ಶುಕ್ರವಾರ, ಡಿಸೆಂಬರ್ 23, 2016

ಆಯ್ಕೆ ಮಾತ್ರ ನಮ್ಮದೇ.

ಬದುಕು ಕೆಲವೊಮ್ಮೆ ನಿತ್ತರಿಸಿಕೊಳ್ಳಲಾಗದಂತಹ ಏಟುಕೊಟ್ಟು ಕೈತಟ್ಟಿ ನಗುತ್ತಿರುತ್ತದೆ. ನಿನ್ನೆಯವರೆಗೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಅಕಾರಣ ಹೊರದಬ್ಬಲ್ಪಟ್ಟಿರುತ್ತೇವೆ, ಪ್ರಾಣಮಿತ್ರ ಅನ್ನಿಸಿಕೊಂಡವರು ಸುಖಾಸುಮ್ಮನೆ ಮುಖ ತಿರುವಿಕೊಂಡು ನಮ್ಮ ಬದುಕಿನಿಂದ ಎದ್ದು ನಡೆದುಬಿಡುತ್ತಾರೆ, ಉಸಿರಿಗಂಟಿಕೊಂಡಿದ್ದ ಪ್ರೇಮಿ ಸಣ್ಣದೊಂದು ಸುಳಿವೂ ಕೊಡದೆ ತೊರೆದುಬಿಟ್ಟಿರುತ್ತಾನೆ/ಳೆ. ಯಾವ್‍ಯಾವುದೋ ಕಾರಣಕ್ಕೆ ಅಪ್ಪ ಅಮ್ಮ ಮುನಿಸಿಕೊಂಡಿರುತ್ತಾರೆ. ಆಗೆಲ್ಲಾ ಈ ಜೀವನ ಸಾಕು, 'ಅದೇನೋ' ಆಗಬೇಕಾಗಿದ್ದ ನಾನು ಅದಾಗದೇ 'ಇನ್ನೇನೋ' ಆಗಿರುವುದಕ್ಕೇ ಹೀಗಾಗ್ತಿದೆ. ಇವೆಲ್ಲವನ್ನೂ ತೊರೆದು ಯಾರೂ ಇಲ್ಲದ ಒಂಟಿ ದ್ವೀಪದಲ್ಲಿ ಒಬ್ಬಂಟಿಯಾಗಿ ಬದುಕು ಕಳೆಯಬೇಕು ಅಂತೆಲ್ಲಾ ಅನ್ನಿಸತೊಡಗುತ್ತದೆ. ಕಣ್ಣಿಂದ ಜಾರುವ ಒಂದೊಂದು ಹನಿಯೂ ನೂರು ನಿರಾಸೆಯ ಕಥೆಗಳನ್ನು ಹೇಳಲಾರಂಭಿಸುತ್ತವೆ.

ನಿಜ ತಾನೇ?  ನಮ್ಮ-ನಿಮ್ಮೆಲ್ಲರ ಬದುಕಲ್ಲೂ ಇಂತಹ ಒಂದು ಸಂದರ್ಭ ಬಂದೇ ಬರುತ್ತದೆ. ಮಾತಲ್ಲಿ ವಿವರಿಸಲಾಗದ ವಿಷಣ್ಣತೆಯೊಂದು ಮೈಮನ ಪೂರ್ತಿ ಆವರಿಸಿದಂತಹ ಭಾವ ಕಾಡುತ್ತದೆ. ಎಲ್ಲಿ ಕತ್ತಲಿನ ಉನ್ಮತ್ತತೆ ಬದುಕಿನ ಅಷ್ಟೂ ಬೆಳಗುಗಳನ್ನು ಇಡಿ ಇಡಿಯಾಗಿ ನುಂಗಿಬಿಡುತ್ತದೋ ಅನ್ನುವಷ್ಟು ಉದ್ವಿಗ್ನರಾಗುತ್ತೇವೆ. ನಿನ್ನೆಯ ಸುಖವನ್ನೂ, ಇಂದಿನ ನೀರವತೆಯನ್ನೂ ಹೋಲಿಸಿ ನೋಡಿ ಈ ಜೀವನ ಇನ್ಯಾವತ್ತೂ ಹಳಿಗೆ ಮರಳುವುದೇ ಇಲ್ಲವೇನೋ ಅಂತೆಲ್ಲಾ ಅಂದುಕೊಳ್ಳುತ್ತಾ ನಿಟ್ಟುಸಿರು ಬಿಡುತ್ತೇವೆ. ಮನ ಅರಳಿಸುತ್ತಿದ್ದ ಹಸಿರು, ಪರಮ ಪ್ರಿಯ ಏಕಾಂತ, ಹಿತವಾದ ಕವಿತೆ, ನವಿರು ಕಥೆಗಳು, ದಟ್ಟ ಮೌನ, ಸಾಂದ್ರ ನಿಶ್ಯಬ್ದ ಎಲ್ಲಾ ನೀರಸವೆನಿಸತೊಡಗುತ್ತದೆ. ಅದಕ್ಕೆ ಇಂಬುಕೊಡುವಂತೆ,  ಕೆಲಸವನ್ನು ನಂಬಿ ತೆಗೆದ ಬ್ಯಾಂಕ್‌ ಲೋನ್, ಗೆಳೆಯ/ತಿಯೊಂದಿಗೆ ಕಳೆದ ಮಧುರ ಕ್ಷಣಗಳು, ಪ್ರೇಮಿಯ ಜತೆ ಕಂಡ ಕನಸುಗಳೆಲ್ಲಾ  ದಾಂಗುಢಿಯಿಟ್ಟು ಚದುರಿದ ಮನವನ್ನು ಮತ್ತಷ್ಟು ಕದಡಿಬಿಡುತ್ತದೆ.

ಇಂತಹ ಸಂದರ್ಭಗಳಲ್ಲಿ ನಾವು-ನೀವೆಲ್ಲರೂ ಒಂದು ಸಾಮಾನ್ಯ ತಪ್ಪು ಮಾಡಿಬಿಡುತ್ತೇವೆ. ಅಂಗಳದಲ್ಲಿ ಮೂಲೆಯಲ್ಲೊಂದು ಈಸಿ ಛೇರ್ ಹಾಕಿ ಕೂತೋ, ಮರದಡಿಯಲ್ಲಿ ಟವೆಲ್ ಹಾಸಿ ಕೂತೋ, ಧೋ ಎಂದು ಸುರಿವ ಮಳೆಯಲ್ಲಿ ನೆನೆಯುತ್ತಲೋ, ಕಣ್ಣಿಗೆ ಕಾಣದಷ್ಟು ತೆಳುವಾಗಿ ಹರಡಿರುವ ಮಂಜಿಗೆ ಮೈಯೊಡ್ಡಿಯೋ, ಬಿರುಬಿಸಿಲಲ್ಲಿ ಬೆವರುತ್ತಲೋ, ಹಿಂದೆ ಯಾವತ್ತೋ ನಾವು ಮಾಡಿರುವ ಒಳ್ಳೆಯ ಕೆಲಸಗಳನ್ನು ಪಟ್ಟಿ ಮಾಡಿ, ಇಷ್ಟೆಲ್ಲಾ ಒಳ್ಳೆಯದನ್ನು ಮಾಡಿರುವ ನನಗೇಕೆ ಹೀಗಾಯಿತು? ನನ್ನ ಬದುಕೇಕೆ ಹಳಿ ತಪ್ಪಿತು? ಅಂತೆಲ್ಲಾ ಹಳಹಳಿಸತೊಡಗುತ್ತೇವೆ.

ಆ ಪಟ್ಟಿಯಲ್ಲಿ ಊರ ಪ್ರೈಮರಿ ಸ್ಕೂಲ್‍ಗೆ ಹೋಗ್ತಿದ್ದಾಗ ನೀರಿನಲ್ಲಿ ಮುಳುಗುತ್ತಿದ್ದ ಇರುವೆಯ ಪ್ರಾಣ ರಕ್ಷಿಸಿದ್ದಲ್ಲಿಂದ ಪ್ರಾರಂಭವಾಗಿ  ಪಕ್ಕದ ಬೆಂಚಲ್ಲಿ ಕೂರುತ್ತಿದ್ದವಳ ಕಾಲೇಜ್ ಫೀ ಪೇ ಮಾಡಿದ್ದು, ಗೆಳೆಯನ ಅಮ್ಮ ಆಸ್ಪತ್ರೆಯಲ್ಲಿದ್ದಾಗ ಅಲ್ಲೇ ರಾತ್ರಿ ಕಳೆದದ್ದು, ತುಂಬಿ ತುಳುಕಾಡುತ್ತಿದ್ದ ಬಸ್‍ನಲ್ಲಿ ಹಿರಿಯೊಬ್ಬರಿಗೆ ಸೀಟ್ ಬಿಟ್ಟುಕೊಟ್ಟದ್ದು, ರಸ್ತೆಯಲ್ಲಿ ನಡೆಯಲು ಕಷ್ಟಪಡುತ್ತಿದ್ದ ಗರ್ಭಿಣಿಯೊಬ್ಬರನ್ನು ಆಟೋ ಹತ್ತಿಸಿ ಮನೆಗೆ ಕಳುಹಿಸಿಕೊಟ್ಟದ್ದು, ಆಸೆ ಕಂಗಳಿಂದ ಅಂಗಡಿಯ ಎದುರು ತೂಗು ಹಾಕಿದ್ದ ಬ್ರೆಡ್ ನೋಡುತ್ತಿದ್ದ ಹುಡುಗನಿಗೆ ಒಂದಿಡೀ ಪ್ಯಾಕ್ ಬ್ರೆಡ್ ಕೊಡಿಸಿದ್ದು, ಸಿಗ್ನಲ್‍ನಲ್ಲಿ ನಿಂತಾಗೆಲ್ಲಾ ತನ್ನಲ್ಲಾಗಲೇ ಅವತ್ತಿನ ಪತ್ರಿಕೆಯಿದ್ದರೂ ಪೇಪರ್ ಮಾರುವ ಹುಡುಗ/ಗಿಗೆ ಒಂದಿಷ್ಟಾದರೂ ಉಪಯೋಗವಾಗಲಿ ಎಂದು ಪತ್ರಿಕೆ ಕೊಂಡದ್ದು, ಅದ್ಯಾರೋ ತನ್ನದಲ್ಲದ ಗ್ರೂಪಿನ ರಕ್ತ ಬೇಕು ಅಂದಾಗ ಎಲ್ಲೆಲ್ಲೋ ಅಲೆದು ಹೊಂದಿಸಿ ಕೊಟ್ಟದ್ದು ಅನ್ನುವವರೆಗೆ ತನ್ನ ಒಳ್ಳೆಯತನಗಳ ಸಾಲು ಸಾಲೇ ಇರುತ್ತದೆ.

ಆದರೆ ಹಾಗೆ ಪಟ್ಟಿ ಮಾಡುವಾಗೆಲ್ಲಾ ನಾವು ಬದುಕು ಎಲ್ಲಾ ತರ್ಕಗಳನ್ನೂ ಮೀರಿದ ಸತ್ಯ,  ಗಣಿತದ ಯಾವ ಫಾರ್ಮುಲಾಗಳಿಗೂ ನಿಲುಕದ ವಾಸ್ತವ ಅನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಮರೆತುಬಿಡುತ್ತೇವೆ. ಹಿಂದೆ ಯಾವತ್ತೋ ಒಳ್ಳೆಯದು ಮಾಡಿದ್ದೇನೆ, ಈಗ ನನಗೆ ಒಳ್ಳೆಯದೇ ಆಗಬೇಕಲ್ಲವೇ ಅನ್ನುವ ತತ್ವಗಳಾವುವೂ ಬದುಕಿಗೆ ಅನ್ವಯಿಸಲ್ಲ. ನಿನ್ನೆಯ ಒಳ್ಳೆಯತನ, ಹೆಮ್ಮೆಯಿಂದ ಹೇಳಿಕೊಳ್ಳುವ  ಎಕ್ಸ್‌ಪೀರಿಯೆನ್ಸ್ ಯಾವುದನ್ನೂ ಅದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇವತ್ತಿನ ಕ್ರಿಯೆಗೆ ನಮ್ಮ ಪ್ರತಿಕ್ರಿಯೆಯೇನು? ಎಷ್ಟು ಪಕ್ವವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ ಅನ್ನುವುದಷ್ಟೇ ಬದುಕಿಗೆ ಮುಖ್ಯವಾಗುತ್ತದೆ.

ಇಷ್ಟಕ್ಕೂ ಹಿಂದೆ ಯಾರಿಗೋ ಯಾವುದೋ ಒಳ್ಳೆಯದು ಮಾಡಿದಾಗ, ಮುಂದೆ ಯಾವತ್ತೋ ಒಂದಿನ ಈ ಒಳ್ಳೆಯದರ ಪ್ರತಿಫಲವೆಂಬಂತೆ ನನಗೆ ಒಳ್ಳೆಯದೇ ಆಗುತ್ತದೆ ಅನ್ನುವ ಯಾವ ಸ್ವಾರ್ಥವೂ ಇದ್ದಿರುವುದಿಲ್ಲ. ಆ ಕ್ಷಣಕ್ಕೆ ನಮ್ಮಲ್ಲೊಂದು ಒಳ್ಳೆಯ ಮನಸ್ಸಿತ್ತು. ಇರುವೆಗೋ, ಗೆಳೆಯನಿಗೋ, ಗೆಳತಿಗೋ ಒಳ್ಳೆಯದಾಗಲಿ ಅನ್ನುವ ಶ್ರದ್ಧೆಯಿತ್ತು . ಎಲ್ಲಕ್ಕಿಂತ ಹೆಚ್ಚಾಗಿ ಆಗಿನ ಪರಿಸ್ಥಿತಿಗೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸುವ, ಮತ್ತೊಬ್ಬರಿಗೆ ತನ್ನಿಂದ ಒಂದಿನಿತಾದರೂ ಸಹಾಯವಾಗುವುದಾದರೆ ಆಗಲಿ ಎಂದು ನಮ್ಮೊಳಗಿನ ಸಂಸ್ಕಾರ ನಮ್ಮನ್ನು ಬಡಿದೆಬ್ಬಿಸಿರುತ್ತದೆಯಷ್ಟೇ ಹೊರತು ಪಡಿಸಿ ಮುಂದೆ ಯಾವತ್ತಾದರೂ ನನಗೆ ಇದರಿಂದ ಒಳ್ಳೆಯದಾಗುತ್ತದೆ ಅನ್ನುವ ವ್ಯಾವಹಾರಿಕತೆಯಂತೂ ಖಂಡಿತಾ ಇದ್ದಿರುವುದಿಲ್ಲ.

ಅದನ್ನೂ ಮೀರಿ ನಮಗೆ ಒಳ್ಳೆಯದೇ ಆಗಬೇಕು ಅಂತಿದ್ದರೆ,  ಪರಿಸ್ಥಿತಿಯ ಆಳಕ್ಕೆ ಹೊಕ್ಕು, ನಮ್ಮಿಂದಾದ ತಪ್ಪೇನು? ಏನನ್ನು ಮಾಡಿದರೆ ತಪ್ಪನ್ನು ಸರಿಪಡಿಸಬಹುದು? ಈಗಿರುವ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಅಂತೆಲ್ಲಾ ಆತ್ಮವಿಮರ್ಶೆ ಮಾಡಲೇಬೇಕಾಗುತ್ತದೆ. ಇಷ್ಟೆಲ್ಲಾ ಒಳ್ಳೆಯದು ಮಾಡಿದ ನನಗೇಕೆ ಹೀಗಾಯ್ತು ಎಂದು ಹಲುಬುತ್ತಾ ಕೂರುವುದಕ್ಕಿಂತ ಹೀಗೆ ಆತ್ಮವಿಮರ್ಶೆ ಮಾಡಿ ಬದುಕು ಒಡ್ಡಿದ ಸವಾಲುಗಳಿಗೆ ಸಮರ್ಥವಾಗಿ ಅಭಿಮುಖಿಯಾಗುವುದು ಸಾವಿರ ಪಾಲು ಉತ್ತಮ.

ಆದರೆ ನಿನ್ನೆಯ ಕನವರಿಕೆಯಲ್ಲೇ ಹಳಹಳಿಸುತ್ತಿರಬೇಕಾ ಅಥವಾ ನಾಳೆಗಳಿಗಾಗಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾ? ಆಯ್ಕೆ ಮಾತ್ರ ನಮ್ಮದೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ