ಬುಧವಾರ, ಫೆಬ್ರವರಿ 10, 2016

ರತ್ನಕ್ಕಳ ಪರಿವಾಳದ ಕಥೆ ಮತ್ತು ರೋಹಿತ್ ವೇಮುಲ

ಅದಿನ್ನೂ ಅಕ್ಷರಗಳ ಪರಿಚಯವಾಗಿ ಪುಸ್ತಕ ಪ್ರಪಂಚದೊಳಗೆ ಸಣ್ಣದಾಗಿ ಕುತೂಹಲ ಬೆಳೆಸಿಕೊಳ್ಳುತ್ತಿದ್ದ ವಯಸ್ಸಷ್ಟೆ. ಬಾಲಮಂಗಳ, ಚಂದಮಾಮಗಳೇ ನಮ್ಮ ಪಾಲಿನ ಪವಿತ್ರ ಗ್ರಂಥಗಳಾಗ. ಕಥೆಗಳ ಅದ್ಭುತ ಲೋಕ ನಮ್ಮಿದಿರು ತೆರೆದುಕೊಳ್ಳುತ್ತಿದ್ದರೆ, ಎಲ್ಲೋ ದೂರದಲ್ಲಿ ನಮಗರಿಯದ ಪ್ರಪಂಚವೊಂದಿದೆ, ಅಲ್ಲಿ ಡಿಂಗ ಲಂಬೋದರ, ಪಕ್ರು , ಚಂದಮಾಮದ ಚೆಂದದ ರಾಜಕುಮಾರ, ಚಂಪಕದ ಪರಮಾದ್ಭುತ ಚಂಪಕ ವನವಿದೆ ಅನ್ನುವ ಕಲ್ಪನೆಗಳೆಲ್ಲಾ ಮೊಳಕೆಯೊಡೆಯುತ್ತಿದ್ದ ಕಾಲ.

ಅಂತಹ ಬದುಕು ನಿಧಾನವಾಗಿ ಹರಳುಗಟ್ಟುವ ಕಾಲದಲ್ಲಿ ನಮ್ಮನೆಗೆ ತೋಟದ ಕೆಲಸಕ್ಕೆಂದು ಬರುತ್ತಿದ್ದ ಅದ್ಭುತ ಮಹಿಳೆಯೇ ರತ್ನಕ್ಕ. ಆಕೆ ಎಲ್ಲರಂತೆ ವಾರದ ಎಲ್ಲಾ ದಿನ ಬರುತ್ತಿರಲಿಲ್ಲ, ಶನಿವಾರ ಗಂಟೆ ಏಳಾಗುತ್ತಿದ್ದಂತೆ ಹಿತ್ತಲ ಕಡೆ ಬಂದು 'ಅಕ್ಕಾ' ಎಂದು ಕೂಗುತ್ತಿದ್ದಳು. ಆಕೆ ಬಂದಳೆಂದರೆ, ಅಮ್ಮನಿಗೆ ವಿಪರೀತ ಸಂಭ್ರಮ. ತನ್ನನ್ನು ಹೊರತು ಪಡಿಸಿ ಇನ್ನೊಂದು ಹೆಣ್ಣು ಜೀವವಿಲ್ಲದ ಮನೆಯಲ್ಲಿ ಮತ್ತೊಂದು ಕೈಯ ಬಳೆಗಳ ಸದ್ದು ಆಲಿಸಬಹುದಲ್ವಾ ಅನ್ನುವ ಖುಶಿಯದು. ಆಕೆ ಶನಿವಾರ ಮನೆಗೆ ಬಂದರೆ ಮತ್ತೆ ಹೋಗುತ್ತಿದ್ದುದು ಭಾನುವಾರ ಮುಸ್ಸಂಜೆಯೇ. ಅಲ್ಲಿಯವರೆಗೆ ಅಮ್ಮನ ಮತ್ತು ರತ್ನಕ್ಕನ ಭರಪೂರ ಮಾತುಕತೆಗೆ ಮನೆಯ ಗೋಡೆ, ಬಾಗಿಲುಗಳೇ ಸಾಕ್ಷಿ.

ಆದರೆ ರತ್ನಕ್ಕ ಮಾತು ಶುರುವಿಟ್ಟುಕೊಳ್ಳುತ್ತಿದ್ದಂತೆ ಅಮ್ಮ ನನ್ನ ಕೈಗೊಂದು ಬಾಲಮಂಗಳವೋ ಇಲ್ಲ ಚಂದಮಾಮವನ್ನೋ ಕೊಟ್ಟು ಬಲವಂತವಾಗಿ ಸಾಗಹಾಕುತ್ತಿದ್ದರು. ಯಾಕೆಂದರೆ ಆಕೆ ಬಳಸುತ್ತಿದ್ದ ಕೆಲವು 'ಗೌರವ ಪೂರ್ವಕ' ಪದಗಳು ನನ್ನ ಕಿವಿಗೆ ಬಿದ್ದು, ನಾನದನ್ನು ಮತ್ತೆಲ್ಲಾದರೂ ಬಳಸಿಬಿಟ್ಟೇನು ಅನ್ನುವ ಹಿಂಜರಿಕೆ ಅಮ್ಮನಿಗಿತ್ತು. ಹಿಂದೊಮ್ಮೆ ಹಾಗೇ ಕೇಳಿಸಿಕೊಂಡ 'ವಿಶೇಷ ಪದ'ಗಳನ್ನು ನಾನು ಬಳಸಿ ಅಮ್ಮ ಅಜ್ಜನಿಂದ ಬೈಸಿಕೊಂಡಿದ್ದರು. ಆಮೇಲೆಲ್ಲಾ ಅಮ್ಮ ರತ್ನಕ್ಕನ ಜೊತೆ ಮಾತನಾಡಬೇಕಾದರೆ ನನ್ನ ದೂರ ಕಳುಹಿಸುತ್ತಿದ್ದರು.

ಆದರೆ ನನಗದೆಲ್ಲಾ ಅರ್ಥವಾಗುವ ವಯಸ್ಸಲ್ಲ. ನನಗೆ ರತ್ನಕ್ಕ ಎಂದರೆ ಆ ಕಾಲದಲ್ಲಿ ಅಲ್ಲಾವುದ್ದೀನನ ಅದ್ಭುತ ದೀಪದಂತೆ. ಮೊಗೆದಷ್ಟೂ ಮುಗಿಯದ ಜಾನಪದ ಕಥೆಗಳ ಸಂಗ್ರಹ. ಆಕೆ ಹಿತ್ತಲ ಬಾಗಿಲಲ್ಲಿ ನಿಂತು 'ಅಕ್ಕಾ' ಅನ್ನುತ್ತಿದ್ದಂತೆ ನಾನು 'ರತ್ತಕ್ಕಾ' ಅನ್ನುತ್ತಾ ಆಕೆಯೆಡೆ ಓಡುತ್ತಿದ್ದೆ. ಆಕೆ ನನ್ನನ್ನು ಮಡಿಲಲ್ಲಿ ಕೂರಿಸಿ 'ರತ್ತಕ್ಕ ಅಲ್ಲ, ರತ್ನಕ್ಕ. ಎಲ್ಲಿ ಹೇಳು ರ..ತ್...ನ...ಕ್ಕಾ' ಅನ್ನುತ್ತಿದ್ದರೆ, ನಾನು ಬಿಡಿಬಿಡಿಯಾಗಿ ರ ತ್ ನ ಕ್ಕ ಅಂದರೂ ಒಟ್ಟಿಗೆ ಹೇಳುವಾಗ ರತ್ತಕ್ಕನೇ ಆಗುತ್ತಿತ್ತು. ಆಗೆಲ್ಲಾ ಆಕೆ ಕೆನ್ನೆ ಹಿಂಡಿ ತಲೆ ಮೇಲೊಂದು ಮೊಟಕಿ ಸುಮ್ಮನೆ ನಗುತ್ತಿದ್ದಳು.

ತಲೆ ಬಾಚಿಸಿಕೊಳ್ಳುವುದೆಂದರೆ ಆಟ ಆಡುವ ಅಮೂಲ್ಯ ಸಮಯವನ್ನು ವ್ಯರ್ಥವಾಗಿ ಕಳೆಯುವುದು ಅಂತ ತುಂಬಾ ದೃಢವಾಗಿ ನಂಬಿದ್ದ ಸಮಯವದು. ಅಮ್ಮ ತಲೆಬಾಚಲು ಬಂದರೆ, ಬಾಚಣಿಗೆ ಮೊಂಡಾಗಿದೆ ಅಂತಲೋ, ಎಣ್ಣೆ ಜಾಸ್ತಿ ಆಯ್ತು (ಕೆಲವೊಮ್ಮೆ ಕಡಿಮೆ ಆಯ್ತು)ಅಂತಲೋ, ತಲೆ ನೋವಾಗುತ್ತಿದೆ ಅಂತಲೋ ನೂರೆಂಟು ಕಾರಣ ಹೇಳಿ ಅಮ್ಮನನ್ನು ಹೈರಾಣಾಗಿಸುತ್ತಿದ್ದೆ. ರತ್ನಕ್ಕ ಮನೆಯಲ್ಲಿದ್ದರೆ ಅಮ್ಮ ನನ್ನನ್ನು ಅವರ ಕೈಗೊಪ್ಪಿಸಿ ಹಾಯಾಗಿರುತ್ತಿದ್ದರು.

ಆಕೆ ನನ್ನನ್ನು ಪಕ್ಕ ಕೂರಿಸಿಕೊಂಡು ಕಥೆ ಹೇಳುತ್ತಾ ತಲೆ ಬಾಚುತ್ತಿದ್ದರು. ಮತ್ತು ಆ ಕಾರಣಕ್ಕಾಗಿಯೇ ನನಗವರು ತುಂಬಾ ಅದ್ಭುತ ಅಂತ ಅನ್ನಿಸಿಬಿಡುತ್ತಿದ್ದುದು. ಅವತ್ತವರು ನನಗೆ ಹೇಳಿದ ಕಥೆಗಳಲ್ಲಿ ಒಂದನ್ನು ಹೆಕ್ಕಿ ನಿಮಗೂ ಹೇಳುತ್ತೇನೆ ಕೇಳಿ.

ಒಂದೂರಲ್ಲಿ ಬಿಳಿ ಪಾರಿವಾಳಗಳ ಒಂದು ಪುಟ್ಟ ಹಿಂಡಿತ್ತಂತೆ. ಕತ್ತಿನ ಸುತ್ತ ನೀಲಿ ಗರಿಗಳಿದ್ದ, ಉದ್ದ ಬಾಲವಿದ್ದ ಪರಿವಾಳ ಆ ಹಿಂಡಿನ ನಾಯಕ. ಹಿಂಡಿನಲ್ಲಿದ್ದ ಪ್ರತಿ ಪಾರಿವಾಳಕ್ಕೂ ನಾಯಕನೆಂದರೆ ಅಪಾರ ಗೌರವ. ಹಾಗೆಯೇ ನೀಲಿಗರಿಗಳ ಪಾರಿವಾಳಕ್ಕೆ ಇತರ ಪರಿವಾಳಗಳೆಂದರೆ ಅಮೋಘ ಪ್ರೀತಿ. ಸ್ವಚ್ಛಂದವಾಗಿ ಹಾರಾಡುತ್ತಾ, ತಾವಿರುವಲ್ಲೆಲ್ಲಾ ಆ ಪರಿವಾಳಗಳು ಖುಶಿ ಹಂಚುತ್ತಿದ್ದವು.

ನಮ್ಮಂತಹ ಮನುಷ್ಯರು ಗೂಡಲ್ಲಿ ಬಂಧಿಸಿಟ್ಟ ಹಕ್ಕಿಗಳಿಗೆ ಸಾಂತ್ವನ ಹೇಳುತ್ತಾ, ರೆಕ್ಕೆ ಮುರಿದ ಹಕ್ಕಿಗಳಿಗೆ ಶುಶ್ರೂಶೆ ಮಾಡುತ್ತಾ, ಹಾರಲು ಮರೆತ ಹಕ್ಕಿಗಳಿಗೆ ಹಾರಲು ಕಲಿಸುತ್ತಾ ಯಾರನ್ನೂ ದ್ವೇಷಿಸದೆ, ಎಲ್ಲರನ್ನೂ ಪ್ರೀತಿಸುತ್ತಾ, ಒಂದೇ ಒಂದು ಕಾಳು ಆಹಾರ ಸಿಕ್ಕರೂ ಹಿಂಡಿನ ಎಲ್ಲಾ ಪರಿವಾಳಗಳಿಗೂ ಹಂಚಿ ತಿನ್ನುತ್ತಾ ಬದುಕುತ್ತಿದ್ದವು.

ಒಂದು ದಿನ ಆ ಹಿಂಡಿನ ಪರಿವಾಳವೊಂದು ಹಾಡುತ್ತಾ ಆಕಾಶದೆತ್ತರಕ್ಕೆ ಹಾರುತ್ತಿದ್ದಾಗ ನೆಲದಲ್ಲಿ ಬಿದ್ದು ಚಡಪಡಿಸುತ್ತಿದ್ದ ಹದ್ದೊಂದು ಅದರ ಕಣ್ಣಿಗೆ ಬಿತ್ತು. ತನ್ನ ಬಳಗವನ್ನೆಲ್ಲಾ ಕರೆದು ಅದಕ್ಕೆ ಚಿಕಿತ್ಸೆ ಆರಂಭಿಸಿಯೇ ಬಿಟ್ಟಿತು. ಒಂದು ಪಾರಿವಾಳ ಎಲ್ಲಿಂದಲೋ ಎಲೆಯನ್ನು ಹುಡುಕಿ ತಂದರೆ, ಮತ್ತೊಂದು ಅದನ್ನು ತನ್ನ ಕೊಕ್ಕಿನಲ್ಲೇ ಜಜ್ಜತೊಡಗಿತು. ಮಗದೊಂದು ಮತ್ತೆಲ್ಲಿಂದಲೋ ನೀರು ಹುಡುಕಿ ತಂತು, ಮತ್ತಿನ್ನೊಂದು ಹದ್ದಿನ ರೆಕ್ಕೆಗಳನ್ನು ಮೃದುವಾಗಿ ನೇವರಿಸತೊಡಗಿತು... ಹೀಗೆ ಎಲ್ಲಾ ಪರಿವಾಳಗಳು ಹದ್ದಿನ ಶುಶ್ರೂಶೆ ಮಾಡುತ್ತಿದ್ದರೆ, ನೀಲಿ ಗರಿಗಳ ನಾಯಕ ಪರಿವಾಳ ದೂರ ನಿಂತು ತನ್ನ ಪರಿವಾರದ ಒಳ್ಳೆಯತನವನ್ನು ಕಣ್ತುಂಬಿಕೊಳ್ಳುತ್ತಿತ್ತು.

ಹಾಗೂ ಹೀಗೂ ಹದ್ದು ಕಣ್ತೆರೆಯಿತು. ಪಾರಿವಾಳಗಳೆಲ್ಲಾ ಖುಶಿಯಿಂದ ಚಪ್ಪಾಳೆ ತಟ್ಟುತ್ತಾ ಮತ್ತೆ ಆಕಾಶಕ್ಕೇರಲು ರೆಕ್ಕೆ ಕೊಡವಿಕೊಂಡವು. ಅಷ್ಟರಲ್ಲಿ ಹದ್ದು, ನನ್ನ ಜೀವ ಉಳಿಸಿದ ನೀವುಗಳು ನನ್ನ ಪಾಲಿಗೆ ದೇವರಾದ್ರಿ. ಕಣ್ಣಿಗೊತ್ತಿಕೊಂಡು ನಿಮ್ಮ ಪೂಜಿಸೋಣ ಅಂದರೆ ನೀವದನ್ನು ಒಪ್ಪಲಾರಿರಿ. ಕೊನೆಪಕ್ಷ ನಿಮ್ಮ ಜೊತೆಗಾದರೂ ಇರಲು ಅವಕಾಶ ಕೊಡಿ ಅಂದಿತು.

ಪಾರಿವಾಳಗಳೆಲ್ಲಾ ನಾಯಕನ ತೀರ್ಮಾನವೇನು ಎಂಬಂತೆ ಅದರತ್ತ ನೋಡಿದವು. ಒಂದೆರಡು ಕ್ಷಣ ಯೋಚಿಸಿ ಸ್ವಲ್ಪ ಅನುಮಾನ ಮೂಡಿದರೂ, ಸ್ನೇಹ ಬಯಸಿ ಬಂದವರನ್ನು ದೂರ ತಳ್ಳಬಾರದು ಎಂದು ಜೊತೆಗಿರಲು ಒಪ್ಪಿಗೆ ಕೊಟ್ಟಿತು.

ಅಂದಿನಿಂದ ಬಿಳಿ ಪಾರಿವಾಳಗಳ ಹಿಂಡಿಗೆ ಹದ್ದೂ ಸೇರಿಕೊಂಡಿತು. ಕೆಲವೇ ದಿನಗಳಲ್ಲಿ ಎಲ್ಲರ ವಿಶ್ವಾಸವನ್ನು ಗಳಿಸಿಕೊಂಡಿತು. ಮೊದ ಮೊದಲು ಅನುಮಾನ ಪಟ್ಟರೂ ನಿಧಾನವಾಗಿ ನೀಲಿ ಗರಿಗಳ ಪಾರಿವಾಳಕ್ಕೂ  ಹದ್ದಿನ ಮೇಲೆ ನಂಬಿಕೆ ಮೂಡತೊಡಗಿತು.

ಇದನ್ನೇ ಕಾಯುತ್ತಿದ್ದಂತೆ ಹದ್ದು ಮೆಲ್ಲಮೆಲ್ಲನೆ ತನ್ನ ನೀಚತನ ತೋರಿಸಲಾರಂಭಿಸಿತು. ಮೊದಲಿಗೆ, ಒಗ್ಗಟ್ಟಿನಿಂದಿದ್ದ ಪರಿವಾಳಗಳ ಮಧ್ಯೆಯೇ ಒಡಕು ಮೂಡಿಸಿತು. ಖುಶಿ ಖುಶಿಯಾಗಿದ್ದ ಪಾರಿವಾಳಗಳ ಹಿಂಡನ್ನು ಎರಡು ಗುಂಪು ಮಾಡಿಬಿಟ್ಟು ಎರಡರ ನಡುವೆ ಕಿಚ್ಚು ಹಚ್ಚಿತು. ಒಂದಾಗಿದ್ದ ಪರಿವಾಳಗಳು ಕಿತ್ತಾಟ ಶುರುವಿಟ್ಟುಕೊಂಡವು. ದಿನೇದಿನೇ ಪಾರಿವಾಳಗಳ ನಡುವಿನ ಜಗಳ ಏರುತ್ತಾ ಹೋಯಿತು. ಇಷ್ಟಾದರೂ ಅವಕ್ಕೆ ತನ್ನ ನಾಯಕನ ಮೇಲಿದ್ದ ಗೌರವ, ನಂಬಿಕೆ ಕಡಿಮೆಯಾಗಿರಲಿಲ್ಲ.

ಇದನ್ನು ಸಹಿಸದ ಹದ್ದು, ಮೊದಲು ಆ ಪರಿವಾಳವನ್ನು ಮುಗಿಸಿಬಿಡಬೇಕು ಎಂದು ಯೋಚಿಸಿತು. ಮತ್ತು ಎರಡೂ ಗುಂಪುಗಳಿಂದ ಒಂದೊಂದು ಪಾರಿವಾಳವನ್ನು ಕೊಂದು ತಿಂದು, ಎರಡೂ ಗುಂಪುಗಳು ಪರಸ್ಪರ ಜಗಳವಾಡುವಂತೆ ಮಾಡಿತು. ಅಷ್ಟೇ ಅಲ್ಲ ತಿಂದ ಮುಳ್ಳುಗಳನ್ನು ಯಾರಿಗೂ ಗೊತ್ತಾಗದಂತೆ ಮಲಗಿದ್ದ ನಾಯಕನ ಕಾಲಡಿ ತಂದಿಟ್ಟಿತು.

ಆ ಪರಿವಾಳ ನಿದ್ದೆಯಿಂದ ಏಳುವಾಗ ತನ್ನ ಪ್ರೀತಿಯ ಪರಿವಾರ  ಭೀಕರವಾಗಿ ಜಗಳವಾಡುತ್ತಾ ಪರಸ್ಪರರನ್ನು ತನ್ನ ಕೊಕ್ಕಿನಿಂದ ತಿವಿಯುತ್ತಿದುದ್ದನ್ನು ನೋಡಿ ಜಗಳ ನಿಲ್ಲಿಸಬೇಕೆಂದು ಹೊರಟಿತು. ಅಷ್ಟರಲ್ಲಿ ಅದನ್ನು  ತಡೆದ ಹದ್ದು, ಈ ಜಗಳಕ್ಕೆಲ್ಲಾ ನೀವೇ ಕಾರಣ, ನೀವು ಪಾರಿವಾಳಗಳನ್ನು ಕೊಂದು ತಿಂದುದರಿಂದ ಅವು ಜಗಳವಾಡುತ್ತಿವೆ ಅಂದಿತು. ಆ ನೀಲಿ ಗರಿಯ ಪರಿವಾಳ ತಾನು ಯಾರನ್ನೂ ಕೊಂದಿಲ್ಲ ಅಂದಾಗ ಹದ್ದು ಕಾಲಡಿಯತ್ತ ತೋರಿಸಿ ಮತ್ತೆ ಈ ಎಲುಬುಗಳು ಇಲ್ಲಿಗೆ ಹೇಗೆ ಬಂತು ಎಂದು ಪ್ರಶ್ನಿಸಿತು.

ಆಗ ಪರಿವಾಳವೂ ಗೊಂದಲದಲ್ಲಿ ಬಿತ್ತು. ತಾನು ತಿಂದೇ ಇಲ್ಲ ಎಂದು ಗೊತ್ತಿದ್ದರೂ ಕಣ್ಣೆದುರಿನ ಸತ್ಯ ಮತ್ಯಾವುದೋ ಕಥೆಯನ್ನು ಹೇಳುತ್ತಿತ್ತು.  ಈ ಗೊಂದಲವನ್ನೇ ಉಪಯೋಗಿಸಿಕೊಂಡು ಹದ್ದು ಕೊನೆಗೂ ಅದು ತಾನೇ ಕೊಂದಿರುವುದು ಎಂದು ನಂಬುವಂತೆ ಮಾಡಿತು. ನಾನು ನಂಬಿದ, ಆಚರಿಸಿದ ತತ್ವ ಸಿದ್ಧಾಂತಗಳು ತನ್ನ ಕಣ್ಣೆದುರೇ ಚೆಲ್ಲಾಪಿಲ್ಲಿಯಾಗಿಬಿಟ್ಟಿತಲ್ಲಾ ಅನ್ನುವ ನೋವಲ್ಲಿ ಆ ಪರಿವಾಳ ಬೆಂಕಿಗೆ ಹಾರಿ ತನ್ನನ್ನು ತಾನೇ ಸುಟ್ಟುಕೊಂಡಿತು. ಇತ್ತ ಹದ್ದು ಉಳಿದ ಪಾರಿವಾಳಗಳ ಬಳಿ ಬಂದು ನಿಮ್ಮ ಕಲಹದಿಂದ ಮನನೊಂದು ಅದು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಮತ್ತೊಂದು ಕಥೆ ಕಟ್ಟಿತು. ತಮ್ಮ ನಾಯಕನನ್ನು ಅಷ್ಟೊಂದು ಪ್ರೀತಿಸುತ್ತಿದ್ದ ಪಾರಿವಾಳಗಳು ತಮ್ಮಿಂದಾಗಿ ಅದು ಆತ್ಮಹತ್ಯೆ ಮಾಡಿಕೊಂಡಿತಲ್ಲಾ ಅನ್ನುವ ನೋವಲ್ಲಿ ಒಂದೊಂದು ಪಾರಿವಾಳಗಳು ಒಂದೊಂದು ಕಡೆ ಚದುರಿ ಹೋಯಿತು. ಮತ್ತೆಂದೂ ಅವು ಖುಶಿ ಹಂಚಲೇ ಇಲ್ಲ, ರೆಕ್ಕೆ ಮುರಿದ ಹಕ್ಕಿಗಳಿಗೆ ಹಾರಲು ಕಲಿಸಲೇ ಇಲ್ಲ. ಇತ್ತ ಹದ್ದು ಮತ್ತೆಲ್ಲಾದರೂ ಅಂತಹ ಪಾರಿವಾಳಗಳ ಹಿಂಡು ಇದೆಯಾ ಎಂದು ಹುಡುಕುತ್ತಾ ಹಾರಿಹೋಯಿತು.

ಇಲ್ಲಿಗೆ ಕಥೆ ಮುಗಿಯುತ್ತದೆ. ಆದರೆ ಯಾಕೋ ನನಗೆ ರೋಹಿತ್‌ ವೇಮುಲ ನ ಆತ್ಮಹತ್ಯೆ ಮತ್ತು ಅದರ ನಂತರದ ಕುತ್ಸಿತ ಮನಸ್ಸುಗಳ ಪ್ರತಿಕ್ರಿಯೆಗಳನ್ನು ಗಮನಿಸುವಾಗ ರತ್ನಕ್ಕ ಹಾಗೂ ಆಕೆಯ ಬಿಳಿ ಪಾರಿವಾಳಗಳು ಮತ್ತು ಹದ್ದಿನ ಕಥೆ ನೆನಪಾಯಿತು. ನಿಮ್ಮೊಂದಿಗೂ ಹಂಚಿಕೊಳ್ಳಬೇಕೆನಿಸಿತು, ಅಷ್ಟೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ