ಗುರುವಾರ, ಫೆಬ್ರವರಿ 4, 2016

ನಮ್ಮನ್ನು ಹೆಣ್ಣು-ಗಂಡು ಎಂದು ಗುರುತಿಸಿಕೊಳ್ಳುವ ಮುನ್ನ , ಬನ್ನಿ ನಾವು ಮನುಷ್ಯರಾಗೋಣ...

ಈಗ್ಗೆ ಎರಡು ದಿನಗಳ ಹಿಂದೆ, ಕಸಿನ್ ಸಿಸ್ಟರ್ ಮದುವೆಗೆ ಶಾಪಿಂಗ್ ಮಾಡಿದ ಡ್ರೆಸ್ ಗಳ ಮಣಭಾರದ ಬ್ಯಾಗನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಇನ್ನೂ ನರ್ಸರಿಯಲ್ಲಿ ಓದುತ್ತಿರುವ ಅಕ್ಕನ ಮಗಳ ಕೈಹಿಡಿದು, ರಣಬಿಸಿಲಲ್ಲಿ ಬೆವರುತ್ತಾ, ಬಾರದ ಮಳೆಗೆ ಮನಸ್ಸಲ್ಲೇ ಬೈಯ್ಯುತ್ತಾ, ತೂರಾಡುತ್ತಾ ಬಂದ ಸರಕಾರೀ ಬಸ್ ಗೆ ಹತ್ತಿ ಉಸ್ಸಪ್ಪಾ ಎಂದು ಕುಳಿತು ಮಡಿಲಲ್ಲಿ ಮಗುವನ್ನೂ ಕುಳ್ಳಿರಿಸಿ ಕಿಟಕಿ ಕಡೆ ಮುಖ ಮಾಡ್ಬೇಕು ಅನ್ನುವಷ್ಟರಲ್ಲಿ ಬಸ್ಸಿನ ಕೊನೆ ಸೀಟಲ್ಲಿ ಗಲಾಟೆ ಕೇಳಿಸಿತು.

ಕತ್ತು ತಿರುಗಿಸಿ ನೋಡಿದಾಗ ಸಭ್ಯರು ಅನ್ನಿಸಿಕೊಂಡಿರುವ, ನಾಗರಿಕರು ಅನ್ನಿಸಿಕೊಂಡಿರುವ, ಮುಖ್ಯವಾಹಿನಿಯ ಸತ್ಪ್ರಜೆಗಳು ಅನ್ನಿಸಿಕೊಂಡಿರುವ ಒಂದ್ಹತ್ತು ಜನರ ಗುಂಪು ಅಸಭ್ಯವಾಗಿ, ಅಶ್ಲೀಲವಾಗಿ ಕಿರುಚುತ್ತಿತ್ತು. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಡಿಕ್ಷನರಿಯಲ್ಲಿ ಇಲ್ಲದ ಪದಗಳನ್ನೂ ಉಪಯೋಗಿಸಿ ಬಯ್ಯುತ್ತಾ, ಅವಹೇಳನ ಮಾಡುತ್ತಾ ಗಹಗಹಿಸಿ ನಗುತ್ತಿದ್ದರು.

ಆಗಿದ್ದಿಷ್ಟೆ... ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಗೆ ಭಿಕ್ಷೆ ಬೇಡಲೆಂದು, ತಮ್ಮ ವಿಚಿತ್ರ ಮ್ಯಾನರಿಸಂನಿಂದಲೇ ಹಣ ಕೇಳುವ, ಮುಖದ ಪೂರ್ತಿ ಕ್ರೀಂ ಪೌಡರ್ ಹಚ್ಚಿಕೊಂಡಿದ್ದ ಮಂಗಳ ಮುಖಿಯೊಬ್ಬರು  ಪ್ರವೇಶಿಸಿದ್ದರು. ಅಷ್ಟಕ್ಕೇ ನಮ್ಮ ನಾಗರಿಕ ಬಂಧುಗಳಲ್ಲಿದ್ದ ಮತ್ತೊಬ್ಬರನ್ನು ನೋಯಿಸುವ, ಹೀಯಾಳಿಸುವ, ನಿಂದಿಸುವ ಪೈಶಾಚಿಕ ಮನೋವೃತ್ತಿ ಕುರುಡು ಕುರುಡಾಗಿ ಕುಣಿಯಲಾರಂಭಿಸಿತ್ತು.



ಒಬ್ಬ ವ್ಯಕ್ತಿಯನ್ನು ಒಂದು ಸಣ್ಣ ಗುಂಪೇ ರೇಗಿಸುತ್ತಿದ್ದುದನ್ನು ನೋಡಿಯೂ ನನ್ನನ್ನೂ ಸೇರಿಸಿ ಇಡೀ ಬಸ್ಸು ಮೌನವಾಗಿತ್ತು. ಆದ್ರೆ ನನ್ನ ಮಡಿಲಲ್ಲಿದ್ದ ಮಗು ನನಗೆ ಮತ್ತಷ್ಟು ಆತುಕೊಂಡು "ದೀದಿ, ಆ ಆಂಟಿಗ್ ಎಂದಿಗ್ ಎಲ್ಲಾರುಂ ಪರೆಯಿಡೆ? ಆಂಟಿ ಎಂದ್ರೆ ತಪ್ಪಾಕಿಡ್?" (ಅಕ್ಕಾ, ಆ ಆಂಟಿಗ್ಯಾಕೆ ಎಲ್ರೂ ಬೈತಿದ್ದಾರೆ? ಆಂಟಿ ಏನು ತಪ್ಪು ಮಾಡಿದ್ದಾರೆ?) ಅಂತ ಕೇಳಿತು. ತಪ್ಪು ಮಾಡಿದವರಷ್ಟೇ ಬೈಸಿಕೊಳ್ಳಲು ಅರ್ಹರು ಅನ್ನುವ ಮಗುವಿಗಿದ್ದ ಸೂಕ್ಷ್ಮ ತಿಳುವಳಿಕೆಯ ಮುಂದೆ ಯಾಕೋ ನನ್ನ ಓದು, ಬರಹಗಳೆಲ್ಲವೂ ಜಾಳು ಜಾಳು ಅನಿಸಿತು.

ಗಾಢವಾಗಿ ಬಳಿದ ಲಿಪ್ಸ್ಟಿಕ್, ನಾಜೂಕಿಲ್ಲದ ನಡಿಗೆ, ತೋಳಿಲ್ಲದ ರವಿಕೆ, ಕೈಯಲ್ಲೊಂದು ಪುಟ್ಟ ವ್ಯಾನಿಟ್ ಬ್ಯಾಗ್, ಏನನ್ನೋ ಜಗಿಯುತ್ತಿರುವಂತೆ ಪ್ರತಿಕ್ಷಣ ಕದಲುವ ಕೆನ್ನೆ, ಕಣ್ಣಿನ ಪೂರ್ತಿ ತಿರಸ್ಕಾರದ ನೋವು... ಇವಿಷ್ಟನ್ನು ಅವಾಹಿಸಿಕೊಂಡಿರುವ ವ್ಯಕ್ತಿಯನ್ನು ಅದೆಲ್ಲೇ ಕಂಡರೂ ಮನಸ್ಸು ತಟ್ಟನೆ ಅವರು ಮಂಗಳಮುಖಿ ಅನ್ನುವ ನಿರ್ಧಾರಕ್ಕೆ ಬಂದುಬಿಡುತ್ತದೆ ಮತ್ತು ಬಹುತೇಕ ಸಂದರ್ಭಗಳಲ್ಲಿ ಅದು ನಿಜವೂ ಆಗಿರುತ್ತದೆ.

ಗಂಡು ಮತ್ತು ಹೆಣ್ಣು ಎಂಬ ಎರಡೇ ವ್ಯವಸ್ಥೆಗಳಿಗೆ ಒಗ್ಗಿಕೊಂಡು ಸಮಾಜವನ್ನು ರೂಪಿಸಿಕೊಂಡಿರುವ ನಾವು ಮಂಗಳಮುಖಿಯರ ಬಗ್ಗೆ ಮಾತನಾಡುವಾಗೆಲ್ಲಾ ಅವರ ಅಸಭ್ಯ ನಡವಳಿಕೆ,  ಕುಹುಕ ಮಾತು,  ಅಶ್ಲೀಲ ಹಾವಭಾವ, ಭಿಕ್ಷಾಟನೆಗಳ ಕುರಿತಾಗಿಯೇ ಹೆಚ್ಚು ಚರ್ಚಿಸುತ್ತೇವೆ. ಆದರೆ ಅವರ ಅಂತಹ ನಡವಳಿಕೆಗಳಿಗೆ ಕಾರಣಗಳೇನು ಅನ್ನುವುದನ್ನು ಮಾತ್ರ ನಮ್ಮ ನಾಗರಿಕ ಸಮಾಜ ಅರಿತುಕೊಳ್ಳುವ ಗೋಜಿಗೇ ಹೋಗುವುದಿಲ್ಲ.

ಬಹುತೇಕ ಮಂಗಳಮುಖಿಯರು ಗಂಡಾಗಿ ಹುಟ್ಟಿ ಹೆಣ್ಣಿನ ಸಂವೇದನೆಗಳನ್ನು ಹೊಂದಿರುವವರು. ತಾನು ಅತ್ತ ಗಂಡೂ ಅಲ್ಲ, ಇತ್ತ ಹೆಣ್ಣೂ ಅಲ್ಲ ಅನ್ನುವುದು ಸಂಪೂರ್ಣವಾಗಿ ಅರ್ಥವಾಗುವ ಹೊತ್ತಿಗಾಗುವಾಗಲೇ ಕುಟುಂಬ, ಸಮಾಜ ಅವರನ್ನು ತಮ್ಮಿಂದ ದೂರಮಾಡಿರುತ್ತದೆ. ಆ ಅವಮಾನ, ತಾತ್ಸಾರಗಳನ್ನು ಮೆಟ್ಟಿನಿಲ್ಲಲು ಒಂದು ಹಂತದವರೆಗಿನ ಕ್ರೌರ್ಯವನ್ನು ಅವರು ಮೈಗೂಡಿಸಲೂಬಹುದು. ಅದು ಅವರಿಗಾಗುತ್ತಿರುವ ಅನ್ಯಾಯದ ವಿರುದ್ಧದ  ಪ್ರತಿಭಟನೆಯೇ ಹೊರತು ಕ್ರೌರ್ಯವೆಸಗಲೇ ಬೇಕು ಅನ್ನುವ ಮನಸ್ಥಿತಿಯಿಂದ ಹುಟ್ಟಿದ ನಡವಳಿಕೆಯಲ್ಲ. ತೀರಾ ಇತ್ತೀಚಿನವರೆಗೂ ಸಾಮಾನ್ಯ ಮನುಷ್ಯರು ಅನುಭವಿಸುವ ಅಂದರೆ ವೋಟರ್ ಐಡಿ, ರೇಷನ್ ಕಾರ್ಡ್ ಗಳಂತಹ ಯಾವ ಸೌಲಭ್ಯಗಳೂ ಅನುಭವಿಸಲು ಅವರು ಅನರ್ಹರೆಂದೇ ಪರಿಗಣಿಸಲಾಗಿತ್ತು. ಅಷ್ಟೇಕೆ ಅವರನ್ನು ಮನುಷ್ಯರೆಂದು ಪರಿಗಣಿಸದ ಮನಸ್ಥಿತಿ ಇರುವ ಒಂದು ಬಹುದೊಡ್ಡ  ಸಮೂಹ ಈಗಲೂ ನಮ್ಮ ಮಧ್ಯೆ ಇದೆ.

ಹಾಗೆ ನೋಡುವುದಾದರೆ, ಮನುಷ್ಯನ ದೇಹ ರಚನೆಯೇ ಒಂದು ಅದ್ಭುತ. ಅದು ಯಾವ ಅನಾಟಮಿಗೂ, ಯಾರ ವಿಕಾಸವಾದಕ್ಕೂ ಸಂಪೂರ್ಣವಾಗಿ ದಕ್ಕದ ವಿಸ್ಮಯ. ವಿಜ್ಞಾನದ ಪ್ರಕಾರ ಶಕ್ತಿಗೆ ಕ್ಷಯವಿಲ್ಲ, ಅದು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತನೆ ಹೊಂದಬಹುದೇ ಹೊರತು ಸಂಪೂರ್ಣವಾಗಿ ಯಾವತ್ತೂ ನಾಶಹೊಂದಲಾರದು. ಹಾಗಿದ್ದರೆ ಏಕಾಣು ಬ್ಯಾಕ್ಟೀರಿಯಾ ಹಂತಹಂತವಾಗಿ ವಿಕಾಸವಾಗಿ, ಹಲವು ರೂಪಗಳನ್ನು ಪಡೆದು ಕೊನೆಗೆ ಈಗಿರುವ ಮಾನವ ರೂಪದಲ್ಲಿ ಬಂದು ನಿಂತು ವಿಕಾಸದ ಮಜಲು ಒಂದು ಹಂತಕ್ಕೆ ಪೂರ್ಣಗೊಂಡಿದೆ ಎಂದು ಪ್ರತಿಪಾದಿಸುವ ವಿಕಾಸವಾದದಲ್ಲಿ ಜೀವ ವಿಕಾಸಕ್ಕಿಂತ ಮೊದಲಿದ್ದ ಮೊದಲ ಆ ಏಕಾಣು ಬ್ಯಾಕ್ಟೀರಿಯಾಕ್ಕೆ ಸಾವು ಇರಲಿಲ್ಲವೇ? ಅನ್ನುವ ಪ್ರಶ್ನೆಗೆ ಉತ್ತರವಿಲ್ಲ.

ಹೀಗಿದ್ದರೂ ನಾವು ದೇಹ ರಚನೆಯ ಭಿನ್ನತೆಯನ್ನೇ ಆಧಾರವಾಗಿಟ್ಟುಕೊಂಡು ತಮ್ಮದಲ್ಲದ ತಪ್ಪಿಗಾಗಿ ಮಂಗಳಮುಖಿಯರನ್ನು ಅವಮಾನಿಸುವುದು, ತುಚ್ಛವಾಗಿ ಕಾಣುವುದು ಎಷ್ಟು ಸರಿ? ದೇಹರಚನೆಯಲ್ಲಿ ಭಿನ್ನತೆ ಇದ್ದ ಮಾತ್ರಕ್ಕೆ ಅವರು ಭಾವನೆಗಳೇ ಇಲ್ಲದ ಕಲ್ಲುಗಳು ಅಂತೇಕೆ ನಾವು ಭಾವಿಸಬೇಕು? ನಮ್ಮಂತೆಯೇ ಇಲ್ಲಿ ಅವರಿಗೂ ಬದುಕುವ ಹಕ್ಕಿದೆ ಅನ್ನುವುದನ್ನು ಯಾಕೆ ಅರ್ಥ ಮಾಡಿಕೊಳ್ಳಲಾರೆವು?

ಯಾಕೆಂದರೆ ’ಮುಟ್ಟದಿರುವುದು’ ಮತ್ತು ’ಮುಟ್ಟಿಸದಿರುವುದು’ ಶತಶತಮಾನಗಳಿಂದಲೂ ನಮ್ಮ ಜೀನ್ ಗಳಲ್ಲಿ ಹರಿದು ಬಂದು ಇನ್ನೂ ಅಸ್ತಿತ್ವ ಉಳಿಸಿಕೊಂಡಿರುವ ಒಂದು ವಿನಾಶಕಾರೀ ಬಹು ಅಣು ಬ್ಯಾಕ್ಟೀರಿಯಾ. ಅದೆಷ್ಟೇ ಪ್ರಗತಿಪರರು ಅನ್ನಿಸಿಕೊಂಡರೂ, ವೇದಿಕೆ ಕಟ್ಟಿ ಸಮಾನತೆ, ಸಹಬಾಳ್ವೆಗಳ ಬಗ್ಗೆ ಉರುಹೊಡೆದು ಭಾಷಣ ಮಾಡಿದರೂ ಆಳದಲ್ಲಿನ್ನೂ ನಾವು ಸಿಂಬಿ ಸುತ್ತಿ ಮಲಗಿರುವ ’ಉಚ್ಛ-ನೀಚ’ ಭಾವನೆಗಳ ಘಟಸರ್ಪವನ್ನು ಪೋಷಿಸುತ್ತಲೇ ಇದ್ದೇವೆ. ನಮ್ಮ ’ಉತ್ತಮಿಕೆ’ಯ ಅಹಂಗಳನ್ನು ತಣಿಸಲು ಮತ್ಯಾರನ್ನೋ ನೀಚರನ್ನಾಗಿಸಿ ಮಾನಸಿಕ ದಿವಾಳಿತನಕ್ಕೆ ಅಡಿಗಲ್ಲು ಹಾಕುತ್ತಾ ಭ್ರಮೆಗಳ ಮೇಲೆ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುತ್ತೇವೆ. ಸಾಮಾಜಿಕ ಜವಾಬ್ದಾರಿ, ಕಾಳಜಿಯ ಪ್ರಶ್ನೆ ಬಂದಾಗೆಲ್ಲಾ ಮತ್ತೊಬ್ಬರತ್ತ ಕೈ ತೋರಿಸಿ ನಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತೇವೆ. ಈ ನುಣುಚಿಕೊಳ್ಳುವಿಕೆಯಿಂದಾಗಿಯೇ ಎಲ್ಲರಿಗೂ ಸಮಬಾಳು, ಸಮಪಾಲು ಅನ್ನುವ ತತ್ವದಡಿ ಆರ್ದ್ರವಾಗಿ, ಹೃದ್ಯವಾಗಿ ರೂಪುಗೊಳ್ಳಬೇಕಾಗಿದ್ದ ಸಮಾಜದ ಪರಿಕಲ್ಪನೆ ಜಾಳುಜಾಳಾಗಿ ಕ್ರೌರ್ಯ, ಆಕ್ರಮಣಗಳೇ ವಿಜೃಂಭಿಸುತ್ತಿರುವುದು.

ತರತಮದ ಮೆಟ್ಟಿಲಮೇಲೆ ಮಂಗಳಮುಖಿಯರನ್ನೇ ಜಮಖಾನೆಯನ್ನಾಗಿಸಿ ನಿಂತು ನಮ್ಮನ್ನು ನಾವು ಹೆಣ್ಣು-ಗಂಡು ಎಂದು ಗುರುತಿಸುವ ಮುನ್ನ , ಬನ್ನಿ ನಾವು ಮನುಷ್ಯರಾಗೋಣ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ