ಮಂಗಳವಾರ, ಫೆಬ್ರವರಿ 23, 2016

ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ...

ಅತ್ತ ಉರಿಬಿಸಿಲೂ ಅಲ್ಲದ ಇತ್ತ ತೀವ್ರ ಚಳಿಯೂ ಅಲ್ಲದ ಫೆಬ್ರವರಿ ತಿಂಗಳು. ಅದ್ಯಾವುದೋ ಒಂದು ಮನೆಯ ಜೋಕಾಲಿಯಲ್ಲಿ ಜೀಕುತ್ತಾ ಆಗಾಗ ಕತ್ತುಹೊರಳಿಸಿ ದಾರಿಯತ್ತ ನೋಡುವ ಹೂ ಮನಸಿನ ಹುಡುಗಿ. ಅವಳ ಕಣ್ಣಿನ ಕಣ ಕಣದಲ್ಲೂ ಇನ್ನೂ ಬರಲಿಲ್ಲವೇಕೆ ಅನ್ನುವ ಪ್ರಶ್ನೆ. ಬಾನಂಚು ಕೆಂಪಾದಷ್ಟೂ ಅವಳೆದೆ ಢವಢವ. ಕೈಯಲ್ಲಿದ್ದ ಪುಸ್ತಕದೊಳಗಿನ ಪತ್ರ ಯಾಕೋ ಅಣಕವಾಡುತ್ತಿದೆ ಅಂತನಿಸಲಾರಂಭಿಸುತ್ತದೆ. ಅಷ್ಟರಲ್ಲೇ 'ಕಿರ್ರ್' ಎಂದು ಮನೆಯ ಗೇಟ್ ತೆರೆಯುವ ಸದ್ದು. ಅವನ ತಂಗಿಯೋ, ಪಕ್ಕದ ಮನೆಯವಳೋ ಪುಟ್ಟದೊಂದು ಪತ್ರ,  ಒಂದು ಗ್ರೀಟಿಂಗ್ ಕಾರ್ಡ್ ಮತ್ತೊಂದು ನಗುವ ಗುಲಾಬಿ ಹೂವು... ಆಚೀಚೆ ನೋಡಿ ಯಾರೂ ನೋಡುತ್ತಿಲ್ಲ ಎಂದು ಖಾತ್ರಿ ಪಡಿಸಿಕೊಂಡು ಇವಳ ಕೈಗಿತ್ತು,  ಇವಳ ಕೈಯಲ್ಲಿನ ಪತ್ರವನ್ನು ಮೆಲ್ಲನೆ ತನ್ನ ಕೈಗೆ ತೆಗೆದುಕೊಂಡು ಮಾಯವಾಗುತ್ತಾಳೆ.

ಇತ್ತ ಹುಡುಗಿ ಅದೇ ಜೋಕಾಲಿಯಲ್ಲಿ ಜೀಕುತ್ತಾ ಹೂವನ್ನು ಮುಡಿಯಲೋ ಬೇಡವೋ ಅನ್ನುವ ಕನ್‍ಫ್ಯೂಸನ್‍ನಲ್ಲಿ ತುಟಿಗೊತ್ತಿ ಮಡಿಲಲ್ಲಿಟ್ಟುಕೊಂಡು ಗ್ರೀಟಿಂಗ್ ಕಾರ್ಡ್‌ನ ಮೇಲೆ ಕೈಯಾಡಿಸುತ್ತಾಳೆ. ಅವನ ಜೊತೆ ಬಾಳಬೇಕೆಂಬ ಅವಳ ಅಷ್ಟೂ ಬಣ್ಣಬಣ್ಣದ ಕನಸುಗಳ ನುಣುಪು ಅಂಗೈ ಮೇಲೆ ನರ್ತಿಸಲಾರಂಭಿಸುತ್ತವೆ. ಪತ್ರ ಬಿಚ್ಚಿದರೆ ಮುಗಿದೇ ಹೋಯಿತು, ಎಳೆಯ ಪಾರಿಜಾತ ಹೂವಿನ ಎಸಳೊಂದು ನಾಚಿ ಕಣ್ಣುಮುಚ್ಚಿ ಧರೆಯ ತಬ್ಬಿಕೊಂಡಂತಹಾ ನಾಜೂಕು. ಜೋಕಾಲಿಯ ಜೋಡಿ ಹಗ್ಗಗಳು ಧನ್ಯೋಸ್ಮಿ!

ಅಲ್ಲಿ ಹತ್ತು ಗಾವುದ ದೂರದ ಆ ಮನೆಯಲ್ಲಿ ಹುಡುಗ ಶತಪಥ ಹಾಕುತ್ತಾನೆ. ಯಾರದೋ ದಾರಿ ಕಾಯುತ್ತಿರುವಂತೆ ನಿಮಿಷಕ್ಕೆ ಅರುವತ್ತು ಬಾರಿ ತಲೆ ಎತ್ತಿ ಸುತ್ತ ದಿಟ್ಟಿಸುತ್ತಾನೆ. ತಾನು ಕಳುಹಿಸಿದ ಉಡುಗೊರೆ ಎಲ್ಲಿ ದಪ್ಪ ಮೀಸೆಯ ಅವಳಣ್ಣನ ಕೈಗೆ ಸಿಕ್ಕಿಬಿಡುತ್ತದೋ ಎಂದು ಸುಳ್ಳೇ ಸುಳ್ಳು ಕಲ್ಪಿಸಿಕೊಂಡು ಭಯಪಟ್ಟುಕೊಳ್ಳುತ್ತಾನೆ. ಪಲ್ಸ್ ರೇಟ್ ಅವನಿಗೇ ಕೇಳಿಸುವಷ್ಟು ಏರುತ್ತದೆ. ಅಷ್ಟರಲ್ಲಿ ಅವಳ ಮನೆಗೆ ಹೋಗಿದ್ದ ತಂಗಿ ಓಡೋಡಿ ಬಂದು ಪತ್ರ ಕೈಗಿಟ್ಟು ಕಣ್ಣು ಹೊಡೆಯುತ್ತಾಳೆ. ಅವನಿಗೀಗ ತಂಗಿಯೇ ಮೇಘದೂತೆ. ಉಜ್ಜಯಿನಿಯಿಂದ ಸ್ವತಃ ಕಾಳಿದಾಸನೇ ಬರೆದ ಪ್ರೇಮ ಕಾವ್ಯ ಹೊತ್ತು ತಂದವಳು ಅನ್ನುವ ಭಾವ. ತಂಗಿ 'ಹುಷಾರಣ್ಣಾ' ಅಂದು ಒಳಸರಿಯುತ್ತಾಳೆ.

ಹುಡುಗ ಅವಳ ಅಂಗೈ ಬೆವರಿನಿಂದ ತುಸು ಒದ್ದೆಯಾದ ಪತ್ರದ ಮೇಲೊಂದು ಹೂಮುತ್ತನ್ನಿಟ್ಟು ಮೆಲ್ಲನೆ ಬಿಡಿಸುತ್ತಾನೆ. ಅವಳ ದುಂಡು ಅಕ್ಷರಗಳಲ್ಲಿ ಅವಳೇ ಮೈದಾಳಿದ್ದಾನೇನೋ ಅನ್ನುವಷ್ಟು ಮೈಮರೆಯುತ್ತಾನೆ. ಈ ಪತ್ರ ಮುಗಿಯದಿರಲಿ ಭಗವಂತಾ ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತಿರುತ್ತಾನೆ. ಆದರೂ ಪತ್ರ ಮುಗಿಯುತ್ತದೆ.  ಕೊನೆಯಲ್ಲಿ ಆಕೆ ಬರೆದ 'ಅಲ್ಲಿ ದೂರದಲ್ಲಿ ನಿಂತು ನನ್ನ ಕೋಣೆಯ ಕಿಟಕಿಯೆಡೆ ಇಣುಕುವ ಚಂದ್ರನನ್ನು ಕಿಟಕಿಯೊಳಗೆ ತೂರದಂತೆ ನಿರ್ಬಂಧಿಸಿದ್ದೇನೆ. ನಿನಗೆಂದು ಆಸ್ಥೆಯಿಂದ ಎತ್ತಿಟ್ಟ ಅಷ್ಟೂ ಪ್ರೀತಿಯಲ್ಲಿ ಅವನು ಪಾಲು ಕೇಳುತ್ತಾನೇನೋ ಅನ್ನುವ ಭಯ ನನಗೆ ' ಎನ್ನುವ ಸಾಲನ್ನು ನೂರು ಬಾರಿ ಓದುತ್ತಾನೆ. ಆ ರಾತ್ರಿಯಿಡೀ ಅವನೆದೆಯ ಕವಲುಗಳಲ್ಲಿ ಸಹಸ್ರ ಸಂಭ್ರಮ ಜೋಕಾಲಿಯಾಡುತ್ತದೆ. ಅಲ್ಲವಳ ಕದಪುಗಳನ್ನು ಅನುರಾಗವೊಂದು ಅವುಚಿಕೊಳ್ಳುತ್ತದೆ. ಪಾರಿಜಾತ ಸುಮ್ಮನೆ ನಗುತ್ತದೆ, ಚಂದ್ರನಿಗೂ ಹೊಟ್ಟೆಕಿಚ್ಚು.

ತುಂಬಾ ಹಿಂದೆ ಹೋಗಬೇಕಂತೇನಿಲ್ಲ. ಕೇವಲ ನಾಲ್ಕು - ಐದು ವರ್ಷಗಳ ಹಿಂದೆ ಫೆಬ್ರವರಿ ಹದಿನಾಲ್ಕೆಂದರೆ ಇಷ್ಟು ಮತ್ತು ಇಷ್ಟು ಮಾತ್ರ ಆಗಿತ್ತು.  ಪ್ರತೀ ಪ್ರೇಮಿಯೆದೆಯಲ್ಲೂ ಪರಿಜಾತ ಅರಳುತ್ತಿತ್ತು. ಪ್ರತೀ ಪ್ರೇಮಿಯ ಮನೆಯ ಜೋಕಾಲಿಗೂ ಜೀವ ಜಿಗಿತುಕೊಂಡು ಬಿಡುತ್ತಿತ್ತು. ಆಗೆಲ್ಲಾ ಇಷ್ಟೊಂದು ಅಪ್ಲಿಕೇಷನ್‍ಗಳ ಆಪ್ಶನ್ ಇರಲಿಲ್ಲ.  Happy Valentine's day ಅನ್ನುವ ಶುಷ್ಕ ಮೆಸೇಜ್‍ಗಳೂ ಇರಲಿಲ್ಲ.  ಗೂಗಲ್‍ನಲ್ಲಿ ಪ್ರೇಮಿಗಳ ದಿನದ ರೆಡಿಮೇಡ್ ಶುಭಾಶಯಗಳು ಬಿಕರಿಗೆ ಇರಲೇ ಇಲ್ಲ.  ಎಲ್ಲಕ್ಕಿಂತ ಹೆಚ್ಚಾಗಿ ಅದೆಲ್ಲಿಂದಲೋ ಕದ್ದು, ಕಾಪಿ ಮಾಡಿ ತನ್ನವರಿಗೆ ಶುಭಾಶಯ ಕೋರಬೇಕಾದ ದರಿದ್ರತನ ಯಾವ ಪ್ರೇಮಿಗೂ ಇರಲಿಲ್ಲ. ಸಾವಿರ ಶತಮಾನಗಳ ಇತಿಹಾಸ ಇರುವ ಈ ದೇಶದ ಸಂಸ್ಕೃತಿ ನಮ್ಮಿಂದ ರಕ್ಷಿಸಲ್ಪಡಬೇಕಾದಷ್ಟು ಜಾಳುಜಾಳಾಗಿಲ್ಲ ಅನ್ನುವ ಕನಿಷ್ಠ ಪ್ರಜ್ಞೆ ಇಲ್ಲದ ಬಲಪಂಥದವರೂ, ಅವರು ವಿರೋಧಿಸಿದ್ದೆನ್ನೆಲ್ಲಾ ಮಾಡಲೇಬೇಕು ಅನ್ನುವ ವಿಚಿತ್ರ ಮನಸ್ಥಿತಿ ಇರುವ ಎಡಪಂಥೀಯರೂ ಇರಲಿಲ್ಲ.

ಪ್ರೀತಿಯ ಆ ತಪನೆ, ದೂರದಲ್ಲಿದ್ದುಕೊಂಡೇ ಪಡುವ ಖುಶಿ, ಕಾಯುವಿಕೆ, ವಿರಹ, ಬೆಳದಿಂಗಳ ಕವಿತೆ... ಎಲ್ಲವನ್ನೂ 4G ಸ್ಪೀಡಿನ ಅಪ್ಲಿಕೇಷನ್‍ಗಳು ಕಸಿದುಕೊಂಡುಬಿಟ್ಟಿವೆ. ಅಲ್ಲೆಲ್ಲೋ ಫೇಸ್‍ಬುಕ್‍ನ ಯಾವುದೋ ಪೇಜ್‍ನಲ್ಲಿ ಅವನು ಅಪ್ಡೇಟ್ ಮಾಡಿದ ಸ್ಟೇಟಸ್‍ಗೆ ಇವಳು ಲೈಕ್ ಕೊಡುತ್ತಾಳೆ.  ರಾತ್ರಿ ಮೆಸೆಂಜರ್‍ನಲ್ಲಿ ಹಾಯ್, ಹಲೋದಿಂದ ಆರಂಭವಾಗಿ ಮಾತು ಪ್ರೀತಿಯವರೆಗೆ ಬಂದು ನಿಲ್ಲುತ್ತದೆ.  ಮರುದಿನ ಮತ್ತಿನ್ಯಾವುದೋ ಒಂದು ಕಾಫೀ ಡೇಯಲ್ಲಿ ಎದುರಾ-ಎದುರು ಕೂತು ಕೋಲ್ಡ್ ಕಾಫಿ ಹೀರುತ್ತಾರೆ. ಅಲ್ಲಿಂದೆದ್ದು ಮಲ್ಟಿಪ್ಲೆಕ್ಸ್‌ವೊಂದರಲ್ಲಿ ಸಿನಿಮಾ ನೋಡಿ, ಅಲ್ಲಿಂದ ಮತ್ಯಾವುದೋ ಮಾಲ್‍ಗೆ ಭೇಟಿಕೊಟ್ಟು ಬೇಕಾದ್ದು,  ಬೇಡವಾದ್ದು ಎಲ್ಲಾ ಕೊಂಡು, ನಮ್ಮಿಬ್ಬರ ಟೇಸ್ಟ್ ಎಷ್ಟು ಸೇಮ್ ಅಲ್ವಾ ಅಂತ ಸುಳ್ಳೇ ಸುಳ್ಳು ಸಂಭ್ರಮಿಸಿ ಮನೆಗೆ ಮರಳುತ್ತಾರೆ. ರಾತ್ರಿ 'I'm in love with you' ಎಂದು ವಾಟ್ಸಾಪ್ ಮಾಡಿ ಜೊತೆಗೊಂದು ಗುಲಾಬಿ ಹೂವಿನ ಚಿತ್ರ ಕಳುಹಿಸುತ್ತಾರೆ. ಅಲ್ಲಿಂದಾಚೆ ಇಬ್ಬರೂ ತಾವು ಅಮರ ಪ್ರೇಮಿಗಳೆಂಬ ಅಪ್ಪಟ ಸುಳ್ಳನ್ನು ಸತ್ಯಸ್ಯ ಸತ್ಯ ಎಂಬಂತೆ ನಂಬುತ್ತಾರೆ.

ಒಂದಿಷ್ಟು ದಿನಗಳ ವೀಕೆಂಡ್ ಪಾರ್ಟಿ, ಲಾಂಗ್ ಡ್ರೈವ್‍ಗಳ ನಂತರ 4G ಸ್ಪೀಡ್ ಕಳೆದುಕೊಳ್ಳುತ್ತದೆ. ಸಂಬಂಧದ ವೀಣೆಯ ತಂತಿ ಸಡಿಲವಾಗುತ್ತದೆ. ಅವಳ ಪೋಟೋಗೆ ಅದ್ಯಾರೋ ಕಮೆಂಟಿಸಿದ 'awesome ' ಅನ್ನುವ ಕಮೆಂಟ್ ಇವನ ತಲೆಕೆಡಿಸುತ್ತದೆ. ಇವನ ಸ್ಟೇಟಸ್‍ಗೆ ಮತ್ಯಾವುದೋ ಹುಡುಗಿ ಬರೆದ ಮಾರುದ್ದದ ಕಮೆಂಟ್ ಅವಳ ನಿದ್ದೆಗೆಡಿಸುತ್ತದೆ. ಅವನು ವಿಪರೀತ ಪೊಸ್ಸೆಸಿವ್ ಅಂತ ಇವಳಿಗೂ, ಇವಳು ಮಹಾನ್ ಜಗಳಗಂಟಿ ಅಂತ ಅವನಿಗೂ ಅನಿಸಲಾರಂಭಿಸುತ್ತದೆ. ರಿಲೇಷನ್‍ಶಿಪ್ ಸ್ಟೇಟಸ್, 'ಇನ್ ಕಾಂಪ್ಲಿಕೇಷನ್ ' ಎಂದು ಬದಲಾಗುತ್ತದೆ. ಬೆಂಕಿಗೆ ತುಪ್ಪ ಸುರಿಯುವ ಫ್ರೆಂಡ್ಸ್ ನಿನ್ನಾಯ್ಕೆಯೇ ಸರಿ ಇಲ್ಲ ಎಂದು ಪದೇ ಪದೇ ಕುಯ್ಯತೊಡಗುತ್ತಾರೆ. ಪ್ರೀತಿ ಹುಟ್ಟಿದ ಅದೇ ವಾಟ್ಸಾಪ್‍ನಲ್ಲಿ 'lets breakup ' ಅನ್ನುವ ಮೆಸೇಜ್ ರವಾನೆಯಾಗುತ್ತದೆ. ಸಡಿಲಾಗಿದ್ದ ವೀಣೆಯ ತಂತಿ ಖಿಲ್ಲನೆ ತುಂಡಾಗುತ್ತದೆ.

ಇಬ್ಬರೂ ಒಂದಿಷ್ಟು ದಿನಗಳ ಕಾಲ ಭಗ್ನ ಪ್ರೇಮದ ಸ್ಟೇಟಸ್ ಬರೆದುಕೊಂಡು, ಪರೋಕ್ಷವಾಗಿ ಒಬ್ಬರನೊಬ್ಬರು ಜರೆಯುತ್ತಾ, ಕೆಲವೊಮ್ಮೆ ತಾನು ಮೂವ್ ಆನ್ ಆಗಿದ್ದೇನೆಂದು ಮತ್ತೊಬ್ಬರನ್ನು ನಂಬಿಸಲು ಸರ್ಕಸ್ ಮಾಡುತ್ತಾ, ವಿರಹಿಗಳು ಅನ್ನುವ ಟ್ಯಾಗ್‍ಲೈನ್ ಹಚ್ಚಿಸಿಕೊಂಡು ಓಡಾಡುತ್ತಾರೆ. ಮತ್ತೊಂದಿಷ್ಟು ದಿನಗಳ ನಂತರ ಎಲ್ಲವೂ ಸರಿ ಹೋಗುತ್ತದೆ.  ಅಥವಾ ಸರಿ ಹೋಗಿದೆ ಅಂದುಕೊಂಡು ಸತ್ತಿರೋ ಬೇರಿಗೆ ಮತ್ತೆ ನೀರು ಹನಿಸಲು ಮುಂದಾಗುತ್ತಾರೆ. ಎರಡೂವರೆ ಅಕ್ಷರಗಳ ಪ್ರೀತಿ ಒದ್ದಾಡುತ್ತಿರುತ್ತದೆ, ಜೀವ ಸುಮ್ಮನೆ ನೋಯುತ್ತಿರುತ್ತದೆ, ಬದುಕು ಗೊತ್ತೇ ಆಗದಂತೆ ಒಣಗುತ್ತಿರುತ್ತದೆ, ನಿನ್ನೆಗಳು ನಾಳೆಗಳ ನಿರ್ಮಲತೆಯನ್ನು ಕಬಳಿಸುತ್ತದೆ

ಊಹೂಂ, ಹಾಗಾಗಬಾರದು ನೋಡಿ. ನಿನ್ನೆಯ ಪ್ರತಿ ಕ್ಷಣಗಳು ನಾಳೆಯ ಕನ್ನಡಿಯ ಸ್ಪಷ್ಟ ಪ್ರತಿಬಿಂಬವಾಗಬೇಕು, ಹೀರಿದ ಕಾಫಿಯ ಪ್ರತಿಯೊಂದು ಸಿಪ್ಪಿನಲ್ಲೂ ಪ್ರೀತಿ ನಳನಳಿಸುತ್ತಿರಬೇಕು, ಇಟ್ಟ ಪ್ರತಿ ಹೆಜ್ಜೆಯ ನೆನಪು ಜೀವನ ಪೂರ್ತಿ ನವಿರು ಪ್ರೇಮ ಕಾವ್ಯದಂತೆ ಬದುಕಿನ ಒನಪನ್ನು ಕಾಯುತ್ತಿರಬೇಕು, ಒಂದು ಹಗಲು ಕಳೆಯುವಷ್ಟರಲ್ಲಿ ಮಾಡಿದ ಜಗಳದ ಅಷ್ಟೂ ಕುರುಹುಗಳು ಅಳಿದು ಹೋಗಬೇಕು.  ಮತ್ತು ಹೀಗೆಲ್ಲಾ ಆಗಬೇಕೆಂದರೆ, ಪ್ರೀತಿಯಲ್ಲಿ ದುಡುಕಿರಬಾರದು. ಪರಸ್ಪರರ ಭಿನ್ನತೆಯನ್ನು ಒಪ್ಪಿಕೊಳ್ಳುವ ವಿಶಾಲ ಮನೋಭಾವವಿರಬೇಕು, ಸಹನೆ ಇರಬೇಕು.

ಇಷ್ಟಿದ್ದರೆ ಸಾಕು, 'ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ...' ಎಂದು ಪ್ರೀತಿ ಹಾಡತೊಡಗುತ್ತದೆ. ಮತ್ತೆ ಮತ್ತೆ ಮಳೆ ಹುಯ್ಯುತ್ತದೆ, ಜೀವ ಹಸಿರಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ