ಶನಿವಾರ, ಫೆಬ್ರವರಿ 18, 2017

ಒಳ್ಳೆಯವರಾಗಿರುವುದು ಅಂದ್ರೇನು?

'ಅವನು/ಳು ತುಂಬಾ ಒಳ್ಳೆಯವನು/ಳು' ಅಂತೆಲ್ಲಾ ನಾವು ಯಾರದೋ ಬಗ್ಗೆ ಮಾತಾಡುತ್ತಿರುತ್ತೇವೆ. ಅಂತಹವರು, 'ದೇಹೀ' ಎಂದು ಕೈ ಚಾಚಿದ ಯಾರಿಗೂ ಯಾವತ್ತೂ ಇಲ್ಲ ಅನ್ನುವುದಿಲ್ಲ, ಒಂದೇ ಒಂದು ಕ್ಷಣಕ್ಕೂ ಯಾರ ಮೇಲೂ ಸಿಟ್ಟಾಗುವುದಿಲ್ಲ, ದ್ವೇಷ ಅನ್ನುವ ಭಾವನೆಯನ್ನೇ ತನ್ನತ್ತ ಸುಳಿಯಲೂ ಬಿಡುವುದಿಲ್ಲ‌, ಮಧ್ಯ ರಾತ್ರಿ ಎಬ್ಬಿಸಿ ಸಹಾಯ ಕೇಳಿದರೂ ಮುಖಕ್ಕೆ ತಣ್ಣೀರು ಚಿಮುಕಿಸಿ ಉಟ್ಟ ಬಟ್ಟೆಯಲ್ಲೇ ಸಹಾಯಕ್ಕೆಂದು ಧಾವಿಸುತ್ತಾರೆ, ತನ್ನಿಂದ ತಪ್ಪೇ ಆಗದಿದ್ದರೂ ಕೈ ಮುಗಿದು ಕ್ಷಮೆ ಕೇಳುತ್ತಾರೆ, ತನ್ನನ್ನು ನೋಯಿಸಿದವರನ್ನೂ ತುಂಬಾ ಸುಲಭವಾಗಿಯೇ ಕ್ಷಮಿಸುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರೆಲ್ಲಾ 'ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಪ್ರೀತಿಸುತ್ತಾರೆ' ಎಂಬಂತಿರುತ್ತಾರೆ ಅಥವಾ ಹಾಗಂದುಕೊಂಡು ತಮ್ಮನ್ನೇ ಮೋಸಮಾಡಿಕೊಳ್ಳುತ್ತಿರುತ್ತಾರೆ.

ಆದರೆ ನಿಜಕ್ಕೂ ಒಳ್ಳೆಯತನವೆಂದರೇನು? ಒಳ್ಳೆಯವರಾಗಿರುವುದು ಅಂದ್ರೇನು? ಒಳ್ಳೆಯತನದ ಮಾನದಂಡಗಳಾವುವು? ಒಳ್ಳೆಯದನ್ನೂ ಕೆಟ್ಟದನ್ನೂ ಅಳೆಯುವ ಮಾನದಂಡ ಯಾವುದು? ಈ ಯಾವ ಪ್ರಶ್ನೆಗಳಿಗೂ 'ಇದಮಿತ್ಥಂ' ಅನ್ನುವ ಯಾವ ಉತ್ತರವೂ ದೊರೆಯುವುದಿಲ್ಲ.

ಪ್ರತಿ ಬಾರಿ ಮನುಷ್ಯ ದೇವರಾಗಹೊರಟಾಗೆಲ್ಲಾ ಅವನ ಸಹಜತೆ ಕಳೆದುಕೊಳ್ಳುತ್ತಾನೆ. ಅರಿಷಡ್ವರ್ಗಗಳನ್ನು ಗೆಲ್ಲುತ್ತೇನೆ ಅನ್ನುವ ಅಹಂನಲ್ಲಿ, ಭ್ರಮೆಯಲ್ಲಿ ತನ್ನನ್ನು ತಾನೇ ಸೋಲಿಸಿಕೊಳ್ಳುತ್ತಿರುತ್ತಾನೆ. ಪ್ರತಿಕ್ಷಣವೂ ಸ್ಥಿತಪ್ರಜ್ಞನಾಗಿಯೇ ಇರುತ್ತೇನೆ ಅನ್ನುವ ಹುಂಬತನದಲ್ಲಿ ಆ ಕ್ಷಣದ ಅಚ್ಚರಿಗಳನ್ನು, ಆನಂದಗಳನ್ನು ತನಗರಿವಿಲ್ಲದೇ ಕಳೆದುಕೊಳ್ಳುತ್ತಿರುತ್ತಾನೆ.

ಪ್ರಪಂಚದ ದೃಷ್ಟಿಯಲ್ಲಿ ತೀರಾ 'ಒಳ್ಳೆಯವರು' ಅನ್ನಿಸಿಕೊಂಡವರು, 'ಯಾರ ಮನಸ್ಸನ್ನೂ ಒಂದು ಕ್ಷಣಕ್ಕೂ ನೋಯಿಸದವರು', 'ಸಮಚಿತ್ತರು' ಅಂತೆಲ್ಲಾ ಅನ್ನಿಸಿಕೊಂಡವರಿರುತ್ತಾರಲ್ಲಾ ಅಂತಹವರ ಅಂತರಂಗಕ್ಕೊಮ್ಮೆ ಇಳಿದು ನೋಡಬೇಕು. ಮೇಲೆ ಮೇಲೆ ಎಲ್ಲಾ ಸರಳವಾಗಿದೆ, ಸುಲಲಿತವಾಗಿದೆ ಎಂದೇ ಅನಿಸುತ್ತದೆ. ಗಳಿಸಿದ ಸ್ನೇಹ, ಪ್ರೀತಿ, ಉಳಿಸಿಕೊಂಡ ಸಂಬಂಧ, ಎಂದೂ ಕುಸಿದು ಹೋಗಲಾರರು ಅನ್ನುವಂತಹ ಗಟ್ಟಿ ವ್ಯಕ್ತಿತ್ವ, ಸುಲಭವಾಗಿ ಸೋಲದ ಆತ್ಮವಿಶ್ವಾಸ... ಇವೆಲ್ಲವನ್ನು ಮೀರಿಯೂ ಹೇಳಿಕೊಳ್ಳಲಾಗದ ಅಸಹಾಯಕತೆ, ಒಂದು ಪುಟ್ಟ ಅಭದ್ರತೆ, ಯಾವಾಗ ಏನಾಗುತ್ತದೋ ಅನ್ನುವ ಅನುಮಾನ, ಒಳ್ಳೆಯತನದ ಪೊರೆ ಎಲ್ಲಿ ಕಳಚಿಬೀಳುತ್ತದೋ ಅನ್ನುವ ದಿಗಿಲು ಸದಾ ಕಾಡುತ್ತಿರುತ್ತದೆ.

ಆ ದಿಗಿಲೇ, ಅನುಮಾನವೇ, ಅಭದ್ರತೆಯೇ, ಅಸಹಾಯಕತೆಯೇ ಬದುಕಿನ ಪುಟ್ಟ ಪುಟ್ಟ ಖುಶಿಗಳನ್ನು, ಕೆಲವು ಉತ್ಕಟ ಸಂಭ್ರಮಗಳನ್ನು ಅನುಭವಿಸಲು, ತುಂಟತನದ ಪರಮಸೀಮೆಗಳನ್ನು ತಡವುವಲ್ಲಿ ತೊಡರುಗಾಲಾಗುತ್ತದೆ. ಕೊನೆಗೊಂದು ದಿನ ಬದುಕಿನೊಂದಿಗಿನ ಬಯಕೆಗಳೆಲ್ಲಾ ಸತ್ತು ತೋರಿಕೆಯ ನಗುವಿನ ನೀರಸ ದಿನಚರಿಯಾಗಿಬಿಡುತ್ತದೆ ಜೀವನ.

ಹಾಗೆಂದ ಮಾತ್ರಕ್ಕೆ ಬದುಕು ಬರಿ ಸ್ವಾರ್ಥಭರಿತವಾಗಿರಬೇಕು, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬಾರದು, ತನ್ನ ಖುಶಿಯೊಂದೇ ಬದುಕಿನ ಪರಮ ಗುರಿಯಾಗಿರಬೇಕು ಎಂದಲ್ಲ. ಹೊರಡಲು ಇನ್ನೂ ಅರ್ಧ ಗಂಟೆ ಇರುವ ಬಸ್ಸಿನಲ್ಲಿ ಕೂತು ತೂಕಡಿಸುತ್ತಿರುವಾಗ ಕೋಲೂರುತ್ತಾ ಅದ್ಯಾವುದೋ ಮನಕಲುಕುವ ಹಾಡು ಹಾಡುತ್ತಾ ಭಿಕ್ಷೆಗೆ ಬಂದ ಅದ್ಭುತ ಕಂಠದ ಅಂಧನ ಮೈ ದಡವಿ ಮನೆಗೆ ಕರೆತಂದು ಅಕ್ಕರೆಯಿಂದ ಊಟ ಹಾಕಿ ಅವನಲ್ಲಿನ ಪ್ರತಿಭೆಗೆ, ಕಂಠಕ್ಕೆ ಒಂದು ವೇದಿಕೆ ಒದಗಿಸಿ ಅವನ ಬದುಕಿಗೆ ದಾರಿ ದೀಪವಾಗುವುದು ಒಳ್ಳೆಯತನ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಣ್ಣಿನ ಶಸ್ತ್ರಕ್ರಿಯೆ ಮಾಡಿಸಿ ಅವನಿಗೆ ದೃಷ್ಟಿ ಕೊಡಿಸುವುದೂ ಒಳ್ಳೆಯತನವೇ. ಆದರೆ ಬಸ್ ಸ್ಟಾಂಡಿನಲ್ಲಿ, ನಿಂತ ನಿಲುವಿನಲ್ಲೇ ತನ್ನದೇ ಒಂದು ಕಣ್ಣನ್ನು ಕಿತ್ತು ಅವನಿಗೆ ಕೊಡುವುದಿದೆಯಲ್ಲಾ ಅದು ಶುದ್ಧ ಅವಿವೇಕ ಮತ್ತು ಅತಿರೇಕ.

ಇಷ್ಟಕ್ಕೂ ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಪ್ರೀತಿಸಲು, ಪೊರೆಯಲು ದೇವನೊಬ್ಬನಿಂದ ಮಾತ್ರ ಸಾಧ್ಯ. ಈ ಸಣ್ಣ ಅರಿವನ್ನೂ ಮೀರಿ ಮನುಷ್ಯ ಮಾತ್ರನಾದವನೊಬ್ಬ ತಾನು ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಪ್ರೀತಿಸುತ್ತೇನೆ ಅನ್ನುತ್ತಿರುತ್ತಾನೆ, ಅಂದುಕೊಳ್ಳುತ್ತಿರುತ್ತಾನೆ ಅಂದರೆ ಅವನೊಬ್ಬ ಅಪ್ರಾಮಾಣಿಕ ಅಷ್ಟೇ.

ಮತ್ತು ಅಷ್ಟು ಮಾತ್ರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ