬರ್ 5, 2018

ಎಲ್ಲಿರುವೆ ಪರಮಗುರು?

ಆಗಿನ್ನೂ ಲಕ್ಸುರಿ ಅಂತಲೇ ಅನ್ನಿಸಿಕೊಂಡಿದ್ದ ಬೂದಿ ಬಣ್ಣದ ಬಜಾಜ್ ಚೇತಕ್ ನಿಂದ ಕಟ್ಟುಮಸ್ತಾದ ವ್ಯಕ್ತಿಯೊಬ್ಬರು ಇಳಿಯುತ್ತಿದ್ದರೆ ಇಡೀ ಶಾಲೆ ಒಮ್ಮೆ ಅವರನ್ನು ತಿರುಗಿ ನೋಡಿತ್ತು. ಗಂಭೀರ ಭಾವ, ಅದಕ್ಕೊಪ್ಪುವ ಕನ್ನಡಕ, ಟಾಕು-ಟೀಕು ಉಡುಗೆ, ಶಿಸ್ತಿನ ನಡಿಗೆ, ನಡೆಯುವಾಗ ಟಕ-ಟಕ ಸದ್ದು ಮಾಡುವ ಮಿರಿ ಮಿರಿ ಮಿಂಚುವ ಶೂ, ಕುತೂಹಲದ ನೂರು ಕಣ್ಣುಗಳು ತನ್ನನ್ನು ಹಿಂಬಾಲಿಸುತ್ತಿದ್ದುದು ಗೊತ್ತಿದ್ದೂ ಒಂದಿನಿತೂ ಬದಲಾಗದ ಮುಖಭಾವ... 'ಡೇಸಾ ಸರ್' ಅನ್ನುವಾಗೆಲ್ಲಾ ನನಗೆ ಮೊದಲು ನೆನಪಾಗುವ ಚಿತ್ರಣಗಳಿವು.

ಸುಮಾರು ಸಾವಿರದ ಇನ್ನೂರರಷ್ಟು ವಿದ್ಯಾರ್ಥಿಗಳಿದ್ದ ನಮ್ಮ ಶಾಲೆಗೆ ಹೊಸದಾಗಿ ಸೇರಿದ್ದ ಶಿಕ್ಷಕರವರು. ಮುಖ್ಯೋಪಾಧ್ಯಾಯರು ಮೊದಲ ಬಾರಿ ನಮಗವರನ್ನು ಪರಿಚಯಿಸಿದಾಗ, ಹತ್ತರಲ್ಲಿ ಹನ್ನೊಂದನೆಯವರಾಗಿ ಇವರೂ ಉಳಿದುಬಿಡುತ್ತಾರೆ ಅಂತ ಅನ್ನಿಸಿತ್ತಷ್ಟೇ. ಮೇಲಾಗಿ ಬೂಟಿನ ಶಬ್ಧವೊಂದನ್ನು ಬಿಟ್ಟರೆ ನಮ್ಮ ಗಮನಕ್ಕೆ ಪಾತ್ರವಾಗುವಂತಹ 'ವಿಶೇಷ' ಲಕ್ಷಣಗಳು ಅವರಲ್ಲಿ ಇರಲೂ ಇಲ್ಲ.

ಆದರೆ ಅವರು ಬಂದ ಮರುದಿನ ಸೀನಿಯರ್ ಹುಡುಗರಿಂದ ದೊರೆತ ಅಮೂಲ್ಯ ಮಾಹಿತಿಯೊಂದು ನಮ್ಮನ್ನು ಕುತೂಹಲ ಮತ್ತು ಚಿಂತೆ ಎರಡಕ್ಕೂ ಏಕಕಾಲದಲ್ಲಿ ದೂಡಿತ್ತು. ಈ ಫ್ರಾನ್ಸಿಸ್ ಡೇಸಾ ಮಿಲಿಟರಿ ಸೇವೆಯಲ್ಲಿದ್ದರು, ಈಗ ಶಿಕ್ಷಕರಾಗಿ ನಮ್ಮ ಶಾಲೆ ನಿಯೋಜಿತರಾಗಿದ್ದಾರೆ ಅನ್ನುವುದು ಅವರು ಕೊಟ್ಟ ಮಾಹಿತಿಯ ಒಟ್ಟು ಸಾರಾಂಶ. ಅಪರಿಮಿತ ಧೈರ್ಯಶಾಲಿಗಳು, ಶೂರರು, ವೀರರು ಅಂತೆಲ್ಲಾ ಮನೆಯಲ್ಲಿ ಸೈನಿಕರ ಬಗ್ಗೆ ಮಾತಾಡುವುದನ್ನು ಕೇಳಿಸಿಕೊಂಡಿದ್ದ ನಮಗೀಗ ಮಾಜಿ ಸೈನಿಕನೊಬ್ಬನನ್ನು ನಮ್ಮದೇ ಶಾಲೆಯಲ್ಲಿ ನೋಡುತ್ತಿದ್ದೇವೆ ಅನ್ನುವ ಸೋಜಿಗ.

ಸೈನಿಕರ್ಯಾರೂ ಊಟ ಮಾಡುವುದಿಲ್ಲ, ಯಾವುದೋ ಗುಳಿಗೆ ನುಂಗಿ ಹಸಿವು ನೀಗಿಸುತ್ತಾರೆ ಅಂತೆಲ್ಲಾ ಚಂದಮಾಮ, ಬಾಲಮಂಗಳದ ಕಥೆಗಳು ನಮಗೆ ಹೇಳಿದ್ದರಿಂದಾಗಿ ಒಮ್ಮೆ ಅವರನ್ನು ಕೇಳಬೇಕು, ರೈಫಲ್ ಹಿಡಿಯೋದು ಹೇಗೆ?, ಶಾಲೆಯ ಮೈದಾನವನ್ನೂ ಅದರಾಚೆಗಿನ ಸರ್ಕಾರೀ ನಿವೇಶನವನ್ನೂ ಪ್ರತ್ಯೇಕಿಸುವ ಮುಳ್ಳು ಬೇಲಿಯಂತೆಯೇ ದೇಶದ ಗಡಿಯೂ ಇರುತ್ತದಾ?, ಸೈನಿಕರ್ಯಾರೂ ರಾತ್ರಿ ನಿದ್ರೆ ಮಾಡಲ್ವಾ? ನಮ್ಮ ದೇಶದವರ ತರಾನೇ ಡ್ರೆಸ್ ಮಾಡ್ಕೊಂಡು ಬಂದ್ರೆ ಶತ್ರುಗಳನ್ನು ಗುರುತಿಸುವುದು ಹೇಗೆ? ನೀವ್ಯಾರೂ ದೇವರನ್ನು ನಂಬುವುದಿಲ್ಲವಂತೆ ಹೌದಾ? ವೀರಪ್ಪನೂ ನಿಮ್ಗೆ ಹೆದರ್ತಾನಂತೆ ಹೌದಾ?....ಅಂತೆಲ್ಲಾ ಅವರನ್ನು ಕೇಳಿ ತಿಳಿದುಕೊಳ್ಳಬೇಕು ಅಂತ ಯೋಚಿಸುತ್ತಿದ್ದಾಗ ಬೇರೆ ಒಂದಿಬ್ಬರು ಹುಡುಗರು ಮತ್ತೊಂದು ಸುದ್ದಿ ಹೊತ್ತು ತಂದರು.


ಅವರು ತುಂಬಾ ಕೋಪಿಷ್ಟರಂತೆ, ಸಿಟ್ಟು ಬಂದ್ರೆ ಕಬ್ಬಿಣದ ಸ್ಕೇಲ್ ನಲ್ಲಿ ಹೊಡೀತಾರಂತೆ, ಯಾವುದೋ ಶಾಲೆಯಲ್ಲಿ ಯಾರಿಗೋ ಹೊಡೆದು ತಲೆಯಲ್ಲಿ ರಕ್ತ ಬಂದಿದೆಯಂತೆ ಅಂದರು. ಅಲ್ಲಿಗೆ ನಮ್ಮ ಕುತೂಹಲವೆಲ್ಲಾ ಇಳಿದು ಹೋಗಿ ಆ ಜಾಗವನ್ನು ಭಯ ಆವರಿಸಿತು.

ಸ್ಕೂಲ್‌ಗೆ ಬಂದು  ವಾರ ಕಳೆದರೂ ಅವರಿನ್ನೂ ಯಾವ ತರಗತಿಗೂ ಶಿಕ್ಷಕರಾಗಿ ನಿಯೋಜನೆಯಾಗಿರಲಿಲ್ಲ.‌ ಬೆಳಗ್ಗೆ ಸರಿಯಾಗಿ ಒಂಭತ್ತು ಗಂಟೆಗೆ ಶಾಲೆಯ ಅಂಗಳ ತಲುಪುತ್ತಿದ್ದ ಅವರ ಸ್ಕೂಟರ್, ಮೆಟ್ಟಿಲು ಹತ್ತುತ್ತಿದ್ದಾಗಿನ ಬೂಟಿನ ಶಬ್ದ ಬಿಟ್ಟರೆ ಶಾಲೆಯ ತುಂಬಾ ಹರಿದಾಡುತ್ತಿದ್ದುದು ಗಾಳಿ ಸುದ್ದಿ ಮಾತ್ರ. ಗಟೆಗೆ ಹತ್ತರಂತೆ ಅವರ ಬಗ್ಗೆ ಹುಟ್ಟಿಕೊಳ್ಳುತ್ತಿದ್ದ ಗುಲ್ಲು, ಅಂತೆ-ಕಂತೆಗಳು, ತಲೆ ಬುಡವಿಲ್ಲದ ಸುದ್ದಿಗಳು ಬ್ರೇಕಿಂಗ್ ನ್ಯೂಸ್ ಗಳಿನ್ನೂ ಹುಟ್ಟಿಕೊಳ್ಳದ ಆ ಕಾಲದಲ್ಲಿ ಅವರನ್ನು ಒಂದು ಒಳ್ಳೆಯ ಕವರ್ ಸ್ಟೋರಿಯನ್ನಾಗಿಸಿತ್ತು.
ಅಂತೂ  ವಾರ ಕಳೆದು ಎರಡು ದಿನಗಳಾದಂತೆ ನೇರ ಅವರು ನಮ್ಮ ತರಗತಿಗೇ ಬಂದರು. ತಲೆಯಲ್ಲಿ ಕಬ್ಬಿಣದ ಸ್ಕೇಲ್‌, ರಕ್ತ ಒಸರುವ ವಿದ್ಯಾರ್ಥಿಯ ಚಿತ್ರಣಗಳೇ ಓಡುತ್ತಿದ್ದವು. ಸರಿಯಾಗಿ ಉಸಿರಾಡಲೂ ಭಯವಾಗುತ್ತಿತ್ತು. ಸಹಪಾಠಿಗಳತ್ತ ತಿರುಗಿ ಮಾತನಾಡುವುದು ಬಿಡಿ, ಕಣ್ಣೆತ್ತಿ ನೋಡಲೂ ಭಯವಾಗುತ್ತಿತ್ತು. ಆವತ್ತಿನವರೆಗೂ ಮಹಿಳೆಯರನ್ನೇ ಶಿಕ್ಷಕರಾಗಿ ಪಡೆದಿದ್ದ ನಮಗೆ ಅವರ ಪಾಠ ಒಂದು ಹೊಸ ಅನುಭವ. ಒಪ್ಪವಾಗಿ ಸೀರೆ ಉಡುತ್ತಿದ್ದ ಶಿಕ್ಷಕಿಯರೆಲ್ಲಾ 'ಎಷ್ಟು ಅಮ್ಮನಂತಿದ್ದಾರೆ' ಅಂತ ಅನ್ನಿಸಿಬಿಡುತ್ತಿದ್ದರೆ, ಇವರೊಬ್ಬರು ಮಾತ್ರ ತೀರಾ ಅಪರಿಚಿತರು ಅನಿಸುತ್ತಿತ್ತು. ಅವರ ಬಗ್ಗೆ ಹಬ್ಬಿದ್ದ ಗಾಳಿ ಸುದ್ದಿಗಳು ಆ 'ಅಪರಿಚಿತತೆಯನ್ನು' ಮಾತಷ್ಟು ಗಾಢವಾಗಿಸುತ್ತಿತ್ತು.

ಆದರೆ ನಮ್ಮೆಲ್ಲಾ ಅಪನಂಬಿಕೆ, ಅಭದ್ರತೆಗಳನ್ನು ಮೀರಿ ಅರ್ಧಗಂಟೆಯಲ್ಲೇ ನಮಗವರು ಆಪ್ತರಾದರು. ಶುದ್ಧ ಕನ್ನಡ, ಸರಳ ಭಾಷೆ, ಆಕರ್ಷಣೀಯ ವ್ಯಕ್ತಿತ್ವ, ಪಾಠದ ಶೈಲಿ ನಿಧಾನವಾಗಿ ನಮ್ಮನ್ನು ಅವರತ್ತ ಸೆಳೆದಿತ್ತು. ಇಷ್ಟಾಗುವಾಗ ಇಡೀ ತರಗತಿಯ ಭಯ ಮಾಯವಾಗಿ ಸಹಜ ಸಲುಗೆ ಬೆಳೆದಿತ್ತು. ಎಂದಿನಂತೆ ಗದ್ದಲವೂ ಪ್ರಾರಂಭವಾಯಿತು.ಒಮ್ಮೆ ಮೇಜು ಕುಟ್ಟಿ ಸುಮ್ಮನಿರಲು ಎಚ್ಚರಿಸಿದರೂ ಅದು ಕೆಲವೇ ಕ್ಷಣಗಳ ನಿಶಬ್ದ, ಮತ್ತೆ ಅದೇ ಕಲರವ. ನಮ್ಮನ್ನೊಮ್ಮೆ ತೀಕ್ಷ್ಣವಾಗಿ ದಿಟ್ಟಿಸಿದ ಅವರು ನನ್ನನ್ನು ಉದ್ದೇಶಿಸಿ "ಏ ಬಿಳಿ ಜಿರಳೆ ನಿಂತು ಕೋ" ಅಂದರು.

ನನಗೆ ಗಾಬರಿಯಲ್ಲಿ ನಿಲ್ಲೋಕೂ ಆಗದೆ ಕೂರೋಕೂ ಆಗದೆ ತಡವರಿಸ್ತಾ ಇದ್ದೆ. ಮತ್ತೊಮ್ಮೆ ಗದರಿದರು‌. ನಿಧಾನಕ್ಕೆ ಎದ್ದು ನಿಂತೆ. "ನಿಲ್ಲೋಕೆ ಇಷ್ಟು ಹೊತ್ತು ಬೇಕಾ? ನಿಮ್ಮ ಧಿಮಾಕು ನನ್ನ ಹತ್ರ ನಡೆಯೋದಿಲ್ಲ. ನನ್ನ ಕ್ಲಾಸ್ ನಲ್ಲಿ ಒಂದು ಶಬ್ದ ಮಾತಾಡಿದ್ರೂ ಫುಟ್ಬಾಲ್ ಒದ್ದಂತೆ ಒದ್ದು ಹೊರಹಾಕುತ್ತೇನೆ" ಅಂದು ಎದ್ದು ಬಂದರು.  ನನಗೆ ಕೈಕಾಲು ನಡುಗುವುದಕ್ಕೆ ಶುರುವಾಯಿತು. 'ಈ ಆಜಾನುಬಾಹು ನನ್ನನ್ನು ಫುಟ್‌ಬಾಲ್‌ ಒದ್ದಂತೆ ಒದ್ದರೆ ನಾನು ಶಾಲೆಯ ಕಾಂಪೌಂಡ್ ದಾಟಿ ಹೊರಗೆ ಬೀಳುತ್ತೇನೇನೋ? ಮೊದಲೇ ವಾಚಾಳಿ ಅಂತ ಎಲ್ಲರಿಂದಲೂ ಬೈಸಿಕೊಳ್ಳುತ್ತಿದ್ದೇನೆ, ಇನ್ನು ಹೀಗೆ ಒದೆಸಿಕೊಂಡರೆ ಮನೆಯಲ್ಲಿ ಏನು ಉತ್ತರ ಹೇಳ್ಳಿ? ಈಗ ಈ ಸಮಸ್ಯೆಯಿಂದ ಪಾರಾಗುವುದಾದರೂ ಹೇಗೆ?' ಅಂತ ಅಂದುಕೊಳ್ಳುತ್ತಿದ್ದೆ. ಅವರೋ ಸುಮ್ಮನೆ ಹತ್ತಿರ ಬಂದು ಒಮ್ಮೆ ಗುರಾಯಿಸಿ ತಿರುಗಿ ಹೋದರು. ನಾನು ನೆಮ್ಮದಿಯ ಉಸಿರು ಬಿಟ್ಟು ಅಲ್ಲೇ ಕುಳಿತುಕೊಂಡೆ. ಆದರೆ ಒಳಗೊಳಗೇ ಅಸಹಾಯಕತೆ, ಅವಮಾನ ಹೊಗೆಯಾಡುತ್ತಿತ್ತು.

ಅದಾಗಿ ಕೆಲವೇ ದಿನಗಳಲ್ಲಿ ಸ್ಕೂಲ್ ಟ್ರಿಪ್ ಅರೇಂಜ್ ಆಗಿತ್ತು. ನಮ್ಮ ಬಸ್ ಗೆ ಇದೇ ಡೇಸಾ ಸರ್ ಮೇಲ್ವಿಚಾರಕರು.'ಶಾಲೆಯ ಪ್ರವಾಸಕ್ಕೆ ಜೈ' ಎಂದು ಯಾರೂ ಚೀಟಿ ಎಸೆಯುವಂತಿಲ್ಲ ಎಂದು ಮೊದಲೇ ಫರ್ಮಾನ್ ಹೊರಡಿಸಿದ್ದರು. ಉಗುಳಲೂ ಆಗದ, ನುಂಗಲೂ ಆಗದ ಪರಿಸ್ಥಿತಿ ನಮ್ಮದು. ಓರೆಗಣ್ಣಿನಿಂದ ಅವರನ್ನು ನೋಡುತ್ತಾ ನಾವು ನಮ್ಮ ಕಿತಾಪತಿ ಶುರು ಹಚ್ಚಿಕೊಂಡೆವು. ಆದರೆ ಅಚ್ಚರಿ ಎಂಬಂತೆ ಅವರೇ ತಮ್ಮ ಬಿಗುವನ್ನೆಲ್ಲಾ ಮರೆತು ನಮ್ಮೊಂದಿಗೆ ಹೆಜ್ಜೆ ಹಾಕೋಕೆ, ಹಾಡೋಕೆ ಶುರು ಮಾಡಿದರು. ನಮಗೋ ಸ್ವರ್ಗಕ್ಕೆ ಮೂರೇ ಗೇಣು!

ಅಂತೂ ಹಾಡುತ್ತಾ ಕುಣಿಯುತ್ತಾ ಪಿಕ್ನಿಕ್ ಸ್ಪಾಟ್ ತಲುಪಿದೆವು. ಪಾರ್ಕ್, ನಿಸರ್ಗಧಾಮ, ಏರ್ಪೋರ್ಟ್, ಹಳೆಯ ದೇವಾಲಯ ಅಂತೆಲ್ಲಾ ಸಾಧ್ಯವಿರುವಷ್ಟು ಕಡೆ ಭೇಟಿ ನೀಡಿ ಕೊನೆಗೆ ಸೂರ್ಯಾಸ್ತದ ಹೊತ್ತಿಗೆ ಬೀಚ್ ತಲುಪಿದೆವು. ಮೊದಲೇ ವಿಪರೀತ ತುಂಟರೆಂದು ಹೆಸರು ಗಳಿಸಿದ್ದ ಕ್ಲಾಸ್ ನಮ್ಮದು. ನಮ್ಮ ಮೇಲೆ ಹದ್ದಿನ ಕಣ್ಣು ಇಡಲೇಬೇಕೆಂದು ಮುಖ್ಯೋಪಾಧ್ಯಾಯರು ಟ್ರಿಪ್ ಹೊರಡುವ ಮುನ್ನವೇ ಸೂಚನೆ ಕೊಟ್ಟಿದ್ದರು. ಹಾಗಾಗಿ  ನಮ್ಮ ಮೇಷ್ಟ್ರು ತುಸು ಹೆಚ್ಚೇ ಜಾಗರೂಕರಾಗಿದ್ದರು. ನಮಗೋ ನೀರೆಂದರೆ ವಿಪರೀತ ಮೋಹ, ಅರಿಯದ ಸಂಭ್ರಮ. ಕಡಲ ತಡಿಗೆ ಮೊದಲ ಬಾರಿ ಬಂದಿದ್ದ ಹುಮ್ಮಸ್ಸು ಬೇರೆ. ತೀರದಲ್ಲಿ ಅಲೆಗಳು ಮಾತಾಡಿರೆಂದು ಗೋಗರೆಯುತ್ತಿದ್ದರೆ ನಾವಾದರೂ ಹೇಗೆ ಸುಮ್ಮನಿರುವುದು? ಅವರ ಕಣ್ಣು ತಪ್ಪಿಸಿ ನೀರಿಗೆ ಇಳಿದೇ ಬಿಟ್ಟೆ.

ಅಲೆಗಳಿಗೆಲ್ಲಿತ್ತೋ ಆವೇಶ? ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಉಬ್ಬರವಿಳಿತಗಳ ಮಧ್ಯೆ ತೇಲತೊಡಗಿದೆ. ಸತ್ತೇ ಹೋಗುತ್ತೇನೇನೋ ಅನ್ನುವ ಗಾಬರಿಯಲ್ಲಿ ಧ್ವನಿಯೇ ಹೊರಡುತ್ತಿರಲಿಲ್ಲ. ಉಳಿದ ವಿದ್ಯಾರ್ಥಿಗಳ ಗಲಾಟೆಯಿಂದ ನಮ್ಮ ಮೇಷ್ಟ್ರಿಗೂ ಆಗಲಿರುವ ಅನಾಹುತದ ಬಗ್ಗೆ ತಿಳಿದು ನೀರಿಗೆ ಧುಮುಕಿದರು. ಬದುಕುತ್ತೇನೆ ಅನ್ನುವ ಆಶಾವಾದ ಮೂಡುತ್ತಿದ್ದಂತೆ ನಾನು ಕಣ್ಣುಮುಚ್ಚಿದೆ.

ಕಣ್ಣುಬಿಟ್ಟಾಗ ಅವರ ಮಡಿಲಲ್ಲಿದ್ದೆ. ತೊಯ್ದು ತೊಪ್ಪೆಯಾಗಿದ್ದ ಅದಕ್ಕಿಂತಲೂ ಹೆಚ್ಚಾಗಿ ಗಾಬರಿಯಿಂದ ಪೂರ್ತಿ ಬಿಳುಚಿಹೋಗಿದ್ದ ನನ್ನನ್ನು ಬೆಚ್ಚಗಾಗಿಸುವ ಪ್ರಯತ್ನದಲ್ಲಿ ಅವರಿದ್ದರು. ಅವರ ತಲೆಗೂದಲಿಂದ ತೊಟ್ಟಿಕ್ಕುತ್ತಿದ್ದ ನೀರು ನನ್ನ ಗಲ್ಲದ ಮೇಲೆ ಹರಿದು ಮರಳಿನೊಳಗೆ ಇಂಗುತ್ತಿತ್ತು.   ಜೊತೆ ಜೊತೆಗೆ ಅವರೆಡೆಗೆ ನನಗಿದ್ದ ಸಿಟ್ಟು ನಿಧಾನವಾಗಿ ಕರಗಿ ಅರಿಯದ ಹೆಮ್ಮೆಯೊಂದು ಮೂಡತೊಡಗಿತು, ಸಂಜೆಗೆಂಪಿನ ಸೂರ್ಯ ಪಶ್ಚಿಮದಲ್ಲಿ ನೆಮ್ಮದಿಯ ನಗೆ ಚೆಲ್ಲಿ ಕರಗಿಹೋದ.

ಇತ್ತ ಸರ್, "ಏನಾಯ್ತೇ ಹುಡುಗಿ, ನೀರಿಗೆ ಇಳಿಯಬಾರದೆಂದು ಹೇಳಿದ್ದರೂ ಯಾಕೀ ಸಾಹಸ? ಹಾಗೆ ಹೇಳಿದ್ದರೆ ನಾನೇ ನಿನ್ನನ್ನು ನೀರೊಳಗೆ ಕರೆದುಕೊಂಡು ಹೋಗುತ್ತಿದ್ದೆನಲ್ಲಾ?" ಎಂದು ಅಕ್ಕರೆಯಿಂದ ಕೇಳುತ್ತಿದ್ದರೆ ನನಗೆ ಟಿ.ವಿಯಲ್ಲಿ ಬರುವ ಹೀ ಮ್ಯಾನ್ ಇವರೇ ಏನೋ ಅನ್ನುವ ಅನುಮಾನ. ಬಹುಶಃ ಬದುಕಿಗೊಬ್ಬ ಪರಮಗುರು ಇರುತ್ತಾನೆ ಅನ್ನುವ ಕಲ್ಪನೆ ಮೊದಲು ನನ್ನೊಳಗೆ ಮೊಳಕೆಯೊಡೆದದ್ದೇ ಆ ಕ್ಷಣದಲ್ಲಿ.

ಆ ಘಟನೆ ನಡೆದ ಮೇಲೆ ನನಗವರು ಮೆಚ್ಚಿನ ಗುರು, ಅವರು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ಪಾಲಿಸುತ್ತಿದ್ದೆ. ನನಗವರೇ ದೊಡ್ಡ ರೋಲ್ ಮಾಡೆಲ್. ಅವರಂತೆ ನಡೆಯುವ, ಮಾತಾಡುವ ಪ್ರಯತ್ನವೂ ಮಾಡುತ್ತಿದ್ದೆ. ನಡು ನಡುವೆ ನೀರಲ್ಲಿ ತೇಲುತ್ತಿದ್ದುದನ್ನು ನೆನಪಿಸಿ ನಗುವುದೂ ಇತ್ತು. ಅಕಾಡೆಮಿಕ್ ವಿಚಾರಗಳಲ್ಲಿ  ಮೊದಲಸಾಲಿನಲ್ಲೇ ಇರುತ್ತಿದ್ದರೂ ನನ್ನ ವಿಪರೀತ ಓದಿನ ಗೀಳನ್ನು ಯಾರೂ ಪತ್ತೆಹಚ್ಚಿರಲಿಲ್ಲ. ಆದ್ರೆ ಡೇಸಾ ಸರ್ ನನಗೆ ಪುಸ್ತಕಗಳನ್ನು ನೀಡಿ ಓದಲು ಮತ್ತಷ್ಟು ಪ್ರೇರೇಪಣೆ ನೀಡುತ್ತಿದ್ದರು. ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರದರ್ಶಿಸಲು ಉದ್ದೇಶಿಸಿದ್ದ ನಾಟಕದಲ್ಲಿ ರಾಣಿ ಅಬ್ಬಕ್ಕಳಾಗಿ ನನ್ನನ್ನು ಆಯ್ಕೆ ಮಾಡಿದ್ದಾಗ ನಾನು ಪಾತ್ರ ನಿಭಾಯಿಸಲಾರೆ ಎಂದು ಹಿಂಜರಿದಿದ್ದೆ. ಆಗಲೂ ಅವರು ಪಕ್ಕ ಕೂತು ಪ್ರೀತಿಯಿಂದಲೇ ಅಭಿನಯಿಸಲು ಒಪ್ಪಿಸಿದ್ದರು.

ವಿಜ್ಞಾನದ ಬಗ್ಗೆ, ಅದರಲ್ಲೂ ಖಗೋಳ ವಿಜ್ಞಾನದ ಬಗ್ಗೆ ವಿಪರೀತ ಆಸಕ್ತಿ ಇದ್ದ ಅವರು ಇಸ್ರೋ, ರಾಕೆಟ್, ಕೃತಕ ಉಪಗ್ರಹ ಅಂತೆಲ್ಲಾ ಸರಳವಾಗಿ ವಿವರಿಸುತ್ತಿದ್ದರೆ ಇಡೀ ತರಗತಿ ಮೈ ಮರೆಯುತ್ತಿತ್ತು. ಹಾರುವ ತಟ್ಟೆಗಳು ಇವೆ, ಇಲ್ಲ ಅನ್ನುವ ವಾದ ಚಾಲ್ತಿಯಲ್ಲಿದ್ದ ಆ ಕಾಲದಲ್ಲಿ  ಅವರು ಅದನ್ನು ವರ್ಣಿಸುತ್ತಿದ್ದರೆ ನಾವು ವಿಮಾನದ ಸಣ್ಣ ಸದ್ದಾದರೂ ಅನ್ಯಗ್ರಹ ಜೀವಿಗಳಿರಬಹುದೇನೋ ಅನ್ನುವ ಕುತೂಹಲದಲ್ಲಿ ನೋಡುತ್ತಿದ್ದೆವು. ಕ್ಲಿಷ್ಟ ವಿಷಯಗಳನ್ನೂ ತೀರಾ ಸರಳವಾಗಿ ನಮಗರ್ಥವಾಗುವಂತೆ ವಿವರಿಸುತ್ತಿದ್ದ ಅವರ ಸಾಮರ್ಥ್ಯದ ಬಗ್ಗೆ ಇವತ್ತಿಗೂ ನನಗೊಂದು ಅಚ್ಚರಿ ಉಳಿದುಬಿಟ್ಟಿದೆ.

ಮುಂದೆ ಏಳನೇ ತರಗತಿಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಭಾಷಣ ಮಾಡುತ್ತಾ ಅವರ ಬದುಕಿನ ಮೊದಲ ಮೆಚ್ಚಿನ ಶಿಷ್ಯೆ ನಾನು ಅಂದಾಗ ಅತ್ತೇ ಬಿಟ್ಟಿದ್ದೆ. ಬಹುಶಃ ಅದು ನನ್ನ ಬದುಕಿನ ಮೊದಲ ಹೆಮ್ಮೆಯ ಕ್ಷಣ. ಮುಂದೆ, ಹೈಸ್ಕೂಲ್, ಕಾಲೇಜ್ ಅಂತೆಲ್ಲಾ ಹೊಸ ಕಲಿಕೆಯಲ್ಲಿ ಮುಳುಗಿ ಹೋದರೂ ಆಗೊಮ್ಮೆ ಈಗೊಮ್ಮೆ ಅವರು ನೆನಪಾಗಿ ಕಾಡುತ್ತಿದ್ದರು. ಕಷ್ಟ ಅನ್ನಿಸಿದಾಗೆಲ್ಲಾ ಹಿಂದೆ ನಿಂತು ಬೆನ್ನು ತಟ್ಟುತ್ತಿದ್ದಾರೇನೋ ಅಂತ ಅನ್ನಿಸುತ್ತಿತ್ತು. ಆಗ ಉತ್ಸಾಹ ಮತ್ತೆ ಗರಿಗೆದರುತ್ತಿತ್ತು. ನನ್ನ ವಿದ್ಯಾಭ್ಯಾಸ ಮುಗಿದ ನಂತರ ಅವರನ್ನು ಒಮ್ಮೆ ಭೇಟಿಯಾಗಬೇಕೆಂದು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ.  ಆದ್ರೆ ಇವತ್ತಿನವರೆಗೂ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ.

ಮುಂದೊಂದು ದಿನ ಭೇಟಿಯಾದಾಗ ಹಳೆ ನೆನಪುಗಳನ್ನೊಮ್ಮೆ ಮೆಲುಕು ಹಾಕಬೇಕು, ಹಿಂದಿನಂತೆಯೇ ಅವರಿಂದೊಮ್ಮೆ ಬೆನ್ನು ತಟ್ಟಿಸಿಕೊಳ್ಳಬೇಕು, ಮತ್ತೊಂದು ಖುಶಿಯ ಕ್ಷಣವನ್ನು ನನ್ನ ಬದುಕಿನ ಜೋಳಿಗೆಯೊಳಕ್ಕೆ ತುಂಬ ಬೇಕು. ಅಲ್ಲಿಯವರೆಗೆ, ಎದೆಯ ಹಣತೆಯಲ್ಲಿ ಅರಿವಿನ ದೀವಿಗೆ ಹಚ್ಚಿದ ನನ್ನೆಲ್ಲಾ ಶಿಕ್ಷಕರಿಗೂ, ನನಗೊಂದು ವ್ಯಕ್ತಿತ್ವ ರೂಪಿಸಿಕೊಟ್ಟ ನನ್ನ ಪ್ರೀತಿಯ ಪುಸ್ತಕಗಳಿಗೂ ಮತ್ತು  ಪೆಟ್ಟು ಕೊಡುತ್ತಲೇ ಪಾಠ ಕಲಿಸಿದ ಬದುಕೆಂಬ ಮಹಾಗುರುವಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯ.

(ಕೆಂಡ ಸಂಪಿಗೆ e-paperನಲ್ಲಿ ಪ್ರಕಟಿತ)
(ಚಿತ್ರಕೃಪೆ: ಕೆಂಡಸಂಪಿಗೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ