ಬುಧವಾರ, ಫೆಬ್ರವರಿ 8, 2017

ಹೃದಯಸ್ಪರ್ಶಿ ಸಂವೇದನೆಗಳು ಮತ್ತೆಂದೂ ಸಹಜತೆಯತ್ತ ಮರಳದಷ್ಟು ಡಿಜಿಟಲೀಕರಣವಾಗಿಬಿಟ್ಟಿದೆಯೇನೋ...?

ಸೂರ್ಯ ಇನ್ನೂ ಪೂರ್ತಿ ನೆತ್ತಿಗೇರಿರಲಿಲ್ಲ. ಹಬೆಯಾಡುವ ಕಾಫಿ ಕಪ್ಪನ್ನು ಕೈಯಲ್ಲಿ ಹಿಡಿದು ಒಂದೊಂದೇ ಸಿಪ್ ಹೀರುತ್ತಾ ಇವತ್ತಿನ ದಿನಪತ್ರಿಕೆ ಓದುತ್ತಿದ್ದೆ. ಅಷ್ಟರಲ್ಲಿ ರಿಂಗಣಿಸಿದ ಮೊಬೈಲ್ ಗೆಳತಿಯೋರ್ವಳ ಹೆಸರನ್ನು ತೋರಿಸುತ್ತಿತ್ತು. ಇನ್ನೂ ಪೇಪರ್ ಓದಿ ಮುಗಿಸಿಲ್ಲದ ನಾನು ಎತ್ತಲೋ ಬೇಡವೋ ಅನ್ನುವ ಅನ್ಯಮನಸ್ಕತೆಯಲ್ಲೇ ರಿಸೀವ್ ಮಾಡಿದೆ. ಆ ಕಡೆಯಿಂದ ಗಡಸು ಧ್ವನಿಯೊಂದು ' "ನಾನು ನಿನ್ ಫ್ರೆಂಡ್ ಹಸ್ಬೆಂಡ್ ಮಾತಾಡ್ತಿದೀನಿ, ಅವ್ಳು ಇವತ್ತು ಸೂಸೈಡ್ ಅಟೆಮ್ಪ್‌ಟ್ ಮಾಡಿದ್ದಾಳೆ, ನಿಂಗೇನಾದ್ರೂ ವಿಷಯ ಗೊತ್ತಿರಬಹುದಾ ಅಂತ ಫೋನ್ ಮಾಡಿದೆ" ಅಂದಿತು. ಗಡಬಡಿಸಿ ಎದ್ದು ನಿಂತು, ತಾನು ಕನಸು ಕಾಣುತ್ತಿಲ್ಲ ಎಂದು ಕನ್‍ಫರ್ಮ್ ಮಾಡಿಕೊಳ್ಳುತ್ತಾ ಎಡ ಕಿವಿಯಿಂದ ಬಲಕಿವಿಗೆ ಫೋನನ್ನು ವರ್ಗಾಯಿಸಿ ಮತ್ತೊಮ್ಮ ಕೇಳಿದೆ. ಆ ಕಡೆಯಿಂದ ಮತ್ತದೇ ಉತ್ತರ. ಕೈಯಲ್ಲಿದ್ದ ಕಾಫಿ, ಕಪ್‍ನಿಂದ ತುಳುಕಿ ಕೈ ಮೇಲೆ ಬಿತ್ತು.

ಒಂದು ಕ್ಷಣ ಏನು ಮಾಡಬೇಕೆಂದೇ ತೋಚಲಿಲ್ಲ. ಆಕೆ ನನ್ನ ಅತ್ಯಾಪ್ತ ಸ್ನೇಹಿತೆ ಅಲ್ಲದಿದ್ದರೂ ಕನಿಷ್ಠ ತಿಂಗಳಿಗೆ ಎರಡು ಬಾರಿಯಾದರೂ ಚಾಟ್ ಮಾಡುವಷ್ಟು ಆತ್ಮೀಯತೆ ನಮ್ಮಲ್ಲಿತ್ತು. ಈಗ ಇದ್ದಕ್ಕಿದ್ದಂತೆ ಆತ್ಮಹತ್ಯೆ ಯತ್ನ ಅಂದರೆ ನನಗೇನಾಗಿರಬೇಡ? ಸೂಕ್ಷ್ಮವಾಗಿ ಮನೆಯಲ್ಲಿ ವಿಷಯ ತಿಳಿಸಿ, ಅವಳು ದಾಖಲಾಗಿರುವ ಆಸ್ಪತ್ರೆಗೆ ಹೊರಟೆ. ದಾರಿ ಮಧ್ಯೆ ಮತ್ತೊಂದಿಬ್ಬರು ಗೆಳತಿಯರಿಗೂ ವಿಷಯ ತಿಳಿಸಿದೆ.

ಕಾಲೇಜಿನ ಪೂರ್ತಿ ಗಟ್ಟಿಗಿತ್ತಿ ಅನ್ನುವ ಹೆಸರು ಗಳಿಸಿದ್ದವಳು ಈಗ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಪ್ರಯತ್ನಿಸಲು ಕಾರಣವಾದರೂ ಏನಿದ್ದೀತು ಅನ್ನುವುದು ಇನ್ನೂ ನನ್ನರವಿಗೆ ನಿಲುಕಿರಲಿಲ್ಲ. ಅಷ್ಟು ಸುಲಭವಾಗಿ ಸಾವಿಗೆ ಶರಣೆನ್ನುವಷ್ಟು ದುರ್ಬಲೆಯಲ್ಲವೇ ಅಲ್ಲ ಅವಳು. ಹಿಂದೊಮ್ಮೆ ಕಾಲೇಜ್ ಇಲೆಕ್ಷನ್ ನಡೆದಾಗ ಅಷ್ಟೂ ರಾಜಕೀಯ ಪಟ್ಟುಗಳನ್ನು ಅರೆದು ಕುಡಿದವಳಂತೆ ಜನರಲ್ ಸೆಕ್ರೆಟರಿಯಾಗಿ ಆಯ್ಕೆಯಾಗಿದ್ದಳು. ತನ್ನ ಚುಡಾಯಿಸುತ್ತಿದ್ದವರನ್ನು ರಸ್ತೆ ಮಧ್ಯೆಯೇ ನಿಲ್ಲಿಸಿ ಗದರಿಸುವಷ್ಟು ಬೋಲ್ಡ್. ಬದುಕಿಗೆ ಬೆನ್ನು ತಿರುಗಿಸಿ ಓಡುವಂತಹ ವಿಷಮ ಮನಸ್ಥಿತಿಗೆ ಆಕೆ ತಲುಪಬೇಕಿದ್ದರೆ ಅಂತದ್ದೇನಾಯಿತು ಅವಳ ಜೀವನದಲ್ಲಿ ಅಂತೆಲ್ಲಾ ಯೋಚಿಸುತ್ತಿದ್ದಂತೆ ನಾನು ಆಸ್ಪತ್ರೆ ತಲುಪಿದೆ.

ಕೌಂಟರ್‍ನಲ್ಲಿ ವಿಚಾರಿಸಿ ಅವಳು ದಾಖಲಾಗಿದ್ದ ಕೋಣೆಯತ್ತ ಹೋದರೆ ಅಮ್ಮ ಐ.ಸಿ.ಯುನತ್ತ ಕೈ ತೋರಿದರು. ಪಕ್ಕದಲ್ಲೇ ಅಪ್ಪ ತಲೆ ತಗ್ಗಿಸಿ ಕೂತಿದ್ದರು. ಅಲ್ಲಿದ್ದು ಏನು ಮಾಡಬೇಕೆಂದು ತೋಚದೆ ಐ.ಸಿ.ಯು ಹತ್ರ ಬಂದೆ. ಅಲ್ಲಿ ಅವಳ ಗಂಡ ಆಕಾಶವೇ ತಲೆ ಮೇಲೆ ಬಿದ್ದಂತೆ ಕುಳಿತಿದ್ದರು. ಆ ಪರಿಸ್ಥಿತಿಯಲ್ಲಿ ಅವರನ್ನು ಮಾತಾಡಿಸುವುದೋ ಬೇಡವೋ ಅನ್ನುವ ಇಬ್ಬಂದಿತನದಲ್ಲೇ ಅವರನ್ನು ಸಮೀಪಿಸಿ 'ಅಣ್ಣಾ, ಆಗಿರುವುದಾದರೂ ಏನು' ಎಂದು ಕೇಳಿದೆ.
ಮೊದ ಮೊದಲು ಅವರೂ ಹೇಳಲೋ ಬೇಡವೋ ಎಂಬಂತೆ ಹಿಂದೆ ಮುಂದೆ ನೋಡಿದರು. ಆಮೇಲೆ ಅವರಿಗೂ ಎದೆಮೇಲಿನ ಭಾರ ಇಳಿಸಬೇಕೆಂದರೆ ಯಾರ ಜೊತೆಗಾದರೂ ಮಾತಾಡಲೇಬೇಕು ಅಂತ ಅನಿಸಿತೋ ಏನೋ. ನಿಧಾನವಾಗಿ ಬಾಯ್ಬಿಟ್ಟರು.

ಸಂಸಾರದ ಬಂಡಿ ಸಾಗಿಸಲು ಇಬ್ಬರೂ ದುಡಿಯಬೇಕಾದ ಜರೂರತ್ತಿರುವ ಈ ಕಾಲದ ದಂಪತಿಗಳವರು. ಇಬ್ಬರೂ ಸಾಫ್ಟವೇರ್ ಉದ್ಯೋಗಿಗಳು. ಕೆಲಸದ ಒತ್ತಡ ಇಬ್ಬರ ಮೇಲೂ ಸಮಪ್ರಮಾಣದಲ್ಲೇ ಇತ್ತು. ಹಾಗಾಗಿ ಒಂದು ದಿನ ಗಂಡ, ಇನ್ನೊಂದು ದಿನ ಹೆಂಡತಿ ಎಂಬಂತೆ ಮನೆಕೆಲಸವನ್ನು ಹಂಚಿಕೊಂಡಿದ್ದರು. ನಿನ್ನೆ ಅಡುಗೆ ಪೂರ್ತಿ ನನ್ನ ಗೆಳತಿಯ ಪಾಳಿ. ಅದ್ಯಾಕೋ ಏನೋ ಬ್ರೇಕ್‍ಫಾಸ್ಟ್ ಮಾಡುವಲ್ಲಿ, ಪಕ್ಕದಲ್ಲೇ ಇದ್ದ ಅಂಗಡಿಯಿಂದ ಬ್ರೆಡ್ ಜಾಮ್ ತರಿಸಿ ತಾನೂ ತಿಂದು ಗಂಡನಿಗೂ ಎತ್ತಿಟ್ಟು ಆಫೀಸಿಗೆ ಹೋಗಿದ್ದಳು. ಅವಳು ಆ ಕಡೆ ಹೋದಂತೆ ಇವರು ಎದ್ದು ಸ್ನಾನ ಮುಗಿಸಿ ತಿಂಡಿಗೆಂದು ಕೂತರೆ, ತಟ್ಟೆಯೊಳಗಿನ ಬ್ರೆಡ್ ನೋಡಿ ಸಿಟ್ಟು ನೆತ್ತಿಗೇರಿ ತಟ್ಟೆಯನ್ನು ಎತ್ತಿ ಒಗೆದು, ಅದೇ ಆವೇಶದಲ್ಲಿ ಅವಳಿಗೆ 'hell with your bloody breakfast' ಎಂದು ಮೆಸೇಜ್ ಕುಟ್ಟಿದ್ದರು. ಅಷ್ಟಕ್ಕೇ ಸುಮ್ಮನಾಗದೇ ಅಡುಗೆ ಮನೆಯ ಅಷ್ಟೂ ಪಾತ್ರೆಗಳನ್ನು ಎತ್ತಿ ಬಿಸಾಕಿದ್ದರು.

ರಾತ್ರಿ ಕೆಲಸ ಮುಗಿಸಿ ಧುಮುಗುಟ್ಟುತ್ತಲೇ ಬಂದ ಅವಳು ಮನೆಯ ದುರವಸ್ಥೆಯನ್ನು ನೋಡಿ ಸ್ಪೋಟಿಸಿಬಿಟ್ಟಳು. ಒಂದು ಕಡೆಯಲ್ಲಿ ತಾನು ಮೇಲೇರದಂತೆ ಕಾಲೆಳೆಯುವ ಸಹೋದ್ಯೋಗಿಗಳು, ಇನ್ನೊಂದು ಕಡೆ ಬಾಸ್ ಕಿರಿಕಿರಿ, ಮತ್ತೊಂದೆಡೆ ಅಂದುಕೊಂಡದ್ದನ್ನು ಸಾಧಿಸಲಾಗುತ್ತಿಲ್ಲ ಅನ್ನುವ ಅಸಹನೆ, ಇತ್ತ ದಿನದಿನಕ್ಕೂ ಕುರುಕ್ಷೇತ್ರವಾಗುತ್ತಿರುವ ಮನೆ. ಅಡುಗೆ, ಕ್ಲೀನಿಂಗ್ ಅಂತ ಎರಡು ದಿನಗಳಿಗೊಮ್ಮೆಯಾದರೂ ಮನೆಯಲ್ಲಿ ಕೋಲಾಹಲ ನಡೆಯುತ್ತಲೇ ಇತ್ತು. ಒಂದೆಡೆ ವೃತ್ತಿ ಬದುಕಿನ ಒತ್ತಡ, ಇನ್ನೊಂದೆಡೆ ವೈಯಕ್ತಿಕ ಬದುಕಿನ ಏರು ಪೇರು ಎರಡನ್ನೂ ನಿಭಾಯಿಸಲಾಗದೆ ತಾನು ಸೋಲುತ್ತಿದ್ದೇನೇನೋ ಅನ್ನಿಸಿ ಎಂದೂ ಸೋಲೊಪ್ಪಿಕೊಳ್ಳಲು ಸಿದ್ಧಳಿಲ್ಲದ ಆಕೆ ಬದುಕೇ ಬೇಡ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಳು. ಅದರ ನೇರ ಪರಿಣಾಮವೇ ಈ ಆತ್ಮಹತ್ಯೆ ಯತ್ನ.

ಆದರೆ ಇಷ್ಟೆಲ್ಲಾ ಯೋಚಿಸಿದರೂ, ನನಗೆಲ್ಲೋ ಇಡೀ ಕಥೆಯಲ್ಲಿ ಕೊಸರು ಕಾಣಿಸುತ್ತಿತ್ತು. ಕೇವಲ ಒಂದು ಮೆಸೇಜ್‍ಗೆ, ಮನೆ ಅಸ್ತವ್ಯಸ್ತವಾಗಿದೆ ಅನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲೆಯಲ್ಲವಲ್ಲ ಅವಳು ಅಂತ ಅನ್ನಿಸುತ್ತಿತ್ತು. ಮತ್ತೂ ಒಂದಿಷ್ಟು ಕೆದಕಿದಾಗ ಅವರು "ಮೆಸೇಜ್ ಮಾತ್ರ ಮಾಡಿದ್ದಲ್ಲ, ಕೆಲಸ ಮುಗಿಸಿ ಬರುವಾಗ ನಾನು ಸ್ವಲ್ಪ ಕುಡಿದಿದ್ಧೆ. ಅಲ್ಲಲ್ಲಿ ಬಿದ್ದಿದ್ದ ಪಾತ್ರೆಗಳನ್ನು, ಚೆಲ್ಲಾಪಿಲ್ಲಿಯಾಗಿದ್ದ ಮನೆಯ ಅಷ್ಟೂ ವಸ್ತುಗಳನ್ನು ಇದ್ದಲ್ಲೇ ಬಿಟ್ಟು ಆಕೆ ತನ್ನ ಲ್ಯಾಪ್‍ಟಾಪ್ ಬಿಡಿಸಿ ಕೂತಿದ್ದಳು. ಬೆಳಗ್ಗಿನ ಅರೆಹೊಟ್ಟೆಯ ಸಿಟ್ಟು ಬೇರೆ ನನ್ನೊಳಗಿತ್ತು. ಅತ್ತಿತ್ತ ನೋಡದೆ ಅವಳ ಮಡಿಲಲ್ಲಿದ್ದ ಲ್ಯಾಪ್‍ಟಾಪನ್ನು ಕುಕ್ಕಿಬಿಟ್ಟೆ. ಅಷ್ಟು ಮಾತ್ರ ಅಲ್ಲದೆ, ನಿನ್ನ ಹೊರತು ಪಡಿಸಿ ಇನ್ಯಾರನ್ನೇ ಮದುವೆ ಆಗಿದ್ರೂ ನಾನು ಸುಖವಾಗಿರುತ್ತಿದ್ದೆ. ಆದ್ರೆ ನನ್ನ ಹಣೆಬರಹದಲ್ಲಿ ಸುಖ ಪಡುವ ಯೋಗವೇ ಬರೆದಿಲ್ಲ ಅಂದ್ರೆ ಯಾರು ಏನು ಮಾಡೋಕೆ ಆಗುತ್ತೆ? ಅಪ್ಪ ಅಮ್ಮನ ಮಾತು ಕೇಳ್ದೆ ತಪ್ಪು ಮಾಡ್ಬಿಟ್ಟೆ ಅಂತಂದು ರೂಮಿನ ಬಾಗಿಲು ಹಾಕಿ ಮಲಗಿದ್ದೆ. ಅದ್ಯಾವ ಹೊತ್ತಿನಲ್ಲಿ ಆಕೆ ಮನೆ ಬಿಟ್ಟು ಊರಿಗೆ ಬಂದ್ಳೋ ಗೊತ್ತಿಲ್ಲ. ನಾನು ಮಾಡಿದ್ದು ತಪ್ಪು ಎಂದು ಗೊತ್ತಾಗುವಾಗ, ಕುಡಿದಿದ್ದರ ಅಮಲು ಇಳಿಯುವಾಗ ಆಕೆ ಮನೆಯಲ್ಲಿರಲಿಲ್ಲ. ಮುಂದೇನು ಅಂತ ಯೋಚಿಸುತ್ತಾ ಕುಳಿತಿದ್ದಾಗ ಮಾವ ಕರೆ ಮಾಡಿ ಇಲ್ಲಿವಳು ನಿದ್ರೆ ಮಾತ್ರೆ ಕುಡಿದ ವಿಷಯ ತಿಳಿಸಿದರು. ತಕ್ಷಣವೇ ಹೊರಟು ಬಂದೆ" ಎಂದು ಮತ್ತೆ ಮೌನವಾದರು.

ಐದು ವರ್ಷಗಳ ಕಾಲ ಪ್ರೀತಿಸಿ, ಪರಸ್ಪರರನ್ನು ಅರ್ಥ ಮಾಡಿಕೊಂಡು ಅಥವಾ ಹಾಗೆಂದು ಭ್ರಮಿಸಿ, ಕೇವಲ ಆರು ತಿಂಗಳುಗಳ ಹಿಂದೆಯಷ್ಟೇ ಮನೆಯವರನ್ನು ಕಾಡಿ ಬೇಡಿ, ಅದು ಆಗದೇ ಇದ್ದಾಗ ಎದುರಿಸಿ, ಬೆದರಿಸಿ ಮದುವೆಯಾಗಿದ್ದವರವರು. ಪ್ರೀತಿ ಮತ್ತು ಮದುವೆಯ ಸಂಕ್ರಮಣ ಕಾಲದಲ್ಲಿ ಆಕೆ, ಕೃಷ್ಣನ ಕೊಳಲಿಗೆ ತಾನೇ ನೇಯ್ದ ಕುಚ್ಚು ಕಟ್ಟುವ ರಾಧೆಯಷ್ಟೇ ಮಧುರವಾಗಿ "ದುರ್ಬೀನು ಹಾಕಿ ಹುಡುಕಿದರೂ ಇವನಿಗಿಂತ ಒಳ್ಳೆಯ ಗಂಡ ಸಿಗಲಾರ" ಅನ್ನುತ್ತಿದ್ದಳು. ಅವರಾದರೂ ಅಷ್ಟೆ, "ಇವಳಿಗಿಂತ ಮೀರೆಯಿಲ್ಲ" ಎಂದು ಸಿಹಿ ಸಿಹಿಯಾಗಿ ಕೊಂಡಾಡುತ್ತಿದ್ದರು. ಆದರೆ ಮದುವೆಯಾದ ಆರು ತಿಂಗಳಲ್ಲಿ ಈ ಪರಿ ಬದಲಾವಣೆ! ಅದೂ ಒಬ್ಬರನೊಬ್ಬರನ್ನು ಭರಿಸಲಾಗದಷ್ಟು ಬದುಕು ದುರ್ಭರವಾಗಿಬಿಡ್ತಾ?

ಯಾಕೋ ನನಗೆ ತಕ್ಷಣ ನೆನಪಿಗೆ ಬಂದದ್ದು, ಅದ್ಯಾವುದೋ ಊರಿನಿಂದ ಬದುಕು ಕಟ್ಟಿಕೊಳ್ಳಲೆಂದು ಇಲ್ಲಿಗೆ ಬಂದು ಮಡಕೆ ಮಾಡಿ, ಮಾರಿ ಜೀವಿಸುವ ಕುಂಬಾರ ಕುಟುಂಬ. ಪ್ರತಿ ತಿಂಗಳ ಕೊನೆಯ ಭಾನುವಾರ ಮನೆಮನೆಗೆ ಮಡಕೆ ಮಾರಲೆಂದು ಬರುವ ಮುನಿಯಮ್ಮ, ಮಡಕೆ ಕೊಂಡರೂ, ಕೊಳ್ಳದಿದ್ದರೂ ಎಲೆ ಅಡಕೆ ಮೆಲ್ಲುತ್ತಾ ಒಂದೆರಡು ನಿಮಿಷವಾದರೂ ಮಾತಿಗೆ ಕೂರುತ್ತಾರೆ. ಊಟ ಆಯ್ತಾ? ಊಟ ಮಾಡ್ತೀರಾ? ಅಂತ ಪ್ರತಿ ಸಲ ಕೇಳುವಾಗ್ಲೂ 'ಇಲ್ರವ್ವ, ಗಂಜಿಗೆ ನೀರು ಇಟ್ಬಿಟ್ಟು ಬಂದಿದ್ದೀನಿ, ನಾ ವೋಗೋದ್ರೊಳಗೆ ಸಾರು ಮಾಡಿಡ್ತಾನೆ. ವೋಗಿ ಒಟ್ಗೆ ಉಣ್ತೀವಿ' ಅಂತ ಅನ್ನುತ್ತಾರೆ. ಆಗೆಲ್ಲಾ ನನಗೆ, ಟಿ.ವಿ.ಸ್ಟುಡಿಯೋಗಳಲ್ಲಿ ನಡೆಯುವ ಅತಿರೇಕದ ಸಮಾನತೆಯ ಚರ್ಚೆ, ಸ್ತ್ರೀ ಸ್ವಾತಂತ್ರ್ಯದ ಬಗೆಗಿನ ವಾದಗಳು, ನಗ್ನತೆಯೇ ಸ್ವಾತಂತ್ರ್ಯದ ಪರಮಾವಧಿ ಎಂದು ಸಾರುವ ದೀಪಿಕಾಳ ಮೈ ಚಾಯ್ಸ್... ಇವ್ಯಾವೂ ಗೊತ್ತೇ ಇಲ್ಲದ ಈ ಮುನಿಯಮ್ಮ ನಮ್ಮೆಲ್ಲರಿಗಿಂತಲೂ ಹೆಚ್ಚು ಸ್ವಾಭಿಮಾನಿ ಮತ್ತು ಸ್ವತಂತ್ರ ವ್ಯಕ್ತಿತ್ವ ಇರುವವಳು ಅನಿಸುತ್ತದೆ. ತಾನು ಸ್ವತಂತ್ರೆ ಅಂತ ಅನ್ನುತ್ತಲೇ ತನ್ನೊಳಗಿನ ಅಷ್ಟೂ ಅಸಹಾಯಕತೆಗಳನ್ನು ಸೋಗಿನ ಮುಖವಾಡದೊಳಗೆ ಮುಚ್ಚಿಟ್ಟು ಬದುಕುವ ನಮ್ಮಂತವರಿಗಿಂತ ಇದ್ದುದನ್ನು ಇದ್ದಂತೆ ಹೇಳಬಲ್ಲ ಛಾತಿ ಇರುವ ಆಕೆಯೇ ಹೆಚ್ಚು ಪ್ರಾಮಾಣಿಕಳು ಅಂತ ಅನಿಸುತ್ತದೆ.

ಈಗ ಅರ್ಧ ಗಂಟೆಯ ಮುಂಚೆಯಷ್ಟೇ ಐ.ಸಿ.ಯುನಿಂದ ಹೊರಬಂದ ಡಾಕ್ಟರ್ she is alright ಅಂದ್ರು. ಅವಳನ್ನೀಗ ನೋಡಬಹುದಾ ಸರ್ ಎಂದು ಕೇಳುವಷ್ಟರಲ್ಲಿ ಕೈಲಿದ್ದ ಮೊಬೈಲ್ ವೈಬ್ರೇಟ್ ಆಗಿತ್ತು.  ನನ್ನ ಟ್ಯಾಗ್ ಮಾಡಿದ್ದ ಯಾರದೋ ಫೇಸ್‍ಬುಕ್ ಅಪ್ಡೇಟ್‍ಗೆ ಮತ್ತಿನ್ಯಾರೋ ಕಮೆಂಟಿಸಿದ್ದರು. ಆ ಹೊತ್ತಲ್ಲೂ ಕಣ್ಣು ಮೊಬೈಲ‍ನಲ್ಲೇ ಕೀಲಿಬಿಟ್ಟಿತು. ನೋಡಿದರೆ ಇದೇ ಗೆಳತಿ ಮೂರು ದಿನಗಳ ಹಿಂದೆಯಷ್ಟೇ ಯಾವುದೋ ಹಿಲ್‍ಸ್ಟೇಷನ್‍ನಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿ 'Life is so beautiful' ಎಂದು ಸ್ಟೇಟಸ್ ಬರೆದುಕೊಂಡಿದ್ದಳು. ಇಲ್ಲೀಗ ಅದೇ ಬ್ಯೂಟಿಫುಲ್ ಲೈಫ್ ಐ.ಸಿ.ಯು ಒಳಗಡೆ ಒದ್ದಾಡುತ್ತಿದೆ.

ತಾನು 'ಪರಮ ಸುಖಿ' ಅನ್ನುವ ಅಪ್ಪಟ ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಜಗತ್ತಿಗೇ ಸಾರಬೇಕಾದ ಅನಿವಾರ್ಯತೆ ಸೃಷ್ಟಿಸಿರುವ ಸೋಶಿಯಲ್ ಮೀಡಿಯಾಗಳ ವರ್ಚುವಲ್ ಜಗತ್ತು ಮತ್ತು ಅಣತಿ ದೂರದಿಂದಷ್ಟೇ ಸಾವಿನಿಂದ ತಪ್ಪಿಸಿಕೊಂಡ ಗೆಳತಿ ಐ.ಸಿ.ಯು ಒಳಗಡೆ. ಎಲ್ಲಕ್ಕಿಂತ ಮುಖ್ಯವಾಗಿ ವರ್ಚುವಲ್ ಜಗತ್ತಿನ ನಿಷ್ಠುರತೆ, ಕಠೋರತೆಯ ಕುರಿತು ಮಾತಾಡುತ್ತಲೇ ಇದೇ ಆಸ್ಪತ್ರೆಯ ನಿರ್ಜನ ಕಾರಿಡಾರಲ್ಲಿ ಕೂತು ಅಂಕಣಕ್ಕಾಗಿ ಟೈಪಿಸುತ್ತಿರುವ ನಾನು... ಹೃದಯಸ್ಪರ್ಶಿ ಸಂವೇದನೆಗಳು ಮತ್ತೆಂದೂ ಸಹಜತೆಯತ್ತ ಮರಳದಷ್ಟು ಡಿಜಿಟಲೀಕರಣವಾಗಿಬಿಟ್ಟಿದೆಯೇನೋ...?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ