ಗುರುವಾರ, ಮೇ 30, 2019

ಕಡಲ ಭೋರ್ಗರೆತ ಮತ್ತು ಗೆಳತಿಯ ಪ್ರೇಮ ನೈರಾಶ್ಯ.

ರಾತ್ರಿಯ ಮೂರನೇ ಜಾವದಲ್ಲಿ ದೂರದ ಕಡಲಿನ  ಭೋರ್ಗರೆತ ಕೇಳಿತೆಂದರೆ ಸಾಕು ಸುಮ್ಮನೆ ಎದ್ದು ಕೂತುಬಿಡುತ್ತೇನೆ ನಾನು. ಸದ್ದಾಗದಂತೆ  ಬಾಲ್ಕನಿಯಿಂದ ಕೆಳಗೆ ಜಿಗಿದು ಯಾರಿಗೂ ಹೇಳದೇ ಕಡಲಿನೆಡೆಗೆ ಹೋಗಿ ತೀರದ ಪೂರ್ತಿ ಸುಸ್ತಾಗುವಷ್ಟು ನಡೆಯಬೇಕು, ಇನ್ನು ಒಂದು ಹೆಜ್ಜೆಯೂ ಮುಂದಿಡಲಾರೆ ಅನ್ನುವಷ್ಟು ನಡೆಯುತ್ತಲೇ ಇರಬೇಕು, ಕೊನೆಗೆ ಸುಸ್ತಾಗಿ ಮರಳ ಮೇಲೆ ಬಿದ್ದು ನಿದ್ದೆ ಹೋಗಬೇಕು, ಆ ರಾತ್ರಿಯ ಶೀತಲ ಗಾಳಿ ಕೆನ್ನೆ ಸವರಿದಂತೆಲ್ಲಾ ಯಾವುದೋ ಕನವರಿಕೆಯಲ್ಲಿದ್ದಂತೆ ಮಗ್ಗುಲು ಬದಲಾಯಿಸಬೇಕು, ನಡು ನಡುವೆ ಎಚ್ಚರಾದಾಗೆಲ್ಲಾ ಯಾರಿಗೂ ಕೇಳಿಸದ ಕಡಲಿನ ಸಂಗೀತಕ್ಕೆ ಕಿವಿಗೊಡಬೇಕು, ಅನಾದಿಕಾಲದಿಂದಲೂ ಇಲ್ಲೇ ವಾಸ್ತವ್ಯವಾಗಿದ್ದೇವೆ ಎಂಬಂತೆ ಪೋಸ್ ಕೊಡುವ ಮರಿ ಏಡಿಗಳನ್ನು ಕಾಲ ಮೇಲೆ ಹತ್ತಿಸಿಕೊಂಡು ಕಚ್ಚಿಸಿಕೊಳ್ಳುವ ವಿಚಿತ್ರ ಸುಖ ಅನುಭವಿಸಬೇಕು, ಜೇಬಿನ ಪೂರ್ತಿ ಮರಳು ತುಂಬಿಕೊಂಡು ದೂರ ಹೋಗಿ ಮನೆಕಟ್ಟಬೇಕು, ಇಲ್ಲದ ಕಡಲಿನ ದೆವ್ವವನ್ನು ಕಲ್ಪಿಸಿಕೊಂಡು ಸುಳ್ಳೇ ಸುಳ್ಳು ಹೆದರಬೇಕು ಅಂತೆಲ್ಲಾ ಅಂದುಕೊಳ್ಳುತ್ತೇನೆ.

ಹೀಗೆ ಅನ್ನಿಸಿದಾಗೆಲ್ಲಾ ಒಂದೋ ಪಕ್ಕದಲ್ಲಿ ಪವಡಿಸಿರುವ ಗಂಡನನ್ನು ಎಬ್ಬಿಸಿ 'ಗಂಟೆ ಎಷ್ಟಾಯ್ತು' ಅಂತ ಕೇಳಿ ಮತ್ತೆ ಮಲಗಲು ಪ್ರಯತ್ನಿಸುತ್ತೇನೆ ಇಲ್ಲ ಕಾಣದ ಕಡಲಿಗೆ ಬಯ್ಯುತ್ತಾ ಮತ್ತೆ ಕೌದಿ ಎಳೆದುಕೊಳ್ಳುತ್ತೇನೆ. ಆಷಾಢದ ಆ ರಾತ್ರಿಯೂ  ಗಂಡನನ್ನು ಎಬ್ಬಿಸಲಾ ಅಥವಾ ಸುಮ್ಮನೆ ಮಲಗಿಕೊಳ್ಳಲಾ ಎಂಬ ಗೊಂದಲದಲ್ಲಿರುವಾಗಲೇ ಮೊಬೈಲ್ ಬೀಪ್ ಎಂದಿತ್ತು. ತೆರೆದು ನೋಡಿದರೆ ಜೀವದ ಗೆಳತಿಯ ಮೆಸೇಜ್. "ನನಗೆ ಮತ್ತೆ ಲವ್ ಆಗಿದೆ ಕಣೇ, ಈ ಬಾರಿ ಮಾತ್ರ ಸೀರಿಯಸ್ ಲವ್" ಅಂತಿತ್ತು.

ಕಳೆದ ಬಾರಿ ಲವ್ ಬ್ರೇಕ್ ಆದಾಗ ಇದೇ ಗೆಳತಿ ಇನ್ಮುಂದೆ ಜಾತಕ ನೋಡದೇ ಲವ್ ಮಾಡೋದೇ ಇಲ್ಲ, ಜಾತಕ ಕೂಡಿ ಬಂದರಷ್ಟೇ ಪ್ರೀತಿ, ಮದುವೆ ಇತ್ಯಾದಿ ಅಂದದ್ದು ನೆನಪಾಗಿ, ಎಷ್ಟನೇ ಬಾರಿ ನಿನಗೆ ಸೀರಿಯಸ್ ಲವ್ ಆಗ್ತಿರೋದು? ಅಂತ ಮೆಸೇಜ್ ಕುಟ್ಟಬೇಕು ಅಂದುಕೊಂಡೆ. ಆದರೆ ದೂರದ ಕಡಲಿನ ಮೊರೆತ, ಕಿವಿಯ ಪಕ್ಕದಲ್ಲೇ ಗುಂಯ್ ಗುಡುವ ಸೊಳ್ಳೆ, ಅಪರಾತ್ರಿಯ ಅವಳ ಲವ್ ಎಲ್ಲಾ ಸೇರಿ ಒಂದು ರೀತಿಯ ರೇಜಿಗೆ ಹುಟ್ಟಿಸಿ ಅವಳನ್ನು ನಾಳೆ ವಿಚಾರಿಸಿಕೊಂಡರಾಯಿತು ಎಂದು ಸುಮ್ಮನೆ ಮಲಗಿದೆ.

ಮೊದಲೇ ಹೇಳಿದಂತೆ ಅವಳಿಗೆ ಪ್ರೀತಿಯಾಗೋದು, ಬ್ರೇಕ್ ಅಪ್ ಆಗೋದು, ಎರಡು ದಿನ ಅಳೋದು, ಮೂರನೇ ದಿನ ಇನ್ಯಾರನ್ನೂ ಕಣ್ಣೆತ್ತಿಯೂ ನೋಡುವುದಿಲ್ಲ, ಯಾರ ಕನಸಲ್ಲೂ ಇನ್ಮುಂದೆ ಹೋಗುವುದೇ ಇಲ್ಲ ಅಂತೆಲ್ಲಾ ಪ್ರತಿಜ್ಞೆ ಮಾಡುವುದು, ಮತ್ತೆ ಪ್ರೀತಿಯಾಗುವುದೆಲ್ಲಾ ಹೊಸತಲ್ಲ. ಉಕ್ಕಿ ಹರಿಯುವ ಜೀವನ ಪ್ರೀತಿ, ಅವಳ ತುಂಟತನ, ಆಪ್ತತೆ ಉಕ್ಕಿಸುವ ಮಾತು, ಮುಗ್ಧ ಮುಖಭಾವ, ಬದುಕನ್ನು ಉತ್ಕಟತೆಯಿಂದ ಬದುಕಬೇಕು ಎನ್ನುವ ಮನೋಭಾವ  ಎಂಥವರ ಎದೆಯಲ್ಲೂ ಪ್ರೀತಿ ಹುಟ್ಟಿಸಬಲ್ಲದು. ತಿಳಿ ಬಣ್ಣವನ್ನು ಇಷ್ಟಪಟ್ಟು ಧರಿಸುವ ಅವಳ ಬದುಕಿನ ಆಯ್ಕೆಯೂ ತಿಳಿಗೊಳದಷ್ಟೇ ಪ್ರಶಾಂತವಾಗಿರುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ಹೊಟ್ಟೆ ಕಿಚ್ಚಾಗುವಷ್ಟು ಚಂದದ ಪ್ರೇಮ ಕವಿತೆ ಬರೆಯುವ, ಸದಾ ನಗುವ, ನಗಿಸುವ, ಚೈತನ್ಯದ ಚಿಲುಮೆಯಂತಿರುವ, ಸಣ್ಣ ಸ್ವರದಲ್ಲಿ ಭಾವಗೀತೆ ಹಾಡಿಕೊಳ್ಳುವ, ಒಪ್ಪವಾಗಿ ರಂಗೋಲಿ ಹಾಕುವ ಅವಳು ನನಗೆ ಹೈಸ್ಕೂಲಿನಿಂದಲೂ ಜೀವದ ಗೆಳತಿ.

ಅಂಕಗಣಿತಕ್ಕೂ ಬದುಕಿಗೂ ಯಾವುದೋ ಸಂಬಂಧ ಇದೆ ಅಂತ ಅಂಕೆಗಳಲ್ಲಿ ಮುಳುಗುತ್ತಿದ್ದ ನಾನು ಮತ್ತು ಗಣಿತವನ್ನೇ ನಖಶಿಖಾಂತ ದ್ವೇಷಿಸುತ್ತಿದ್ದ ಅವಳು ನಡುವೆ ಒಂದಿಷ್ಟು ಖಾಸಗಿ ಇಷ್ಟಾನಿಷ್ಟಗಳು... ನಾವಿಬ್ಬರೂ ಗೆಳತಿಯರಾಗಿದ್ದು ಹೇಗೆ ಅನ್ನುವುದು ಇವತ್ತಿನವರೆಗೂ ಬಗೆಹರಿಯದ ಮಿಸ್ಟರಿ. ನಮ್ಮಿಬ್ಬರ ಅಭಿರುಚಿಯಲ್ಲಿ ಸಾಮ್ಯತೆ ಇದ್ದುದು ಜಿದ್ದಿಗೆ ಬಿದ್ದವರಂತೆ ಕವಿತೆ ಓದುವುದರಲ್ಲಿ ಮಾತ್ರ. ಹಾಗಿದ್ದರೂ ನಾವಿಬ್ಬರೂ ಪರಸ್ಪರರ ಕ್ರೈಂಗಳಲ್ಲಿ ಸಮಾನ ಪಾಲುದಾರರು.

ಆಟ, ಪಾಠ, ತುಂಟಾಟ, ಹಾಡು, ಕವಿತೆ, ಆ ವಯಸ್ಸಿನ ಭಾವದೇರಿಳಿತಗಳು, ಸುಲಭವಾಗಿ ಅರ್ಥವಾಗದ ದೈಹಿಕ ಬದಲಾವಣೆಗಳು, ಯೌವ್ವನಕ್ಕೆ ಹೊರಳಿಕೊಳ್ಳುವ ಬದುಕು, ಅಪಾಯಕಾರಿಯಲ್ಲದ ಕ್ರಶ್, ಹೆಸರಿಲ್ಲದ ಕೆಲವು ಇನ್ಫ್ಯಾಚುಯೇಷನ್ಸ್ ಎಲ್ಲವುಗಳ ನಡುವೆ ಅವಳಂತಹ ಜೀವನ್ಮುಖಿ ಹುಡುಗಿಗೆ ಪ್ರೀತಿಯಾಗಲು ಎಷ್ಟು ಹೊತ್ತು?

ಅತ್ತ ಅವಳ ಬದುಕಲ್ಲಿ ಸದ್ದಿಲ್ಲದೆ ಪ್ರೇಮ ಚಿಗುರೊಡೆಯುತ್ತಿದ್ದರೆ ಇತ್ತ ನನಗೆ ಅವಳ ಪ್ರೀತಿಯನ್ನು ನಾನು ಓದಿರುವ ಕೆಲವು ಜನಪ್ರಿಯ ಕಾದಂಬರಿಗಳ ಪಾತ್ರಗಳೊಂದಿಗೆ ಹೋಲಿಸಿ ನೋಡುವ ಉಮೇದು. ಅವಳಿಗೂ ಕೆಲವು ಪುಸ್ತಕಗಳನ್ನು ಓದಲು ಕೊಟ್ಟು 'ಹೀಗೆಲ್ಲಾ ಇದ್ಯಾ?' ಅಂತ ಕುತೂಹಲದಿಂದ ಕೇಳಿದ್ದೂ ಇದೆ. ಆಗೆಲ್ಲಾ ಅವಳು ನಕ್ಕು ಸುಮ್ಮನಾಗುತ್ತಿದ್ದರೆ ನನ್ನ ಕಲ್ಪನೆಯ ರೆಕ್ಕೆಗಳಿಗೆ ಮತ್ತೊಂದಿಷ್ಟು ಗರಿಗಳು ಸೇರಿಕೊಳ್ಳುತ್ತಿದ್ದವು.

ಶುದ್ಧ ಹುಡುಗಾಟ ಮತ್ತು ಭಾವುಕತೆಯ ಸಮಾಗಮದ ಒಂದು ಸುಂದರ ಘಳಿಗೆಯಲ್ಲಿ ಅವಳ ಬದುಕಿನೊಳಗೆ ಕಾಲಿಟ್ಟ ಪ್ರೀತಿ ಎಂಬ ಮಾಯಾ ವಿದ್ಯೆ ನನ್ನ ಯೋಚನೆಗಳನ್ನೂ ಬದಲಾಯಿಸಲು ಹೆಚ್ಚಿನ ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ. ಅಪ್ಪಟ ರೈತನ ಮಗ ಮತ್ತು ಮೀರಾಳಿಗಿಂತಳೂ ಚೆಂದಗೆ ಹಾಡಿಕೊಳ್ಳುತ್ತಿದ್ದ ಹುಡುಗಿ... ಕೃಷ್ಣನಿಗೂ ಅಸೊಯೆಯಾಗುವಂತಿತ್ತು ಜೋಡಿ. ಮಧ್ಯೆ ಅವರ ಪ್ರೀತಿಗೆ, ಮುನಿಸಿಗೆ, ಹುಸಿ ಕೋಪಕ್ಕೆ,  ಜಗಳಗಳಿಗೆ ಮಧ್ಯವರ್ತಿಯಾಗಿ ನಾನು. ಬದುಕು ತುಂಬಾ ಸುಂದರವಾಗಿತ್ತು.

ಹೀಗಿರುವ ದಿನಗಳಲ್ಲೇ ಅವನ ಹಟ್ಟಿಗೆ ಒಂದು ಹೊಸ ಎತ್ತು ಸೇರಿಕೊಂಡಿತು. ಅವನು ತುಂಬು ಸಂಭ್ರಮದಿಂದ ಎತ್ತನ್ನೂ, ಅದರ ಮುಗ್ಧತೆಯನ್ನೂ, ಅದಕ್ಕಿಡಬಹುದಾದ ಹೆಸರನ್ನೂ ಹೇಳಿಕೊಳ್ಳುತ್ತಿದ್ದರೆ ನಮ್ಮಿಬ್ಬರ ತಲೆಯಲ್ಲಿ ಹೊಸ ಯೋಚನೆಯೊಂದು ಓಡುತ್ತಿತ್ತು. ಕೆಲವು ವಾರಗಳಷ್ಟು ಹಿಂದೆ ಊರ ಹೊರಗೆ ಆಯೋಜಿಸಿದ್ದ ಕಂಬಳ, ಓಡುತ್ತಿದ್ದ ಎತ್ತುಗಳು, ಅದರ ಸಾರಥಿಯ ಗತ್ತು ಗೈರತ್ತುಗಳು ನಮ್ಮಲ್ಲೂ ಎತ್ತು ಓಡಿಸುವ ಆಸೆ ಹುಟ್ಟಿಸಿದ್ದವು. ಈಗ ಅನಾಯಾಸವಾಗಿ ನಮ್ಮ ಆಸೆ ಕೈಗೂಡುತ್ತದೆ ಅಂದರೆ ಯಾಕೆ ಅವಕಾಶ ಕಳೆದುಕೊಳ್ಳಬೇಕು ಅನ್ನಿಸಿ ನಮ್ಮ ಯೋಚನೆಯನ್ನು ಅವನ ಮುಂದಿಟ್ಟೆವು. ಮೊದ ಮೊದಲು ನಮ್ಮ ವಿಚಿತ್ರ ಬೇಡಿಕೆಯನ್ನು ಖಡಾಖಂಡಿತವಾಗಿ ನಿರಾಕರಿಸಿದರೂ ಕೊನೆಗೆ ಸಂಜೆ ಮೂರರ ಒಳಗೆ ಎತ್ತನ್ನು ಅವನಿಗೆ ಮರಳಿಸಬೇಕು ಅನ್ನುವ ಕರಾರಿನೊಂದಿಗೆ ನಮ್ಮ ಬೇಡಿಕೆಗೆ ಮಣಿದ.

ಮುಂದಿನ ಭಾನುವಾರ ಸ್ಪೆಶಲ್ ಕ್ಲಾಸ್ ನೆಪದಲ್ಲಿ ನಾವಿಬ್ಬರು ಶಾಲೆಯ ಕಾಲುದಾರಿಯ ಪಕ್ಕದಲ್ಲಿನ ಕೆಸರುಗದ್ದೆಯಲ್ಲಿ ಸೇರುವುದೆಂದೂ, ಅವನು ಮೀಯಿಸುವ ನೆಪದಲ್ಲಿ ಎತ್ತನ್ನು ಅಲ್ಲಿಗೆ ಕರೆದುಕೊಂಡು ಬರುವುದೆಂದೂ ನಿರ್ಧಾರವಾಯಿತು. ಹಾಗೆ ನಿರ್ಧರಿಸಿಕೊಂಡ ಮೇಲೆ ಇಡೀ ದಿನ ನಮ್ಮ ಯೋಚನೆಗಳಲ್ಲಿ ನಾವು ಮಾಡಲಿರುವ ಹೊಸ ಸಾಹಸದ ರೂಪು ರೇಷೆಗಳಷ್ಟೇ ಓಡಾಡುತ್ತಿದ್ದವು. ಆ ಭಾನುವಾರ ಕಾಲುದಾರಿಯಲ್ಲಿ ನಾವಿಬ್ಬರೂ ಸೇರುತ್ತಿದ್ದಂತೆ ಪ್ರೇಮಿಯ ಕೋರಿಕೆ ಪೂರೈಸುತ್ತಿರುವ ಹೆಮ್ಮೆಯಿಂದ ಅವನೂ ಎತ್ತು ಕರೆದುಕೊಂಡು ಬಂದು ಬಿಟ್ಟ.

ಅವನು ಎತ್ತಿನ ಬಗ್ಗೆ ವರ್ಣಿಸುತ್ತಿದ್ದಾಗ ನಮ್ಮಷ್ಟೇ ಎತ್ತರ ಇರಬಹುದೇನೋ ಅಂತ ಅಂದುಕೊಂಡಿದ್ದ ನಮ್ಮ ನಿರೀಕ್ಷೆ ಅದರ ಗಾತ್ರ, ಎತ್ತರ, ಕೋಡು ನೋಡಿದಾಗಲೇ ಸುಳ್ಳಾಗಿತ್ತು. ಆದರೆ ಎತ್ತು ಓಡಿಸುವ ಹುಚ್ಚು ಎಲ್ಲಾ ನಿರೀಕ್ಷೆಗಳಿಗಿಂತಲೂ ಎತ್ತರದಲ್ಲಿದ್ದುದರಿಂದ ಅವನನ್ನು ಕಳುಹಿಸಿ ನಾವು ಓಡಿಸಲು ಸಿದ್ಧರಾದೆವು.  ಆ ಹೊತ್ತು ಯಾವ ಧೈರ್ಯದ ಭೂತ ನಮ್ಮೊಳಗೆ ಹೊಕ್ಕಿತ್ತೋ ಗೊತ್ತಿಲ್ಲ, ಮೆಲ್ಲಗೆ ಅದರ ಬಾಲ ಹಿಡಿದೆಳೆದೆ, ಹಿಂದಿನಿಂದ ಪ್ರೋತ್ಸಾಹಿಸಲು ಗೆಳತಿಯ ಚಪ್ಪಾಳೆ.

ಅವನು ಗದ್ದೆಯಂಚು ತಲುಪುವ ಮುನ್ನವೇ ನಾನು  ಎತ್ತು ಎಳೆದ ರಭಸಕ್ಕೆ ಮೈಮೇಲಿಡೀ ತರಚು ಗಾಯ ಮಾಡಿಕೊಂಡು ಮತ್ತೊಂದು ಗದ್ದೆಗೆ ಬಿದ್ದಿದ್ದೆ.   ಮಂಡಿಯ ಮೇಲೆ ತರಚು ಗಾಯಗಳಾಗಿವೆ ಅಷ್ಟೇ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುವಾಗಲೇ ಛಳ್ಳೆಂದ ಎಡಗೈಗೆ ಆಚೀಚೆ ಸರಿಸಲೂ ಆಗದಷ್ಟು ನೋವು. "ಅಮ್ಮಾ" ಎಂದೆ, ಓಡಿ ಬಂದ ಗೆಳತಿ ನನ್ನನ್ನು ಎಬ್ಬಿಸಿ ಮನೆಗೆ ಕರೆದುಕೊಂಡು ಬಂದಳು. ಶಾಲೆಯಲ್ಲಿ ಕೈ ಮುರಿದುಕೊಂಡಿದ್ದೇನೇನೋ ಅಂದುಕೊಂಡ ಅಪ್ಪ ಕೈಗೆ ಬ್ಯಾಂಡೇಜ್ ಹಾಕಿಸಿ ಮನೆಗೆ ಕರೆತಂದರು. ನಾವು ಕಂಬಳದ ಸಾರಥಿಗಳಾಗಬಹುದಾಗಿದ್ದ ಅಪರೂಪದ ಅವಕಾಶ ತಪ್ಪಿಸಿದ ಎತ್ತಿನ ಮೇಲೆ ಅಸಾಧ್ಯ ಕೋಪ ನನಗೆ. ಕೈಗೆ ಏರಿಸಿಕೊಂಡ ಸಿಮೆಂಟ್ ಬ್ಯಾಂಡೇಜನ್ನು ನೋಡುವಾಗೆಲ್ಲಾ ಆ ಕೋಪ ಮತ್ತಷ್ಟು ಜಾಸ್ತಿಯಾಗುತ್ತಿತ್ತು.

ಹಾಗಂತ ನಮ್ಮಿಬ್ಬರ ಬದುಕಿನಲ್ಲಿ ಗಂಭೀರತೆಗಳು ಇರಲೇ ಇಲ್ಲ ಅಂತಲ್ಲ. ಬೇಜಾವಾಬ್ದಾರೀ ಅಪ್ಪ, ಇಡೀ ಸಂಸಾರದ ಹೊಣೆಯನ್ನು ಹೆಗಲ ಮೇಲೆ ಹೊತ್ತ ಅಮ್ಮ, ಬೆನ್ನ ಹಿಂದೆ ಪುಟ್ಟ ತಮ್ಮ, ಮಾತಿನಿಂದಲೇ ತಿವಿಯುವ ಸಂಬಂಧಿಕರು, ಅವಳ ಹಾಡನ್ನೂ, ಕವಿತೆಯನ್ನೂ ಅನುಮಾನದ ಕಣ್ಣಿಂದಲೇ ನೋಡುವ ಸಮಾಜ, ತನ್ನ ಬದುಕನ್ನು ಯಾರ ಹಂಗೂ ಇಲ್ಲದೆ ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯತೆ, ಇವೆಲ್ಲದರ ಮಧ್ಯೆಯೂ ಬದುಕಿನ ಉತ್ಸಾಹವನ್ನು ಉಳಿಸಿಕೊಳ್ಳಲೇಬೇಕಾದ ಒತ್ತಡ, ಮಧ್ಯೆ ಹೈಸ್ಕೂಲ್ ದಾಟಿ ಕಾಲೇಜಿಗೆ ಕಾಲಿಟ್ಟೆವು. 

ಆ ಹೊತ್ತಿಗಾಗುವಾಗ  ಅವಳ ಪ್ರೀತಿ ತೆಳುವಾಗತೊಡಗಿತು, ಅವನಿಗೂ ಇದು ಕೈಗೂಡುವಂಥದ್ದಲ್ಲ ಅಂತ ಅನಿಸಿತೋ ಏನೋ, ಒಬ್ಬರಿಗೊಬ್ಬರು ಬೈದುಕೊಳ್ಳದೆ ಇಬ್ಬರೂ ದೂರಾದರು. ಈ ಮಧ್ಯೆ ಒಂದು ವಿಚಿತ್ರ ತಿರುವಿನಲ್ಲಿ ನನ್ನಮ್ಮ ಸ್ತನ ಕ್ಯಾನ್ಸರ್ ಎಂಬ ದುರಂತಕ್ಕೆ ಮುಖಾಮುಖಿಯಾದರು. ಆಸ್ಪತ್ರೆ, ಅದರ ವಿಚಿತ್ರ ವಾಸನೆ, ಅಸಹನೀಯ ಮೌನ, ತಾಳಿಕೊಳ್ಳಲಾಗದ ನಿಟ್ಟುಸಿರು, ಕಾರಣವಿಲ್ಲದೆ ಅಲ್ಲಿಂದಿಲ್ಲಿಗೆ ಸಂಚರಿಸುವ ಅನಾಥ ಭಾವ, ನಡುವೆ ನನ್ನೆಲ್ಲಾ ನೋವುಗಳಿಗೆ ಹೆಗಲಾಗಿ ನಿಲ್ಲುತ್ತಿದ್ದ ಗೆಳತಿ ಒಂದು ದಿನ ಸಂಕಟ ತಡೆಯಲಾಗದೆ 'ಅಮ್ಮ ಬದುಕುತ್ತಾರೇನೇ?' ಎಂದು ಕೇಳಿದಳು. ನಾನು 'ಬದುಕಲೇ ಬೇಕು, ಬದುಕುತ್ತಾರೆ' ಎಂದು ಎದ್ದು ಬಂದೆ. ಅಮ್ಮ ಬದುಕಿದರು, ಅವಳು ನನಗೆ ಮತ್ತಷ್ಟು ಹತ್ತಿರವಾದಳು.

ಮುಂದೆ ಓದು, ಉದ್ಯೋಗ, ಮದುವೆ, ಸಂಸಾರ ಅಂತೆಲ್ಲಾ ನಮ್ಮಿಬ್ಬರ ದಾರಿ ಕವಲೊಡೆದರೂ ನಮ್ಮ ಆತ್ಮೀಯತೆಯಲ್ಲಿ ಯಾವ ದೂರವೂ ತಲೆದೋರಿರಲಿಲ್ಲ. ಆದರೆ ಆಷಾಢದ ಆ ರಾತ್ರಿ ಅವಳು ಮಾಡಿದ್ದ ಮೆಸೇಜ್ ನಲ್ಲಿದ್ದ 'ಸೀರಿಯಸ್ ಪ್ರೀತಿ' ನಿಜಕ್ಕೂ ಗಂಭೀರ ಪ್ರೀತಿಯೇ. ಇವಳು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲೇ ಕೆಲಸ ಉತ್ತರ ಭಾರತದ ಹುಡುಗ ಅವನು. ಇವಳಿಗಿಂತ ಎರಡು ವರ್ಷ ಕಿರಿಯ. ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅಂತ ಅವಳೆಷ್ಟೇ ಹೇಳಿಕೊಂಡರೂ ನನಗೊಂದು ಅಳುಕು ಇದ್ದೇ ಇತ್ತು. ಅವನ ಪ್ರೀತಿ, ಮನೆಯವರು ಒಪ್ಪಿದರೂ ಒಪ್ಪದಿದ್ದರೂ ಒಟ್ಟಿಗೆ ಬದುಕುತ್ತೇವೆ ಅನ್ನುತ್ತಿದ್ದಾಗ ಅವನ ಮಾತಿನಲ್ಲಿರುತ್ತಿದ್ದ ದೃಢತೆ, ಅವಳೆಡೆಗೆ ಅವನಿಗಿದ್ದ ಕಾಳಜಿ ಎಲ್ಲಾ ನೋಡುವಾಗ ನನ್ನ ಅಳುಕು ಸುಳ್ಳಾಗಲಿದೆ ಎಂದು ನನಗೂ ಅನಿಸುತ್ತಿತ್ತು. ಹಾಗಾಗಲಿ ಎಂದು ನಾನು ಕಾಣದ ದೇವರಲ್ಲಿ ಕೇಳಿಕೊಳ್ಳುತ್ತಲೂ ಇದ್ದೆ.

ಈಗ ಋತುಗಳು ತಿರುಗಿಬಿದ್ದಿವೆ, ಆಷಾಢದಲ್ಲಿ ಚಿಗುರಿದ ಪ್ರೀತಿಗೆ ಕಾರ್ತಿಕದಲ್ಲಿ ಒಪ್ಪಿಗೆಯ ಮೊಹರು ಬೀಳಲಿ ಎಂದು ಎರಡೂ ಮನೆಯವರ ಮುಂದೆ ಮದುವೆ ಪ್ರಸ್ತಾಪ ಇಡುವುದೆಂದು ಒಂದು ಬೆಳಗ್ಗೆ ಇಬ್ಬರೂ ನಿರ್ಣಯಿಸಿದರು ಮತ್ತು ಆ ನಿರ್ಣಯದಂತೆ ನಡೆದುಕೊಂಡರು ಕೂಡ. ಇವಳ ಮನೆಯಲ್ಲಿ ಸುಲಭವಾಗಿ ಒಪ್ಪಿಗೆ ಸಿಗಲಿಲ್ಲ, ಹಾಗೆ ಸುಲಭವಾಗಿ ಸಿಗುತ್ತದೆ ಎನ್ನುವ ನಿರೀಕ್ಷೆ ಅವಳಿಗೆ ಇರಲೂ ಇಲ್ಲ. ಆದರೆ ಹೇಗಾದರೂ ಒಪ್ಪಿಸಿಯೇನು ಎನ್ನುವ ನಂಬಿಕೆ ಇತ್ತು, ಹಾಗೆ ಒಪ್ಪಿಸಿದಳು ಕೂಡ. ಆದರೆ ಅವನ ಮನೆಯಲ್ಲಿ ಯಾವ ಬೃಹನ್ನಾಟಕ ನಡೆಯಿತೋ ಗೊತ್ತಿಲ್ಲ, ಒಂದೆರಡು ದಿನಗಳು ಕಳೆದ ಮೇಲೆ 'ಲೆಟ್ಸ್ ಬ್ರೇಕಪ್' ಅನ್ನುವ ಮೆಸೇಜ್ ಬಂತು.

ಯಾವುದು ಆಗಬಾರದು ಅಂದುಕೊಂಡಿದ್ದೆನೋ ಮತ್ತೆ ಅವಳ ಬದುಕಲ್ಲಿ ಅದೇ ಘಟಿಸಿತ್ತು‌. ಏನು ಮಾತಾಡಲಿ, ಹೇಗೆ ಮಾತಾಡಲಿ ಅನ್ನುವ ನೂರು ಅನುಮಾನದ ಮೂಟೆಗಳನ್ನು ಹೊತ್ತುಕೊಂಡೇ ಅವಳಿಗೆ ಕರೆ ಮಾಡಿದರೆ ಅವಳು ಎಂದಿನ ತಣ್ಣನೆಯ ಧ್ವನಿಯಲ್ಲಿ 'ಅವ್ನ ಮನೇಲಿ ಒಪ್ಲಿಲ್ಲಂತೆ ಕಣೇ' ಅಂದ್ಳು. ನನಗೆ ಗೊತ್ತಿರುವ ವಿಷಯವೇ ಆಗಿದ್ದರೂ ಇಷ್ಟು ಸಹಜವಾಗಿ ಅವಳದನ್ನು ಸ್ವೀಕರಿಸುತ್ತಾಳೆ ಅಂತ ಅನಿಸಿರಲಿಲ್ಲ. "ಮುಂದೇನು?" , "ಏನಾಗಬೇಕೋ ಅದೇ ಆಗುತ್ತದೆ. ಬಗಲಲ್ಲೊಂದು ಕೊಳ್ಳಿ ಸದಾ ಇಟ್ಟುಕೊಂಡು ನಡೆಯುವವಳಿಗೆ ಬೆಳಕಿಗಾಗಿ ಕಂದೀಲು ಹುಡುಕಬೇಕಾಗಿ ಬರುವುದಿಲ್ಲ" ಅಂದಳು. ಪ್ರೇಮ ಕವಿತೆ ಬರೆಯುತ್ತಿದ್ದವಳ ಬದುಕು ಅವಳಿಗೇ ಗೊತ್ತಾಗದಂತೆ ನವ್ಯ ಕಾವ್ಯವೊಂದನ್ನು  ಬರೆಯಲು ಶುರು ಹಚ್ಚಿತು. ನಾನು ಕಾವ್ಯದೊಳಗೆ ಕಳೆದುಹೋಗಲು ತಯಾರಾಗುತ್ತಿದ್ದೇನೆ...

ಎಲ್ಲಿಂದಲೋ ಬಂದ ಬೇಬಿಯಣ್ಣ...

ಅಂಗಳದ ಒಂದು ಮೂಲೆಯಲ್ಲಿ ಹಾಕಿದ ಚಪ್ಪರದ ಅಡಿಯಲ್ಲಿ ಚೆನ್ನಪ್ಪಣ್ಣನನ್ನೂ, ಅವರು ಕೂತಿದ್ದ ಮಟ್ಟುಗತ್ತಿಯನ್ನೂ, ಸಲೀಸಾಗಿ ಸುಲಿದು ಬೀಳುತ್ತಿದ್ದ ಅಡಕೆಗಳನ್ನೂ, ಪಕ್ಕದಲ್ಲಿ ದೊಡ್ಡ ರಾಶಿಯೇ ಆಗಿದ್ದ ಅದರ ಸಿಪ್ಪೆಗಳನ್ನೂ, ನಡು ನಡುವೆ ಒಂದು ಲಯದಲ್ಲಿ ವೀಳ್ಯದೆಲೆ ಹಾಕಿಕೊಂಡು ಬಾಯಾಡಿಸುತ್ತಿದ್ದ ಅವರ ಬಾಯನ್ನೂ ಒಂದು ರೀತಿಯ ಅಚ್ಚರಿ ಮತ್ತು ಏಕಾಗ್ರತೆಯಿಂದ ದಿಟ್ಟಿಸುತ್ತಿದ್ದ ನಮ್ಮ ಮಕ್ಕಳ ಸೈನ್ಯದ ಗಮನವನ್ನು ಅಜ್ಜನ ಹೆಜ್ಜೆ ಸದ್ದು ನಿಧಾನವಾಗಿ ತಪ್ಪಿಸಿತ್ತು. ತುಸು ಅಸಹನೆಯಿಂದ ಮತ್ತು ಹೆಚ್ಚೇ ಗೌರವದಿಂದ, ಅಜ್ಜ ನಮಗೆ ಯಾವ ಹೆಚ್ಚುವರಿ ಕೆಲಸವೂ ನೀಡದಿರಲಿ ಎಂದು ಕಾಣದ ದೇವರಲ್ಲಿ ಬೇಡಿಕೊಳ್ಳುತ್ತಾ ಅವರಿಗೆ ಜಾಗ ಮಾಡಿಕೊಡಲು ಸರಿದು ಕೂತೆವು. ಅಜ್ಜ ಕೂರುತ್ತಿದ್ದಂತೆ ವೀಳ್ಯದೆಲೆ ಉಗುಳಿ ತನ್ನ ಕೆಂಪು ಬಾಯನ್ನು ತೊಳೆದು ಬಂದ ಚೆನ್ನಪ್ಪಣ್ಣ "ತೋಟದ ಕೆಲಸಕ್ಕೆ ಹೆಚ್ಚುವರಿ ಆಳು ಬೇಕು ಅಂದಿದ್ರಲ್ಲಾ, ನಾಳೆ ಚಿಕ್ಕಮಗಳೂರಿನಿಂದ 'ಬೇಬಿ' ಅಂತ ಹೊಸ ಆಳು ಬರ್ತಿದ್ದಾನೆ" ಅಂದರು.

ಅದುವರೆಗೂ ಚೆನ್ನಪ್ಪ, ವೆಂಕಪ್ಪ, ಸಂಕು, ಗೀತಕ್ಕ, ರತ್ನ, ಚೆನ್ನಿ ಇವೇ ಮುಂತಾದ ಹೆಸರುಗಳನ್ನು ಕೇಳಿದ್ದ ನಮಗೆ ಈ 'ಬೇಬಿ' ಅನ್ನುವುದು ನಮ್ಮ ಪ್ರಪಂಚದಲ್ಲಿ ಎಲ್ಲೂ ಇಲ್ಲದ ಹೆಸರು ಅನ್ನಿಸುತ್ತಿತ್ತು. ಇಂಗ್ಲಿಷಿನ ಬೇಬಿಗೂ, ಈ ಬೇಬಿಗೂ ಬಾದರಾಯಣ ಸಂಬಂಧ ಕಲ್ಪಿಸಿ, ಕಂಡೇ ಇರದ ಆ ವ್ಯಕ್ತಿಯನ್ನು ನಮ್ಮ ಮನಸ್ಸು ಇಂಗ್ಲಿಷಿನವನಾಗಿ ತೀರ್ಮಾನಿಸಿಬಿಟ್ಟಿತು. ಎಷ್ಟು ಬೇಡ ಬೇಡ ಅಂದರೂ ಬಿಳಿ ಚರ್ಮ, ಕೆಂಚು ಕೂದಲು, ತಿಳಿ ಹಸಿರು ಅಥವಾ ನೀಲಿ ಬಣ್ಣದ ಕಣ್ಣುಗಳುಳ್ಳ ಮನುಷ್ಯನ ಚಿತ್ರವೇ ಕಣ್ಣ ಮುಂದೆ ಓಡಾಡುತ್ತಿತ್ತು. ಬಿಳಿ ಟಿಷರ್ಟ್, ನೀಲಿ ಜೀನ್ಸ್ ಧರಿಸುವ 'ಬೇಬಿ' ನಮ್ಮ ತೋಟದಲ್ಲಿ ಬಂದು ಮಾಡುವುದಾದರೂ ಏನು ಎಂಬ ಪ್ರಶ್ನೆಯೂ ಕಾಡುತ್ತಿತ್ತು. ಅದಕ್ಕಿಂತಲೂ ದೊಡ್ಡ ಸಮಸ್ಯೆ, ಇನ್ನೂ ಎ.ಬಿ.ಸಿ.ಡಿಯೇ ಕಲಿತಿಲ್ಲದ ನಾವು  ಈ ಇಂಗ್ಲಿಷಿನ ಬೇಬಿಯ ಬಳಿ ಹೇಗೆ ಸಂವಹನ ಮಾಡುವುದು ಎಂಬುವುದಾಗಿತ್ತು.

ಆ ರಾತ್ರಿಯಿಡೀ ನಮಗೆ ಬೇಬಿಯದೇ ಚಿಂತೆ. ಬೆಳಗಾಗುತ್ತಿದ್ದಂತೆ ನಾವು ಬೇಬಿಗಾಗಿ ಗೇಟು ಕಾಯುತ್ತಾ ಕೂತೆವು. ಒಮ್ಮೆ ರಸ್ತೆಯತ್ತ ಮತ್ತೊಮ್ಮೆ ಭರ್ರೆಂದು ಧೂಳೆಬ್ಬಿಸುತ್ತಾ ಬರುವ ಬಸ್ಸಗಳತ್ತ, ಅಂಬಾಸಿಡರ್ ಕಾರುಗಳತ್ತಾ ದಿಟ್ಟಿಸುತ್ತಾ ನಮ್ಮ ಪಾಲಿಗೆ ಅವತಾರ ಪುರುಷನೇ ಆಗಿದ್ದ ಬೇಬಿಯ ಬರವನ್ನು ನಿರೀಕ್ಷಿಸುತ್ತಿದ್ದೆವು. ಗಂಟೆ ಹತ್ತಾಗುತ್ತಿದ್ದಂತೆ ಹೊಟ್ಟೆ ಚುರುಗುಟ್ಟಲಾರಂಭಿಸಿತು, ಇನ್ನು ಈ ಇಂಗ್ಲಿಷಿನವ ಬರಲಾರ ಎಂದು ನಿರ್ಧರಿಸಿಕೊಂಡು ಮನೆಗೆ ವಾಪಾಸಾದೆವು. ಕೈ ತೊಳೆದು ಮಣೆ ಎಳೆದು ನಾಸ್ಟಾ ಮಾಡಲು ಕೂರಬೇಕು ಅನ್ನುವಷ್ಟರಲ್ಲಿ, "ಬೇಬಿ ಬಂದಿದ್ದಾನೆ, ಇಲ್ಲೇ ಕೂರಲು ಹೇಳಿದ್ದೇನೆ" ಅನ್ನುವ ಚೆನ್ನಪ್ಪಣ್ಣನ ಮಾತು ಕೇಳಿತು. ಒಂದೇ ಉಸಿರಿಗೆ ನಾವು ಮನೆಯ ಅಂಗಳದಲ್ಲಿದ್ದೆವು.

ಸೂಟು-ಬೂಟು ಧರಿಸಿದ ಇಂಗ್ಲಿಷಿನವನ ನಿರೀಕ್ಷೆಯಲ್ಲಿದ್ದ, ಅವನಿಗೋಸ್ಕರವೇ 'ಹಲೋ ಮೈ ನೇಮ್ ಈಸ್.... ಯುವರ್ ಗುಡ್ ನೇಮ್ ಪ್ಲೀಸ್' ಉರು ಹೊಡೆದಿದ್ದ ನಮಗೆ ಒಂದು ದೊಡ್ಡ ಶಾಕ್! ಮಾಸಲು ಅಂಗಿ, ಚೌಕುಳಿ ಲುಂಗಿ, ಕೈಯಲ್ಲೊಂದು ಗೋಣಿಯಂತಹ ಕಟ್ಟು ಹಿಡಿದು ಪೆಕರು ಪೆಕರಾಗಿ ನಿಂತಿದ್ದ ಬೇಬಿ ನಮ್ಮ ಕುತೂಹಲಕ್ಕೆಲ್ಲಾ ಒಂದೇ ಏಟಿಗೆ ತಣ್ಣೀರೆರಚಿದ್ದರು. ಬೇಬಿ ನಮ್ಮಂತೆಯೇ ಸಾಮಾನ್ಯ ಭಾರತೀಯ ಅನ್ನುವುದು ಗೊತ್ತಾಗುತ್ತಿದ್ದಂತೆ 'ನಮ್ಮನೆಯಲ್ಲೂ ಒಬ್ಬ ಫಾರಿನರ್ ಇದ್ದಾರೆ' ಅಂತ ಶಾಲೆಯಲ್ಲಿ ಕೊಚ್ಚಿಕೊಳ್ಳಲು ಇದ್ದ ಒಂದು ಅಪೂರ್ವ ಅವಕಾಶ ತಪ್ಪಿಸಿದರು ಎಂದು ಅವರ ಮೇಲೆ ಅಕಾರಣ ಸಿಟ್ಟು ನಮಗೆ.

ಚಿಕ್ಕಮಗಳೂರಿನಿಂದ ಬಂದಿದ್ದರೂ ಬೇಬಿ ಮೂಲತಃ ಹಾಸನದವರು. ಅವರ ಸಂಸಾರ ಪೂರ್ತಿ ಹಾಸನದಲ್ಲೇ ನೆಲೆಸಿತ್ತು. ಹೊಟ್ಟೆಪಾಡಿಗಾಗಿ ಕೆಲಸ ಹುಡುಕುತ್ತಾ ಶೃಂಗೇರಿ ತಲುಪಿದ್ದವರು ಅಲ್ಲಿಂದ ಘಟ್ಟ ಇಳಿದು ನಮ್ಮನೆ ತಲುಪಿದ್ದರು. ಅವರ ಮಾತು, ಕನ್ನಡ ಭಾಷೆ ನಮಗೆ ವಿಚಿತ್ರ ಅನ್ನಿಸುತ್ತಿತ್ತು. ಇಡೀ ಪ್ರಪಂಚದಲ್ಲಿ ತುಳು ಮತ್ತು ಬ್ಯಾರಿ ಭಾಷೆ ಬಿಟ್ಟು ಉಳಿದ ಯಾವ ಭಾಷೆಗಳೂ 'ಸರಿ' ಇಲ್ಲ ಎಂದು ತೀರ್ಮಾನಿಸಿಕೊಂಡ ವಯಸ್ಸದು. ಸಾಲದೆಂಬಂತೆ, ಉಳಿದ ಕೆಲಸಗಾರರೆಲ್ಲಾ ಬೇಬಿಯ ಹಿಂದೆ ಆಡಿಕೊಳ್ಳುತ್ತಾ 'ಘಟ್ಟದಾಯೆ (ಘಟ್ಟದವನು)' ಎಂದು ನಗುತ್ತಿದ್ದರೆ ನಮಗೆ ಈತ ಬೇರೆಯದೇ ಪ್ರಪಂಚದವನು ಅನ್ನುವುದು ಕನ್ಫರ್ಮ್ ಆಗಿತ್ತು‌. ಹಾಗಾಗಿಯೇ ಬಂದು ವಾರ ಕಳೆದಿದ್ದರೂ ನಮ್ಮ ಮಧ್ಯೆ ಒಂದು ಬಂಧ ಬೆಳೆದಿರಲಿಲ್ಲ.

ಆದರೆ ಅಜ್ಜ, ಒಂದು ಭಾನುವಾರ ಕೊಯ್ಯಿಸಿದ ಅಡಕೆ ಹೆಕ್ಕಲು ನಮ್ಮನ್ನು ಬೇಬಿಯ ಜೊತೆ ಕಳುಹಿಸಿದ್ದರು. ಆಟದ ಅಮೂಲ್ಯ ಸಮಯ ಹಾಳಾದ ಸಿಟ್ಟು ಒಂದು ಕಡೆಯಾದರೆ, ಮಾತೇ ಆಡದ ಬೇಬಿಗೆ ಸಹಾಯ ಮಾಡಬೇಕಲ್ಲಾ ಅನ್ನುವ ದುಃಖ ಮತ್ತೊಂದು ಕಡೆ. ಸಾಲದಕ್ಕೆ "'ಬೇಬಿಯಣ್ಣ' ಅಂತಲೇ ಕರೆಯಬೇಕು, ಬೇಬಿ ಅಂತ ಎಲ್ಲಾದರೂ ಏಕವಚನದಲ್ಲಿ ಮಾತಾಡಿಸಿದರೆ ಬೆನ್ನಿನ ಚರ್ಮ ಸುಲಿದು ಕೈಯಲ್ಲಿ ಕೊಡಬೇಕಾಗುತ್ತದೆ" ಎಚ್ಚರಿಕೆ ಬೇರೆ ಕೊಟ್ಟಿದ್ದರು. ಹಿಂದೊಮ್ಮೆ ಯಾರನ್ನೋ ಏಕವಚನದಲ್ಲಿ ಮಾತಾಡಿಸಿದ್ದಕ್ಕೆ ಅಜ್ಜ ನಮ್ಮಲ್ಲೊಬ್ಬರ ಕಣ್ಣಿಗೆ ಹಸಿ ಮೆಣಸು ಹಾಕಿ ಚೆನ್ನಾಗಿ ಹೊಡೆದ ಘಟನೆ ಇನ್ನೂ ಹಸಿಹಸಿಯಾಗಿಯೇ ಇದ್ದ ಕಾರಣ ಅಜ್ಜ ಚರ್ಮ ಸುಲಿಯಲು ಹಿಂದೆ ಸರಿಯುವವರಲ್ಲ ಅನ್ನುವ ಸ್ಪಷ್ಟ ನಂಬಿಕೆ ನಮ್ಮದು. 

ಚೆನ್ನಪ್ಪ, ಸಂಕು, ವೆಂಕಪ್ಪ ಎಲ್ಲರನ್ನೂ ಅಣ್ಣ ಎಂದೇ ಕರೆಯುತ್ತಿದ್ದ ನಾವು ಈ ಬೇಬಿಯನ್ನು ಮಾತ್ರ ಅಣ್ಣ ಎಂದು ಕರೆಯಲು ಯಾಕೆ ತಕರಾರು ಮಾಡುತ್ತಿದ್ದೆವು? ತುಳುವನೋ, ಬ್ಯಾರಿಯೋ ಆಗಿಲ್ಲದ ಕಾರಣಕ್ಕಾ? 'ಘಟ್ಟದಾಯೆ' ಎಂದೋ? ಅದಾಗಲೇ ನಮ್ಮ ಮನಸ್ಸಿನಲ್ಲಿ ಮೇಲರಿಮೆಯ ಬೀಜ ಮೊಳಕೆಯೊಡೆದಿತ್ತೇ? ಅಥವಾ ಬೇಬಿ ಇಂಗ್ಲಿಷಿನವನಲ್ಲದೇ ಹೋದ 'ಹಳೆಯ' ಸಿಟ್ಟು ಇನ್ನೂ ನಮ್ಮ ಮನಸ್ಸಿನಲ್ಲಿ ಉಳಿದಿತ್ತೇ? ಕಾರಣವೇನೇ ಇದ್ದರೂ, ತೋರಿಕೆಗಾದರೂ ನಾನು ಅವರನ್ನು 'ಅಣ್ಣಾ' ಎಂದೇ ಕರೆಯಬೇಕಿತ್ತು.

ಅಜ್ಜನ ಆಣತಿಯಂತೆ ಆ ಭಾನುವಾರ ಬೇಬಿ ಅಧಿಕೃತವಾಗಿ ಬೇಬಿಯಣ್ಣ ಆದರು‌. ಆಮೇಲೆ ಅವರೊಂದಿಗಿನ ನಮ್ಮ ಬಾಂಧವ್ಯ ಸುಧಾರಿಸಿತು ಅಂದರೆ ತಪ್ಪಾಗುತ್ತದೆ. ಉಳಿದವರೊಂದಿಗೆ ಬೆರೆತಷ್ಟು ಸಹಜವಾಗಿ, ಸಲೀಸಾಗಿ ನಾವು ಅವರ ಜೊತೆ ಬೆರೆಯಲಾಗುತ್ತಲೇ ಇರಲಿಲ್ಲ. 

ಆದರೆ ನಮ್ಮ ಬಾಲ್ಯದ ಹುಚ್ಚಾಟಗಳಿಗೆ ಲೈಟಾಗಿ ಅವರು ನೀಡುತ್ತಿದ್ದ ಬೆಂಬಲ, ನಮ್ಮ ಅಧಿಕಪ್ರಸಂಗಿತನಗಳನ್ನು ಅಜ್ಜನವರೆಗೆ ತಲುಪಲು ಬಿಡದೇ ಇದ್ದದ್ದು... ಮುಂತಾದ ಸಂಗತಿಗಳಿಂದಾಗಿ ನಿಧಾನವಾಗಿ ಅವರು ನಮಗೆ ಹತ್ತಿರವಾಗತೊಡಗಿದರು. ಅಷ್ಟು ಹೊತ್ತಿಗಾಗುವಾಗ 'ಘಟ್ಟದಾಯೆ'ಯೂ ನಮ್ಮಂತಹ ಸಾದಾ ಮನುಷ್ಯ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಉಳಿದೆಲ್ಲರಿಗಿಂತಲೂ ಹೆಚ್ಚಿನ ಅಂತಃಕರಣ ಉಳ್ಳ ಮನುಷ್ಯ ಅನ್ನುವುದು ಅರ್ಥವಾಗಿತ್ತು. ಮತ್ತು ಅಷ್ಟು ಹೊತ್ತಿಗಾಗುವಾಗ ಎಲ್ಲರೂ ಅಚ್ಚರಿಪಡುವಷ್ಟು ತುಳು ಮತ್ತು ಬ್ಯಾರಿ ಭಾಷೆ ಕಲಿತಿದ್ದರು. ಅವರು ಎಷ್ಟು ನಿರರ್ಗಳವಾಗಿ ಮಾತನಾಡುತ್ತಿದ್ದರೆಂದರೆ, ಕರಾವಳಿಗರಲ್ಲ ಅಂತ ಅನ್ನಿಸುತ್ತಲೇ ಇರಲಿಲ್ಲ.

ಅಜ್ಜನಿಗಂತೂ ಆತ ನಂಬುಗೆಯ ಬಂಟ. ತೋಟಕ್ಕೆ ಗೊಬ್ಬರ ಹಾಕಿಸುವುದಾದರೂ, ತೆಂಗಿನಕಾಯಿ ಕೀಳಿಸುವುದಾದರೂ, ದನಗಳಿಗೆ ಹುಲ್ಲು ತರಬೇಕಾದರೂ ಬೇಬಿಯ ಸಲಹೆ ಅವರಿಗೆ ಬೇಕೇ ಬೇಕು. ಅಜ್ಜನ ಪ್ರೀತಿಯ ದನ 'ಕೆಂಪಿ' ಸತ್ತಾಗ ಬೇಬಿಯಣ್ಣ ಮೂರು ದಿನ ಊಟ ಬಿಟ್ಟಿದ್ದರು. ನಾಲ್ಕನೇ ದಿನ ತೀರಾ ನಿತ್ರಾಣಗೊಳ್ಳುತ್ತಾರೇನೋ ಅಂತ ಅಜ್ಜನೇ ಬಯ್ದು ಊಟ ಮಾಡಿಸಿದ್ದರು. "ಸೂತಕ ಕಳೆಯಿತಾ?" ಅಂತ ನೆರಮನೆಯವರು ಕಿಚಾಯಿಸಿದಾಗ "ಒಂದಿಡೀ ಬದುಕು ಸೂತಕ ಆಚರಿಸಿದರೂ ಕೆಂಪಿಯ ಸಾವಿನ ಸೂತಕ ಕಳೆಯುವಂಥದ್ದಲ್ಲಾ" ಎಂದು ವೇದಾಂತಿಯಂತೆ ಮಾತಾಡಿದ್ದರು. 

ನಾನ್-ವೆಜ್ ಪ್ರಿಯ ಬೇಬಿ, ಒಂದು ಶನಿವಾರ ಅಂಜುತ್ತಾ ಅಳುಕುತ್ತಾ ಅಜ್ಜನ ಹತ್ತಿರ ಒಂದು ಊರ ಕೋಳಿ ಬೇಕೆಂದು ಕೇಳಿದರು. ವಾರಕ್ಕೊಮ್ಮೆ ತಪ್ಪದೆ ಕೆಲಸದವರಿಗೆಲ್ಲರಿಗೂ ತುಪ್ಪದೂಟ ಕೋಳಿ ಕರಿ ನೀಡುತ್ತಿದ್ದರೂ ಬೇಬಿಯಣ್ಣನಿಗೆ ಯಾಕೆ  ಊರ ಕೋಳಿ ಬೇಕು ಅನ್ನುವ ಕುತೂಹಲ ನಮಗೆ. ಕೋಳಿ ಸಾಕಣಿಕೆ ಮಾಡುತ್ತಾರೇನೋ ಅಂತ ಅನ್ನಿಸಿ ಅವರನ್ನು ಕೇಳಿಯೇ ಬಿಟ್ಟೆ.

"ಸಂಜೆ ನಾಟಿ ಕೋಳಿ ಸಾರು, ರಾಗಿ ಮುದ್ದೆ ಮಾಡೋಕೆ ಇದೆ" ಅಂದರು. ನಮಗೆ ಮುದ್ದೆ ನೋಡಿಯೇ ಗೊತ್ತಿಲ್ಲ. ಸಾವಿರದ ಪ್ರಶ್ನೆಗಳನ್ನು ತಲೆಯಲ್ಲಿಟ್ಟುಕೊಂಡೇ ಶಾಲೆಗೆ ಹೋದೆವು. ಶಾಲೆಯಲ್ಲಿದ್ದ ಅಷ್ಟೂ ಹೊತ್ತು ನ ಬೇಬಿಯಣ್ಣ, ನಾಟಿ ಕೋಳಿ, ರಾಗಿ ಮುದ್ದೆಯ ಬಗ್ಗೆ ಯೋಚನೆ. ಒಮ್ಮೆ ಕೊನೆಯ ಬೆಲ್ ಹೊಡೆಯಬಾರದಾ ಅನ್ನಿಸುತ್ತಿತ್ತು. ಅಂತೂ ಶಾಲೆ ಬಿಟ್ಟು ಮನೆಗೆ ಬಂದು ಬ್ಯಾಗ್ ಎಸೆದು ನೇರ ಬೇಬಿಯಣ್ಣನನ್ನು ಕಾಣಲು ಹೊರಟರೆ ಅವರು ಮುದ್ದೆಯ ತಯಾರಿಯಲ್ಲಿದ್ದರು.

ಒಲೆಯಲ್ಲಿ ಕುದಿಯುತ್ತಿದ್ದ ಕೋಳಿ ಸಾರಿನ ಘಮ ಆ ಪರಿಸರಕ್ಕೆ ಒಂದು ವಿಶೇಷ ಮೆರುಗು ನೀಡಿತ್ತು. ಒಂದು ಸೌಟು ಕೊಟ್ಟರೆ ಈಗಲೇ ಸಾರು ಕುಡಿದು ಮುಗಿಸುತ್ತೇವೆ ಎನ್ನುವ ಉಮೇದು ಹುಟ್ಟಿಸುವಂತಹ ಪರಿಮಳವದು. ಕೋಳಿ ಕೊಯ್ದು, ಕ್ಲೀನ್ ಮಾಡಿಕೊಟ್ಟ ಅಪ್ಪ ಪಕ್ಕದಲ್ಲಿ ಕೂತಿದ್ದರು.‌ 

ಉರಿಯುತ್ತಿರುವ ಒಲೆ, ಕುದಿಯುತ್ತಿರುವ ಸಾರು, ತಯಾರುಗುತ್ತಿದ್ದ ಮುದ್ದೆ, ಕಮಾಂಡಿಂಗ್ ಪೊಸಿಸನ್ ನಲ್ಲಿ ಬೇಬಿಯಣ್ಣ, ಹತ್ತಿರ ಕೂತು ಸಹಾಯ ಮಾಡುತ್ತಿರುವ ಅಪ್ಪ, ದೂರ ನಿಂತು ಎಲ್ಲಾ ನೋಡುತ್ತಿರುವ ಅಜ್ಜ, ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುವ ಚೆನ್ನಕ್ಕ. ನಮಗೆ ಪ್ರಪಂಚದ ಪರಮಾದ್ಭುತವೊಂದು ನಮ್ಮೆದುರಲ್ಲಿ ಘಟಿಸುತ್ತಿರುವ ಅನುಭವ. ಮೋಡ ಸೀಳಿ ಬಂದ ಸಿಡಿಲೊಂದು ನಮ್ಮ ಸಂಭ್ರಮವನ್ನು ನೋಡಿ ಮತ್ತೆ ಮೋಡದೊಳಗೇ ಸೇರಿಕೊಂಡ ಭಾವ. 

ಎಲ್ಲಾ ತಯಾರಾದ ಮೇಲೆ ಮಕ್ಕಳೆಲ್ಲರನ್ನು ಹತ್ತಿರ ಕರೆದು ಕೂರಿಸಿ ಬಾಳೆ ಎಲೆ ಹಾಕಿ ಮುದ್ದೆ ಮತ್ತು ಸಾರು ಬಡಿಸಿದರು. ಆ ರುಚಿಯನ್ನು ಇವತ್ತು ಎಷ್ಟು ಪದಗಳನ್ನು ಎರವಲು ಪಡೆದುಕೊಂಡರೂ ವಿವರಿಸಲಾಗದು, ಯಾವ ಮಲ್ಟಿ ಸ್ಟಾರ್ ಹೋಟೆಲ್ ಗಳೂ ಒದಗಿಸದ ರುಚಿ ಅದು. ಹದವಾಗಿ ಬೆರೆತ ಖಾರ, ರುಚಿಗೆ ತಕ್ಕಷ್ಟು ಉಪ್ಪು, ಧಾರಾಳವಾಗಿ ಬೆರೆಸಿದ ಅಕ್ಕರೆ.... ಮನಸ್ಸಿಗೆ ತೃಪ್ತಿಯಾಗಲು ಮತ್ತೇನು ಬೇಕು? ಇಷ್ಟು ವರ್ಷ ಕಳೆದಾದಮೇಲೆ ಬಾಲ್ಕನಿಯ ಮೂಲೆಯಲ್ಲಿ ಕೂತು ಇದನ್ನು ಬರೆಯುವಾಗ ನನಗೆ ಪ್ರಪಂಚದಲ್ಲಿ ಜರುಗುವ ಯಾವ ಸಂಗತಿಯೂ ಆತ್ಯಂತಿಕವಲ್ಲ, ಪ್ರತಿಯೊಂದೂ ಒಂದಕ್ಕೊಂದು ಸಂಬಂಧಿಸಿದ್ದೇ ಆಗಿವೆ, ಯಾವುದೂ ಯಾವುದನ್ನೂ ಅಳಿಸುವುದಿಲ್ಲ, ಎಲ್ಲವೂ ರೂಪಾಂತರಗೊಳ್ಳುತ್ತಲೇ ಇರುತ್ತದೆ ಅನಿಸುತ್ತದೆ. ಆ ರೂಪಾಂತರ ಒಂದು ಭಾಗವೇ ಅಜ್ಜ, ಕೆಂಪಿ, ಬೇಬಿಯಣ್ಣ, ಅಪ್ಪ, ಚೆನ್ನಕ್ಕ, ನಾನು, ನೀವು...ಎಲ್ಲರೂ.

ಮಂಗಳವಾರ, ಮೇ 28, 2019

ಪುಟ್ಟ ಪುಟ್ಟ ಕಥೆಗಳು

1.ಸ್ವರ್ಗದ ಹಾದಿ

'ಸ್ವರ್ಗದ ಹಾದಿ' ಪಾಠ ಮಾಡುತ್ತಿದ್ದ ಉಸ್ತಾದರು ಬಾಗಿಲ ಬಳಿ ಸಣ್ಣ ಸದ್ದು ಕೇಳಿದಂತಾಗಿ ತಿರುಗಿ ನೋಡಿದರು. ಏದುಸಿರು ಬಿಡುತ್ತಾ ಅವರದೇ ವಿದ್ಯಾರ್ಥಿ 'ಒಳಗೆ ಬರಲೇ' ಎಂಬಂತೆ ದೈನ್ಯವಾಗಿ ನೋಡುತ್ತಿದ್ದ. ಉಸ್ತಾದರ ಕಣ್ಣು ಗೋಡೆ ಗಡಿಯಾರದತ್ತ ಚಲಿಸಿತು. ಈಗಾಗಲೇ ಹದಿನೈದು ನಿಮಿಷ ತಡ ಆಗಿದೆ. ಈ ಹುಡುಗ ಕಳೆದ ಒಂದು ವಾರದಿಂದಲೂ ತಡವಾಗಿಯೇ ಬರ್ತಿದ್ದಾನೆ. ನಾಳೆ ಮಹತ್ವದ ತರಗತಿಯಿದೆ, ಸಮಯಕ್ಕೆ ಸರಿಯಾಗಿ ತಲುಪಲೇಬೇಕೆಂದು‌ ನಿನ್ನೆಯೇ ಹೇಳಿದ್ದರು. ಹಾಗಿದ್ದೂ ಇವತ್ತು ತಡವಾಗಿಯೇ ಬಂದಿದ್ದಾನೆ ಅಂದರೆ ಎಷ್ಟು ಅಹಂಕಾರವಿರಬೇಕು ಇವನಿಗೆ. ಕೈ ಟೇಬಲ್ ಮೇಲಿದ್ದ ಬೆತ್ತದತ್ತ ಚಲಿಸಿತು. ಅವನನ್ನು ಒಳಗೆ ಕರೆದು ಎರಡೇಟು ಹೊಡೆದು "ಯಾಕೆ ಲೇಟ್? 'ಸ್ವರ್ಗದ ಹಾದಿಯ' ಪಾಠ ತಪ್ಪಿಸಿಕೊಂಡಿಯಲ್ಲಾ? " ಗದರಿದರು. ಅವನು ಅಳುತ್ತಾ " ಬಚ್ಚಲು‌ ಮನೆಯಲ್ಲಿ‌ ಜಾರಿ ಬಿದ್ದು ಅಮ್ಮ ಹಾಸಿಗೆ ಹಿಡಿದಿದ್ದಾರೆ.  ಅವರಿಗೆ ನಮಾಜು ಮಾಡಲು ಉಝೂ ಮಾಡಿಸಿ ಬರುವಾಗ ತಡ ಆಯ್ತು". ಉಸ್ತಾದರಿಗೆ ಹಿಂದೊಮ್ಮೆ ತಾನೇ 'ಅಮ್ಮನ ಕಾಲಡಿಯಲ್ಲಿ ಸ್ವರ್ಗ' ಎಂದು ಪ್ರವಚನ ನೀಡಿದ್ದು ನೆನಪಾಯಿತು. ಹುಡುಗ ಅದಾಗಲೇ ಸ್ವರ್ಗದ ಹಾದಿಯಲ್ಲಿದ್ದ.


2. ದೀಪ ಪತಂಗ

ಸಣ್ಣಗೆ ಉರಿಯುತ್ತಿದ್ದ ದೀಪ  ಪತಂಗ ಹತ್ತಿರ ಬರುತ್ತಿದ್ದಂತೆ ಆರಿ ಹೋಯಿತು. ಗಾಳಿ ಬೀಸಿತೋ, ದೀಪಕ್ಕೇ ಉರಿಯಲು ಇಷ್ಟವಿರಲಿಲ್ಲವೋ ಅಥವಾ ತಾನು ಹತ್ತಿರವಾಗುವುದು ಇಷ್ಟವಿಲ್ಲವೋ ಒಂದು ಅರ್ಥವಾಗದ ಪತಂಗ ಪಥ ಬದಲಿಸಿ ಹಾರಿತು. ಮತ್ತೆ ಬಂದು ಮತ್ತೆ ದೀಪ ಹಚ್ಚಿದರು. ಪತಂಗ ಮರಳುತ್ತಿದ್ದಂತೆ ದೀಪ,
" ಅಲ್ಲೇ ನಿಲ್ಲು ಹತ್ತಿರ ಬರಬೇಡ"
"ಯಾಕೆ ಬರಬಾರದು?"
"ಸುಟ್ಟು ಹೋಗುವುದೇ‌ ಪ್ರೇಮವಲ್ಲ, ದೂರ ನಿಂತೇ ಪ್ರೇಮಿಸು"
"ಸುಟ್ಟುಕೊಳ್ಳಲಲ್ಲ, ನಿನ್ನ ಬೆಳಕ ಹೀರಿಕೊಂಡು ಅಹಂಕಾರ ತೊರೆಯಲು. ನಿನ್ನದೇ ಪುಟ್ಟ ಕಣವಾಗಲು" ಎಂದು ಹಾರಿ ಬಂದು ದೀಪದಲ್ಲಿ ಲೀನವಾಯಿತು.
ದೀಪವೇ ಪತಂಗವೀಗ.
ಪತಂಗವೇ ಬೆಳಕೀಗ.

3. ನೋವಿನ ಬದುಕು

ಬದುಕು ಮತ್ತು ನೋವು
ನಿನ್ನೆಯಷ್ಟೇ ನೋವುಂಡ ಬದುಕು ಕಡಲ ತೀರದಲ್ಲಿ ಸುಮ್ಮನೆ ಶತಪಥ ಹಾಕುತ್ತಿತ್ತು. ಪಾದ ಸೋಕಿ ಹೋಗುವ ಅಲೆಗಳು, ಬಾನಿಡೀ ಹೊಂಬಣ್ಣ ಹಂಚಿದ್ದ ಸೂರ್ಯ, ಬಾನಿಂದಲೇ ತುಸು ಬಣ್ಣ ಕಡ ಪಡೆದುಕೊಂಡು ಬಂಗಾರದಂತೆ ಹೊಳೆಯುತ್ತಿದ್ದ ಮರಳು ಯಾವುದೂ ಬೆಂದ ಬದುಕನ್ನು ಸಾಂತ್ವನಗೊಳಿಸುವಷ್ಟು ಶಕ್ತವಾಗಿರಲಿಲ್ಲ. ಎಲ್ಲಿಂದಲೋ ಧೂಳಿನಂತೆ ಮತ್ತೆ ತೂರಿ ಬಂದ ನೋವು ಬದುಕಿನ ಹೆಗಲು ಬಳಸಿ
"ನಿನಗೆ ನನ್ನ ಕಂಡರೆ ಅಸಹ್ಯವೇ?"
"ಏಕೆ ಅಸಹ್ಯಿಸಬೇಕು ನಿನ್ನ?"
"ಪ್ರತಿ ಬಾರಿ ನಿನ್ನನ್ನು ಭೇಟಿಯಾದಾಗೆಲ್ಲಾ ನಿನ್ನ ನೆಮ್ಮದಿಯನ್ನು ಕದಡಿ ಹಾಕುತ್ತೇನಲ್ಲಾ?"
"ಇಲ್ಲ ನೋವೇ, ನನಗೆ ಖುಶಿಗಿಂತಲೂ ನೀನೇ ಹೆಚ್ಚು ಇಷ್ಟ. ನೀನು ಪ್ರತಿ ಬಾರಿ ಬಂದು ಹೋಗುವಾಗಲೂ ನನ್ನನ್ನು ಮತ್ತಷ್ಟು ಬೇರಿಗಂಟಿಕೊಳ್ಳುವಂತೆ ಮಾಡುತ್ತಿ. ನಾನು ಬೇರಿನ ನಂಟು ಕಳೆದುಕೊಳ್ಳದೆ ಗಟ್ಟಿಯಾದದ್ದೇ ನಿನ್ನಿಂದ. ನೀನಿಲ್ಲದಿದ್ದರೆ ನಾನೆಂದೋ ಖಾಲಿಯಾಗಿಬಿಡುತ್ತಿದ್ದೆ. ಖಾಲಿಯಾಗುವುದೆಂದರೆ ಗೊತ್ತಲ್ಲಾ? ಉಳಿಯಲೂ ಅಳಿಯಲೂ ಏನೂ ಇಲ್ಲದಿರುವುದು".
ಕಡಲು ಒಂದು ಕ್ಷಣಕ್ಕೆ ಸ್ಥಬ್ಧವಾಯಿತಾ? ಗೊತ್ತಿಲ್ಲ, ನೋವು ಮಾತ್ರ ಬದುಕಿನ ಮುಂದೆ ಮಂಡಿಯೂರಿತು.

4. ಉಪವಾಸ

ಮದ್ರಸ ಬಿಟ್ಟು ಬಂದ ಮಗಳಿಗೆ ಹೊಟೇಲಿಂದ ತರಿಸಿದ ಎರಡು‌‌ ಇಡ್ಲಿ ಸಾಂಬಾರ್  ಕೊಟ್ಟ ಅಮ್ಮ‌ ಮತ್ತೆ ಮನೆಗೆಲಸದಲ್ಲಿ ಮುಳುಗಿ ಹೋದಳು. ಬೆಳಗ್ಗಿಂದಲೂ ಅಷ್ಟೇ, ಜೇಡನ ಬಲೆ ತೆಗೆದು , ಮನೆಯ ಮೂಲೆ ಮೂಲೆಯನ್ನು ಸ್ವಚ್ಛವಾಗಿ ಗುಡಿಸಿ, ಒರೆಸಿ ಥಳ ಥಳ ಹೊಳೆಯುವಂತೆ ಮಾಡುತ್ತಿದ್ದಾಳೆ. ಕಿಟಕಿ, ಬಾಗಿಲುಗಳ ಕರ್ಟನ್, ಸೋಫಾ ಕವರ್, ನೆಂಟರಿಗೆಂದೇ ತೆಗೆದಿಟ್ಟ ದಿಂಬು, ಬೆಡ್ಶೀಟ್ ಎಲ್ಲ ಒಗೆದು ಹಾಕಿದ್ದಳು. ಒಟ್ಟಿನಲ್ಲಿ ಇಡೀ ಮನೆಗೆ ಹೊಸ ಕಳೆ ಬಂದಿತ್ತು. ಕುತೂಹಲ ತಡೆಯಲಾಗದೆ ಮಗಳು "ಅಮ್ಮಾ ಮನೆಗೆ ಯಾರಾದ್ರೂ ಹೊಸ ನೆಂಟರು ಬರುತ್ತಿದ್ದಾರಾ?" ಎಂದು ಕೇಳಿದಳು.
"ಹುಂ ಮಗಳೇ, ಅಲ್ಲಾಹುವೇ ನೆಂಟರನ್ನು ಕಳುಹಿಸುತ್ತಿದ್ದಾನೆ. ಪವಿತ್ರ ಮಾಸ ರಂಜಾನ್ ಬರುತ್ತಿದೆ. ಉಪವಾಸದಲ್ಲಿನ ಒಂದು ಪುಣ್ಯ ಕಾರ್ಯಕ್ಕೆ ಅವನು ಎಪ್ಪತ್ತರಷ್ಟು ಪ್ರತಿಫಲ ಕೊಡುತ್ತಾನೆ. ಹೀಗಿರುವಾಗ ರಂಜಾನ್ ನನ್ನು ಸ್ವಾಗತಿಸದೇ ಇರಲಾದೀತೇ?"
"ಹೌದಾ ಅಮ್ಮಾ? ಎಪ್ಪತ್ತರಷ್ಟು ಪ್ರತಿಫಲಾನಾ? ಹಾಗಿದ್ದರೆ ಶಾಲೆಯಲ್ಲಿನ ನನ್ನ ಗೆಳತಿ ತುಂಬಾ ಪುಣ್ಯವಂತೆ. ಅವಳಪ್ಪ ತೀರಿ ಹೋದ ನಂತರ ವಾರದಲ್ಲಿ ನಾಲ್ಕು ದಿನ ಅವರಿಗೆ ಉಪವಾಸವಂತೆ" ಎಂದು ಮುಗ್ಧತೆಯಿಂದ ನಕ್ಕಳು.

5. ತೀರದ ದಾಹ

ತೀರದ ದಾಹದಿಂದ ಬಳಲುತ್ತಿದ್ದ ಮರಳನ್ನು ಗಾಳಿ ಕೇಳಿತು
" ಪಕ್ಕದಲ್ಲೇ ಸಮುದ್ರ ಇದ್ದರೂ ಇಷ್ಟು ದಾಹವೇ ನಿನಗೆ? ಬೊಗಸೆಯೊಡ್ಡಿದರೆ ಸಾಕು  ದಾಹವೂ ತೀರುವಷ್ಟು ನೀರಿದೆ".
"ತನ್ನ ಮೀರಿದವರಿಲ್ಲ ಎನ್ನುವ ಅಹಂಕಾರದಿಂದ ಭೋರ್ಗರೆವ ನೀರಿನಲ್ಲಿ ಪ್ರತಿಬಿಂಬವೇ ಮೂಡುತ್ತಿಲ್ಲ. ಇನ್ನು ದಾಹ ತೀರೀತೇ?" ತಣ್ಣಗೆ ಉತ್ತರಿಸಿತು ಮರಳು.

6. ಪ್ರತಿಬಿಂಬ

ಕನ್ನಡಿ ಮಾರುವ ಅಂಗಡಿಯಲ್ಲಿ ಅವಳು ಎಲ್ಲ ಕನ್ನಡಿಯ ಮುಂದೆ ನಿಂತು ಪ್ರತಿಬಿಂಬ ನೋಡಿ ಪರೀಕ್ಷಿಸಿ ನಿರಾಸೆಯಿಂದ ಹೊರಡಲನುವಾದಳು. ಅಂಗಡಿಯವನು" ಏನು ಬೇಕಿತ್ತು ಮೇಡಂ?"
"ಒಡೆದು ಚೂರಾದರೂ ಒಡಕು ಬಿಂಬ ತೋರದ ಕನ್ನಡಿ ಬೇಕಿತ್ತು. ಇಲ್ಲಿ ಹುಡುಕಿದೆ, ಸಿಗಲಿಲ್ಲ." ಎಂದಳು ಅವಳು.
"ಇಲ್ಲಿ ಅಂತಲ್ಲ, ಎಲ್ಲೂ ಸಿಗದು. ಒಮ್ಮೆ ಅಂತರಂಗದಲ್ಲಿ ಹುಡುಕಿಕೊಳ್ಳಿ. ಸಿಗುವುದಿದ್ದರೆ ಅಲ್ಲೇ" ಎಂದ ಅಂಗಡಿಯವನು.

7. ಅಸ್ತಿತ್ವದ ಪ್ರಶ್ನೆ

"ಅಸ್ತಿತ್ವ ಕಳೆದುಕೊಳ್ಳುವುದೆಂದರೇನು?" ಮೋಡದ ಒಳಗಿಂದ ಭೂಮಿಗೆ ಬರಲು ಹೊರಟ ಎರಡು ಪುಟ್ಟ ಪುಟ್ಟ ಮಳೆ ಹನಿಗಳು ಮಾತಾಡಿಕೊಳ್ಳುತ್ತಿದ್ದವು. ಈಗಷ್ಟೇ ಬೀಸಿದ ಗಾಳಿಗೆ ಮೋಡದಿಂದ ತಪ್ಪಿಸಿಕೊಂಡ ದೊಡ್ಡ ಹನಿಯೊಂದು‌ ಭೂಮಿಯತ್ತ ಜಾರುತ್ತಾ "ಇದ್ದೂ ಇಲ್ಲದಂತಾಗುವುದೇ ಅಸ್ತಿತ್ವ ಕಳೆದುಕೊಳ್ಳುವುದು" ಅಂದಿತು. ಏನೂ ಅರ್ಥವಾಗದ ಪುಟ್ಟ ಹನಿಗಳು ಒಂದರ ಮುಖ ಇನ್ನೊಂದು ನೋಡುತ್ತಿರುವಂತೆಯೇ ಮತ್ತೆ ಗಾಳಿ ಬೀಸಿತು. ಅವರೆಡೂ ಜೊತೆಯಾಗಿ ಉದುರಿದವು. ದಾರಿಯಲ್ಲಿ ಗಾಳಿಗೂ, ಧೂಳಿಗೂ, ಗುಡುಗಿನ ಆರ್ಭಟಕ್ಕೂ ಹೆದರಿ ಕಣ್ಣು ಮುಚ್ಚಿದವು.ಕಣ್ಣು ಬಿಟ್ಟು ನೋಡಿದಾಗ ಎರಡೂ ಹನಿಗಳು ಸಾಗರ ಸೇರಿದ್ದವು. ಎತ್ತ ನೋಡಿದರತ್ತ ನೀರು. ತಮ್ಮ‌ ಮೈ ನೋಡಿಕೊಂಡವು, ಹನಿ ಯಾವುದು ಸಾಗರ ಯಾವುದು ಗೊತ್ತಾಗಲಿಲ್ಲ. ಅವೆರಡಕ್ಕೂ ಈಗ ಅಸ್ತಿತ್ವ ಕಳೆದುಕೊಳ್ಳುವುದೆಂದರೇನೆಂದು ಅರ್ಥವಾಗಿತ್ತು.

(2019 ಜೂನ್ ತಿಂಗಳ ತುಷಾರದಲ್ಲಿ ಪ್ರಕಟಿತ ಕಥೆಗಳು.)

ಗುರುವಾರ, ಏಪ್ರಿಲ್ 25, 2019

ಕಡಲು ನೋಡಲು ಹೋದವಳು ಕಥೆ ಕೇಳಿಸಿಕೊಂಡು ಬಂದೆ.

ಪ್ರತಿ ಬಾರಿ ಕಡಲಿಗೆ ಮುಖಾಮುಖಿಯಾದಾಗೆಲ್ಲಾ, ಈ ಕಡಲು ಮತ್ತು ನಾನು ಯಾವುದೋ‌ ಜನ್ಮದಲ್ಲಿ ದಾಯಾದಿಗಳಾಗಿದ್ದಿರಬಹುದು, ಅದಕ್ಕೇ ಈಗ ನನ್ನ ಮೆದುಳಿನ ಯಾವುದೋ ಒಂದು ಕೋಶದಲ್ಲಿ ಅಡಗಿರುವ ಅಷ್ಟೂ ವಿಷಾದಗಳನ್ನು ಕಡಲಿಗೆ, ಮೊರೆವ ಅಲೆಗಳಿಗೆ ಕೇಳಿಸಬೇಕು ಅನ್ನುವ ಹುಕಿ ಆಗಾಗ ನನ್ನೊಳಗೆ ಹುಟ್ಟಿಕೊಳ್ಳುವುದು ಅಂತ ನನಗೆ ಅನ್ನಿಸುತ್ತದೆ. ‌ಮರುಕ್ಷಣ ಹೀಗೆ ಕಡಲಿನೊಂದಿಗೆ ಖುಶಿಯನ್ನೂ, ನಲಿವನ್ನೂ, ಸಂಕಟವನ್ನೂ, ಕೆಲವು ವಿಯೋಗಗಳನ್ನೂ ಹಂಚಿಕೊಳ್ಳುವವರು ಎಷ್ಟು ಮಂದಿ ಇರಬಹುದು? ಅವರೆಲ್ಲರೂ ಯಾವುದೋ ಜನ್ಮದಲ್ಲಿ ದಾಯಾದಿಗಳಾಗಿದ್ದರೆ, ನಿಜಾರ್ಥದಲ್ಲಿ ಕಡಲು ದೊಡ್ಡ ಕುಟುಂಬಸ್ಥನೇ ಇರಬೇಕು ಅನ್ನಿಸಿ ನಗು ಬರುತ್ತದೆ.

ಕಡಲು ನಾನು ಮಾತಾಡುವುದನ್ನು ಕೇಳಿಸಿಕೊಳ್ಳುತ್ತದೋ ಬಿಡುತ್ತದೋ, ಅದು ಪಾಠ ಕಲಿಸುತ್ತದೋ ಇಲ್ಲವೋ, ಆದರೆ ಕಡಲಿನಲ್ಲೊಂದು ಹಿತವಾದ ಮೌನ ಇದ್ದೇ ಇದೆ. ಅದು ಸುಮ್ಮನೆ ಕೇಳಿಸದು, ಶಬ್ಧಗಳ ಸಂತಯೊಳಗೆ ಕಳೆದುಹೋಗದ ಮನಸ್ಸನ್ನಿಟ್ಟುಕೊಂಡು ಕಡಲ ಮೌನವನ್ನು ಆಲಿಸದರೆ ಮಾತ್ರ ಕೇಳಿಸಬಲ್ಲುದು. ಕಡಲಷ್ಟೇ ಅಲ್ಲ, ಅದರ ತೀರ, ರಸ್ತೆಗೂಡುವಲ್ಲಿ ಪುಟ್ಟದಾಗಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು, ಅವರ ಮಾತು, ಕಥೆ , ಬದುಕೂ ಒಂದು ಅಚ್ಚರಿಯೇ. ಹಾಗೆ ನೋಡುವುದಾದರೆ ದಡದ ಒಂದೊಂದು ಮರಳಿನ ಕಣಗಳೂ ಹೊಸ ಹೊಸ ಕಥೆಗಳನ್ನು ಹೇಳುತ್ತವೆಯೇನೋ ಅನಿಸುತ್ತದೆ.

ಹೀಗೆ ಕಡಲ ತಡಿಯ ಅಚ್ಚರಿಯನ್ನು ಬೆಚ್ಚಗೆ ಮಡಿಲಲ್ಲಿ ಕೂರಿಸಿ ಮೈದಡವಿದರೆ, ಟೀ, ಕಾಫಿ, ಸ್ವೀಟ್ ಕಾರ್ನ್, ಚರುಮುರಿಗಳ ಪುಟ್ಟ ಸ್ಟಾಲ್ ಇಟ್ಟುಕೊಂಡಿರುವ ಇಳಿವಯಸ್ಸಿನ ದಂಪತಿ ಕಣ್ಣಿಗೆ ಬೀಳುತ್ತಾರೆ. ಎಂಥಾ ಜೀವನೋತ್ಸಾಹ ಅವರದ್ದು! ಸದಾ ಬ್ಯುಸಿಯಾಗಿರುವ, ಅಷ್ಟು ಬ್ಯುಸಿಯ ಮಧ್ಯೆಯೂ ಯಾರ ಮೇಲೂ ಸಿಡುಕದ, ಎಲ್ಲವನ್ನೂ ನಗುತ್ತಲೇ ಸಂಭಾಳಿಸುವ ಅವರನ್ನು ನೋಡುವುದೇ ಒಂದು ಹಬ್ಬ. ಕಣ್ಣ ಮೇಲೊಂದು ಕನ್ನಡಕ, ಕಾಸಗಲದ ಕುಂಕುಮ, ಕಿವಿಯ ಪಕ್ಕದಲ್ಲಿ ಸ್ವಲ್ಪವೇ ಸ್ವಲ್ಪ ಹಚ್ಚಿಕೊಂಡ ಪ್ರಸಾದ, ಮುಕ್ಕಾಗದ ಹತ್ತಿ ಸೀರೆ, ಮುಖದ ಪೂರ್ತಿ ನಗು... ಇವು ಆ ಅಜ್ಜಿಯ ಅಲಂಕಾರವಾದರೆ ತಿಳಿ ಬಣ್ಣದ ಅಂಗಿ, ಒಂದು ಪಂಚೆ ಮತ್ತು ಆಗಾಗ ಕೈ ಒರೆಸಿಕೊಳ್ಳಲು ಹೆಗಲ ಮೇಲೆ ಒಂದು ಶುಭ್ರ  ಬೈರಾಸು... ಇಷ್ಟು ಅಜ್ಜನ ವೇಷ ಭೂಷಣ. ನೀವೆಂದಾದರೂ ನಮ್ಮೂರಿನ ಬೀಚ್ ಗೆ ಬಂದರೆ ಇಡೀ ಕಡಲಿನ ಸೌಂದರ್ಯಕ್ಕೆ ಪುಟವಿಟ್ಟಂತೆ ಕಾಣುವ ಇವರನ್ನು ಭೇಟಿಯಾಗದೆ ವಾಪಾಸಾಗಬಾರದು.

ಅವರು ತಯಾರಿಸುವ ಮಸಾಲೆ ಟೀಯಂತೂ ಅದ್ಭುತ. ಒಮ್ಮೆ ಕುಡಿದರೆ ಮತ್ತೆ ಮತ್ತೆ ಕುಡಿಯಬೇಕೆನ್ನುವ ತಪನೆ ಹುಟ್ಟುಹಾಕುತ್ತದದು. ಆದರೆ ಈ ವಯಸ್ಸಿನಲ್ಲಿ ಯಾವ ಅನಿವಾರ್ಯತೆ ಅವರನ್ನು ಹೀಗೆ ದುಡಿಯಲು ಪ್ರೇರೇಪಿಸುತ್ತಿದೆ ಅಂತ ಹಲವು ಬಾರಿ ನಾನು ಯೋಚಿಸಿದ್ದಿದೆ. ಕೆಲವೊಮ್ಮೆ ಟೀ ಕುಡಿಯುವ ನೆಪದಲ್ಲಿ ಎಲ್ಲಾ ಕೇಳಿಬಿಡಬೇಕು ಅಂದುಕೊಂಡದ್ದೂ ಇದೆ. ಆದರೆ ಅಲ್ಲಿರುವ ಜನಜಂಗುಳಿ, ವ್ಯಾಪಾರದ ಭರಾಟೆ, ಅವರಿಬ್ಬರ ಕಾರ್ಯತತ್ಪರತೆ ನೋಡಿ ಏನೂ ಕೇಳಲಾಗದೆ ಹಿಂದಿರುತ್ತೇನೆ. ಮೇಲಾಗಿ ನನ್ನ ಅನುಮಾನಗಳಿಗೆಲ್ಲಾ ಅವರು ಉತ್ತರಿಸುತ್ತಾರೆ ಎನ್ನುವ ಯಾವ ನಂಬಿಕೆಯೂ ನನಗಿರಲಿಲ್ಲ‌. ಹಿಂದೊಮ್ಮೆ ಹೀಗೆ ಯಾರನ್ನೋ ಅವರ ಬದುಕಿನ ಬಗ್ಗೆ ಕೇಳಿ ಬಯ್ಯಿಸಿಕೊಂಡ ಅನುಭವವೂ ಇತ್ತು. ಹಾಗಾಗಿ ಯಾವ ಉಸಾಬರಿಯೂ ಬೇಡವೆಂದು ಸುಮ್ಮನಾಗುತ್ತಿದ್ದೆ. 

ಆದರೆ ಪ್ರತಿ ಬಾರಿ ಅವರನ್ನು ನೋಡಿದಾಗೆಲ್ಲಾ ನನ್ನ ಮೆದುಳು ಪ್ರಶ್ನೆಗಳ ಗೀಜುಗದ ಗೂಡಾಗಿಬಿಡುತ್ತಿತ್ತು. ಎಷ್ಟು ಬಿಡಿಸಲೆತ್ನಿಸಿದ್ದರೂ ಬಿಡಿಸಿಕೊಳ್ಳುತ್ತಿರಲಿಲ್ಲ. ಮುಪ್ಪಿನಲ್ಲೂ ಯಾರ ಮುಂದೆಯೂ ಕೈಯೊಡ್ಡಲಾರೆ ಅನ್ನುವ ಸ್ವಾಭಿಮಾನ ಅವರನ್ನು ಈ ವಯಸ್ಸಿನಲ್ಲೂ ದುಡಿಸುತ್ತಿದೆಯಾ? ಅಥವಾ ಎಲ್ಲಾ ಮುಗಿದ ಮೇಲೆ ಮಕ್ಕಳು ಅವರಿಬ್ಬರನ್ನೂ ಮನೆಯಿಂದ ಹೊರಹಾಕಿದ್ದಾರೋ? ರಸ್ತೆಗೆಂದೋ, ರೈಲ್ವೇ ಟ್ರಾಕಿಗೆಂದೋ ಕಸಿದುಕೊಂಡ ಭೂಮಿ ಅವರನ್ನು ರಸ್ತೆಯಲ್ಲಿ ನಿಲ್ಲಿಸಿತಾ? ಊರಿಂದ, ಕುಟುಂಬದಿಂದ ಬಹಿಷ್ಕೃತರೋ? ಇಡೀ ಬದುಕನ್ನು ವಿಲಾಸದಿಂದ ಕಳೆದವರು ಈಗ ಕೈ ಖಾಲಿ  ಮಾಡಿಕೊಂಡು ಕಳೆದುಕೊಂಡದ್ದನ್ನೇನಾದರೂ ಹುಡುಕುತ್ತಿದ್ದಾರಾ?  ಅಂದರೆ ಹುಡುಕಾಟ ಎನ್ನುವುದು ಕಳೆದುಕೊಂಡಿರುವುದಕ್ಕಷ್ಟೇ ಅನ್ವಯಿಸುವಂಥದ್ದಾ? ಹೊಸದಾಗಿ ಯಾವುದನ್ನೂ ಹುಡುಕಬಾರದಾ? ಬದುಕಿನ ಸಂಧ್ಯಾಕಾಲದಲ್ಲಿ ಮನಸ್ಸಿಗಿಷ್ಟವಾಗುವ ಹೊಸ ಸಾಹಸವಾ ಇದು?  ಅಥವಾ ಹೀಗೆಲ್ಲಾ ಯೋಚಿಸುತ್ತಿರುವ ನನ್ನ ಯೋಚನಾ ಕ್ರಮವೇ ತಪ್ಪಾ? ಅವರನ್ನು ಕೇಳಬೇಕು, ಮಾತಾಡಿಸಬೇಕು ಅನ್ನುವ ಇಂಗಿತ ತಪ್ಪಾ? ಊಹೂಂ, ಒಂದೂ ಗೊತ್ತಾಗದೆ ತಲೆ ಕೊಡವಿಕೊಳ್ಳುತ್ತೇನೆ. ಮತ್ತು ಹಾಗೆ ಕೊಡವಿಕೊಂಡಾಗೆಲ್ಲಾ ಮತ್ತಷ್ಟು ಪ್ರಶ್ನೆಗಳು ಕಾಡುತ್ತವೆ. ನಾನು, ಬದುಕು ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸುತ್ತಾ ಕೂತರೆ, ಬದುಕು ಪ್ರಶ್ನೆಯನ್ನೇ ಬದಲಿಸಿಬಿಡುತ್ತದೆ ಅನ್ನುವ ತತ್ವಾಜ್ಞಾನಕ್ಕೆ ಜೋತು ಬಿದ್ದು ತಾತ್ಕಾಲಿಕ ಸಮಾಧಾನ ಪಟ್ಟುಕೊಳ್ಳುತ್ತೇನೆ.

ಪ್ರಶ್ನೆಗಳಿಗೆ ಉತ್ತರಿಸಲಾಗುವುದಿಲ್ಲ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದಿಲ್ಲ ಎಂದಾದಾಗೆಲ್ಲಾ ತತ್ವಜ್ಞಾನದ ನೆರಳಿನಡಿ ಅಡಿಗಿಕೊಳ್ಳುವ ಮನುಷ್ಯ ಸ್ವಭಾವದ ಮೂಲ ಹುಡುಕುತ್ತಾ ಹೋದರೆ ಭೂತ, ವರ್ತಮಾನಗಳೊಂದಿಗೆ ಭವಿಷ್ಯವೂ ಡೋಲಾಯಮಾನವಾಗಿಬಿಡಬಹುದು. ಇರಲಿ, ಮೊನ್ನೆ ಹೊಂಬಣ್ಣ ತಬ್ಬಿದ ಸಂಜೆಯೊಂದರಲ್ಲಿ, ನಾನೀಗ ಬದುಕುತ್ತಿರುವ ಬದುಕು ನನ್ನದಲ್ಲ ಅಂತ ದಿಢೀರ್ ಜ್ಞಾನೋದಯ ಆದಂತಾಯಿತು. ಹಾಗಿದ್ದರೆ ಈಗ ನಾನು ಬದುಕುತ್ತಿರುವ ಬದುಕು ಯಾರದು? ಇದು ನನ್ನದಲ್ಲದೇ ಹೋಗಿದ್ದರೆ ಇದರ ಅಸಲೀ ಹಕ್ಕುದಾರರು ಯಾರು? ನನ್ನ ಬದುಕನ್ನು ಯಾರು ಬದುಕುತ್ತಿದ್ದಾರೆ? ಹಾಗೆ ಬದುಕುತ್ತಿರುವವರು ಖುಶಿಯಾಗಿದ್ದಾರಾ? ಅಥವಾ ಯಾವುದೋ ಬಿಸಿಲ್ಗುದುರೆಯೊಂದರ ಬೆನ್ನು ಹತ್ತಿ ಅವರದೇ ಬದುಕಿಗಾಗಿ ಅಲೆಯುತ್ತಿದ್ದಾರಾ? ಹೀಗೆಲ್ಲಾ ಬದುಕು ಎಕ್ಸ್ ಛೇಂಜ್ ಆಫರ್ ನಷ್ಟು ಸುಲಭವಾಗಿ ಅದಲುಬದಲಾಗಲು ಸಾಧ್ಯವೇ? ಅಂತೆಲ್ಲಾ ಯೋಚನೆಗೆ ಇಟ್ಟುಕೊಂಡಿತು. ನನ್ನ ಗೊಂದಲಗಳನ್ನೂ, ಅನುಮಾನಗಳನ್ನೂ ಕಡಲಿನ ಅಲೆಗಳಿಗೆ ಕೇಳಿಸಿ ಸಮಾಧಾನ ಪಡೆದುಕೊಳ್ಳಬೇಕೆಂದು ಅನ್ನಿಸಿ ಒಂಟಿಯಾಗಿ ತೀರದ ಕಡೆ ನಡೆದೆ. ನಾಲ್ಕು ಹೆಜ್ಜೆ ಇಟ್ಟರೆ ಕಡಲು, ನಲವತ್ತು ಹೆಜ್ಜೆ ಇಟ್ಟರೆ ಸಾವು... ಹೆಜ್ಜೆಗಳ ಮತ್ತು ಪ್ರಶ್ನೆಗಳ ನಡುವೆ ಜೀಕುವ ಜೋಕಾಲಿ ಬದುಕು. ಕಡಲ ಮರಳು ಮತ್ತು ಟಾರು ರಸ್ತೆ ಸೇರುವ ಸ್ವರ್ಗದ ಬಾಗಿಲಿನಂತಹ ಸ್ಥಳದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿರುವ ದೇವತೆಗಳಂತಹ ಅಜ್ಜ, ಅಜ್ಜಿ. ಅವರ ಮಸಾಲೆ ಟೀಯ ಘಮ ಮೂಗಿಗೆ ಅಡರುತ್ತಿದ್ದಂತೆ ನನ್ನ ಗೊಂದಲಗಳೆಲ್ಲಾ ಮರೆತೇ ಹೋದವು.

ಹೇಗೆ ಮಾತು ಶುರು ಹಚ್ಚಬೇಕೆಂದು ಅರ್ಥವಾಗದೆ ಅವರ ಮುಂದೆ ಎರಡು ಕ್ಷಣ ಸುಮ್ಮನೆ ನಿಂತು "ಮಸಾಲಾ ಟೀ" ಅಂದೆ. ನಗುನಗುತ್ತಲೇ ಟೀ ಕಾಸಿಕೊಟ್ಟರು. ನಾನು‌ ಟೀ ಹೀರುವ ನೆಪದಲ್ಲಿ ಅಲ್ಲೇ ನಿಂತು, "ನೀವು ಇಲ್ಲಿಯವರೇನಾ ಅಜ್ಜಿ?" ತೀರಾ ಸಾಮಾನ್ಯವೆಂಬಂತೆ ಕೇಳಿದೆ. ಅಜ್ಜ ಊಹೂಂ ಎಂದು ತಲೆಯಾಡಿಸಿದರು.

ಆದರೆ ಅಜ್ಜಿ ಮಾತ್ರ ನಿಧಾನವಾಗಿ ತಮ್ಮ ವೃತ್ತಾಂತ ತೆರೆದಿಡಲು‌ ಪ್ರಾರಂಭಿಸಿದರು. ಮಾತಿನ ಮಧ್ಯೆ ಮಧ್ಯೆ ತುಳು ಪದಗಳನ್ನು ಅನಾಯಾಸವಾಗಿ ಬೆರೆಸುತ್ತಿದ್ದ ಅವರ ವಿಶಿಷ್ಟ ಕನ್ನಡಕ್ಕೆ ಮನ ಸೋಲುತ್ತಲೇ, ಕೈಯಲ್ಲಿ ಹಿಡಿದಿದ್ದ ಕಪ್ ಗೆ ಮತ್ತೆ ಮತ್ತೆ ಟೀ ಸುರಿದುಕೊಳ್ಳುತ್ತಾ ನಾನು ಅವರ ಮಾತಿಗೆ ಕಿವಿಯಾದೆ.

ಅವರ ಮಾತಿನಲ್ಲಿ ಕಥೆ ಕೇಳುವುದೇ ಚೆಂದ. ಕಡಲು ನೋಡಲು ಬಂದವಳು ಕಥೆ ಕೇಳುತ್ತಿದ್ದಾಳಲ್ಲಾ ಅನ್ನುವ ಖುಶಿಗೆ ಅಜ್ಜಿ ಮತ್ತಷ್ಟು ಕಳೆಕಳೆಯಾಗಿ "ಇಲ್ಲ ಮಾರೈತಿ, ನಾವು ಈ ಊರಿನವರಲ್ಲ. ಊರಿನವರಲ್ಲ ಅಂದ್ರೆ ಪೂರ್ತಿ ಈ ಊರಿನವರಲ್ಲ ಅಂತಲ್ಲ‌. ಪಾಪ ಮದುವೆ ಆಗಿ ಇಲ್ಲಿಗೆ ಬಂದವಳು ನೀನು, ನಿಂಗೆ ಉಡುಪಿ ಗೊತ್ತಿರ್ಲಿಕ್ಕಿಲ್ಲ, ಕೃಷ್ಣ ಮಠ ಇದ್ಯಲ್ಲಾ ಅದೇ ನಮ್ಮೂರು. ಮೊದ್ಲು ನಾವು ಅಲ್ಲೇ ಇದ್ವಿ. ಇಬ್ಬರು ಗಂಡು ಮಕ್ಕಳು. ಹೊಲ, ತೋಟ ಅಂತ ಬೆಳೆಯುತ್ತಾ ಬೆಳೆದದ್ದನ್ನು ತಿನ್ನುತ್ತಾ ಹಾಯಾಗಿಯೇ ಇದ್ದೆವು‌. ಆಗ ನಮ್ಮ ಜಿಲ್ಲೆಗೆ ಉಡುಪಿ ಅಂತ ಹೆಸರೂ ಇರ್ಲಿಲ್ಲ, ದಕ್ಷಿಣ ಕನ್ನಡ ವಿಭಜನೆ ಆಗಿರ್ಲಿಲ್ಲ. ಉಡುಪಿ ಮಂಗಳೂರು ಒಂದೇ ಆಗಿತ್ತು. ತಕ್ಕ ಮಟ್ಟಿಗೆ ಅನುಕೂಲಸ್ಥರೇ. ಆದ್ರೆ ನಾಲ್ಕು ತಲೆಮಾರಿಗೆ ಆಗುವಷ್ಟೇನೂ ಕೂಡಿಟ್ಟಿರಲಿಲ್ಲ. ಆದ್ರೆ ಉಣ್ಣೋಕೆ, ಉಡೋಕೆ ಏನು ಕಮ್ಮಿ ಇರ್ಲಿಲ್ಲ. ಹೊಲ, ಗದ್ದೆ, ತೋಟ ಜೊತೆಗೆ ಒಂದಿಷ್ಟು ದನ ಕರುಗಳು. ಬದುಕು ಹಾಯಾಗಿತ್ತು.

ಆಗ ನಮ್ಮೂರಲ್ಲಿ ನಾನೇ ಸುಂದರಿ. ಎಷ್ಟು ಮಂದಿ ನನ್ನ ಮದಿಮೆಯಾಗುದಕ್ಕೆ ಸಾಲುಗಟ್ಟಿ ನಿಂತಿದ್ರು ಗೊತ್ತಾ? ನಾನೆಷ್ಟು ವರಗಳನ್ನು ತಿರಸ್ಕರಿಸಿದ್ದೇನೆ ಗೊತ್ತಾ? " ಎಂದು ಸ್ವಲ್ಪ ನಾಚಿಕೆಯಿಂದ ಮತ್ತು ಹೆಚ್ಚೇ ಹೆಮ್ಮೆಯಿಂದ ಅಜ್ಜನತ್ತ ಕಣ್ಣು ಮಿಟುಕಿಸಿ ಮತ್ತೆ ಕಥೆ ಮುಂದುವರಿಸಿದರು‌. "ತರಹೇವಾರಿ ವಧುಪರೀಕ್ಷೆಗಳು ನಡೆಯುತ್ತಿದ್ದ ಕಾಲದಲ್ಲಿ ವರ ಪರೀಕ್ಷೆ ನಡೆಸಿದ ಜಾಣೆ ನಾನು.‌ಒಂದ್ಸಲ ಏನಾಯ್ತು ಗೊತ್ತಾ? ಒಬ್ಬ ಘಟವಾನಿ ಹೆಂಗ್ಸು, ಪಾಪದ ಮಗಳು ಮತ್ತು ಆ ಹೆಂಗ್ಸಿನ ಮಗ ನನ್ನ ವಧುಪರೀಕ್ಷೆಗೆ ಬಂದಿದ್ದರು. ಆ ಹೊತ್ತಿಗಾಗುವಾಗ ನಾನು ನಿರಾಕರಿಸಿದ್ದ ವರಗಳ ಪಟ್ಟಿ ಉದ್ದವಾಗಿಯೇ ಇತ್ತು. ಅಪ್ಪ- ಅಮ್ಮನಿಗೆ ಮಗಳೆಲ್ಲಿ ಮದುವೆಯಾಗದೇ ಉಳಿದುಬಿಡುತ್ತಾಳೇನೋ ಅನ್ನುವ ಭಯ ಒಳಗೊಳಗೇ ಕಾಡಲು ಶುರುವಾಗಿತ್ತು. ನನ್ನದೇ ವಯಸ್ಸಿನ ಸಂಬಂಧಿ ಹೆಣ್ಣು ಮಕ್ಕಳು, ಅಕ್ಕಪಕ್ಕದ ಮನೆಯವರು ಆಗಲೇ ಕಂಕುಳಲ್ಲೊಂದು, ಕೈಯಲ್ಲೊಂದು ಮಗು ಹಿಡಿದು ತಿರುಗುತ್ತಿದ್ದರು. ಅವರಿವರ ಮಾತುಗಳು ಬೇರೆ ಅವರ ಎದೆ ಚುಚ್ಚುತ್ತಿತ್ತು. ಹಾಗಾಗಿ ಅಮ್ಮ, ಈ ಮದುವೆ ನಡೆಯಲೇಬೇಕು, ಏನೂ ಅಪದ್ಧ ಮಾತನಾಡಬಾರದು ಎಂದು ಮೊದಲೇ ತಾಕೀತು ಮಾಡಿದ್ದರು. ಅಮ್ಮನಿಗೆ ಹೆದರಿ ನಾನೂ ಸುಮ್ಮನಿದ್ದೆ. ಕೋಡುಬಳೆ ಕೊಟ್ಟು ತಿನ್ನಲು ಹೇಳುವುದೇನು, ಹತ್ತು ಹೆಜ್ಜೆ ನಡೆಯಿಸಿ ನೋಡುವುದೇನು, ಹಾಡಿಸುವುದೇನು, ಅಡುಗೆಯಲ್ಲಿ ತಪ್ಪುಗಳೆಷ್ಟಿವೆ ಎಂದು ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸುವುದೇನು? ನಾನು ಸಹಿಸುವಷ್ಟು ಸಹಿಸಿಕೊಂಡೆ, ಆದರೆ ಎಲ್ಲಾ ಮುಗಿದು ಹೊರಡಬೇಕು ಅನ್ನುವಷ್ಟರಲ್ಲಿ ನನಗೇನೋ ಉಪಕಾರ ಮಾಡುತ್ತಿದ್ದೇವೆ ಅನ್ನುವ ಧಾಟಿಯಲ್ಲಿ ನಿಮ್ಮ ಮಗಳ ಮೂಗು ಸ್ವಲ್ಪ ಗಿಡ್ಡ, ಇರಲಿ ಪರವಾಗಿಲ್ಲ ನಾವು ಮದುವೆ ಮಾಡಿಸಲು ತಯಾರು, ಆದರೆ ವರಪೂಜೆ ಸಾಂಗವಾಗಿ ನಡೆಯಬೇಕು, ನಮಗೆ ಬರಬೇಕಾದ್ದೆಲ್ಲಾ ಬರಲೇಬೇಕು ಎಂದರು. ಅಷ್ಟು ಹೊತ್ತು ಎಲ್ಲಾ ಸಹಿಸಿಕೊಂಡಿದ್ದ ನಾನು ನಿಮ್ಮ ಮಗನೂ ಬೇಡ, ಈ ಮದುವೆಯೂ ಬೇಡ ಎಂದೆ.

ದುರ್ನಾದ ತೆಗೆದುಕೊಂಡಂತೆ ಅವರು ಎಷ್ಟು ಅಹಂಕಾರದ ಹುಡುಗಿ ಈಕೆ, ನಮಗೇ ಅವಮಾನ ಮಾಡುತ್ತಾಳಲ್ಲಾ, ಇರಲಿ ಇವಳಿಗೆ ಹೇಗೆ ಮದುವೆಯಾಗುತ್ತೆ ಅಂತ ನಾನೂ ನೋಡುತ್ತೇನೆ ಎಂದು ಶಾಪ ಹಾಕುತ್ತಾ, ನಿಟಿಕೆ ಮುರಿಯುತ್ತಾ ಹೊರಟು ಹೋದರು.

ಈ ಸುದ್ದಿ ಊರಿಡೀ ಹಬ್ಬಿತು. ಇನ್ನು ಇವಳಿಗೆ ಮದುವೆ ಆದಂತೆಯೇ ಎಂದು ಊರು, ಕೇರಿ ಮಾತಾಡಿಕೊಳ್ಳತೊಡಗಿತು. ಅಪ್ಪ ಅಮ್ಮನೂ ಕುಸಿದು ಕುಳಿತರು. ನಾನು ಮಾತ್ರ ಏನೂ ನಡೆದೇ ಇಲ್ಲವೆನ್ನುವಷ್ಟು ಆರಾಮವಾಗಿದ್ದೆ. ಆಗ ನೋಡು ನನ್ನ ಬದುಕಲ್ಲಿ ಬಂದದ್ದು ಇವರು. ದೂರದಲ್ಲಿ ನನಗೆ ಅತ್ತೆಯ ಮಗ ಆಗಬೇಕು. ಆದ್ರೆ ಋಣಾನುಬಂಧ ನಮ್ಮನ್ನು ಒಂದುಗೂಡಿಸಿತ್ತು. ಪಾಪದ ಅತ್ತೆ, ಮಗು ಮನಸ್ಸಿನ ಮಾವ ನನ್ನನ್ನು ಸೊಸೆಯಾಗಿ, ಮಗಳಾಗಿ ನೋಡಿಕೊಂಡರು.

ತೋಟದಲ್ಲಿ ಕೆಲಸ ಮಾಡುತ್ತಾ, ಹೊಲ ಉಳುತ್ತಾ, ಹಾಲು ಕರೆಯುತ್ತಾ ಆರಾಮವಾಗಿ ಇದ್ದೆವು. ಈಗ ನೀನು ಚಹಾ ಕುಡಿಯುತ್ತಿ ಅಲ್ವಾ ಹಾಗೆಯೇ ಆಗಲೂ ನನ್ನ ಚಹಾಕ್ಕೆ ತುಂಬಾ ಬೇಡಿಕೆ ಇತ್ತು. ನಮ್ಮ ಮನೆಯಿಂದ ಎರಡು ಮೈಲು ದೂರ ಇದ್ದ ಮಸೀದಿಯ ಗುರುಗಳು ನನ್ನ ಚಹಾಕ್ಕೋಸ್ಕರ ಮನೆಯ ವರೆಗೆ ಬರುತ್ತಿದ್ದರು ಅಂದರೆ ನೀನೇ ಲೆಕ್ಕ ಹಾಕು ನನ್ನ ಚಹಾ ಎಷ್ಟು ಜನಪ್ರಿಯ ಆಗಿದ್ದಿರಬಹುದು ಎಂದು. 

ಆಮೇಲೆ ಮಕ್ಕಳು, ಮರಿ ಅಂತ ಸಂಸಾರ ದೊಡ್ಡದಾಯಿತು. ಮಕ್ಕಳಿಬ್ಬರೂ ಓದಿ , ಮದುವೆಯಾಗಿ ಪಟ್ಟಣ ಸೇರಿದರು. ಅತ್ತೆ, ಮಾವ ತೀರಿಕೊಂಡರು. ನನ್ನ ಅಪ್ಪ ಅಮ್ಮನೂ ತೀರಿಕೊಂಡರು. ಅವರೆಲ್ಲರ ಸಮಾಧಿಯನ್ನು ನಮ್ಮ ಹೊಲದಲ್ಲೇ ಕಟ್ಟಿದ್ದೇವೆ ನಾವು. ನಮಗೂ ವಯಸ್ಸಾಯ್ತು. ಹಾಲು ಕರೆಯುವುದು, ಹೊಲ ಉಳುವುದು ಇವೆಲ್ಲಾ ಕ್ರಮೇಣ ನಿಂತು ಹೋಯಿತು. ಗದ್ದೆ ಕೆಲಸಕ್ಕೆ, ಹಟ್ಟಿ ಕೆಲಸಕ್ಕೆ ಯಾರನ್ನಾದರೂ ನೇಮಿಸೋಣ ಅಂದ್ರೆ ಈ ಕಾಲದಲ್ಲಿ ಸಾಧ್ಯ ಇಲ್ಲ. ಕೊನೆಗೆ ಏನೂ ಮಾಡೋಕೆ ಆಗದೆ ಸಮಾಧಿ ಇರುವ ಜಾಗದ ಹತ್ತಿರ ನಾವು ಸತ್ತಾಗ ನಮ್ಮ ಸಮಾಧಿ ಮಾಡಲೂ ಒಂದಿಷ್ಟು ಜಾಗ ಉಳಿಸಿ ಉಳಿದೆಲ್ಲವನ್ನೂ ಮಾರಿ ನಮಗೆ ಅಂತ ಸ್ವಲ್ಪ ಉಳಿಸಿಕೊಂಡು ಉಳಿದ ದುಡ್ಡನ್ನೆಲ್ಲಾ ಇಬ್ಬರೂ ಮಕ್ಕಳಿಗೆ ಸಮನಾಗಿ ಹಂಚಿ ನಾವು ಈ ಊರಲ್ಲಿ ಬಂದು ನೆಲೆಸಿದೆವು. ಟೀ ಸ್ಟಾಲಿನ ವ್ಯಾಪಾರದಿಂದಾಗಿ ಮೂರು ಹೊತ್ತಿನ ತುತ್ತಿಗೆ ಯಾವ ತಾತ್ವಾರವೂ ಇಲ್ಲ. ಇಂದೋ ನಾಳೆಯೋ ಬಿದ್ದು ಹೋಗುವ ಮರ, ಹೆಚ್ಚಿನದೇನೋ ಬೇಕಾಗಿಲ್ಲ. ಮಕ್ಕಳೂ ವರ್ಷಕ್ಕೆ ಮೂರೋ ನಾಲ್ಕೋ ಬಾರಿ ಬಂದು ನೋಡಿಕೊಂಡು ಹೋಗುತ್ತಾರೆ. ಖಾಯಿಲೆ ಕಸಾಲೆ ಅಂತ ಬಂದರೆ ದುಡ್ಡು ಕಳುಹಿಸುತ್ತಾರೆ" ಎಂದು ಮಾತು ಮುಗಿಸಿದರು, ನಾನು  ಕಪ್ ಮುಂದೊಡ್ಡಿ ಮತ್ತೊಂದಿಷ್ಟು ಟೀ ಸುರುವಿಕೊಂಡೆ.

ನಾನು ಊಹಿಸಿಕೊಂಡದ್ದು ಸರಿಯಾಗಿಯೇ ಇದೆ ಅನ್ನುವ ಹಮ್ಮಿಗೋ ಅಥವಾ ನಿಜಕ್ಕೂ ಅವರ ಮೇಲಿನ ಕಾಳಜಿಗೋ ಗೊತ್ತಿಲ್ಲ, "ರೆಕ್ಕೆ ಬಲಿತ ಮೇಲೆ ಯಾವ ಹಕ್ಕಿಗೂ ಗೂಡು, ತುತ್ತು ನೆನಪಾಗುದಿಲ್ಲ ಅಲ್ವಾ?" ಅಂದೆ. ಅಜ್ಜಿಗೆ ಅದೆಲ್ಲಿತ್ತೋ ಸಿಟ್ಟು, "ಯಾಕೆ ತಾಯಿ ಹೀಗೆ ಮಾತಾಡ್ತಿದ್ಯಾ? ನಮ್ಮ ಮಕ್ಕಳೇನು ನಮ್ಮನ್ನು ದೂರ ಮಾಡಿಲ್ಲ. ಬದುಕಿರುವಷ್ಟು ದಿನ ನಮ್ಮ ಅನ್ನ ನಾವೇ ದುಡಿದು ಉಣ್ಣುವುದರಲ್ಲಿ ತಪ್ಪೇನಿದೆ? ದೇವರು ಯಾವ ಅಗುಳಿನ ಮೇಲೆ ಯಾರ ಹೆಸರು ಬರೆದಿದ್ದಾನೋ ಅದಷ್ಟೇ ದಕ್ಕುತ್ತವೆ, ಉಳಿದದ್ದೆಲ್ಲಾ ಬೆರಳುಗಳೆಡೆಯಿಂದ ಸೋರಿ ಹೋಗಲೇಬೇಕು. ಮಕ್ಕಳ ಬದುಕಿನ ಋಣ ಪೇಟೆಯಲ್ಲಿದೆ, ಆ ಋಣವನ್ನು ಅಲ್ಲೇ ತೀರಿಸಬೇಕು, ತೀರಿಸುತ್ತಿದ್ದಾರೆ. ಎಷ್ಟು ಬಾರಿ ಪೇಟೆಗೆ ಹೋದರೂ ಆ ಜನಜಂಗುಳಿ, ಹಗಲಿಗೂ ರಾತ್ರಿಗೂ ವ್ಯತ್ಯಾಸವೇ ಉಳಿಯದ ಧಾವಂತ, ಅಪರಿಚಿತತೆ ನಮಗೆ ಒಗ್ಗಲೇ ಇಲ್ಲ. ಹಾಗಾಗಿ ನಾವು ಮತ್ತೆ ಮತ್ತೆ ಇದೇ ಮಣ್ಣಿನ ಕಡೆ ಮರಳುತ್ತೇವೆ. ಹಾಗಂತ ಮಕ್ಕಳು ಕೆಲಸ, ಕಾರ್ಯ, ಹೆಂಡತಿ, ಸಂಸಾರ ಎಲ್ಲಾ ಬಿಟ್ಟು ಬಂದು ಇಲ್ಲಿ ಇರೋಕಾಗುತ್ತಾ? ಹಾಗೆ ಇರುತ್ತೇನೆ ಎಂದುಕೊಂಡು ಬಂದರೂ ಈ ಮಣ್ಣು, ಇಲ್ಲಿನ ಬದುಕು ಅವರ ಕೈ ಹಿಡಿಯುತ್ತಾ? ನೋಡೋಕೆ ಓದಿದವರ ತರ ಕಾಣುತ್ತಿಯಾ, ಹೆತ್ತವರಿಂದ ದೂರ ಇರುವ ಎಲ್ಲಾ ಮಕ್ಕಳು ಅವರನ್ನು ತಿರಸ್ಕರಿಸಿ ತಮ್ಮದೇ ಬದುಕು ಕಟ್ಟಿಕೊಂಡಿದ್ದಾರೆ ಅಂತ ಯಾಕೆ ಯೋಚಿಸ್ತೀಯಾ? " ಕೇಳಿದರು.

ಕಪ್ ನಲ್ಲಿದ್ದ ಬಿಸಿ ಚಹಾ ಕೈ ಮೇಲೆ ತುಳುಕಿ ಚರ್ರೆಂದಿತು. ಭೋರ್ಗರೆಯುತ್ತಿದ್ದ ಕಡಲು ಒಮ್ಮೆ ಮೌನವಾದೆಂತೆನಿಸಿತು, ಮರುಕ್ಷಣ ಛಿಲ್ಲೆಂದು ನಕ್ಕಂತಾಯಿತು. ನನ್ನ ಯೋಚನೆಗೆ ನಾಚಿಕೆ ಪಟ್ಟುಕೊಳ್ಳುತ್ತಾ ಕಡಲಿಗೆ ಬೆನ್ನು ತಿರುಗಿಸಿ ಮನೆಯ ದಾರಿ ಹಿಡಿದೆ, ಬೆನ್ನ ಹಿಂದೆ ಉಳಿದ ಹೆಜ್ಜೆಗಳನ್ನೂ, ಸಣ್ಣ ಯೋಚನೆಗಳನ್ನೂ ಕಡಲೀಗ ಅಳಿಸಿರಬಹುದು...

('ಕೆಂಡಸಂಪಿಗೆ'ಯ ಪಾಕ್ಷಿಕ ಅಂಕಣಕ್ಕೆ ಬರೆದ ಲೇಖನ)

ಪ್ರೀತಿ, ಮದುವೆ ಮತ್ತು ಜೀನ್ಸ್ ಪ್ಯಾಂಟ್ ಅಕ್ಕನ ಬದುಕು.

ಆಕೆ ನನಗಿಂತ ಹತ್ತೋ ಹನ್ನೆರಡೋ ವರ್ಷಗಳಿಗೆ ದೊಡ್ಡವರು. ಕುರ್ತಾ, ನೀಲಿ ಜೀನ್ಸ್, ಮುಖ ತುಂಬಾ ತುಂಟ ನಗು, ಎಕ್ಸ್ಪ್ರೆಸಿವ್ ಕಣ್ಣುಗಳು, ಬಗಲಲ್ಲೊಂದು ಕಪ್ಪು ಬ್ಯಾಗ್... ಅವರ ಪ್ರತಿದಿನದ ವೇಷ. ಆ ಬ್ಯಾಗೊಳಗೆ ಏನೆಲ್ಲಾ ಇರಬಹುದು ಅನ್ನುವ ಕೆಟ್ಟ ಕುತೂಹಲ ನನಗೆ.  ಆ ಬಗ್ಗೆ ಕೇಳಿದಾಗೆಲ್ಲಾ ಅವರು ವೈದೇಹಿಯವರ 'ನೋಡಬಾರದು ಚೀಲದೊಳಗನು' ಪದ್ಯವನ್ನು ರಾಗವಾಗಿ ಹಾಡುತ್ತಾರೆ. ನಾನು ಗಪ್ ಚುಪ್. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಊರೂರು ತಿರುಗುವ ಅವರ ಸ್ವಂತ ಊರು ಯಾವುದು? ಗೊತ್ತಿಲ್ಲ, ಈ ಬಗ್ಗೆ ಇನ್ನೂ ಕೇಳೇ ಇಲ್ಲ.

'ಹತ್ತು ಮಾರು ದೂರದಲ್ಲಿ ಹಾಜರಿ ಹಾಕಿ ಹೋಗುವ ಮೊನೋಪಾಸ್, ಒಂದೊಂದಾಗಿ ಬಿಳಿಯಾಗುತ್ತಿರುವ ಬೈತಲೆಯ ಎಡಭಾಗದ ಕೂದಲುಗಳು, ಆಗೊಮ್ಮೆ ಈಗೊಮ್ಮೆ ಕಾಡಿ ಹೋಗುವ ಮಂಡಿನೋವು, ಪರ್ಮನೆಂಟ್ ನೆಂಟ ಬಿ‌.ಪಿ.... ಯಾಕೋ ಇವೆಲ್ಲಾ ಸೇರಿ ಈ ಜೀನ್ಸ್, ಬಾಬ್ ಕಟ್, ನಿಮಗೆ ಸರಿಯಾಗಿ ಹೊಂದುತ್ತಿಲ್ಲ. ಯಾಕೆ ನೀವು ಸೀರೆ, ಸಲ್ವಾರ್ ತೊಡಬಾರದು? ಹೆಚ್ಚು ಪ್ರಯಾಣ ಮಾಡ್ಬೇಡಿ, ಎಣ್ಣೆ ತುಪ್ಪ ಸೇವನೆ ಕಡಿಮೆ ಮಾಡಿ, ಉಪ್ಪು ಸಕ್ಕರೆ ಹಿತಮಿತವಾಗಿರಲಿ 'ಅಂತ ನಾನು ಆಗಾಗ ಅವರಿಗೆ ಉಚಿತ ಸಲಹೆ ಕೊಡುತ್ತಿರುತ್ತೇನೆ. ಆಗೆಲ್ಲಾ ಅವರು ನನ್ನನ್ನು ಕೆಕ್ಕರಿಸಿ ನೋಡಿ, ತಲೆಗೆರಡು ಮೊಟಕಿ " ಈಗ್ಲೇ ನನ್ನ ಮುದುಕಿ ಮಾಡ್ಬಿಡುವ ಪ್ಲಾನ್ ಏನಾದ್ರೂ ಇದ್ಯಾ? ನಾನಿನ್ನೂ ಚಿಕ್ಕವಳು,  ಇನ್ನೆಷ್ಟು ಊರು ನೋಡೋದಿದೆ, ಎಷ್ಟು ಪುಸ್ತಕ ಓದೋದಿದೆ, ಎಣ್ಣೆ ತುಪ್ಪ ಬಿಡೋದ್ಯಾಕೆ? ಪೂರ್ತಿ ಊಟಾನೇ ಬಿಟ್ಬಿಡ್ತೇನೆ, ನಂಗೆ ಬುದ್ಧಿ ಹೇಳೋಕೆ ಬಂದ್ಳು, ಮೊದ್ಲು ಮೈಯಲ್ಲಿ ಒಂದು ನೂರು ಗ್ರಾಂ ಆದ್ರೂ ಮಾಂಸ ಬೆಳೆಸ್ಕೋ" ಎಂದು ತಿವಿಯುತ್ತಾರೆ. ನಾನು ಇನ್ನೇನಾದ್ರೂ ಹೇಳ್ತೇನೆ, ಅವರು ಮತ್ತಿನ್ನೇನಾದರೂ. ಮಾತು ಜಗಳದಲ್ಲಿ ಕೊನೆಯಾಗುತ್ತದೆ. 

ಹಾಗೆ ಹೇಳುವುದಾದರೆ, ನಾವಿಬ್ಬರು ಸಂಧಿಸಿದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ.  ಈಗ್ಗೆ ಎರಡು-ಮೂರು ವರ್ಷಗಳ ಹಿಂದೆ ಒಂದು ದಿನ, ಎಕ್ಸಾಂ ಬರೆದು ಬಸ್ ಹತ್ತಿದ್ದೆ. ಪರೀಕ್ಷೆ ಮುಗಿದ ನಿರಾಳತೆ, ಹಿಂದಿನ ರಾತ್ರಿ ಕಳೆದ ನಿದ್ರೆ, ನಿಧಾನವಾಗಿ ಓಡುತ್ತಿದ್ದ ಗವರ್ನಮೆಂಟ್ ಬಸ್, ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಜೋಗುಳದಂತಹಾ ಹಾಡು... ಎಲ್ಲಾ ಕಲಸುಮೇಲೋಗರವಾಗಿಯಾವಾಗ ಜೊಂಪು ಹತ್ತಿತ್ತೋ ತಿಳಿಯದು. ಕಣ್ಣು ಬಿಟ್ಟು ನೋಡುವಾಗ ಬಸ್ ಯಾವುದೋ ಊರಲ್ಲಿ ನಿಂತಿತ್ತು. ಆಚೀಚೆ ದೃಷ್ಟಿ ಹಾಯಿಸಿದೆ. ಟಿಕೆಟ್ ಚೆಕ್ ಮಾಡುವವರು ಗಂಭೀರವಾಗಿ ಎಲ್ಲರ ಟಿಕೆಟ್ ಪರಿಶೀಲಿಸುತ್ತಿದ್ದರು. ನಾನು ಸ್ಟೂಡೆಂಟ್ ಪಾಸ್ ಹೊಂದಿದ್ದವಳು. ದಂಡ ಕಟ್ಟುವಷ್ಟು ದುಡ್ಡು ಪರ್ಸಲ್ಲಿ ಇರಲಿಲ್ಲ. ಬ್ಯಾಗಿನ ಮೂಲೆ ಮೂಲೆ ತಡಕಾಡಿದರೂ ಒಂದು ರೂಪಾಯಿಯೂ ಸಿಗದು ಅನ್ನುವುದು ಗೊತ್ತಿದ್ದರೂ ಸಿಗುತ್ತೇನೋ ಅನ್ನುವ ಆಶಾಭಾವನೆಯಲ್ಲಿ ಹುಡುಕತೊಡಗಿದೆ. ಯಾವೂರು ತಲುಪಿದ್ದೇನೆ ಎಂದು ತಿಳಿದುಕೊಳ್ಳೋಣವೆಂದರೆ ಅಲ್ಲಿ ಯಾವ ಬೋರ್ಡೂ ಇರಲಿಲ್ಲ . ಅಸಹಾಯಕತೆಯಿಂದ ಆಚೀಚೆ ನೋಡುವುದು ಬಿಟ್ಟರೆ ನನಗಾಗ ಇನ್ಯಾವ ದಾರಿಯೂ ಉಳಿದಿರಲಿಲ್ಲ.

ಹೇಳದಿರಲೂ ಆಗದ, ಹೇಳಿಕೊಳ್ಳಲೂ ಆಗದ ಮುಜುಗರದ ಸ್ಥಿತಿಯಲ್ಲಿಯೇ ಇರಬೇಕಾದರೆ 'ಟಿಕೆಟ್' ಅನ್ನುವ ಗಡಸು ಧ್ವನಿ ಹಿಂದಿನಿಂದ ಕೇಳಿ ಬಂದಿತ್ತು.  ನಾನು ಬೆಬ್ಬೆಬ್ಬೆ ಎಂದು ತೊದಲುವ ಮುನ್ನವೇ ಪಕ್ಕದ ಸೀಟಲ್ಲಿದ್ದ ಮಹಿಳೆ ' ಒಂದ್ನಿಮಿಷ ಮುಂಚೆಯಷ್ಟೇ ಈ ಹುಡುಗಿ ಬಸ್ ಹತ್ತಿದ್ಳು. ಇಲ್ಲಿರೋ ರಷ್ ಗೆ ಕಂಡಕ್ಟರ್ ಗೆ ಈ ಕಡೆ ಬರುವುದಕ್ಕೆ ಸಾಧ್ಯವಾಗಿಯೇ ಇಲ್ಲ. ಹೇಗೋ ಕಷ್ಟಪಟ್ಟು ಬರುವಷ್ಟರಲ್ಲಿ ನೀವು ಬಸ್ ಹತ್ತಿಬಿಟ್ರಿ. ಟಿಕೆಟ್ ಮಾಡುವುದಾದ್ರೂ ಹೇಗೆ?" ಅಂದರು. " ಇಂಥವೆಲ್ಲಾ ನಾನು ನನ್ನ ಸರ್ವಿಸಲ್ಲಿ ಎಷ್ಟು ನೋಡಿದ್ದೇನೆ. ಒಂದೋ ಟಿಕೆಟ್ ತೋರಿಸಿ, ಇಲ್ಲಾ ದಂಡ ಕಟ್ಟಿ" ಅಂತ ದಬಾಯಿಸಿದರು. " ನೀವು ಏನೇನೋ ನೋಡಿರ್ಬಹುದು. We respect it. ಬಟ್ ಇವಳು ಈಗಷ್ಟೇ ಬಸ್ ಹತ್ತಿರುವುದನ್ನು ನಾವೆಲ್ಲಾ ನೋಡಿದ್ದೇವೆ. ಹೇಗೆ ಫೈನ್ ಕಟ್ಟಿಸ್ತೀರಿ ಅಂತ ನಾವೂ ನೋಡ್ತೇವೆ" ಅಂತ ಪಕ್ಕದಲ್ಲಿದ್ದವರನ್ನೂ ಸೇರಿಸಿಕೊಂಡರು. ಬುರ್ಖಾದಾರಿ ನಾನು ಮತ್ತು ಹಣೆಯ ಮಧ್ಯೆ ಪುಟ್ಟ ಕಪ್ಪು ಬೊಟ್ಟು ಇಟ್ಟುಕೊಂಡಿದ್ದ ಅವರು... ಇಬ್ಬರ ಮಧ್ಯೆ ಯಾವ ಬಾದರಾಯಣ ಸಂಬಂಧವೂ ಇರಲಾರದು, ಸುಳ್ಳು ಹೇಳಿ ನನ್ನ ರಕ್ಷಿಸಲು ಯಾವ ಕಾರಣವೂ ಇರಲಾರದು ಎಂದು ಅನಿಸಿತೋ ಏನೋ, ನಮ್ಮನ್ನು ಬಿಟ್ಟು ಮುಂದೆ ಹೋದರು.

ಚೆಕ್ಕಿಂಗ್ ಮುಗಿದು ಅವರು ಇಳಿದಂತೆ ನಾನು ಮುಂದಿನ ನಿಲ್ದಾಣಕ್ಕೆ ಟಿಕೆಟ್ ಮಾಡಿಸಿ ಕೃತಜ್ಞತಾ ಭಾವದಿಂದ ಒಮ್ಮೆ ಅವರತ್ತ ನೋಡಿದೆ. ತಾನೇನೂ ಮಾಡಿಯೇ ಇಲ್ಲವೇನೋ ಎಂಬಂತೆ ಕಿಟಕಿ ಹೊರಗೆ ದಿಟ್ಟಿಸುತ್ತಾ ಕೂತಿದ್ದರು.  ಶೂನ್ಯದೊಳಗೆ ಯಾವ ಕಾಣ್ಕೆಯಿತ್ತೋ ಗೊತ್ತಿಲ್ಲ, ಮೆತ್ತಗೆ 'ತ್ಯಾಂಕ್ಸ್' ಎಂದೆ. ಹೊರಗಿನಿಂದ ದೃಷ್ಟಿ ತಪ್ಪಿಸಿದ ಅವರು "ಇರ್ಲಿ ಬಿಡು, ಇನ್ಮುಂದೆ ಹೀಗೆಲ್ಲಾ ಬಸ್ಸಲ್ಲಿ ನಿದ್ರೆ ಹೋಗ್ಬೇಡ. ಬಸ್ ಪಾಸ್ ಇದ್ರೂ ಕೈಯಲ್ಲಿ ಸ್ವಲ್ಪ ಎಕ್ಸ್‌ಟ್ರಾ ದುಡ್ಡು ಇಟ್ಕೊಂಡಿರಬೇಕು. ಇಂತಹ ಪರಿಸ್ಥಿತಿಗಳಲ್ಲಿ ಉಪಯೋಗಕ್ಕೆ ಬರುತ್ತವೆ" ಅಂದ್ರು. ನನ್ನ ಬೇಜವಾಬ್ದಾರಿತನಕ್ಕೆ ನನಗೇ ನಾಚಿಕೆಯೆನಿಸಿತು. ಅವರು ಮೂಗಿನ ಮೇಲಿನಿಂದ ಒಮ್ಮೆ ಕನ್ನಡಕ ತೆಗೆದು ಸ್ವಚ್ಛ ಬಟ್ಟೆಯಿಂದ ಒರೆಸಿ ಸ್ವಸ್ಥಾನದಲ್ಲಿಟ್ಟರು. ಅಷ್ಟರಲ್ಲಿ ಮುಂದಿನ ಸ್ಟಾಪ್ ಬಂತು. ನಾನು "ಬರ್ತೇನೆ, ಮತ್ತೊಮ್ಮೆ ತ್ಯಾಂಕ್ಸ್" ಎಂದು ಇಳಿಯಲು ಎದ್ದು ನಿಂತೆ. ಅವರು  "ನಾನೂ ಇಲ್ಲೇ ಇಳಿಯುವವಳು, ಸ್ವಲ್ಪ ಈ ಬ್ಯಾಗ್ ಎತ್ತಿಕೋ" ಸ್ವಲ್ಪವೂ ಸಂಕೋಚವಿಲ್ಲ ಎಂಬಂತೆ ಹೇಳಿ ನನ್ನ ಹಿಂದೆಯೇ ಬಸ್ಸಿಳಿದರು. ಅವರ ಬ್ಯಾಗ್ ಅವರಿಗೇ ಒಪ್ಪಿಸಿ ಹೊರಡಬೇಕೆನ್ನುವಷ್ಟರಲ್ಲಿ ಒಂದು ಚೀಟಿಯಲ್ಲಿ ಫೋನ್ ನಂಬರ್ ಬರೆದು ನನ್ನ ಕೈಗೆ ತುರುಕಿ "ಫೋನ್ ಮಾಡ್ತಿರು" ಎಂದು ತಿರುಗಿ ನೋಡದೆ ಹೊರಟು ಹೋದರು. ನಾನು ಮತ್ತೆ ತಲೆಯಾಡಿಸಿದೆ. ರಸ್ತೆಯ ಪಕ್ಕದಲ್ಲಿದ್ದ ಸಂಪಿಗೆ ಮರದಿಂದ ಹೂವೊಂದು ತೊಟ್ಟು ಕಳಚಿ ಬಿತ್ತು. ಹೆಕ್ಕಲೋ ಬೇಡವೋ ಎಂಬ ಗೊಂದಲದಲ್ಲಿ ಇರಬೇಕಾದರೆ ನಮ್ಮೂರಿಗೆ ಹೋಗುವ ಬಸ್ ಬಂತು. ಹತ್ತಿ ಮತ್ತದೇ ಕಿಟಕಿ ಪಕ್ಕದ ಸೀಟಲ್ಲಿ ಕೂತು ಅವರ ಬಗ್ಗೆ ಯೋಚಿಸುತ್ತಲೇ ಮನೆ ತಲುಪಿದೆ. 

ಅನಂತರ ಕೆಲವು ದಿನಗಳ ಕಾಲ ಅವರ ಹ್ಯಾಂಗೋವರ್ ನಲ್ಲೇ ಇದ್ದೆ. ಆಮೇಲೆ ಯಾವ ದಿನ, ಯಾವ ಕ್ಷಣ ಅವರು ಮರೆತುಹೋದರೋ ಗೊತ್ತಿಲ್ಲ. ಉಪಕಾರ ಪಡೆದುಕೊಳ್ಳುವುದು, ಒಂದೆರಡು ದಿನ ಆ ನೆನಪಲ್ಲೇ ಕಳೆಯುವುದು ಆಮೇಲೆ ಏನೂ ನಡೆದೇ ಇಲ್ಲವೇನೋ ಎಂಬಂತೆ ಎಲ್ಲವನ್ನೂ ವಿಸ್ಮ್ರತಿಯ ಮರೆಯೊಳಕ್ಕೆ ತಳ್ಳಿಬಿಡುವುದು ನನ್ನಂತಹ ಮನುಷ್ಯರ ಹುಟ್ಟುಗುಣವೇನೋ. ಆದರೆ ಬದುಕಿನ ನಿರ್ಣಯ ಬೇರೆಯದೇ ಇತ್ತು. 


ಮತ್ತೊಂದು ಗಡಿಬಿಡಿಯ ಬೆಳಗ್ಗೆ ಅರ್ಧ ದೋಸೆ ತಿಂದು ಅಮ್ಮನಿಂದ ಬೈಸಿಕೊಳ್ಳುತ್ತಲೇ ಹೊರಟು ನಿಲ್ದಾಣ ತಲುಪಿ ಇನ್ನೂ ಉಸಿರು ಬಿಡುವ ಮುನ್ನವೇ ಬಂದ ಬಸ್ ಹತ್ತಿ ಕುಳಿತವಳಿಗೆ ಹಿಂದಿನ ಸೀಟಿನಲ್ಲಿ ಅದೇ ಮಹಿಳೆಯನ್ನು ಕಂಡಂತಾಗಿ ಒಮ್ಮೆ ದಿಕ್ಕೇ ತೋಚದಂತಾಯಿತು. ಕರೆ ಮಾಡದ ಗಿಲ್ಟ್, ಹೇಗೆ ಮಾತಾಡಿಸಲಿ ಅನ್ನುವ ಗೊಂದಲ, ಯಾವ ಕಾರಣ ಕೊಡಲಿ ಅನ್ನುವ ಪೇಚಾಟ, ಮುಖ ಮುಚ್ಚಿಕೊಳ್ಳಲೇ ಅನ್ನುವ ಅನುಮಾನ ಇವೆಲ್ಲದರ ಮಧ್ಯೆ ಮೆಲ್ಲನೆ ಅವರತ್ತ ನೋಡಿದ್ದೆ. ನನ್ನ ಕಂಡ ಕೂಡಲೇ ಹತ್ತಿರ ಕರೆದು ಪಕ್ಕದ ಸೀಟಲ್ಲೇ ಕೂರಿಸಿಕೊಂಡರು.

ನಾನು ಏನು ಮಾತಾಡಬೇಕೆಂದು ಗೊತ್ತಾಗದೆ ತಬ್ಬಿಬ್ಬಾಗಿ ಅವರ ಮುಖ ನೋಡುತ್ತಿದ್ದರೆ ಅವರು ಮಾತ್ರ ಯಾವುದರ ಪರಿವೆಯೂ ಇಲ್ಲದಂತೆ ಮಾತಿಗೆ ಶುರು ಹಚ್ಚಿಕೊಂಡಿದ್ದರು. ಅವರು, ಅವರ ಹೆಸರು, ಹವ್ಯಾಸ, ತಿರುಗಾಟದ ಹುಚ್ಚು ಇವೆಲ್ಲಾ ಮಾತಾಡುತ್ತಿದ್ದರೆ ನನಗೇಕೋ ನನ್ನ ಬಗ್ಗೆಯೇ ನಾಚಿಕೆಯೆನಿಸಿತು. ಇಷ್ಟು ಶುದ್ಧ ಹೃದಯದ ಮಹಿಳೆಯೊಂದಿಗೆ ಸಂಬಂಧ ಉಳಿಸಿಕೊಳ್ಳಲಾಗದ ನಾನು ಎಂತಹ ಮೂರ್ಖಳಾಗಿರಬೇಕು ಅನಿಸುತ್ತಿತ್ತು. ಹೇಳಬೇಕು ಅಂದುಕೊಂಡಿದ್ದ ಸುಳ್ಳು ಗಂಟಲನ್ನು ಮೀರಿ ಆಚೆ ಬರುತ್ತಲೇ ಇರಲಿಲ್ಲ. ಕೊನೆಗೆ ಇನ್ನೇನು ಇಳಿದೇ ಬಿಡುತ್ತೇನೆ ಎಂದಾಗುವಾಗ ಇದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ "ಅಕ್ಕಾ, ಫೋನ್ ಮಾಡೋಕೆ ಆಗಿಲ್ಲ. ಹಾಗಂತ ತುಂಬಾ ಬ್ಯುಸಿಯಾಗಿದ್ದೆ, ತುಂಬಾ ಕೆಲಸ ಇತ್ತು  ಅಂತೇನಲ್ಲ, ಬಹುಶಃ ನಿಮಷ್ಟು ಶುದ್ಧ ಮನಸ್ಸಿನವಳು ನಾನಲ್ಲ." ಎಂದು ತೊದಲಿದೆ. ಅಮ್ಮನ ಸೆರಗಿನ ಮರೆಯಿಂದ ಮೆಲ್ಲನೆ ಇಣುಕಿ ತುಂಟತನದಿಂದ ಮಗುವೊಂದು ನಗುವಂತೆ ಹಗುರವಾಗಿ ನಕ್ಕರು. ನಾನು ಅವರ ನಗು ತುಂಬಿಕೊಂಡು ಬಸ್ ಇಳಿದೆ.

ಅಲ್ಲಿಂದ ಮುಂದೆ ನಮ್ಮದು ಸಮೃದ್ಧ ಸಂಬಂಧ. ಮಾತುಕತೆ, ಹರಟೆ, ನಗು, ಸಂಭ್ರಮ, ಖುಶಿ ಹಂಚಿಕೊಂಡಷ್ಟೇ ಸಹಜವಾಗಿ ನೋವು, ದುಃಖ, ಸಂಕಟ, ನಿರಾಸೆಗಳನ್ನೂ ಹಂಚಿಕೊಳ್ಳುತ್ತೇವೆ. ಒಣ ಪ್ರತಿಷ್ಠೆ, ತೋರಿಕೆಯ ಸುಖ, ಹುಸಿ ಫಾರ್ಮಾಲಿಟೀಸ್ ನಮ್ಮ ಮಧ್ಯೆ ಬಂದೇ ಇಲ್ಲ. ಅಕ್ಷರಶಃ ಒಡಹುಟ್ಟಿದ ಸಹೋದರಿಯರಂತೆ ಕಿತ್ತಾಡುತ್ತೇವೆ, ಮರುಕ್ಷಣ ಒಂದಾಗುತ್ತೇವೆ. ನನ್ನ ಮುಟ್ಟಿನ ನೋವಿಗೆ ಆಕೆ ಅಕ್ಕರೆಯ ಮುಲಾಮು, ಅವರ ಒಂಟಿ ಜೀವನಕ್ಕೆ ನಾನು ಸಂಜೆಯ ಹಾಡು. ನನ್ನ ಕಥೆಗಳ, ಕವಿತೆಗಳ ಕಟು ವಿಮರ್ಶಕಿ ಆಕೆ, ಆಕೆಯ ಬದುಕಿನ ಒಂದು ಪುಟ್ಟ ಕವಿತೆ ನಾನು.

ಮದುವೆಗೆಂದು ನಾನು ತಯಾರಾಗಿ ನಿಂತಾಗ ಒಲವಿನ ದೀವಿಗೆ ಹಿಡಿದು ನನ್ನ ಗಲ್ಲ ಹಿಡಿದೆತ್ತಿ "ಈ ಸಂಬಂಧ ನಿನಗೆ ಪೂರ್ತಿ ಒಪ್ಪಿಗೆಯೇನೇ?"ಎಂದು ಕೇಳಿದ್ದರು. ಆಗಷ್ಟೇ ನಿಖಾಹ್  ಗಾಗಿ ನನ್ನ ಒಪ್ಪಿಗೆ ಕೇಳಲು ಬಂದಿದ್ದ ಅಪ್ಪ ನಾನು "ಹೂಂ" ಅಂದಮೇಲೆ ಬಾಗಿಲ ಕಡೆ ನಡೆದಿದ್ದರು. ನಮ್ಮ ಮಾತು ಕೇಳಿ ಒಮ್ಮೆ ತಿರುಗಿ ನೋಡಿ ಮುಂದಡಿಯಿಟ್ಟರು. ಅಪ್ಪನ ಕಣ್ಣಲ್ಲೂ ನೀರು ಗಿರಿಗಿಟ್ಲೆಯಾಡುತ್ತಿತ್ತಾ? ಗೊತ್ತಿಲ್ಲ, ಈ ಅಕ್ಕ ಮಾತ್ರ ಕಣ್ಣ ಪೂರ್ತಿ ನೀರು ತುಂಬಿಕೊಂಡು ಬಾತ್ ರೂಂ ಹೊಕ್ಕರು. ನನ್ನ ಮದುವೆ ದಿನದ ಮತ್ತೊಂದು ವಿಶೇಷತೆಯೆಂದರೆ ಅವರು ಸೀರೆ ಉಟ್ಟದ್ದು.

ಸದಾ ಜೀನ್ಸ್ ಧರಿಸುವ ಅವರನ್ನು ಅವತ್ತು ಸೀರೆಯಲ್ಲಿ ನೋಡಿದ್ದೇ ಒಂದು ಹಬ್ಬ. ಮಣಭಾರದ ಲೆಹಂಗಾ ಧರಿಸಿ ನಾನು ಪಡಬಾರದ ಕಷ್ಟ ಪಡುತ್ತಿದ್ದರೆ ಆಕೆ ತುಂಬಾ ಸಲೀಸಾಗಿ ಮದುವೆ ಛತ್ರದ ತುಂಬಾ ಸೀರೆಯಲ್ಲೇ ಓಡಾಡುತ್ತಿದ್ದರು. ಅವರನ್ನು ನೋಡುವಾಗೆಲ್ಲಾ ನನಗೆ 'ಇವರು ಎಲ್ಲಾ ಕಾಲಕ್ಕೂ ಎಲ್ಲಾ ಧಿರಿಸಿಗೂ ಸಲ್ಲುವವರೇನೋ' ಅಂತ ಅನ್ನಿಸುತ್ತಿತ್ತು. ಆದರೆ ಅವರ ಬದುಕಿನೊಳಕ್ಕೆ ಒಂದು ಆಕಸ್ಮಿಕ ತಿರುವಿನಲ್ಲಿ ಪ್ರವೇಶ ಪಡೆದ ನಾನು ಎಲ್ಲಿ ಮದುವೆಯ ನಂತರ ಕಳೆದುಹೋಗಿಬಿಡುತ್ತೇನೇನೋ ಅನ್ನುವ ದುಗುಡ, ಮದುವೆಯ ನಂತರದ ನನ್ನ ಬದುಕು ಹೇಗಿರತ್ತದೋ ಅನ್ನುವ ಆತಂಕ, ಸದಾ ಓದು ಬರಹಗಳಲ್ಲೇ ಕಾಲ ಕಳೆದ ನಾನು ಹೊಸ ಬದುಕನ್ನು ನಿಭಾಯಿಸಿಯೇನಾ ಅನ್ನುವ ಅನುಮಾನ, ಗಂಡನ ಮನೆಯವರು ಹೇಗಿರುತ್ತಾರೋ ಅನ್ನುವ ಗುಮಾನಿ ಎಲ್ಲಾ ಅವರ ಕಣ್ಣಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಯಾರಿಗೆ ಗೊತ್ತು, ಕಳೆದು ಹೋದ ಅವರ ಬದುಕಿನ ಚಿತ್ರಣ ಒಮ್ಮೆ ಅವರ ಕಣ್ಣೆದುರು ಬಂದಿರಲೂಬಹುದು, ಬೇರಿನ ವರೆಗೆ ಅಲ್ಲಾಡಿಸರಲೂಬಹುದು. ಆದರೆ ನಿಖಾಹ್, ಅದರಾಚೆಗಿನ ಸಂಪ್ರದಾಯಗಳೆಲ್ಲಾ ಮುಗಿದು ನಾನು ಗಂಡನ ಮನೆಗೆ ಹೊರಟು ನಿಂತಾಗ ಮಾತ್ರ ತೀರಾ ನಿರ್ಲಿಪ್ತೆಯಂತೆ ಬಂದು ಶೇಕ್ ಹ್ಯಾಂಡ್ ಮಾಡಿ ಹೊರಟುಹೋದರು. ಬದುಕಿನ ಯಾವ ಕ್ಷಣ ಅವರಿಗೆ ನಿರ್ಲಿಪ್ತತೆಯನ್ನು ಕಲಿಸಿತ್ತೋ ಗೊತ್ತಿಲ್ಲ, ಬೇಕಾದಾಗೆಲ್ಲಾ ಅದನ್ನು ಧರಿಸಿ ಮುಗುಮ್ಮಾಗಿ ಇದ್ದುಬಿಡುತ್ತಿದ್ದರು.

ಇಂತಿಪ್ಪ ಅಕ್ಕ, ಮೊನ್ನೆ ಒಂದು ವಾರ ಕಾಣೆಯಾಗಿದ್ದರು. ಫೋನ್, ವಾಟ್ಸಾಪ್, ಇನ್ಸ್ಟಾಗ್ರಾಂ ಎಲ್ಲೂ ಪತ್ತೆಯೇ ಇರಲಿಲ್ಲ. ಅಸ್ಸಾಂನ ಅದ್ಯಾವುದೋ ಹಳ್ಳಿಯೊಂದಕ್ಕೆ ಹೋಗಿಬರುತ್ತೇನೆ ಅಂತ ಹೇಳಿಹೋದವರ ಮತ್ತೆ ಕಾಲ್ ಗೆ ಸಿಕ್ಕಿರಲಿಲ್ಲ. ಆ ಅನ್ಯಮನಸ್ಕತೆಯಲ್ಲೇ ಪುಸ್ತಕದ ರಾಶಿಯಿಂದ ಕೈಗೆ ಸಿಕ್ಕಿದ ಪುಸ್ತಕವೊಂದನ್ನು ತೆರೆದು ಓದುತ್ತಾ ಕೂತಿದ್ದೆ, ಮಗ್ರಿಬಿನ ಸೂರ್ಯ ತನ್ನ ಅರ್ಧ ಬಣ್ಣ ಕಳೆದುಕೊಂಡಿದ್ದ. ಅಷ್ಟರಲ್ಲಿ ಫೋನ್ ರಿಂಗಾಯಿತು, ಯಾರದೋ ನಂಬರ್, ರಿಸೀವ್ ಮಾಡಿದ್ರೆ ಆ ಕಡೆಯಿಂದ ಅಕ್ಕನ ಧ್ವನಿ‌. ನನಗೆ ಹೋದ ಜೀವ ಬಂದಂತಾಯಿತು‌. ಅವರ ಧ್ವನಿ ಕೇಳಿದ ಕೂಡಲೇ ಅಷ್ಟರವರೆಗೆ ಅವರ ಮೇಲಿದ್ದ ಕೋಪ, ಸಿಟ್ಟು, ಆಕ್ರೋಶ ಕರಗಿಹೋಯಿತು.

"ಇದ್ಯಾರ ನಂಬರ್? ಎಲ್ಲಿದ್ದೀರಾ? ಇಷ್ಟು ದಿನ ಎಲ್ಲಿದ್ರಿ?" ನನ್ನದು ಕ್ಷೇಮ ಸಮಾಚಾರದ ಪ್ರಶ್ನೆ. ಆಕಡೆಯಿಂದ ಆಕೆ ಖಿಲ್ಲನೆ ನಕ್ಕಳು. ನನಗೆ ಮತ್ತೆ ಸಿಟ್ಟು ಬಂತು. "ಸಮಾಧಾನ, ನಾನು ಅಸ್ಸಾಂನಲ್ಲೇ ಇದ್ದೇನೆ. ಇದು ಗೆಳೆಯನೊಬ್ಬನ ನಂಬರ್, ನನ್ನ ಫೋನ್ ಕಳೆದುಹೋಗಿದೆ" ಅಂದರು. ನಾನು "ಯಾವಾಗ ರಿಟರ್ನ್? " ನನ್ನದು ಅಮಾಯಕ ಪ್ರಶ್ನೆ. "ಸದ್ಯಕ್ಕಿಲ್ಲ, ಬರ್ಬೇಕು ಅನ್ನಿಸಿದಾಗ ಬರ್ತೇನೆ" ಮತ್ತೆ ಅವರಿಂದ ಕೀಟಲೆಯ ನಗು‌. ಈಗ ನಾನೂ ಕೀಟಲೆ ಮಾಡುವ ಮೂಡ್ ಗೆ ಬಂದಿದ್ದೆ. "ಏನು, ಅಲ್ಲೇ ಸಟ್ಲ್ ಆಗುವ ಪ್ಲಾನ್ ಇದ್ಯಾ?" ಕೇಳಿದೆ. "ಹೂಂ ಆಗ್ತೇನೇನೋ, ಗೊತ್ತಿಲ್ಲ" ಎಂದರು. ನಾನು ಮತ್ತೆ ಕಿಚಾಯಿಸುವಂತೆ "ಬಾಯ್ ಫ್ರೆಂಡ್ ಏನಾದ್ರೂ ಮಾಡ್ಕೊಂಡ್ರಾ ಹೇಗೆ? ಯಾರು ಆ ಬಕ್ರಾ?" ಎಂದು ಕೇಳಿದೆ. ಮೆತ್ತಗೆ "ಹೂಂ ಕಣೇ" ಅಂದು ಮೌನವಾದ್ರು. ಈಗ ಮಾತ್ರ ನನಗೆಲ್ಲಾ ಅಯೋಮಯ.

ಅವರ ಧ್ವನಿಯಲ್ಲಿದ್ದ ಖಚಿತತೆ ನಿಜವನ್ನೇ ಹೇಳುತ್ತಿದ್ದಾರೆ ಅಂತ ಅನ್ನುತ್ತಿತ್ತು ಆದರೆ ಕೀಟಲೆ ಮಾಡುತ್ತಿದ್ದಾರೇನೋ ಅನ್ನುವ ಸಣ್ಣ ಅನುಮಾನ ನನಗೆ. ಒಂದೆರಡು ಕ್ಷಣ ತಡೆದು "ನಿಜಾನಾ?" ಅಂತ ಕೇಳಿದೆ. ಆ ಹೊತ್ತಿಗಾಗುವಾಗ ಅವರು ಸಹಜ ಸ್ಥಿತಿಗೆ ಬಂದಿದ್ದರು."ಮತ್ತೆ ಸುಳ್ಳಾ? ನಾನು ಪ್ರೀತಿಸ್ಬಾರ್ದಾ? ಅಥವಾ ಈ ವಯಸ್ಸಿನಲ್ಲಿ ಪ್ರೀತಿಸ್ಬಾರ್ದು ಅಂತಾನಾ? ಬಿಡಮ್ಮಾ ನನಗೆ ಅಂತಹ ವಯಸ್ಸೇನೂ ಆಗಿಲ್ಲ. ನಿನ್ನ ಪಕ್ಕ ನಿಂತ್ರೆ ನಾನು ನಿನ್ನ ತಂಗಿ ತರ ಕಾಣಿಸ್ತೇನೆ. ಬೇಕಿದ್ರೆ ನಿನ್ನ ಗಂಡನನ್ನು ಕೇಳು" ಅಂದ್ರು. ಈಗ ನನಗೆ ಈಕೆ ನಿಜವನ್ನೇ ಹೇಳ್ತಿದ್ದಾರೆ ಅನ್ನುವುದು ಖಚಿತವಾಯಿತು.

"ಯಾವೂರು?" ಕೇಳಿದೆ. "ಕನ್ನಡಿಗನೇ ಕಣೇ ಗುಲ್ಡೂ" ಮತ್ತೆ ರೇಗಿದರು. "ಯಾವಾಗ ಮದುವೆ?" ಅಂತ ಕೇಳಿದೆ. "ಮದುವೇನಾ? ಯಾರು ಮದುವೆ ಆಗ್ತಿದ್ದಾರೆ?" ಆ ಕಡೆಯಿಂದ ಗಂಭೀರ ಮರುಪ್ರಶ್ನೆ. ನನಗೆ ಮತ್ತೆ ಗೊಂದಲ ಶುರುವಾಯಿತು. "ಮತ್ತೆ?" ನನ್ನದು ಸಂದೇಹದ ಪ್ರಶ್ನೆ. "ಮದುವೆ ಅಂತೇನಿಲ್ಲ, ಪ್ರೀತಿ ಇರುವಷ್ಟು ದಿನ ಒಟ್ಟಿಗಿರುತ್ತೇವೆ. ಅವನ ಕಣ್ಣಿನಲ್ಲಿ ನನ್ನ ಬಿಂಬ, ನನ್ನ ಕಣ್ಣಿನಲ್ಲಿ ಅವನ ಬಿಂಬ ಮರೆಯಾದ ಕ್ಷಣ ಇಬ್ಬರೂ ಒಬ್ಬರಿಗೊಬ್ಬರ ಬದುಕಿನಿಂದ ಎದ್ದುಹೋಗುತ್ತೇವೆ." ಅಂದರು.ನನ್ನದು ಮತ್ತೆ ಮೌನ. "ಯಾಕೋ ನಿನ್ಹತ್ರ ಹೇಳ್ಕೊಳ್ಬೇಕು ಅನ್ನಿಸಿತು, ಹೇಳಿದೆ. ಸ್ವೀಕರಿಸುವುದು ಬಿಡುವುದು ನಿನ್ನಿಷ್ಟ. ನಾನು ನಾಳೆ ಫೋನ್ ಮತ್ತೆ ಮಾಡುತ್ತೇನೆ" ಎಂದು ಕರೆ ಕಟ್ ಮಾಡಿದರು.

ನಾನು ಆ ನಂಬರನ್ನು 'ಅಕ್ಕನ ಪ್ರೀತಿ' ಎಂದು ಸೇವ್ ಮಾಡ್ಕೊಂಡೆ. ಮಗ್ರಿಬಿನ ಮಬ್ಬುಬೆಳಕಲ್ಲಿ ಪಕ್ಕದ ಗದ್ದೆಯಲ್ಲಿ ಪೈರೊಂದು ಬಾಗಿ ಹಿತವಾಗಿ ಭೂಮಿಯೆದೆಯನ್ನು ಸ್ಪರ್ಶಿಸಿದಂತಾಯಿತು. ಅದ್ಯಾವ ಹೊತ್ತಲ್ಲಿ ಗಂಡ ಬಂದು ಪಕ್ಕ ನಿಂತಿದ್ದರೋ ಗೊತ್ತಿಲ್ಲ, ನಾನೂ ಹಗುರವಾಗಿ ಅವರೆದೆಗೆ ಒರಗಿಕೊಂಡೆ. ಅಲ್ಲೇ ಪಕ್ಕದಲ್ಲಿದ್ದ ಪಾರಿಜಾತ ನಾಚಿಕೊಂಡಿತಾ? ಗೊತ್ತಿಲ್ಲ.

ಗುರುವಾರ, ಮಾರ್ಚ್ 21, 2019

ತೇಲಿ ಬಂದ ಪುಟಗಳು

ಪ್ರಪಂಚದ ಎಲ್ಲಾ ಸವಲತ್ತುಗಳು ಮೊಮ್ಮಗಳಿಗೆ ಸುಲಭವಾಗಿ ಸಿಗಲಿ ಎಂಬ ಅಭಿಲಾಷೆಯ ಅಜ್ಜಿ ಮತ್ತು ಅರ್ಹತೆ ಗಳಿಸಿಕೊಂಡು ತನಗೆ ಬೇಕಾದ್ದನ್ನು ಪಡೆದುಕೊಳ್ಳಲಿ ಎಂದು ಆಶಿಸುವ ಅಜ್ಜ... ಮಧ್ಯೆ ನಾನು ಬರೆಯಲು ಕಲಿತದ್ದು ಯಾವಾಗ? ಅಸಲಿಗೆ ನಾನು ಕಲಿತದ್ದಾ ಅಥವಾ ಬದುಕೇ ಕಲಿಸಿತಾ? ಯಾವ ದಿನ, ಯಾವ ಕ್ಷಣ ಬದುಕು ಬರಹವನ್ನು ನನ್ನ ಜೊತೆಯಾಗಿಸಿತು? ಲೆಕ್ಕ ಹಾಕಿದರೆ ಎಲ್ಲಾ ಗೋಜಲು ಗೋಜಲು.

ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮ ಟೀಚರ್ 'ಪರಿಸರ ಮಾಲಿನ್ಯ'ದ ಬಗ್ಗೆ ಅರ್ಧ ಪುಟ ಮೀರದಂತೆ ಪ್ರಬಂಧ ಬರೆದು ತರಲು ತಿಳಿಸಿದ್ದರು. 'ರಿಟೈರ್ಡ್' ಮೇಷ್ಟ್ರು ಮನೆಯಲ್ಲಿರಬೇಕಾದರೆ, ಅರ್ಧ ಪುಟ ಯಾಕೆ ಒಂದು ಪುಸ್ತಕ ಬೇಕಿದ್ದರೂ ಬರೆಯಬಲ್ಲೆ ಅನ್ನುವ ಧಿಮಾಕಿನಿಂದ ಮನೆಗೆ ಬಂದು ಅಜ್ಜನ ಕೈಗೆ ಪೆನ್ನು ಪುಸ್ತಕ ಕೊಟ್ಟು ಸಲೀಸಾಗಿ ಆಟ ಆಡಲು ಹೋದೆ. ಆಡಿ ಬರುವಷ್ಟರಲ್ಲಿ ಪ್ರಬಂಧ ರೆಡಿಯಾಗಿರುತ್ತದೆ ಅನ್ನುವ ಅತಿ ನಂಬಿಕೆ ನನ್ನದು. ಆದರೆ ಆಡಿ ಕೈಕಾಲು ಮುಖ ತೊಳೆದು ಬಂದಾಗ ಅಜ್ಜ, ನಾಲ್ಕು ಪಾಯಿಂಟ್ ಬರೆದಿಟ್ಟು ಗಂಭೀರವಾಗಿ ಉರ್ದು ಶಾಯರಿ ಓದುತ್ತಾ ಕುಳಿತಿದ್ದರು. ನಾನು ಪ್ರಬಂಧ ಎಲ್ಲಿ ಎಂದು ಕೇಳಿದಾಗ, ಪುಸ್ತಕ ಕೈಗಿಟ್ಟು "ಈ ನಾಲ್ಕು ಪಾಯಿಂಟ್ ಗಳನ್ನು ಆಧಾರವಾಗಿಟ್ಟುಕೊಂಡು ನೀನೇ ಬರಿ" ಎಂದು ತಮ್ಮ ಓದು ಮುಂದುವರೆಸಿದರು. ನನ್ನ ಗೋಗರೆತ, ಅಳು ಯಾವುದೂ ಫಲ ನೀಡದಿದ್ದಾಗ ಅಜ್ಜಿ ಮೆತ್ತಗೆ "ಪಾಪ ಮಗು, ಅಷ್ಟು ಆಸೆಯಿಂದ ಕೇಳುತ್ತಿರುವಾಗ ಬರೆದು ಕೊಡಬಾರದಾ?" ಎಂದು ಕಕ್ಕುಲಾತಿಯಿಂದ ಕೇಳಿದರು. ಅಜ್ಜ ಅಷ್ಟೇ ನಿರ್ಲಕ್ಷ್ಯದಿಂದ "ಬರೆದುಕೊಳ್ಳುತ್ತಾಳೆ ಬಿಡು" ಎಂದು ಮತ್ತೆ ಜೋರಾಗಿ ಶಾಯರಿ ಓದತೊಡಗಿದರು. ಆ ಕ್ಷಣಕ್ಕೆ ನನಗೆ ಬಂದ ಸಿಟ್ಟು, ಕಾಡಿದ ಅಸಹಾಯಕತೆಯನ್ನು ಇಷ್ಟು ವರ್ಷಗಳಾದ ಮೇಲೂ ಪದಗಳಲ್ಲಿ ಹಿಡಿದಿಡಲಾಗುವುದಿಲ್ಲ. ಆ ಹೊತ್ತು ಅಜ್ಜನ ನಿರಾಕರಣೆ ನನ್ನ ಸ್ವಾಭಿಮಾನಕ್ಕೆ ದೊಡ್ಡ ಪೆಟ್ಟು ಕೊಟ್ಟಿತ್ತು. ಮತ್ತು ಆ ತೀವ್ರತೆ ನನ್ನಿಂದ ಒಂದು ಪುಟದಷ್ಟಿದ್ದ ಪ್ರಬಂಧ ಬರೆಯಿಸಿತ್ತು. ಅಜ್ಜ ಆವತ್ತು ಮೀಸೆಯಡಿಯಲ್ಲಿಯೇ ನಕ್ಕಿದ್ದರಾ? ಗೊತ್ತಿಲ್ಲ. ಆ ಕ್ಷಣ ನಾನು ಬರೆಯಲು ಕಲಿತೆನಾ? ಅರ್ಥವಾಗುತ್ತಿಲ್ಲ.

ಅಜ್ಜ ನನ್ನ ಬದುಕಿನ ಮೊದಲ ಗುರು. ಊರವರು, ಪರಿಚಿತರು ಸಲಹೆಗಳಿಗಾಗಿ, ವ್ಯಾಜ್ಯ ಪರಿಹಾರಕ್ಕಾಗಿ, ಪತ್ರ ಓದಿಸಲು ಮತ್ತು ಬರೆಯಿಸಲಿಕ್ಕಾಗಿ ಅಜ್ಜನನ್ನು ಭೇಟಿಯಾಗುತ್ತಿದ್ದರೆ ನನ್ನ ಕಣ್ಣೊಳಗೆ ಒಂದು ಅರಿಯದ ಬೆರಗು. ನಾನೂ ದೊಡ್ಡವಳಾದರೆ ಅಜ್ಜನಂತೆಯೇ ಎಲ್ಲರಿಗೂ ಬೇಕಾದವಳಾಗಿ ಬದುಕಬೇಕು ಅಂದುಕೊಳ್ಳುತ್ತಿದ್ದೆ. ನನಗೆ ಪುಸ್ತಕಗಳನ್ನು ಪರಿಚಯಿಸಿದ್ದು, ಓದಿನ ರುಚಿ ಹತ್ತಿಸಿದ್ದು ಅಜ್ಜನೇ. ಮನೆಯಲ್ಲಿದ್ದ ರಾಶಿ ಪುಸ್ತಕಗಳು, ವಿವಿಧ ಮ್ಯಾಗಜಿನ್ಗಳು, ದಿನಪತ್ರಿಕೆಗಳು ಒಂದು ರೀತಿಯಲ್ಲಿ ಮನೆಯಲ್ಲಿ ಸಾಹಿತ್ಯಿಕ ಪರಿಸರವನ್ನು ಸೃಷ್ಟಿಸಿದ್ದರೆ, ಅಜ್ಜನ ಓದು, ಆಳ ಅಧ್ಯಯನ, ಸವಿಸ್ತಾರ ವಿಮರ್ಶೆ, ವಿವಿಧ ಭಾಷೆಗಳ ಸಾಹಿತ್ಯದ ಮೇಲೆ ಅವರಿಗಿದ್ದ ಆಸಕ್ತಿ, ಅತುಲ್ಯ ಭಾಷಾ ಪ್ರೌಢಿಮೆ ಮತ್ತೊದು ರೀತಿಯಲ್ಲಿ ಓದಲು, ಬರೆಯಲು ಪ್ರೇರೇಪಣೆ ನೀಡುತ್ತಿದ್ದವು‌.

ಬದುಕಿದರೆ 'ಹೀಗೆಯೇ' ಬದುಕಬೇಕು ಎಂಬುವುದಕ್ಕೆ ಒಂದು ಮಾದರಿಯಂತಿದ್ದ ಅಜ್ಜ, ಒಂದು ದಿನ ಯಾವ ಅನಾರೋಗ್ಯವೂ ಇಲ್ಲದೆ, ಯಾವ ಮುನ್ಸೂಚನೆಯೂ ಇಲ್ಲದೆ ಮರಣವಪ್ಪಿದರು. ನನಗಾಗ ದೊಡ್ಡ ಆಘಾತ. ಬೇರು ಅಳಿದು ನಿನ್ನೆಯಷ್ಟೇ ಚಿಗುರಿದ ಚಿಗುರು ಉಳಿದ ಭಾವ. ಏನಾಗುತ್ತಿದೆ ಎಂದು ಅರಿವಾಗುವ ಮುನ್ನವೇ ನನ್ನ ಇಡೀ ಸಪೋರ್ಟ್ ಸಿಸ್ಟಮ್ ಕುಸಿದು ಬಿದ್ದಿತ್ತು. ಮರುಳುಗಾಡಿನ ಮಧ್ಯೆ ಬರಿಗಾಲಲ್ಲಿ ನಿಂತಂತಹ ಅನುಭವ. ನೆತ್ತಿ ಸುಡುವ ಸೂರ್ಯ, ಕಾಲು ಚುರುಗುಟ್ಟಿಸುವ ಮರಳು, ಮಧ್ಯೆ ಅನಾಥೆ ನಾನು. ಅಜ್ಜನೇ ಸರ್ವಸ್ವ ಆಗಿದ್ದ ನನ್ನ ಬದುಕೀಗ ಅಜ್ಜನಿಲ್ಲದ ವಾಸ್ತವವನ್ನು ಒಪ್ಪಿಕೊಳ್ಳಲಾಗದೆ ಲೇಖನಿಯ ಮೊರೆ ಹೋಗಿತ್ತು. ಆ ಆಘಾತ, ನೋವು, ಸಂಕಟ, ಕಠೋರತೆ ನನ್ನಿಂದ ಕವಿತೆ ಬರೆಯಿಸಿತು. ನಾನು ಬರೆದ ಮೊದಲ ಪದ್ಯ ಸಾವಿನ ಕುರಿತಾದ್ದು. ಪ್ರತೀ ಆರಂಭವೂ ಅಂತ್ಯವಾಗಲೇಬೇಕೇನೋ ಅಥವಾ ಪ್ರತಿ ಅಂತ್ಯವೂ ಮತ್ತೊಂದು ಆರಂಭವೇ ಏನೋ? ನಾನು ಡೈರಿ ಬರೆಯಲು ಪ್ರಾರಂಭಿಸಿದ್ದೂ ಆವತ್ತೇ. ಅಜ್ಜನ ಸಾವಿನ ಆ ದಿನ ಬದುಕು ನನಗೆ ಬರೆಯುವುದನ್ನು ಕಲಿಸಿತಾ? ಇರಬಹುದೇನೋ. ಅಜ್ಜ ಬದುಕಿದ್ದಾಗ ನಾನು ಆ ಕವಿತೆಯನ್ನು ಬರೆದಿದ್ದರೆ ಅವರು ಇವತ್ತಿನವರೆಗೂ ಅದನ್ನು ನನ್ನ ಮೊದಲ ಕವಿತೆ ಎಂದು ಜತನದಿಂದ ಕಾಪಿಟ್ಟುಕೊಳ್ಳುತ್ತಿದ್ದರು ಅಂತ ನನಗೆ ಅನ್ನಿಸುತ್ತಿರುತ್ತದೆ.

ಮೊದಲ ಕವಿತೆ ಬರೆದ ನಂತರ ನಿರಂತರ ಬರೆಯುತ್ತಾ ಹೋದೆ. ಅಜ್ಜನಿಲ್ಲದ ಬದುಕಿನ ಖಾಲಿತನವನ್ನು ಬರಹ ಒಂದಿಷ್ಟಾದರೂ ತುಂಬುತ್ತಾ ಹೋಯಿತು. ವಯಸ್ಸು ಮಾಗುತ್ತಿದ್ದಂತೆ ತನ್ನಿಂತಾನಾಗೇ ಮನಸ್ಸು ಅವರಿಲ್ಲದ ನೋವನ್ನು ಭರಿಸುವುದನ್ನು ಕಲಿತುಕೊಂಡಿತು. ಆದರೆ ನಾನು ಎಂದೂ ಕಥೆ ಬರೆಯಲು ಪ್ರಯತ್ನಿಸಿದವಳೇ ಅಲ್ಲ.

ನೋವು, ಸಂಕಟ, ಅವಮಾನ, ತಿರಸ್ಕಾರ, ಅಸಹಾಯಕತೆ, ಅಭದ್ರತೆ ಕವಿತೆಗಳ ಕಥೆಗಳ ಹುಟ್ಟಿಗೆ ಕಾರಣವಾದಷ್ಟು ಸಹಜವಾಗಿ ಖುಶಿ, ಸಂಭ್ರಮ ಕಾರಣವಾಗದು ಎಂದು ಹಲವು ಲೇಖನಗಳಲ್ಲಿ ಓದಿದ್ದೆ. ಅವೆಲ್ಲಾ ಫೂರ್ತಿ ನಿಜ ಎಂದು ಮನಸ್ಸು ಯಾವತ್ತೂ ಒಪ್ಪಿರಲಿಲ್ಲ. ಆದರೆ, ಬದುಕು ನಾನು ಒಪ್ಪಿಕೊಳ್ಳದಿರುವುದನ್ನೆಲ್ಲಾ ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿಯನ್ನು ಕಾಲ ಕಾಲಕ್ಕೆ ಸೃಷ್ಟಿಸುತ್ತಿತ್ತು ಅಥವಾ ಸೃಷ್ಟಿಸುತ್ತಿದೆ ಎಂದು ನಾನು ಅಂದುಕೊಂಡಿದ್ದೆ. ಲೇಖನ, ಕವಿತೆಗಳನ್ನು ಬರೆದಷ್ಟು ಸುಲಭವಾಗಿ ಕಥೆ ಬರೆಯಲಾರೆ, ಎಷ್ಟಾದರೂ ಕಥಾಪ್ರಪಂಚ ಸುಲಭವಾಗಿ‌ ನನಗೆ ದಕ್ಕುವಂತದಲ್ಲ, ಆ ಪ್ರಪಂಚದ ಬೇಲಿಯ ಹೊರಗೆ ನಿಂತುಕೊಂಡೇ ನಾನು ಕಥೆಗಳನ್ನು ಆಸ್ವಾದಿಸಬೇಕು, ಅವು ಎಂ‌ದಿಗೂ ನನ್ನ ಅನುಭಾವದೊಳಕ್ಕೆ ಬರಲಾರವು ಅಂತಲೇ ತೀರ್ಮಾನಿಸಿಕೊಂಡಿದ್ದೆ.

ಹಾಗೆ ತೀರ್ಮಾನಿಸಿಕೊಂಡ ಹೊತ್ತಲ್ಲೇ ಹರೆಯ ಸದ್ದಿಲ್ಲದೆ ಬದುಕಿನೊಳಕ್ಕೆ ಕಾಲಿಟ್ಟಿತ್ತು.  ಹರೆಯದ ಜೊತೆ ಜೊತೆಗೆ ಹೊಸ ಗೆಳೆತನ, ಸಂಬಂಧಗಳೂ, ಆಪ್ತತೆಗಳೂ ಬೆಳೆದಿದ್ದವು. ಅದರಲ್ಲೊಬ್ಬಳು ಜೀವದ ಗೆಳತಿ . ಬದುಕು ಸಂತೋಷದ ಉಯ್ಯಾಲೆಯಲ್ಲಿ ಜೀಕುತ್ತಿರಬೇಕಾದರೆ ಅವಳ ಬದುಕನ್ನು, ಅವಳ ಪ್ರೀತಿಯನ್ನು ಮೋಸವೊಂದು ನಡುಬೀದಿಯಲ್ಲಿ ತಂದು ನಿಲ್ಲಿಸಿತ್ತು. ಅವನಿಲ್ಲದೆ ಬದುಕುವುದು ಮತ್ತು ಅವನಿಗಾಗಿ ಸಾಯುವುದು, ತಕ್ಕಡಿಯಲ್ಲಿಟ್ಟು ತೂಗಿದಾಗ  ಒಂದು ಬದಿ ಭಾರವಾಯಿತು. ಖಾಲಿತನದ ಭಾರ ಹೊರುವುದಕ್ಕಿಂತ ಸಾಯುವುದೇ ಮೇಲೆಂದು ಆತ್ಮಹತ್ಯೆಯ ಪ್ರಯತ್ನವೂ ನಡೆದುಹೋಯಿತು. ಆದರೆ ಬದುಕು ಅಷ್ಟು ಸುಲಭದಲ್ಲಿ ಮುಗಿಸಿಬಿಡುವಂಥದ್ದಲ್ಲ, ಅವಳು ಉಳಿದುಕೊಂಡಳು. ಹಾಗೆ ತಾನು ಸತ್ತಿಲ್ಲ ಅನ್ನುವುದು ಅವಳಿಗೆ ತಿಳಿದ ಮರುಕ್ಷಣ ನನ್ನ ಕರೆದು "ನನ್ನ ಬದುಕಿನ ಬಗ್ಗೆ ಒಂದು ಕಥೆ ಬರೆಯುತ್ತೀಯಾ?" ಎಂದು ಕೇಳಿದಳು. ನಾನು ಹೂಂಗುಟ್ಟಿ, ಎರಡೇ ದಿನಗಳಲ್ಲಿ ಕಥೆ ಬರೆದು ಅವಳ ಕೈಗಿಟ್ಟೆ. ನಾನು ಕಥೆಗಾರ್ತಿಯಾದೆನಾ? ಊಹೂಂ, ಆಗಿರಲಿಲ್ಲ.

ಯಾಕೆಂದರೆ ನಾನು ಓದಿರುವ ಪುಸ್ತಕಗಳ ಋಣ ಇವೆಲ್ಲಕ್ಕಿಂತ ದೊಡ್ಡದು. ಅವು ನನ್ನ ಭಾಷೆಯ, ಬರಹದ, ಬದುಕಿನ ಮೇಲೆ ಬೀರಿರುವ ಪ್ರಭಾವ ಅಷ್ಟಿಷ್ಟಲ್ಲ. ಹಾಗೆ ಹೇಳುವುದಾದರೆ ನನಗೆ ಬರೆಯಲು ಕಲಿಸಿದ್ದೇ ಪುಸ್ತಕಗಳು ಮತ್ತು ಅವುಗಳ ಜೊತೆ ಉತ್ಕಟತೆಯಿಂದ ಕಳೆದ ಕ್ಷಣಗಳು. ನನ್ನ ಆಲೋಚನೆಗಳನ್ನು ಬರಹಕ್ಕಿಳಿಸಲು ಪ್ರಚೋದಿಸಿದ್ದೂ ಪುಸ್ತಕಗಳೊಳಗಿನ ಅದ್ಭುತ ಲೋಕವೇ.

'ಬಾಲಮಂಗಳ'ದ ಕಥಾಜಗತ್ತಿನಿಂದ  ಆರಂಭವಾದ ಪುಸ್ತಕಗಳೊಂದಿನ ನನ್ನ ನಂಟು ಸದಾ ಹರಿವ ನದಿ. ಇಂಟರ್ನೆಟ್, ಇ-ಪೇಪರ್, ಅಮೆಜಾನ್ ಕಿಂಡಲ್ ಮುಂತಾದ ಜಟಿಲ ಕಾನನಗಳನ್ನು ದಾಟಿದ ಮೇಲೂ ಓದೆಂಬ ಸರಾಗ ನದಿ ಸೇರುವುದು ಪುಸ್ತಕವೆಂಬ ಅಗಾಧ ಕಡಲಿಗೇ. ಪ್ರತೀ ಪುಸ್ತಕದ ವಾಸನೆ, ಸ್ಪರ್ಶ, ಅವನ್ನು ಕೈಯಲ್ಲಿ ಹಿಡಿವಾಗಿನ ಅನುಭೂತಿ, ಓದಿದಾಗ ಅವು ನಮ್ಮೊಳಗೆ ಸ್ಪುರಿಸುವ ವಿಚಾರಗಳು ಎಲ್ಲವೂ ಪುಸ್ತಕಗಳಿಂದ ಪುಸ್ತಕಗಳಿಗೆ ಭಿನ್ನವಾಗಿರುತ್ತವೆ. ಆ ಭಿನ್ನತೆಯೇ ಪ್ರತೀ ಪುಸ್ತಕವನ್ನೂ ನಮ್ಮ ಮೆದುಳಿನ ಕೋಶಗಳಲ್ಲಿ ಎಂದೂ ಅಳಿಯದಂತೆ ಛಾಪೊತ್ತುವುದು.

ಶಾಲೆ-ಕಾಲೇಜಿನ ಲೈಬ್ರರಿ, ಅಜ್ಜನ ಕಪಾಟು, ಅಮ್ಮನ ಹಳೆ ಟ್ರಂಕು, ಮನೆಯ ಅಟ್ಟ ಹೀಗೆ ನನ್ನ ಓದಿನ ಹಸಿವೆಗೆ ಆಹಾರ ಒದಗಿಸಿದ ಆಕರಗಳ ಪಟ್ಟಿ ದೊಡ್ಡದು. ನಾನು ಓದಿದ ಅಷ್ಟೂ ಪುಸ್ತಕಗಳಲ್ಲಿ ನನ್ನನ್ನು ಪದೇ ಪದೇ ಓದಿಸಿದ, ಪ್ರತಿ ಬಾರಿ ಓದಿದಾಗಲೂ ಹೊಸತನ್ನು ಕಲಿಸಿದ ಪುಸ್ತಕಗಳೆಂದರೆ- ಕರ್ವಾಲೋ, ಮಲೆಗಳಲ್ಲಿ ಮದುಮಗಳು, ಚೋಮನ ದುಡಿ, ಅಣ್ಣನ ನೆನಪುಗಳು, ಚಿದಂಬರ ರಹಸ್ಯ ಮುಂತಾದ ಕನ್ನಡದ ಕ್ಲಾಸಿಕ್ ಕೃತಿಗಳು. ಅದರಲ್ಲೂ ಕರ್ವಾಲೋ ನನ್ನ ಹಲವು ಬೇಸರದ ಸಂಜೆಗಳ ಸಂಗಾತಿ‌. ಪುಸ್ತಕಗಳು ನನಗೆ ಬರೆಯಲು ಮಾತ್ರ ಅಲ್ಲ ಬದುಕಲೂ ಕಲಿಸಿವೆ. ಹಾಗಾಗಿಯೇ ನಾನು 'ಬದುಕಲು ಕಲಿಸಿದ ಪುಸ್ತಕಗಳಿಗೆ ಸದಾ ಋಣಿಯಾಗಿರುತ್ತೇನೆ' ಅನ್ನುತ್ತಿರುತ್ತೇನೆ.

ಅವೆಲ್ಲಾ ಸರಿ, ಆದರೆ ಹೀಗೆ ಬರೆಯಲು ಕಲಿತ ನಾನು ಇಷ್ಟು ವರ್ಷಗಳ ಕಾಲ ನನ್ನ ಬರಹಗಳನ್ನು ಯಾಕೆ ಪ್ರಕಟಿಸುವ ಆಸ್ಥೆ ತೋರಲಿಲ್ಲ? ಯಾವ ಅನಿವಾರ್ಯತೆ ಹೆಸರು ಬದಲಾಯಿಸುವ, ಅರ್ಧ ಹೆಸರಿನಲ್ಲಷ್ಟೇ ಬರೆಯುವ ಪರಿಸ್ಥಿತಿಯನ್ನು ಸೃಷ್ಟಿಸಿತು?  ಅಷ್ಟು ಮಾತ್ರದ ಸ್ವಾತಂತ್ರ್ಯ ನನಗಿರಲಿಲ್ಲ ಅನ್ನುವುದು ಶುದ್ಧ ಸುಳ್ಳಾಗುತ್ತದೆ. ಪೋಷಕರು ನನ್ನ ಓದನ್ನೂ ಬರಹವನ್ನೂ ನಿರಂತರವಾಗಿ ಪೋಷಿಸುತ್ತಾ ಬಂದಿದ್ದರೂ ಯಾಕೆ ಹೀಗಾಯಿತು? ಬಹುಶಃ ಈ ಸಮಾಜ ಹುಡುಗಿಯೊಬ್ಬಳು ಖುಲ್ಲಂಖುಲ್ಲಾ ಬರೆಯುವುದನ್ನು ಸ್ವೀಕರಿಸದು ಅನ್ನುವ ಅಂಜಿಕೆ ಕಾಡಿತು. ನನ್ನ ಹಾಗೆ ಎಷ್ಟು ಹುಡುಗಿಯರು ಚಿಪ್ಪೊಳಗೆ ಬಂಧಿಯಾಗಿದ್ದಾರೆ? ಎಷ್ಟು ಬರಹಗಾರ್ತಿಯರು ತಮ್ಮ ಬರವಣಿಗೆಗಳನ್ನು ಮುಚ್ಚಿಟ್ಟಿದ್ದಾರೆ? ಕಲ್ಪನೆಗೂ ನಿಲುಕದು.

ಎಲ್ಲಾ ಸ್ವವಿಮರ್ಶೆಯ ನಂತರ ತಿಳಿಯುವುದಿಷ್ಟೇ- ಮಾಡುವ ಕೆಲಸದಲ್ಲಿ ತೃಪ್ತಿ ಮತ್ತು ಸರಿ-ತಪ್ಪುಗಳ ವಿವೇಚನೆಯಿದ್ದರೆ ಎಲ್ಲವನ್ನೂ ಸಮಾಜ ಮುಕ್ತವಾಗಿಯೇ ಸ್ವೀಕರಿಸುತ್ತದೆ. ಹಾಗೊಂದುವೇಳೆ ಸ್ವೀಕರಿಸದಿದ್ದರೂ ನಾವು ತಪ್ಪು ಮಾಡುತ್ತಿಲ್ಲ ಅನ್ನುವ ಖಾತ್ರಿ ನಮಗಿರಬೇಕು ಅಷ್ಟೇ. ಯಾಕೆಂದರೆ ನಾವು ಸಮಾಜಕ್ಕಿಂತಲೂ ಮುಖ್ಯವಾಗಿ ತಲೆಬಾಗಬೇಕಿರುವುದು ನಮ್ಮ ಆತ್ಮಸಾಕ್ಷಿಗೆ.

ಬುಧವಾರ, ಡಿಸೆಂಬರ್ 26, 2018

ಮಣಿಕಂಠನ ನಂಬಿದ್ದ ಫಕೀರಮ್ಮ.

ಹಿಂದೆಲ್ಲಾ ನಮ್ಮ ಕರಾವಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಹಿತ್ತಲುಗಳಿಗೆ ವಿಶೇಷ ಕಳೆ ಬಂದುಬಿಡುತ್ತಿದ್ದವು. ಆಚೀಚೆ ಮನೆಗಳ ನಾಲ್ಕು ಮಹಿಳಾಮಣಿಗಳು, ಗದ್ದೆ ಕೆಲಸ ಮುಗಿಸಿ ಈಗಷ್ಟೇ ಮನೆಗೆ ಮರಳುತ್ತಿರುವ ಹೆಂಗಸರು, ಕ್ಷಣ ಮಾತ್ರದಲ್ಲಿ ಅಡಕೆ ಸುಲಿಯುವ, ತೆಂಗಿನ ಸಿಪ್ಪೆ ಬಿಡಿಸುವ ಪ್ರತಿಭಾವಂತರು ಕಾರಣವಿಲ್ಲದೆಯೇ ಯಾವುದಾದರೊಂದು ಮನೆಯ ಜಗಲಿ ಸೇರಿಬಿಡುತ್ತಿದ್ದರು. ಅಲ್ಲಿ ಇಡೀ ಊರಿನ ಚರ್ಚೆ ಗಹನವಾಗಿ ನಡೆಯುತ್ತಿದ್ದರೆ ಇತ್ತ ಅಂಗಳದಲ್ಲಿ ಆ ಎಲ್ಲಾ ಮಹಿಳೆಯರ ಮಕ್ಕಳು ಒಂದು ಮಿನಿ‌ ಒಲಿಂಪಿಕ್ ಗ್ರಾಮವನ್ನೇ ಸೃಷ್ಟಿಸಿಬಿಡುತ್ತಿದ್ದರು.

ಆಗ ಆಡುತ್ತಿದ್ದ ಆಟಗಳಾದರೂ ಎಂಥವು? ಚಿನ್ನಿದಾಂಡು, ಮರಕೋತಿ ಆಟ, ಮುಟ್ಟಾಟ, ಗೋಲಿಯಾಟ, ಅಪ್ಪಟ ಮಣ್ಣಿನ ಘಮದ ಕಬಡ್ಡಿ, ಆಗಷ್ಟೇ ಹಳ್ಳಿಯ ಮನದ ಅಂಗಳ ಪ್ರವೇಶಿಸಿದ್ದ ಕ್ರಿಕೆಟ್... ಹೀಗೆ ತರಹೇವಾರಿ ಆಟಗಳು ಪಟ್ಟಿಯಲ್ಲಿದ್ದರೂ ಮೊದಲ ಆದ್ಯತೆ ಮಾತ್ರ ಲಗೋರಿಗೇ.

ಪ್ರತಿ ಗುಂಪಿನಲ್ಲೂ ಇರುತ್ತಿದ್ದ ಒಬ್ಬ ಚಾಣಾಕ್ಷ ಆಟಗಾರ, ಅವನನ್ನು ತಮ್ಮ ತಂಡಕ್ಕೇ ಸೇರಿಸಿಕೊಳ್ಳಬೇಕು ಅಂತ ಮಾಡುವ ಕಸರತ್ತುಗಳು, ಅವನಿಗೆ ಒಡ್ಡುವ ಮಾವಿನಕಾಯಿ, ಪೇರಳೆ ಹಣ್ಣುಗಳ ಲಂಚ, ಅವನ ಗತ್ತು ಗೈರತ್ತುಗಳದೇ ಒಂದು ತೂಕವಾದರೆ, ಅವನದೇ ತಂಡದಲ್ಲಿದ್ದು ಅವನ ವಿರುದ್ಧವೇ ಸೈಲೆಂಟಾಗಿ ಕತ್ತಿ ಮಸೆಯುವ ಹಿತಶತ್ರು, ಅವನ ಸುಳ್ಳು, ಸಣ್ಣಪುಟ್ಟ ಮಸಲತ್ತುಗಳದೇ ಒಂದು ತೂಕ.

ಏಳು ಬಿಲ್ಲೆಗಳು, ಕಾಗದವನ್ನು ಉಂಡೆ ಮಾಡಿ, ಅದರ ಮೇಲೆ ಪ್ಲಾಸ್ಟಿಕ್ ಸುತ್ತಿ, ಬಾಳೆ ಎಲೆಯ ಹಗ್ಗದಿಂದ ಬಲವಾಗಿ ಕಟ್ಟಿ, ಅಂಗಳದ ಮಧ್ಯದಲ್ಲಿ ವೃತ್ತ ಎಳೆದು, ಅಲ್ಲಿ ಬಿಲ್ಲೆಗಳನ್ನಿಟ್ಟು, ಸರಿಯಾಗಿ ಹದಿನೈದು ಹೆಜ್ಜೆಗಳಷ್ಟು ದೂರದಲ್ಲಿ ಮತ್ತೊಂದು ಗೆರೆ ಎಳೆದರೆ ನಮ್ಮ ಲಗೋರಿ ಅಂಕಣ ಸಿದ್ಧವಾಗಿಬಿಡುತ್ತಿತ್ತು.

ಆಮೇಲೆ ಶುರುವಾಗುತ್ತಿತ್ತು ಶುದ್ಧ ಟಪೋರಿ ಆಟ ಲಗೋರಿ. ಪ್ರತಿ ಪಾಯಿಂಟ್‌ ಗೂ ಏರುತ್ತಿದ್ದ ಉತ್ಸಾಹ, ನಿನ್ನಿಂದಾಗಿಯೇ ಸೋತೆವು ಅನ್ನುವ ಎದುರು ಟೀಮಿನ ಆರೋಪ, ಪ್ರತ್ಯಾರೋಪ, ನಗು, ಕೇಕೆ, ಕಿರುಚಾಟಗಳ ಗೊಂದಲದಲ್ಲಿ ಹೊತ್ತು ಮುಳುಗಿದ್ದೇ ಗೊತ್ತಾಗುತ್ತಿರಲಿಲ್ಲ. ಅಮ್ಮಂದಿರು ಬಂದು ಕಿವಿಹಿಡಿದು ಎಳೆದೊಯ್ಯವಾಗಲೇ ಮರುದಿನದ ಶಾಲೆ, ಬಾರದ ಮಗ್ಗಿ, ತಲೆ ಹುಣ್ಣಾಗಿಸುವ ಲೆಕ್ಕ ನೆನಪಾಗುತ್ತಿದ್ದುದು.

ಮೊದಲೇ ಒಂದು ಬಿಲ್ಲೆ ಎಗರಿಸಿ ಕಿಸೆಯಲ್ಲಿಟ್ಟುಕೊಳ್ಳುವುದು, ಒಂದು ಹೆಜ್ಜೆ ಮುಂದೆ ನಿಂತು ಕೊಂಡು ಬಿಲ್ಲೆಗಳಿಗೆ ಬಾಲ್ ಎಸೆಯುವುದು, ಮೈಗೆ ಚೆಂಡು ತಾಗಿಯೇ ಇಲ್ಲ ಅಂತ ಸುಳ್ಳು ಹೇಳುವುದು ಹೀಗೆ ಮೋಸದಾಟಗಳೂ ಧಾರಾಳವಾಗಿಯೇ ನಡೆಯುತ್ತಿದ್ದವು. ಆದರೆ ಇಂತಹ ಸಣ್ಣ ಪುಟ್ಟ ಸಂಗತಿಗಳು ನಮ್ಮ ಆಟದ ಉತ್ಸಾಹವನ್ನು ಕಸಿಯುವಷ್ಟು ಪ್ರಭಾವಶಾಲಿಯಾಗಿರಲಿಲ್ಲ. ಮೇಲಾಗಿ ಹಲವು ದಾಯಾದಿ ಕಲಹಗಳನ್ನು ಲಗೋರಿ ಅಂಕಣ ರಾಜಿಯಲ್ಲಿ ಕೊನೆಗೊಳಿಸಿದ್ದೂ ಇವೆ. ಜಗಳ, ಹೊಡದಾಟ, ಕಿತ್ತಾಟ ಏನೇ ಆದ್ರೂ ಆಟ ನಿಲ್ಲುತ್ತಿರಲಿಲ್ಲ. ಒಂದು ಪಕ್ಷದವರು ಜಗಳದ ಮೂಡಲ್ಲಿದ್ದರೆ ಮತ್ತೊಂದು ಪಕ್ಷದವರು ಜಗಳ ಕೊನೆಗೊಳಿಸಿ ಆಟ ಮುಂದುವರೆಸುವ ಮೂಡಲ್ಲಿರುತ್ತಿದ್ದರು.‌ ಆದರೆ ಊರ ಹೊರಗೆ ಕುಂಬಾರ ಮಹಿಳೆ ಫಕೀರಮ್ಮ‌ನ ಸ್ವರ ಕೇಳುತ್ತಿದ್ದಂತೆ ನಮ್ಮ ಉತ್ಸಾಹಕ್ಕೂ ಆಟಕ್ಕೂ ತಾತ್ಕಾಲಿಕ ಬ್ರೇಕ್!  ಅಮ್ಮನ ಚಾಟಿಯೇಟಿಗೂ ಬಗ್ಗದ ನಮ್ಮ ಮೊಂಡುತನ ಫಕೀರಮ‌್ಮನ ಮುಂದೆ ಮಂಡಿಯೂರಿಬಿಡುತ್ತಿದ್ದುದಾದರೂ ಹೇಗೆ ಅನ್ನುವುದೇ ಒಂದು ದೊಡ್ಡ ಅಚ್ಚರಿ ನನಗೀಗ.

ಸುಭಗರು, ಶಿಷ್ಟರು, ಸಭ್ಯರು ಅಂತೆಲ್ಲಾ ವಿಶೇಷಣ ಭಾರಗಳನ್ನು ನಮ್ಮ ಹೆಗಲ ಮೇಲೆ ನಾವೇ ಹೊತ್ತಿಕೊಂಡಿರುವ ದಕ್ಷಿಣ ಕನ್ನಡದ ಮಹಿಳೆಯರ ನಡುವೆ, ಉತ್ತರ ಕರ್ನಾಟಕದ ಯಾವುದೋ ಹಳ್ಳಿಯ, ಮಂಡಿಯವರೆಗೆ ಸೀರೆ ಎತ್ತಿಕಟ್ಟುತ್ತಿದ್ದ ಫಕೀರಮ್ಮ ನಮಗೆಲ್ಲಾ ಆಪ್ತ ಅನ್ನಿಸಿಬಿಡುತ್ತಿದ್ದಳು. ಯಾಕೋ ಗೊತ್ತಿಲ್ಲ ಅವಳ ಹಾವ ಭಾವ, ಮಾತು, ಕೆಲ ಪದಗಳು ಎಲ್ಲಾ ನಮ್ಮನ್ನು ಒಂದು ವಿಚಿತ್ರ ಆಕರ್ಷಣೆಗೆ ದೂಡಿದ್ದವು. ಅಮ್ಮಂದಿರೆಲ್ಲಾ ನಮ್ಮನ್ನು ಆಕೆಯಿಂದ ದೂರವಿಡಲು ಪ್ರಯತ್ನಿಸುತ್ತಿದ್ದರೆ ನಾವು ಆಕೆಗೆ ಮತ್ತಷ್ಟು ಹತ್ತಿರವಾಗುತ್ತಿದ್ದೆವು. ಮಡಕೆ ಮಾರುತ್ತಾ ಮಾರುತ್ತಾ ಆಕೆ ಬಂದು ಜಗಲಿಯಲ್ಲಿ ಕುಳಿತುಕೊಂಡು ಮಡಕೆ ಕೊಂಡರೂ, ಕೊಳ್ಳದಿದ್ದರೂ ಒಂದಿಷ್ಟು ಊರಿನ ಕಥೆಗಳನ್ನು ಹೇಳುತ್ತಿದ್ದಳು. ಆಕೆ ಮಾತಾಡಲು ಪ್ರಾರಂಭಿಸುತ್ತಿದ್ದರೆ ನಾವೇಕೆ , ದೊಡ್ಡವರೇ ಬಾಯಿ ತೆರೆದುಕೊಂಡು ಕೂತು ಬಿಡುತ್ತಿದ್ದರು.ಅವಳ ಬತ್ತಳಿಕೆಯಲ್ಲಿನ ಕಥೆಗಳಾದರೂ ಹಾಗೆಯೇ ಇರುತ್ತಿದ್ದವು.

ಆಕೆ ಅಯ್ಯಪ್ಪನ ಪರಮಭಕ್ತೆ. ಎಷ್ಟೆಂದರೆ ಮಣಿಕಂಠನ ಹೆಸರಿನ ಹಚ್ಚೆಯನ್ನು ಕತ್ತಿನ ಕೆಳಗೆ ಹಾಕಿಸಿಕೊಳ್ಳುವಷ್ಟು. ಆಕೆ ಮಡಕೆ ಮಾರಲು ಬಂದಾಗೆಲ್ಲಾ ಕತ್ತಿನ ಸೆರಗು ಸರಿಸಿ, ಹಚ್ಚೆ ತೋರಿಸಿ ಈ ಅಯ್ಯಪ್ಪ ನನ್ನನ್ನು ಕಾಯುತ್ತಾನೆ ನೋಡ್ತಾ ಇರಿ ಎಂದು ನಗುತ್ತಿದ್ದರೆ ನಾವವಳ ಮುಖ ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುತ್ತಿದ್ದೆವು.

ನಮಗಾಕೆ ನಾವೆಂದೂ ಕಾಣದ ಕಥೆಗಳ ಜಗತ್ತು ಮತ್ತು ನಮ್ಮ ನಡುವಿನ ಕೊಡಿಯಂತಿದ್ದಳು. ಆಕೆ ಕೆಂಪು ಸಿಮೆಂಟ್ ನೆಲದ ಮೇಲೆ ಮಡಕೆಗಳ ಕಟ್ಟನ್ನಿಟ್ಟು ತಾನೂ ಕುಳಿತು ಸೆರಗಿನಿಂದ ಗಾಳಿ ಬೀಸಲು ಪ್ರಾರಂಭಿಸಿದಳೆಂದರೆ ಅಲ್ಲೊಂದು ಕಥಾಜಗತ್ತು ತಾನೇ ತಾನಾಗಿ ಹರವಿಕೊಳ್ಳುತ್ತಿತ್ತು. ಮಳೆ ಇರದ ತನ್ನೂರು ಮತ್ತು ಸುಖಾ ಸುಮ್ಮನೆ ನೀರು ಪೋಲು ಮಾಡುವ ನಮ್ಮೂರು ಎರಡನ್ನೂ ಹೋಲಿಸಿ ಅದೇ ಸೆರಗಿನ ತುದಿಯಿಂದ ಕಣ್ಣು ಒರೆಸಿಕೊಳ್ಳುತ್ತಿದ್ದಳು.

ಅವಳೆದೆಯೊಳಗೆ ಯಾವ ನೋವಿತ್ತೋ ಗೊತ್ತಿಲ್ಲ. ಒಮ್ಮೊಮ್ಮೆ ತನ್ನೂರನ್ನು, ತಾನು ಮದುವೆಯಾಗಿ ಬರುವಾಗ ತನ್ನ ಅಯ್ಯ ವರದಕ್ಷಿಣೆಯಾಗಿ ಕೊಟ್ಟಿದ್ದ ಜಮೀನನ್ನು, ನೀರಿಲ್ಲದ ಕೆರೆಯನ್ನು ನೆನೆಸಿಕೊಂಡು ಭಾವುಕಳಾಗುತ್ತಿದ್ದುದೂ ಇತ್ತು.  ಆದರೆ ಅವೆಲ್ಲಾ ಕ್ಷಣಮಾತ್ರದ ಭಾವದೇರಿಳಿತಗಳಷ್ಟೇ. ನಿಜಕ್ಕೂ ಆಕೆ ಉಸುಕಿನ ದಿಣ್ಣೆಯ ಮೇಲೂ ಹೆಜ್ಜೆ ಗುರುತು ಮೂಡಿವಸುವಂತಹ ದಿಟ್ಟೆ. ಅಷ್ಟಿಲ್ಲದಿದ್ದರೆ ಎಲ್ಲಿಂದಲೋ ಬಂದು ಇಲ್ಲಿ ಬದುಕು ಕಟ್ಟಿಕೊಳ್ಳಲಾಗುತ್ತಿತ್ತೇ?

ಕೆಲವೊಮ್ಮೆ ಅವಳು ಶುದ್ಧ ತತ್ವಜ್ಞಾನಿಯಂತೆ ಮಾತಾಡುತ್ತಿದ್ದಳು. ಮಣಿಕಂಠನೂ ತಿಳಿಸಿಕೊಡದ ನನ್ನ ಯೋಗ್ಯತೆಯನ್ನು ಈ ಮಣ್ಣು ನನಗೆ ತಿಳಿಸಿಕೊಟ್ಟಿದೆ. ಹಾಗಾಗಿಯೇ ನೆಲದ ನೆಂಟನ್ನು ನಾನಿನ್ನೂ ಕಳೆದುಕೊಂಡಿಲ್ಲ ಅನ್ನುತ್ತಿದ್ದಳು. ನಮಗಾಗ ತತ್ವಜ್ಞಾನವೊಂದೂ ಅರ್ಥವಾಗುವ ವಯಸ್ಸಲ್ಲ. ಅವಳ ಕೈಯಲ್ಲಿ ಮಣ್ಣು ಮಡಕೆಯಾಗುವುದಕ್ಕಿಂತ ದೊಡ್ಡ ತತ್ವಜ್ಞಾನ ನಮಗೆ ಬೇಕಿರಲೂ ಇಲ್ಲ. ಬರ್ತ್ಡೇ ಕಪ್ ಗಳಿನ್ನೂ ಚಾಲ್ತಿಯಲ್ಲಿರದ ಆ ಕಾಲದಲ್ಲಿ ಆಕೆ ಮಡಕೆಯ ಮೇಲೆ ನಮ್ಮ ಕಣ್ಣುಮುಂದೆಯೇ ನಾಲ್ಕು ಬಣ್ಣದ ಗೆರೆ ಎಳೆದು ಕೊಟ್ಟುಬಿಟ್ಟರೆ ನಮ್ಮ ಪಾಲಿಗದೇ ಅಮೂಲ್ಯ ಕಲಾಕೃತಿ.

ಒಂದು ಸಂಜೆ ಬೆಳಕಿನ ನಡುವೆ, ಏದುಸಿರು ಬಿಡುತ್ತಾ ಕ್ಷಣಕ್ಕೊಮ್ಮೆ ಯಾರಿಗೋ ಬಯ್ಯುತ್ತಾ ಧುಮುಗುಟ್ಟುತ್ತಾ ಬಂದ ಫಕೀರಮ್ಮ ನೆಲ ಯಾವುದು ಮಣ್ಣು ಯಾವುದು ಎಂದೂ ಯೋಚಿಸದೆ ದೊಪ್ಪನೆ ಕುಳಿತು ತೀರದ ದಾಹದಿಂದ ಬಳಲುತ್ತಿರುವಂತೆ "ಅಮ್ಮಾ ನೀರು" ಎಂದಳು. ಆ ಸಂಜೆ ಅವಳು ಎಂದಿನಂತಿರಲಿಲ್ಲ. ಹಣೆಯ ನೆರಿಗೆ, ಮೂಗಿನ ಕೆಳಗೆ ಹರಿಯುತ್ತಿದ್ದ ಬೆವರು, ಸಣ್ಣಗೆ ಉಬ್ಬಿದ ಗಂಟಲು ಅವಳಿಗೆ ಹೊಸ ಅವತಾರವನ್ನು ಕೊಟ್ಟಿತ್ತು.

ಅಜ್ಜಿ ಒಳಗಿಂದ ಹೆಸರು ಬೇಳೆಯ ಪಾನಕ ತಂದುಕೊಟ್ಟರು. ಅವಳು ಅವರೊನ್ನಮ್ಮೆ ಕೃತಜ್ಞತೆಯಿಂದ ಆಪಾದಮಸ್ತಕ ದಿಟ್ಟಿಸಿ ಗಟಗಟನೆ ಕುಡಿದು ಲೋಟ ಕೆಳಗಿಟ್ಟಳು. ನಮಗೆಲ್ಲಾ ಸಣ್ಣ ಅಚ್ಚರಿ. ಅಜ್ಜಿ ಅವಳ ಪಕ್ಕ ಕೂತು ಏನಾಯ್ತು ಅಂತ ಕೇಳಿದ್ರು. ಆಕೆ ಯಾವ ಪೀಠಿಕೆಯೂ ಇಲ್ಲದೆ "ನಾಚಿಕೆ ಇಲ್ಲದ ಈ ಗಂಡು ಜಾತಿಗೇ ವಿಷ ಇಕ್ಕಿಬಿಡಬೇಕು, ಪ್ರಪಂಚದಲ್ಲಿ ಒಂದೇ ಒಂದು ಗಂಡಸೂ ಉಳಿಯಬಾರದು" ಅಂದಳು. ನಾವು ನಮ್ಮ ಗುಂಪಿನಲ್ಲಿದ್ದ ಅಷ್ಟೂ ಗಂಡು ಮಕ್ಕಳನ್ನು ಪಿಳಿ ಪಿಳಿ ಕಣ್ಣುಬಿಡುತ್ತಾ ನೋಡುತ್ತಿದ್ದರೆ, ಆಕೆ "ಏನ್ರೇ, ಅವರನ್ಯಾಕೆ ನೋಡ್ತಿದೀರಿ, ಗಂಡು ಜಾತೀನ ಒಂದು ಚಣಕ್ಕೂ ನಂಬಬೇಡ್ರವ್ವಾ" ಎಂದು ಮತ್ತೆ ಉರಿದು ಬಿದ್ದಳು.

"ನನಗೇನಾದ್ರೂ ಅಯ್ಯಪ್ಪ ವರ ಕೊಟ್ರೆ ಇಡೀ ಗಂಡು ಕುಲವನ್ನು ಸುಟ್ಟುಬಿಡುವ ವರ ಕೇಳುತ್ತೇನೆ" ಎಂದು ಮತ್ತೆ ಅಜ್ಜಿ ಮುಖ ನೋಡಿದಳು. ಮಟ್ಟುಗತ್ತಿಯ ಮೇಲೆ ಕುಳಿತು ಅಡಕೆ ಸುಲಿಯುತ್ತಿದ್ದ ಅಮ್ಮನೂ ಕತ್ತಿ ಪಕ್ಕಕ್ಕಿಟ್ಟು ಅವಳ ಪಕ್ಕ ಬಂದು ಕೂತರು. ಅಷ್ಟಾಗುವಾಗ ನಮಗೂ ಇದ್ಯಾವುದೋ ಗಹನ ವಿಚಾರವೇ ಇರಬೇಕು ಅನ್ನಿಸಿ ಹುಡುಗರಿಗೆಲ್ಲಾ ದೂರ ಹೋಗುವಂತೆ ಸನ್ನೆ ಮಾಡಿ ನಾವು ಚಕ್ಕಳಮಕ್ಕಳ ಹಾಕಿ ಅಲ್ಲೇ ಕುಳಿತುಕೊಂಡೆವು. ಇಷ್ಟು ಸಿಟ್ಟಾಗಲು ಕಾರಣವಾದರೂ ಏನಿರಬಹುದು ಅನ್ನುವ ಪ್ರಶ್ನೆಗೆ ಉತ್ತರ ಸಿಗುವುದರ ಮುಂದೆ ಉಳಿದೆಲ್ಲಾ ಸಂಗತಿಗಳು ಗೌಣವಾಗಿಬಿಟ್ಟವು.

ಆದದ್ದಿಷ್ಟೇ... ಫಕೀರಮ್ಮ ಮಡಕೆ ಎತ್ತಿಕೊಂಡು ಬರಬೇಕಾದರೆ ಪಕ್ಕದಲ್ಲೇ ನಡೆಯುತ್ತಿದ್ದ ಕಟ್ಟಡ ಕೆಲಸಗಾರ ನಡು ವಯಸ್ಕನೊಬ್ಬ ಆಗಷ್ಟೇ ಲಂಗ ದಾವಣಿ ತೊಡಲಾರಂಭಿಸಿದ್ದ ಬಾಯಿ ಬರದ, ಕಿವಿ ಕೇಳದ ಹುಡುಗಿಯ ಮೈ ಮೇಲೆ ಕೈ ಹಾಕಿದ್ದ. ಪ್ರತಿಭಟಿಸಬೇಕು ಅನ್ನುವುದೂ ಗೊತ್ತಾಗದ ಆ ಹುಡುಗಿ ಸುಮ್ಮನೆ ಕೊಸರಾಡುತ್ತಿದ್ದಳು. ದೂರದಿಂದಲೇ ಇದನ್ನು ನೋಡಿದ್ದ ಫಕೀರಮ್ಮನ ಹೊಟ್ಟೆಯೊಳಗೆ ಬೆಂಕಿ ಹತ್ತಿಕೊಂಡಿತ್ತು. ಆಚೀಚೆ ನೋಡದ ಆಕೆ ಸೀದಾ ಅವನ ಬಳಿ ಧಾವಿಸಿ ಅವಳನ್ನು ಪಕ್ಕಕ್ಕೆಳೆದು ಅವನ ಕೆನ್ನೆಗೆರಡು ಬಾರಿಸಿದ್ದಳು. ಅಷ್ಟಕ್ಕೇ ಸುಮ್ಮನಾಗದೇ ಅಲ್ಲಿದ್ದ ಅಷ್ಟೂ ಮಂದಿಯನ್ನು ಸೇರಿಸಿ ಉಗಿದು ಬಂದಿದ್ದಳು. ಅಷ್ಟಾಗಿಯೂ ಅವಳ ಕೋಪ ತಣ್ಣಗಾದಂತೆ ಕಾಣುತ್ತಿರಲಿಲ್ಲ. ಗಂಡು ಜಾತಿಯ ಅಹಂಕಾರವನ್ನು ಮರ್ಯಾದೆಯ ಹೆಸರಲ್ಲಿ ಮೌನವಾಗಿ ಸಹಿಸಿಕೊಂಡೇ ಬಂದಿರುವ ಬುದ್ಧಿವಂತರ ಜಿಲ್ಲೆಯ ಎಲ್ಲಾ ಹೆಂಗಸರಿಗೆ ಸಹಸ್ರ ನಾಮಾರ್ಚನೆ ಮಾಡುತ್ತಿದ್ದರೆ ಅಜ್ಜಿ, ಅಮ್ಮ ಎದ್ದು ಒಳನಡೆದು ಅಡುಗೆ ಮನೆ ಸೇರಿಕೊಂಡರು. ಅಮ್ಮ ಅಡಕೆ ಸುಲಿಯುತ್ತಿದ್ದ ಮಟ್ಟುಗತ್ತಿ ತನ್ನ ಗಂಟಲಿಗೆ ಅಡಕೆ ಸಿಕ್ಕಿಸಿಕೊಂಡು ಸುಲಿಯಲೂ ಆಗದೆ ಸುಲಿಯದಿರಲೂ ಆಗದೆ ಒದ್ದಾಡುತ್ತಿತ್ತು.

ಆಕೆ ನೆನಪಾದಂತೆಲ್ಲಾ  ಈಗಿನ #metoo ಅಭಿಯಾನಕ್ಕೆ ಫಕೀರಮ್ಮನಂತಹ ಗಟ್ಟಿ ಧ್ವನಿಯ, ಮರ್ಯಾದೆಗಳಂತಹ ಕಾಟಾಚಾರಗಳಿಗೆ ಬಲಿಯಾಗದ, ಅನ್ಯಾಯವನ್ನು ಖಂಡಿಸುವ ಛಾತಿ ಮತ್ತು ಪ್ರಾಮಾಣಿಕತೆ ಇದ್ದ ಸ್ವತಂತ್ರ ಮಹಿಳೆಯರು ದಶಕಗಳಷ್ಟು ಹಿಂದೆಯೇ ಬೀಜ ಬಿತ್ತಿದ್ದರೇನೋ ಅನಿಸುತ್ತದೆ. ಇಂಟರ್ನೆಟ್, ಸೋಶಿಯಲ್ ಮೀಡಿಯಾ, ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು  ಶಿಷ್ಟ ಭಾಷೆ ಮುಂತಾದ ಯಾವ ಸವಲತ್ತುಗಳೂ ಇಲ್ಲದೆ ಅನಾಚಾರಗಳನ್ನೂ, ದೌರ್ಜನ್ಯವನ್ನೂ ಭಿಡೆಯಿಲ್ಲದೆ ಖಂಡಿಸುತ್ತಿದ್ದರು, ವಿರೋಧಿಸುತ್ತಿದ್ದರು.

ಓಡುತ್ತಿದ್ದ ಕಾಲುಗಳು ನಡೆಯಲು ಪ್ರಾರಂಭಿಸಿದಂತೆ ಬದುಕು ನಿಧಾನವಾಗಲಾರಂಭಿಸಿತು. ನಿರ್ಮಲ ಸಂಜೆಗಳನ್ನು ಮತ್ತು ಅದರೊಡಲಿನ‌ ಚೇತೋಹಾರಿ ಆಟಗಳನ್ನು ಬದುಕಿನ ಕಾರ್ಯತತ್ಪರತೆಗಳು ಕಬಳಿಸಿದಂತೆ ಫಕೀರಮ್ಮ ಮತ್ತವಳ ಕಥೆಗಳೂ ಆಕರ್ಷಣೆ ಕಳೆದುಕೊಂಡವು. ಇತ್ತ  ಅಜ್ಜಿ ಕಾಲವಾದ ನಂತರ ಮಣ್ಣಿನ ಮಡಕೆಯ ಬಳಕೆ ಬಹಳಷ್ಟು ಕಡಿಮೆಯಾಯಿತು. ತಳ ಹಿಡಿಯದ, ಎಣ್ಣೆ ಬೇಕಿಲ್ಲದ ನಾನ್-ಸ್ಟಿಕ್ ಪಾತ್ರೆ ಬಂದ ಮೇಲಂತೂ ಮಣ್ಣಿನ ಪಾತ್ರೆಗಳನ್ನು ಕೇಳುವವರೇ ಇಲ್ಲ, ಜೊತೆಗೆ ಫಕೀರಮ್ಮನ ಅಸ್ತಿತ್ವವೂ ನಮ್ಮ ಜೀವನದಿಂದ ಮರೆಯಾಗಿಹೋಯಿತು. ಅಮ್ಮ ಈಗಲೂ ಕೆಲವೊಮ್ಮೆ  ಫಕೀರಮ್ಮ‌ನನ್ನೂ, ಮಣ್ಣಿನ ಹೂಜಿಯನ್ನೂ,  ಅದರ ಮೇಲಿನ ಕುಸುರಿಯನ್ನೂ, ತಣ್ಣನೆಯ ನೀರನ್ನೂ, ಅವಳ ಕಥೆಗಳನ್ನೂ ನೆನಪಿಸಿಕೊಳ್ಳುತ್ತಾರೆ, ಮಣ್ಣಿನ ಮಡಕೆಯಲ್ಲಿ ಮೀನು ಸಾರು ಮಾಡಿದರಷ್ಟೇ ರುಚಿ ಎಂದು ಗೊಣಗುತ್ತಿರುತ್ತಾರೆ ಅನ್ನುವುದು ಹೊರತುಪಡಿಸಿದರೆ ನಮ್ಮ ನೆನಪಿನ ಕೋಶದಲ್ಲಿ ಅವಳಿಲ್ಲವೇ ಇಲ್ಲ ಅನ್ನಬಹುದು.

ಆದರೆ ಈ ಬಾರಿ ಊರಿಗೆ ಹೋಗಿದ್ದಾಗ, ಮುಂಜಾವು ಮೆಲ್ಲ ಮೆಲ್ಲನೆ ಕಣ್ಣುಬಿಡುವ ಹೊತ್ತು ಹಂಡೆಯೊಲೆಯ ಮುಂದೆ ಕೂತು ಚಳಿ ಕಾಯಿಸುತ್ತಿದ್ದಾಗ ಪಕ್ಕದ ಮದರಸದಲ್ಲಿ  ಹಿಂದಿನ ದಿನದ ಪಾಠವನ್ನು ಮಕ್ಕಳು ರಾಗವಾಗಿ ಒಪ್ಪಿಸುತ್ತಿದ್ದುದು ಕೇಳಿ ಬರುತ್ತಿತ್ತು. ಪಕ್ಕನೆ ನೆನಪು ಬಾಲ್ಯಕ್ಕೋಡಿತು. ಆ ದಿನಗಳ ಸಂಜೆ, ಹರಟೆ, ಆಟ, ಹೆಂಚಿನ ಮನೆಗಳು, ಫಕೀರಮ್ಮ, ಆಕೆಯ ಮಡಕೆ ಎಲ್ಲಾ ನೆನಪಾದವು. ಒಮ್ಮೆ ಆಕೆಯನ್ನು ಕಾಣಬೇಕು, ಮಾತಾಡಬೇಕು ಅಂತ ತೀವ್ರವಾಗಿ ಅನಿಸತೊಡಗಿತು. ಅವಳನ್ನು ಮತ್ತೆ ಹುಡುಕಬೇಕು ಅಂದುಕೊಳ್ಳುತ್ತಲೇ ಇದ್ದೆ, ಆದರೆ ಆ ದಿನ ಬರಲೇ ಇಲ್ಲ. ನಾನು ಊರಿನಿಂದ ಮತ್ತೆ ಮರಳುವ ಗಳಿಗೆಯೂ ಬಂತು. ಫಕೀರಮ್ಮನ ಹುಡುಕಾಟವನ್ನು ಮುಂದಿನ ಸಲಕ್ಕೆ ಮುಂದೂಡಿ ಕಾರು ಹತ್ತಿ ಕುಳಿತುಕೊಂಡೆ. 

ಆದರೆ ಆಕೆ ನನಗೆ ಸಿಗಲೇಬೇಕು ಅನ್ನುವುದು ಮೊದಲೇ ನಿರ್ಧಾರವಾಗಿದ್ದರೆ ಯಾರಾದರೂ ತಡೆಯಲು  ಸಾಧ್ಯವೇ?  ಒಂದೆರಡು ಕಿ.ಮೀ ಬರುವಷ್ಟರಲ್ಲಿ ಕಾರು ಕೆಟ್ಟು ನಿಂತಿತು. ಹೊತ್ತು ಬೇರೆ ಮೀರಿತ್ತು. ಮೆಕ್ಯಾನಿಕ್ ಅನ್ನು ಕರೆದುಕೊಂಡು ಬರುವಷ್ಟರಲ್ಲಿ ನನ್ನ ತಾಳ್ಮೆ ಸಂಪೂರ್ಣ ಒಡೆದುಹೋಗಿತ್ತು. ಒಳಗಿನ್ನು ಕೂತಿರಲಾರೆ ಅನ್ನಿಸಿ ಕೆಳಗಿಳಿದು ಅಲ್ಲೇ ಇದ್ದ ಮೈಲಿಗಲ್ಲೊಂದರ ಮೇಲೆ ಕುಳಿತುಕೊಂಡ.

ಮುಸ್ಸಂಜೆಯ ತಂಪುಗಾಳಿ ಕದಪುಗಳನ್ನು ಸವರುತ್ತಿದ್ದಂತೆ ಹಿತವಾದ ಅನುಭಾವವೊಂದು ಕಚಗುಳಿ ಇಡಲಾರಂಭಿಸಿತು. ಆ ಗಾಳಿಯಲ್ಲಿ, ಶೀತಲತೆಯಲ್ಲಿ ಕಳೆದುಹೋಗುವ ಮುನ್ನ ಒಂದು ನಿಡಿದಾದ ಉಸಿರುಬಿಟ್ಟು ಕಣ್ಣು ಮುಚ್ಚಬೇಕು ಅನ್ನುವಷ್ಟರಲ್ಲಿ ಅಸ್ಪಷ್ಟ ಆಕೃತಿ, ಪರಿಚಿತ ನಡಿಗೆಯೊಂದು ನಮ್ಮೆಡೆಗೆ ಬರುವುದು ಕಾಣಿಸಿತು. ಕಣ್ಣುಜ್ಜಿ ಮತ್ತೆ ನೋಡಿದೆ, ಕಾಲ ಒಂದು ಕ್ಷಣದ ಮಟ್ಟಿಗೆ ಸ್ತಂಭಿಸಿತು.

ಮರುಕ್ಷಣ ನಾನು ಆಕೆಯ ಪಕ್ಕದಲ್ಲಿದ್ದೆ. ಯಾವ ಫಕೀರಮ್ಮನನ್ನು ಹುಡುಕಲು ಕಾಲವನ್ನು ಮುಂದೂಡಿದ್ದೆನೋ ಅದೇ ಫಕೀರಮ್ಮ ಕಾಲವನ್ನು ಹಿಂದಿಕ್ಕಿ ನನ್ನ ಮುಂದೆ ನಿಂತಿದ್ದಳು. ಹೆಗಲಲ್ಲಿ ಮಡಕೆ ಇರಲಿಲ್ಲ ಅನ್ನುವುದು ಬಿಟ್ಟರೆ ಆಕೆ ಹಿಂದಿನಂತೆಯೇ ಇದ್ದಳು. ಕಂಡೂ ಕಾಣದಂತೆ ನೆರಿಗಟ್ಟಿದ ಮುಖ ಅವಳಿಗೆ ವಯಸ್ಸಾಗಿದೆ ಎಂದು ಸೂಚಿಸುತ್ತಿದ್ದರೂ ಅವಳೇನು ತೀರಾ ಇಳಿದು ಹೋಗಿರಲಿಲ್ಲ. ನಾನು ಪರಿಚಯ ಹೇಳಿ ಹಳೆಯ ಆತ್ಮೀಯತೆಯಿಂದ ಮಾತಿಗಿಳಿಯಲು ಯತ್ನಿಸಿದೆ. 

ಮೊದ-ಮೊದಲು ಆಕೆಗೆ ನಾನ್ಯಾರೆಂದು ತಿಳಿಯಲೇ ಇಲ್ಲ. ಅಜ್ಜಿ, ಅಮ್ಮ, ತೋಡು ಎಲ್ಲಾ ನೆನಪಿಸಿದಂತೆ ಅವಳಿಗೂ ನನ್ನ ನೆನಪಾಯಿತೇನೋ? ಅಮ್ಮನನ್ನೂ, ಅಜ್ಜಿಯನ್ನೂ ಪದೇ ಪದೇ ಕೇಳಿದಳು.‌ ಅವಳಿಲ್ಲ ಎಂದಾಗ ಮಾತ್ರ ಒಮ್ಮೆ ಬೆಚ್ಚಿದಂತೆ ಕಂಡುಬಂದಳು. ಅವಳ ಕತ್ತಿನ ಸೆರಗು ಸರಿಸಿ ಹಚ್ಚೆಯನ್ನು ನೋಡಬೇಕು ಅಂತ ಅನ್ನಿಸುತ್ತಿದ್ದರೂ ಯಾವುದೋ ಮುಜುಗರವೊಂದು ಅಡ್ಡ ಬಂದು ಕೇಳಲಾಗದೆ ಸುಮ್ಮನಿದ್ದೆ. 

ಆದರೆ ಆಕೆ ಮಾತಾಡುತ್ತಲೇ ಇದ್ದಳು. ಇಷ್ಟು ವರ್ಷಗಳ ಅಂತರ ಅವಳಲ್ಲಿ ಯಾವ ಬದಲಾವಣೆಯನ್ನೂ ಹುಟ್ಟುಹಾಕಿರಲಿಲ್ಲ. ನಾನು ಮಾತ್ರ ಇಷ್ಟು ಬೇಗ ಮಾತೆಲ್ಲಾ ಖಾಲಿಯಾದಂತೆ ಅವಳ ಮಾತಿಗೆ ಬರಿದೇ ಹೂಂಗುಟ್ಟುತ್ತಿದ್ದೆ. ನಡು ನಡುವೆ ಈಕೆ ಇಷ್ಟು ಜೀವನ್ಮುಖಿಯಾಗಿರಲು ಯಾವ ಅಂಶ ಕಾರಣವಾಗಿರಬಹುದು ಎಂದು ಅಚ್ಚರಿಯಿಂದ ಅವಳ ಮುಖ ನೋಡುತ್ತಿದ್ದೆ.

ಈ ನಡುವೆ ಯಾಕೋ ಗೊತ್ತಿಲ್ಲ, ಅವಳ ಊರು, ಜಮೀನು, ಕೆರೆ ನೆನಪಾದವು. ಊರಿಗೆ ಹೋಗಿಲ್ವಾ ಅಂತ ಕೇಳಿದೆ. ಆಕೆ ನನಗೀಗ ಇದೇ ನನ್ನೂರು,  ಅಲ್ಲಿ ಸಿಕ್ಕ ಬೆಲೆಗೆ ಎಲ್ಲಾ ಮಾರಿ ಇಲ್ಲೇ ಬಂದು ಇದ್ದೇನೆ ಈಗ ಅಂದಳು. ನನಗೋ ಎಲ್ಲಾ ಅಯೋಮಯ. ತನ್ನ ಅಪ್ಪ ಕೊಟ್ಟಿದ್ದ, ಅಷ್ಟೊಂದು ಪ್ರೀತಿಸುತ್ತಿದ್ದ ಜಮೀನನ್ನು ಆಕೆ ಮಾರುವಂತದ್ದು ಏನಾಯಿತು ಅಂತ ಅನಿಸಿತು. ಹಿಂದಿನಂತೆಯೇ ಮತ್ತೆ ಕೇಳಲಾಗದೆ ಸುಮ್ಮನಾದೆ. ಆದರೆ ಆಕೆಯೇ "ಇಲ್ಲಿನ ಬದುಕು ಸಾಕು ಅನ್ನಿಸಿ ಮತ್ತೆ ನಮ್ಮೂರಿಗೇ ಹೋಗಿದ್ದೆ. ಜಮೀನು, ಕಂಬಾರಿಕೆ ಅಂತ ಖುಶಿಯಾಗಿಯೇ ಇದ್ದೆ. ಆದರೆ ಇದ್ದೊಬ್ಬ ಮಗ ಯಾವಾಗ ಕುಡಿತ ಕಲಿತನೋ ಗೊತ್ತಿಲ್ಲ, ದಿನಪೂರ್ತಿ ಹಟ್ಟಿಯಲ್ಲಿ ಕುಡಿದು ಬಿದ್ದುಕೊಳ್ಳುತ್ತಿದ್ದ. ನೋಡುವಷ್ಟು ನೋಡಿ ಒಂದು ದಿನ ಕುಡಿದರೆ ಊಟ ಹಾಕಲಾರೆ ಎಂದು ಮಡಕೆ ಮಾರಲು ಹೋದೆ. ಕುಡಿದ ಅಮಲಿನಲ್ಲಿದ್ದನೋ ಅಥವಾ ನಿಜಕ್ಕೂ ಅವನಿಗೆ ಬದುಕು ಸಾಕೆನ್ನಿಸಿತ್ತೋ ಗೊತ್ತಿಲ್ಲ, ಸಂಜೆ ಬರುವಷ್ಟರಲ್ಲಿ ಅವನ ಹೆಣ ಮರದಲ್ಲಿ ನೇತಾಡುತ್ತಿತ್ತು. ಎಷ್ಟು ಅತ್ತರೂ ಕರೆದರೂ ಮಗ ಮರಳಿ ಬಾರನು ಎನ್ನುವ ಸತ್ಯ ತಿಳಿಯುತ್ತಿದ್ದಂತೆ ಎಲ್ಲಾ ಮಾರಿ ಆ ಊರಿನ ಋಣ ಹರಿದುಕೊಂಡು ಇಲ್ಲಿಗೇ ಮತ್ತೆ ಬಂದೆ.  ಈ ಬದುಕಿನ ಋಣ ಇರುವಷ್ಟು ದಿನ ಇಲ್ಲೇ ಇರುತ್ತೇನೆ" ಅಂದಳು. ಎಲ್ಲಾ ಮುಗಿದ ಮೇಲೂ ಯಾವುದೋ ಉಳಿದಿದೆ ಎಂಬಂತೆ ಬದುಕುವ ಫಕೀರಮ್ಮನಂಥವರು ಮತ್ತು ಸಣ್ಣ ಪುಟ್ಟ ವಿಚಾರಗಳಿಗೆಲ್ಲಾ ಮನಸು ಕೆಡಿಸಿಕೊಂಡು ಬದುಕು ಇಷ್ಟೇ ಅಂತ ನಿರ್ಧರಿಸಿಬಿಡುವ ನಮ್ಮಂಥವರು, ಮಧ್ಯೆ ಸಂಜೆಯ ಕುಳಿರ್ಗಾಳಿ... ಒಂದು ಕೇಂದ್ರದಿಂದ ಆರಂಭವಾದ ಬದುಕು ನಿಶ್ಚಿತ ಪರಿಧಿಯಲ್ಲೇ ಸಾಗಿ ಒಂದು ಸುತ್ತು ಬಂದಿತೇನೋ ಅಂತ ಅನಿಸಿತು. ಸುಮ್ಮನೆ ಅವಳ ಕತ್ತಿನ ಸೆರಗು ಸರಿಸಿದೆ, ಮಣಿಕಂಠ ಎಂದಿನಂತಿರದೆ ನಗುತ್ತಿದ್ದ, ಫಕೀರಮ್ಮನ ಮುಖ ನೋಡಿದೆ ಅವನಿಗಿಂತಲೂ ಚೆಂದ ಅವಳು ನಗುತ್ತಿದ್ದಳು.