ಬುಧವಾರ, ಡಿಸೆಂಬರ್ 28, 2016

ಬದುಕು ಕಳೆಕಟ್ಟುವುದು ಕತ್ತಲು ಬೆಳಕುಗಳ ಅಸ್ಪಷ್ಟ ನೆರಳಿನಲ್ಲೇನೋ?

ಬೆಳಕಿನ ಮರಣದ ಮರುಘಳಿಗೆಯೇ ಕತ್ತಲು ಹುಟ್ಟಿಕೊಳ್ಳುತ್ತದೆ. ನೀವೇನೋ ಅದು ಕತ್ತಲಲ್ಲ, ಮಬ್ಬುಗತ್ತಲು ಅನ್ನುತ್ತೀರೇನೋ? ಆದರೆ, ಮಬ್ಬುಗತ್ತಲೂ ಕತ್ತಲೇ ಅಲ್ಲವೇ? ಇಷ್ಟಕ್ಕೂ ನಾನು ಕತ್ತಲಿಗಿಂತಲೂ ಹೆಚ್ಚು ಭಯ್ಪಟ್ಟುಕೊಳ್ಳುವುದು ಮಬ್ಬುಗತ್ತಲಿಗೇ. ಮುಸ್ಸಂಜೆಯಾಗುತ್ತಿದ್ದಂತೆ ಅದರ ಮ್ಲಾನತೆ ಎಲ್ಲಿ ನನ್ನೊಳಗೂ ಆವರಿಸುತ್ತದೇನೋ ಅನ್ನುವ ದಿಗಿಲಿಗೆ ಬಿದ್ದುಬಿಡುತ್ತೇನೆ. ಎಲ್ಲಿ ಕತ್ತಲಿನ ಉನ್ಮತ್ತತೆ ಬೆಳಕನ್ನು ಇಡಿಇಡಿಯಾಗಿ ನುಂಗಿಬಿಡುತ್ತದೋ ಅನ್ನುವ ಭಯವದು.

ಕತ್ತಲು-ಬೆಳಕಿನ ನಡುವಿರುವುದು ಒಂದು ಕ್ಷಣದ ಒಂದು ಪುಟ್ಟ ಭಾಗವಷ್ಟೆ. ಕತ್ತಲೆಂಬ ವಿಪ್ಲವಕ್ಕೆ ಮುಖಾಮುಖಿಯಾದಾಗೆಲ್ಲಾ ನನ್ನ ಕಾಡುವುದು ನಿರ್ಮಲ ಬಾಲ್ಯ ಮತ್ತದರ ಒಡಲಲ್ಲಿ ಸಿಂಬಿ ಸುತ್ತಿ ಮಲಗಿರುವ ಅಜ್ಜನ ಮರಣವೆಂಬ ಕರಾಳ ಕಾರ್ಕೋಟ.

ನಾಡ ಹೆಂಚಿನ ಸಂದುಗಳಿಂದ ಮನೆಯೊಳಗೆ ತೂರಿ ಬರುತ್ತಿದ್ದ ಬಿಸಿಲುಕೋಲು, ಅದರ ಪೂರ್ತಿ ನರ್ತಿಸುತ್ತಿದ್ದ ಧೂಳಕಣಗಳು, ಮನೆ ಎದುರಿಗಿದ್ದ ಎರಡು ಬೃಹತ್ ಗಾತ್ರದ ಹಲಸಿನ ಮರ, ಬೇಲಿ ತುಂಬಾ ಅರಳುತ್ತಿದ್ದ ಕಾಗದದ ಹೂವು, ಛಾವಣಿಯಲ್ಲಿ ಗೂಡು ಕಟ್ಟುತ್ತಿದ್ದ ಗುಬ್ಬಚ್ಚಿ,  ಹೆಸರು ಗೊತ್ತಿಲ್ಲದ ಒಂದಿಷ್ಟು ಹಕ್ಕಿಗಳು, ಸದಾ ಸೋಜಿಗವನ್ನುಂಟು ಮಾಡುತ್ತಿದ್ದ ಅಳಿಲು, ಕಲ್ಪಿಸಿಕೊಂಡಷ್ಟೂ ಹಿಗ್ಗುತ್ತಿದ್ದ ಆಕಾಶದ ವಿಶಾಲತೆ, ಕಪಾಟಿನ ಪೂರ್ತಿ ತುಂಬಿಕೊಂಡಿದ್ದ ಅಜ್ಜನ ದಪ್ಪ-ದಪ್ಪ ಪುಸ್ತಕಗಳು, ಪಕ್ಕದಲ್ಲಿದ್ದ ಸ್ಟ್ಯಾಂಡ್ನಲ್ಲಿ ಅಚ್ಚುಕಟ್ಟಾಗಿ ಜೋಡಿಸಿಡುತ್ತಿದ್ದ ಉದಯವಾಣಿ, ಸುಧಾ, ಮಯೂರ, ತುಷಾರ, ಕರ್ಮವೀರ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳು, ಆಗಾಗ ಅಜ್ಜ-ಅಜ್ಜಿಯ ಮಧ್ಯೆ ಸುಧಾ ಶ್ರೇಷ್ಠವೆಂದೋ ಇಲ್ಲ ಕರ್ಮವೀರ ಶ್ರೇಷ್ಠವೆಂದೋ ನಡೆಯುತ್ತಿದ್ದ ಹುಸಿ ಜಗಳಗಳು, ಆರು ತಿಂಗಳುಗಳಿಗೊಮ್ಮೆ ಊರಿಗೆ ಬರುತ್ತಿದ್ದ ಮಾವ ಅಷ್ಟೂ ತಿಂಗಳುಗಳ ಸುಧಾವನ್ನು ಒಂದೆರಡು ದಿನಗಳಲ್ಲಿ ಓದಿ ಮುಗಿಸಲು ಪಡುತ್ತಿದ್ದ ಪರಿಪಾಡಲು, ಇನ್ನೂ ಶಾಲೆಗೆ ಹೋಗಲು ಪ್ರಾರಂಭಿಸುವ ಮುನ್ನವೇ ಅಜ್ಜ ಮಾಡಿಸಿದ್ದ ಅಕ್ಷರ ಪರಿಚಯ, ಹೇಳುತ್ತಿದ್ದ ನೀತಿ ಕಥೆಗಳು, ಇಸ್ಲಾಮಿಕ್ ಚರಿತ್ರೆಯ ತುಣುಕುಗಳು, ಪೌರಾಣಿಕ ಕಥೆಗಳು, ನನ್ನ ಮತ್ತು ಅಣ್ಣನ ಹುಡುಗು ಪ್ರಶ್ನೆಗಳಿಗೆ, ನಮ್ಮ ಅರಿವಿನ ಮಟ್ಟಕ್ಕೆ ಇಳಿದು ಉತ್ತರಿಸುತ್ತಿದ್ದ ಅವರ ತಾಳ್ಮೆ, ಮುಸ್ಸಂಜೆಯಾಗುತ್ತಿದ್ದಂತೆ ಅಚ್ಛ ಬಿಳಿ ಶರ್ಟ್ , ಅಷ್ಟೇ ಬಿಳಿಯ ಲುಂಗಿ, ತಲೆಗೊಂದು ಗಾಂಧಿ ಟೋಪಿ ಧರಿಸಿಕೊಂಡು ಮಸೀದಿಗೆ ಹೋಗುತ್ತಿದ್ದ ಅವರ ಠೀವಿ... ಇವೆಲ್ಲಾ ನನ್ನಲ್ಲಿ ಪ್ರಪಂಚ ಅರಿಯುವ ಮುನ್ನವೇ ಒಂದು ವಿಸ್ಮಯವನ್ನು ಹುಟ್ಟು ಹಾಕಿತ್ತು.

ಮುಂದೆ ಶಾಲೆ, ಮದ್ರಸಗಳಿಗೆ ಹೋಗಲು ಶುರು ಮಾಡಿದಂತೆ ನನ್ನೊಳಗೆ ತೆರೆದುಕೊಂಡದ್ದು ಮತ್ತೊಂದು ಪ್ರಪಂಚದ ವಿಸ್ಮಯ. ಅದೊಂದು ಹಲವು ಸಂಸ್ಕೃತಿ, ಭಾಷೆ, ವಿಭಿನ್ನ ಪರಿಸರಗಳ ಕಲಸುಮೋಲೋಗರ ಅನಿಸುತ್ತಿತ್ತು. ನಮ್ಮಂತೆ ಅವರಿಲ್ಲ ಅಥವಾ ಅವರಂತೆ ನಾವಿಲ್ಲ ಅನ್ನುವ ಕಲ್ಪನೆ ಮೊದಲು ಮೊಳಕೆಯೊಡೆದದ್ದೇ ಶಾಲೆ ಮತ್ತು ಮದ್ರಸಗಳಲ್ಲಿ. ಅಷ್ಟೂ ದಿನಗಳು ಮುದ್ದು ಮಾಡಿಸಿ ಮಾತ್ರ ಗೊತ್ತಿದ್ದ ನಮಗೆ, ಬರೆಯದ ಕಾಪಿ, ಮಾಡದ ಹೋಮ್‍ವರ್ಕ್‍ಗಳಿಗೆ, ಬಾರದ ಮಗ್ಗಿ, ಕಂಠಪಾಠ ಮಾಡದ ಸ್ತೋತ್ರಗಳಿಗಾಗಿ ಶಿಕ್ಷೆ ಇದೆ ಅನ್ನುವುದು ತಿಳಿದಾಗ ಆದ ಅಚ್ಚರಿ ಅಷ್ಟಿಷ್ಟಲ್ಲ.

ಇನ್ನು ಮಳೆಗಾಲದಲ್ಲಿ ಸಂಜೆಯಾಗುತ್ತಿದ್ದಂತೆ ಸುರಿಯುತ್ತಿದ್ದ ಜಿಟಿಜಿಟಿ ಮಳೆ, ಆ ಮಳೆಯಲ್ಲಿ ನೆನೆಯೋ ಸಂಭ್ರಮ, ಮಳೆಗೋಸ್ಕರ ಅಂತಾನೇ ಅಜ್ಜಿ ಎತ್ತಿಡುತ್ತಿದ್ದ ಹಪ್ಪಳ-ಸಂಡಿಗೆ, ಆಗಿನ್ನೂ  SSLC  ಓದ್ತಿದ್ದ ಚಿಕ್ಕಮ್ಮನಿಗೂ ನನಗೂ ಆಗುತ್ತಿದ್ದ ಜಗಳ, ಬಾಲಮಂಗಳದ ಕಥೆಯನ್ನೂ ಓದದೆ ಕೇವಲ ಚಿತ್ರ ಮಾತ್ರ ನೋಡಿ ರಾತ್ರಿಯಾಗುತ್ತಿದ್ದಂತೆ ಕಥೆ ಹೇಳೆಂದು ಪೀಡಿಸುತ್ತಿದ್ದ ಅಣ್ಣ... ಇವುಗಳದ್ದೆಲ್ಲಾ ಒಂದು ತೂಕವಾದರೆ ಮಣ್ಣಿನ ಸೆಳೆತವಿದ್ದ ಆಟಗಳದೇ ಒಂದು ತೂಕ.

ನನ್ನ ಓರಗೆಯ ಹುಡುಗಿಯರೆಲ್ಲಾ ಗೊಂಬೆಗೆ ಫ್ರಾಕ್ ತೊಡಿಸಿ, ಕಪ್ಪು ಸ್ಕೆಚ್ ಪೆನ್ನಿಂದ ಗಲ್ಲದ ಮೇಲೊಂದು ಬೊಟ್ಟಿಟ್ಟು, ಹೂವು ಮುಡಿಸಿ ಸಂಭ್ರಮಿಸುತ್ತಿರುವಾಗ ನಾನು ಮಾತ್ರ ನನಗಿಂತ ದೊಡ್ಡ ಬ್ಯಾಟ್ ಹಿಡಿದು, ಅಡಕೆ ಮರದ ಹಾಳೆಯನ್ನು ಪ್ಯಾಡ್ ಮಾಡಿಕೊಂಡು ಅಂಗಳಕ್ಕಿಳಿದು ಕ್ರಿಕೆಟ್ ಆಡುತ್ತಿದ್ದೆ. ಮನೆಯವರ ಕಣ್ಣು ತಪ್ಪಿಸಿ ಬೇಲಿ ದಾಟಿ ಹೋಗಿ ಅಲ್ಲಿದ್ದ ಪೇರಳೆ ಮರ ಹತ್ತಿ ಹಣ್ಣು ಕೀಳುತ್ತಿದ್ದೆ. ಒಮ್ಮೆ ಯೂಸುಫಾಕನ ಸೈಕಲ್ ಅಂಗಡಿಯಿಂದ (ಮುಂದೆ ಅವರು ಕೋಮುಗಲಭೆಯಲ್ಲಿ ಕೊಲೆಯಾಗಿ ಹೋದ್ರು, ಮನುಷ್ಯ ಮನಸ್ಸಿನ ದಿವಾಳಿತನಕ್ಕೆ ಸಾಕ್ಷಿಯೇನೋ ಎಂಬಂತೆ ಅವರು ಕೊಲೆಯಾದ ಮರುದಿನವೇ ಕೆಲವು ರಾಕ್ಷಸರು ಅವರ ಅಂಗಡಿಗೆ ಹೋಗಿ ಅಲ್ಲಿದ್ದ ಸೈಕಲ್‍ಗಳನ್ನು ಹೊತ್ತುಕೊಂಡು ಹೋಗಿದ್ದರು) ಬಾಡಿಗೆಗೆ ಸೈಕಲ್ ಕಲಿಯಲೆಂದು ತಂದು, ಆಮೇಲೆ ಅವರಿಗೆ ಕೊಡೋಕೆ ಹಣ ಇಲ್ಲದೆ ಒಂದು ದೊಡ್ಡ ರಾದ್ಧಾಂತವೇ ಆಗಿಹೋಗಿತ್ತು. ನನ್ನ ಗೆಳತಿಯರೆಲ್ಲಾ ಉಷಾ ನವರತ್ನರಾವ್, ಸಾಯಿಸುತೆ ಅವರನ್ನು ಓದುತ್ತಿದ್ದಾಗ ನಾನು ರಾಕೆಟ್ ಸೈನ್ಸ್ ಬೆನ್ನು ಬಿದ್ದಿದ್ದೆ, ಲೆನಿನ್, ಚಿಗುವೆರಾರನ್ನು ಓದುತ್ತಿದ್ದೆ. ಆಗೆಲ್ಲಾ ಅಜ್ಜಿ ನನ್ನ ಕೂರಿಸಿಕೊಂಡು ಗಂಟೆಗಟ್ಟಲೆ ಬುದ್ಧಿ ಹೇಳುತ್ತಿದ್ದರು, ಮರ ಹತ್ತೋದು, ಗುಡ್ಡ ತಿರುಗುವುದು ಇವೆಲ್ಲಾ ಹುಡುಗಿಯರಿಗೆ ಹೇಳಿ ಮಾಡಿಸಿದ್ದಲ್ಲ ಅನ್ನುತ್ತಿದ್ದರು. ಕಥೆ, ಕವನ, ಓದು, ಬರಹ ಅಂತೆಲ್ಲಾ  ಆಸಕ್ತಿ ತೋರಿದಾಗಲೂ ಅಷ್ಟೆ, ಅಜ್ಜಿ ಇವೆಲ್ಲಾ ಬೇಡ, ಮುಂದೆ ನಿನಗೇ ಕಷ್ಟ ಆಗುತ್ತೆ ಅಂತ ಅನ್ನುತ್ತಿದ್ದರು.ಆದರೆ ಅಜ್ಜನದು ಮಾತ್ರ ನನ್ನ ಹುಚ್ಚಾಟಗಳಿಗೆಲ್ಲಾ ಮೌನಮುದ್ರೆ. ಕೆಲವೊಮ್ಮೆ ಅಜ್ಜಿ ಬಳಿ ಅವಳು ಅವಳಿಷ್ಟದಂತೆ ಬದುಕಲಿ ಬಿಡು ಅನ್ನುತ್ತಿದ್ದುದೂ ಇದೆ. ನಾನಾದರೂ ಅಷ್ಟೆ, ಬೆಳಗ್ಗಿನಿಂದ ರಾತ್ರಿಯವರೆಗೂ ಅವರ ಹಿಂದೆ ಮುಂದೆ ಸುತ್ತುತ್ತಾ, ಅವರು ಹಾರೆ-ಪಿಕಾಸಿ ಹಿಡಿದು ತೆಂಗಿನ ಮರದ ಬುಡ ಬಿಡಿಸುವಾಗೆಲ್ಲಾ, ನಾನೇನೋ ಅವರಿಗೆ ದೊಡ್ಡ ಉಪಕಾರ ಮಾಡುತ್ತಿದ್ದೇನೆ ಅನ್ನುವ ಭ್ರಮೆಯಲ್ಲಿ ಫೋಸ್ ಕೊಡ್ತಿದ್ದೆ. ಈಗ ಕೂತು ಬಾಲ್ಯದ ಅಷ್ಟೂ ನೆನಪುಗಳನ್ನು ಕೆದಕಿ ನೋಡಿದರೆ, ನನ್ನ ಕಣ್ಣಮುಂದೆ ಬರುವುದು ಅಜ್ಜ ಮತ್ತು ಅಣ್ಣನೊಂದಿಗಿನ ಒಡನಾಟಗಳೇ. ಒಂದರ್ಥದಲ್ಲಿ ನನ್ನ ಬಾಲ್ಯವನ್ನು ಚೆಂದಗಾಣಿಸಿದ್ದೇ ಅವರಿಬ್ಬರು.

ಆದರೆ, ಎಲ್ಲಾ ಒಳ್ಳೆಯದಕ್ಕೂ ಒಂದು ಅಂತ್ಯವಿದೆ ಅನ್ನುವಂತೆ, ಒಂದು ಶುಕ್ರವಾರ, ಬೆಳಗ್ಗಿನ ಜಾವ ಮಸೀದಿ ಮಿನಾರದಿಂದ ಬಾಂಗ್ ಮೊಳಗುತ್ತಿದ್ದಂತೆ, ಅವರು ಎದೆ ಹಿಡಿದು ಕೂತು ಬಿಟ್ಟರು. ಆವತ್ತಿನವರೆಗೆ ಆಸ್ಪತ್ರೆಯ ಹೆಸರು ಹೇಳಿದರೇ ಸಿಡಿಮಿಡಿಗುಡುತ್ತಿದ್ದ ಅಜ್ಜ, ಅವತ್ತು ಮಾತ್ರ ಮಾವನನ್ನು ಕರೆದು, ನನ್ನ ಅಡ್ಮಿಟ್ ಮಾಡಿಸೋ ಅಂದರು. ನಾನು ನಿದ್ದೆಯಿಂದೆದ್ದು ಕಣ್ಣು ಕಣ್ಣು ಬಿಡುತ್ತಿದ್ದರೆ, ಅಣ್ಣ ಇನ್ನೂ ಮಲಗೇ ಇದ್ದ. ತೀರಾ ಆಂಬ್ಯುಲೆನ್ಸ್ ಹತ್ತುವ ಮುನ್ನ ಅವರು, ಮಕ್ಕಳಿಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳಿ ಎಂದು ಮಾವ ಮತ್ತು ಅಜ್ಜಿಗೆ ಹೇಳಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಆಂಬ್ಯುಲೆನ್ಸ್ ಹೊರಡುತ್ತಿದ್ದಂತೆ ನಾನೂ, ಅಣ್ಣ ಇಬ್ರೂ ಹಲಸಿನ ಮರದಡಿಯಲ್ಲಿ ಕೂತು ಅವರ ಬರವನ್ನೇ ನಿರೀಕ್ಷಿಸುತ್ತಿದ್ದೆವು, ಆದರೆ ಬಂದದ್ದು ಮಾತ್ರ ಅವರ ಮರಣದ ವಾರ್ತೆ. ಫೋನೆತ್ತಿದ ಚಿಕ್ಕಮ್ಮ ತಮ್ಮನ್ನು ತಾವೇ ಸಂಭಾಳಿಸಿಕೊಳ್ಳುತ್ತಾ ಅಜ್ಜಿಗೂ ವಿಷಯ ತಿಳಿಸಿದರು, ಹೇಳಲೋ ಬೇಡವೋ ಎಂಬಂತೆ ನಮ್ಮನ್ನೂ ಕರೆದು ಸೂಕ್ಷ್ಮವಾಗಿ ಹೇಳಿ ಒಳಸರಿದರು. ಆಗಿನ್ನೂ ಮಕ್ಕಳೇ ಆಗಿದ್ದ ನಮಗೆ ಸಾವೆಂದರೆ ಎಂತಹ ದಿಗ್ಬ್ರಾಂತಿ ಅನ್ನುವುದು ಪೂರ್ತಿಯಾಗಿ ಅರ್ಥವಾಗಿರಲಿಲ್ಲ. ಆದರೆ ಅರ್ಥ ಆದಾಗ ನನ್ನ ಮಟ್ಟಿಗಂತೂ ಕಾಲ ಪೂರ್ತಿ ಸ್ಥಂಭಿಸಿತ್ತು. ಆಡಿಸುತ್ತಿದ್ದ ಸೂತ್ರಧಾರ ತೊಗಲು ಗೊಂಬೆನಾ ವೇದಿಕೆಯಲ್ಲೇ ಬಿಟ್ಟು ನಿರ್ಗಮಿಸಿದ ಹಾಗಾಗಿತ್ತು ನನ್ನ ಸ್ಥಿತಿ. ಸುತ್ತಲಿನ ಪ್ರಪಂಚದೊಂದಿಗಿನ ಸಂವಹನವನ್ನೇ ಕಡಿದುಕೊಂಡೆ,  ಅಮ್ಮ, ಅಪ್ಪ, ಅಣ್ಣ, ಮಾವಂದಿರು ಎಲ್ಲರೂ ಇದ್ದರೂ ನಾನು ಅನಾಥಳಾಗಿದ್ದೇನೆ ಅನ್ನುವ ಭಾವ ಪದೇ ಪದೇ ಕಾಡುತ್ತಿತ್ತು. ಬದುಕಲ್ಲಿ ಮೊದಲ ಬಾರಿ ಅಭೇದ್ಯ ಕತ್ತಲಿಗೆ ಮುಖಾಮುಖಿಯಾದೆ.

ಇವೆಲ್ಲಾ ಆಗಿ ಹೋಗಿ ಭರಪೂರ ಹದಿನೇಳು ವರ್ಷಗಳೇ ಕಳೆದುಹೋಗಿವೆ. ಈ ಹದಿನೇಳು ವರ್ಷಗಳಲ್ಲಿ ಅವರು ನೆನಪಾಗದ ದಿನಗಳೇ ಇಲ್ಲವೇನೋ? ನನ್ನ ಪ್ರತಿ ಗೆಲುವಲ್ಲೂ, ಪ್ರತೀ ಸೋಲಲ್ಲೂ ಅವರಿದ್ದಾರೆ ಅಂತಾನೇ ಅನ್ನಿಸುತ್ತದೆ ನನಗೆ. ಅವರೊಂದಿಗೆ ನಾನು ಕಳೆದದ್ದು ನನ್ನ ಬದುಕಿನ ಒಂದು ಪುಟ್ಟ ಅವಧಿಯನ್ನಷ್ಟೆ. ಆದ್ರೆ ಅಷ್ಟು ಖುಶಿಯ, ಅಷ್ಟು ಅರ್ಥವತ್ತಾದ ದಿನಗಳನ್ನು ಮತ್ಯಾರ ಜೊತೆಯೂ ಮತ್ತೆಂದೂ ಕಳೆದಿಲ್ಲ. ಅವರು ನನಗೆ ನೀಡಿದ ಕಂಫರ್ಟ್ ಭಾವವನ್ನು ಮತ್ತೆ ನನಗೆ ನೀಡಲು ಮತ್ಯಾರಿಂದಲೂ ಸಾಧ್ಯವಾಗಿಲ್ಲ. ಬಹುಶಃ ಇನ್ನು ಮುಂದಕ್ಕೂ ಯಾರಿಗೂ ಸಾಧ್ಯವಾಗದು ಕೂಡ.

ಈಗೀಗ ಕತ್ತಲೇ ಬೆಳಕಿನ ಬಾಗಿಲು ಅನ್ನುವುದು ಅರ್ಥವಾಗುತ್ತಿದೆ.  ಬದುಕಿನ ಅತ್ಯುತ್ತಮ ಪಾಠಗಳನ್ನು ಕತ್ತಲು ಕಲಿಸಿದಂತೆ ಯಾವ ಬೆಳಕೂ ಕಲಿಸದು ಅನ್ನುವುದು ಅನುಭವಕ್ಕೆ ಬರುತ್ತಿದೆ. ಬೆಳಕು-ಕತ್ತಲುಗಳ ಅಸ್ಪಷ್ಟ ನೆರಳಿನಲ್ಲೇ ಬದುಕು ಕಳೆಕಟ್ಟುವುದೇನೋ ಅನ್ನಿಸುತ್ತ್ತದೆ. ಮರುಕ್ಷಣವೇ "ಕತ್ತಲಿನಿಂದ ಬೆಳಕಿಗೆ, ಬೆಳಕಿನಿಂದ ಕತ್ತಲೆಗೆ ಹೊಂದಿಕೊಳ್ಳಲು ಕಣ್ಣಿಗೆ ಸಮಯ ಬೇಕು" ಅನ್ನುವ ಕವಿವಾಣಿ ನೆನಪಿಗೆ ಬರುತ್ತದೆ. ಹೌದಲ್ವಾ ? ಕತ್ತಲಿಗೆ ಹೊಂದಿಕೊಂಡ ಕಣ್ಣು ಒಂದಿಷ್ಟು ಸಮಯದ ಬಳಿಕವಷ್ಟೇ ಬೆಳಕಿಗೆ ಹೊಂದಿಕೊಳ್ಳುತ್ತದೆ, ಹಾಗೆಯೇ ಬೆಳಕಿಗೆ ಹೊಂದಿಕೊಂಡ ಕಣ್ಣು ಕತ್ತಲೆಗೆ ಹೊಂದಿಕೊಳ್ಳಬೇಕಿದ್ದರೂ ಒಂದಿಷ್ಟು ಸಮಯ ಬೇಡುತ್ತದೆ. ಅದು ಬೆಳಕಿನ ಮಿತಿಯೂ ಹೌದು, ಕತ್ತಲಿನ ಮಿತಿಯೂ ಹೌದು ಮತ್ತು ಇವೆಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮ ದೃಷ್ಟಿಯ ಮಿತಿಯೂ ಹೌದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ