ಶನಿವಾರ, ಜುಲೈ 15, 2017

ಸೋಲು.

ಧೋ ಎಂದು ಸುರಿದ ಮಳೆಗೆ
ಹಸನಾದ ನೆಲದ ಒದ್ದೆಯ
ಕುರಿತು ಬರೆಯುವಾಗೆಲ್ಲಾ
ನಾನು ಸಂಪೂರ್ಣ ಸೋಲುತ್ತೇನೆ

ಹಾಗೆ ಹೇಳುವುದಾದರೆ, ಇದೇನು ಹೊಸತಲ್ಲ
ಸೋಲುವುದು ನನಗೀಗ ಅಭ್ಯಾಸವಾಗಿಬಿಟ್ಟಿದೆ

ಬಣ್ಣ ಬಣ್ಣದ ಗೊಂಬೆ ಮಾರುವ
ಹುಡುಗನ ಕಣ್ಣಿನ ಬಣ್ಣಗೇಡಿ
ಕನಸನ್ನು ಚಿತ್ರಿಸುವಾಗಲೂ
ನಾನು ಸೋತಿದ್ದೇನೆ

ವೃದ್ಧಾಶ್ರಮದ ಗೋಡೆಗೆ ಒರಗಿ ನಿಂತ
ಅಜ್ಜಿಯ ಕಣ್ಣಂಚಲ್ಲಿ ಹರಿದುಹೋದ
ಹನಿಯ ಲೆಕ್ಕವಿಡುವಲ್ಲೂ
ನಾನು ಸೋತಿದ್ದೇನೆ

ಕಲ್ಲು ತೂರುವವರ ಮತ್ತು
ಜೀಪಿಗೆ ಕಟ್ಟಿ ಎಳೆದೊಯ್ಯುವವರ
ಕ್ರೌರ್ಯವನ್ನು ಅಕ್ಷರಕ್ಕಿಳಿಸುವಾಗಲೂ
ಸೋತು ತಡವರಿಸಿದ್ದಿದೆ

ಸಿರಿಯಾ, ಇಥಿಯೋಪಿಯಾ, ಪ್ಯಾಲೆಸ್ತೀನ್,
ಪಕ್ಕದ ಬಾಂಗ್ಲಾ, ಲಂಕೆಯ ತಮಿಳರು
ನಿರಾಶ್ರಿತ ಪಂಡಿತರು, ಸದಾ ದೇಶಭಕ್ತಿಯ
ಸಾಕ್ಷಿ ಒದಗಿಸಲೇಬೇಕಾದ ಮುಹಮ್ಮದನ
ಬಗ್ಗೆ ಬರೆಯುವಾಗಲೂ ನಾನು ಸೋತಿದ್ದೇನೆ

ಇರಲಿ, ಸೋಲೆಂಬುವುದು ಮದ್ಯದಂತೆ
ಮೊದಲು ಒಗರೊಗರಾದರೂ
ಅಭ್ಯಾಸವಾಗಿಬಿಟ್ಟರೆ ಎಂತಹ
ದೇಹಕ್ಕೂ ಒಗ್ಗಿಬಿಡುತ್ತದೆ

ಅಷ್ಟೇಕೆ, ಧರ್ಮಾಗಳಾಚೆಗೆ ಸಾವೊಂದು
ಶೂನ್ಯತೆಯ ಹುಟ್ಟಿಸದ ಈ ಹೊತ್ತಲ್ಲೂ
ರಮ್ಯ ಕವಿತೆಯ ಬರೆಯ ಹೊರಟದ್ದೂ ಒಂದು ಸೋಲೇ
ನಿರ್ಲಜ್ಜ ಮನಸು ಆ ಸೋಲಿಗೂ
ಹೇಗೆ ಒಗ್ಗಿಕೊಂಡಿದೆ ನೋಡಿ

ಗೋಡೆಗಳ ಕೆಡವಿ, ಬರಿ ಮನುಷ್ಯತ್ವವ
ಬಯಲಲಿ ಉಳಿಸುವ ಕನಸೊಂದು
ಇನ್ನೂ ಉಸಿರಾಡುತ್ತಿದೆ
ಅದಾದರೂ ಸೋಲದಿರಲಿ, ಸಾಯದಿರಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ