ಸೋಮವಾರ, ಡಿಸೆಂಬರ್ 19, 2016

ಅಂತಹ ವಿದ್ಯೆ ನನಗೂ ಕಲಿಸಿಕೊಡಿ.

'ದುಃಖ ಹಂಚಿಕೊಂಡಷ್ಟು ಕಡಿಮೆಯಾಗುತ್ತದೆ, ಸುಖ ಹಂಚಿಕೊಂಡಷ್ಟು ಹೆಚ್ಚಾಗುತ್ತದೆ’ ಅನ್ನುವ ಗಾದೆಯೇ ಇರಬಹುದು, ’ಓಪನ್ ಅಪ್’ ಆಗು ಅನ್ನುವ ಈ ಜಮಾನದ ಮಾತೇ ಇರಬಹುದು ಅಥವಾ ’ಬದುಕು ತೆರೆದ ಪುಸ್ತಕದಂತಿರಬೇಕು’ ಅನ್ನುವ ಉಕ್ತಿಯೇ ಇರಬಹುದು... ಎಲ್ಲವೂ ಕೊನೆಗೆ ಹೇಳುವುದೊಂದೇ, ’ನಿನ್ನ ಮನದ ಭಾವನೆಗಳೆಲ್ಲವನ್ನೂ ಹಂಚಿಕೊಂಡು ಹಗುರಾಗು...’

ಆದರೆ ಹಾಗೆ ಎಲ್ಲವನ್ನೂ ಹಂಚಿಕೊಂಡು ಬೆತ್ತಲಾಗುವುದು, ಯಾವ ಪರದೆಯೂ ಇಲ್ಲದೆ ಓಪನ್ ಅಪ್ ಆಗುವುದು, ತೀರಾ ತೆರೆದಿಟ್ಟ ಪುಸ್ತಕದಂತೆ ಬದುಕುವುದು ಮನುಷ್ಯ ಮಾತ್ರರಾದವರಿಂದ ಸಾಧ್ಯಾನಾ? ಅದೂ ಒಳ ಮನಸ್ಸು ಮತ್ತು ಹೊರ ಮನಸ್ಸೆಂದು ನಮ್ಮದೇ ಮನದೊಳಗೆ ಒಂದು ಸೂಕ್ಷ್ಮ ತೆರೆಯಿರುವಾಗ, ಮತ್ತೊಬ್ಬರ ಬಳಿ ಅವರೆಷ್ಟೇ ಆಪ್ತರಾಗಿದ್ದರೂ , ಬಟಾಬಯಲಾಗುವುದು ಸಾಧ್ಯಾನಾ?

ಗೆಳತಿಯಂತಿರುವ ತಾಯಿಯ ಮುಂದೆಯೂ ಹೇಳಿಕೊಳ್ಳಲಾರದ ಕೆಲವು ಸತ್ಯಗಳಿರುತ್ತವೆ, ಗೆಳೆಯನಿಗಿಂತಲೂ ಹೆಚ್ಚು ಆತ್ಮೀಯನಾಗಿರುವ ಅಪ್ಪನಲ್ಲೂ ಹೇಳಿಕೊಳ್ಳಲಾರದ ಒಂದಿಷ್ಟು ವಿಷಯಗಳಿರುತ್ತವೆ, ನಮ್ಮ ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತ ಅಣ್ಣನ ಬಳಿಯೂ, ಆತ್ಮ ಸಖಿಯಂತಿರುವ ಅಕ್ಕನ ಬಳಿಯೂ ಮಾತನಾಡಲು ಸಾಧ್ಯವಿಲ್ಲದಂತಹ ಕೆಲವು ಸಂಗತಿಗಳಿರುತ್ತವೆ, ಆಪ್ತ ಸ್ನೇಹಿತರು ಅನ್ನಿಸಿಕೊಂಡವರ ಜೊತೆಯೂ ಹಂಚಿಕೊಳ್ಳಲಾಗದ ವಿಚಾರಗಳಿರುತ್ತವೆ, ಜೀವಕ್ಕಿಂತ ಹೆಚ್ಚು ಪ್ರೀತಿಸುವ ಪ್ರೇಮಿ ಇದ್ದರೂ ಕೆಲವು ವಿಷಯಗಳು ಅಜ್ಞಾತವಾಗಿಯೇ ಉಳಿದುಬಿಡುತ್ತವೆ, ಜೀವನ ಪೂರ್ತಿ ಗಂಡ ಊಟ ಮಾಡಿದ ಎಂಜಲು ತಟ್ಟೆಯಲ್ಲೇ ಊಟ ಮುಗಿಸುವ ಪರಮ ಪತಿವ್ರತೆಯ ಮನದ ಮೂಲೆಯಲ್ಲಿ ಅಳಿದು ಹೋದ ಹಳೆ ಪ್ರೀತಿಯೊಂದು ಗೂಡುಕಟ್ಟಿರಬಹುದು, ಹೆಂಡತಿಯೇ ನನ್ನಿಷ್ಟ ದೇವತೆ ಎಂದು ತಿಳಿದುಕೊಂಡಿರುವ ಪತಿಯ ಮನಸ್ಸಲ್ಲೂ ಹಳೆ ಪ್ರೇಯಸಿಯ ಒಗರೊಗರು ನೆನಪುಗಳಿರಬಹುದು.

ಅವನ್ನೆಲ್ಲಾ ಹಂಚಿಕೊಳ್ಳುವುದಾದರೂ ಹೇಗೆ? ಇಷ್ಟಕ್ಕೂ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳುವುದೆಂದರೆ ಅಂತರಂಗದ ಸಂಪೂರ್ಣ ಅನಾವರಣವಲ್ಲವೇ? ನಮ್ಮಂತರಂಗವನ್ನು ನಮಗೇ ಸ್ಪರ್ಶಿಸಲು, ತಿಳಿದುಕೊಳ್ಳಲು, ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ ಅಂದಮೇಲೆ, ಇನ್ನೊಬ್ಬರ ಮುಂದೆ ಹರಡಿಡುವುದಾದರೂ ಹೇಗೆ? ಹಾಗೆ ಎಲ್ಲಾ ಮಿತಿಗಳನ್ನೂ ಮೀರಿ ಅರ್ಥೈಸ ಹೊರಟಾಗೆಲ್ಲಾ ಅಂತರಂಗವೆಂಬ ಬಿಸಿಲ ಕೋಟೆ ಮತ್ತಷ್ಟು ಸಂಕೀರ್ಣವಾಗಿ ನಮ್ಮ ಹುಡುಕಾಟದ ಮೂಲ ಉದ್ದೇಶವೇ ಮರೆತು ಹೋಗುತ್ತದೆ. ಮತ್ತೆಲ್ಲಿ ಬಂತು ಭಾವನೆಗಳ ಬಿಚ್ಚಿಡುವಿಕೆ?

ಸರಿ, ಇಷ್ಟೆಲ್ಲಾ ಆದಮೇಲೂ ಹಂಚಿಕೊಳ್ಳಲೇಬೇಕು ಎಂದು ನಿರ್ಧರಿಸಿಕೊಂಡು ಮಾತು ಶುರುವಿಟ್ಟುಕೊಂಡರೂ ಎಲ್ಲಾ ಭಾವಗಳು ಹೊರಬರುತ್ತವೆ ಅಂದುಕೊಂಡರೆ, ಅದೂ ಇಲ್ಲ. ಅದು ಎಂತಹ ಪರಮ ಭಾವುಕ ಕ್ಷಣದಲ್ಲೇ ಆದರೂ ಆಳಾಂತರಾಳದ ಭಾವವೊಂದು ಮಾತಾಗಿ ಹೊರಬರುವಾಗ ಅದು ಅರ್ಧ ಸತ್ಯ ಮಾತ್ರ ಆಗಿರುತ್ತದೆ ಅಷ್ಟೆ. ಕಾಡಿದ ನೋವು, ಕಾಡುವ ಸಂಕಟ, ನಲ್ಮೆಯ ನಿನ್ನೆಗಳು, ನೀರಸ ಇಂದು, ಅನಿಶ್ಚಿತ ನಾಳೆಗಳು, ಸಣ್ಣ ಅಸಹನೆ, ವ್ಯಕ್ತಪಡಿಸಲಾಗದ ಬೇಸರ ಇವಕ್ಕೆಲ್ಲಾ ಮಾತಿನ ಚೌಕಟ್ಟು ಹಾಕಲೆತ್ನಿಸಿದರೂ ಕೆಲವು ಸೂಕ್ಷ್ಮ ಸತ್ಯಗಳು ಹಾಗೇ ಒಳಗೆ ಉಳಿದುಬಿಡುತ್ತವೆ.

ಇನ್ನೂ ಕೆಲವೊಮ್ಮೆ, ಗಂಟೆಗಟ್ಟಲೆ ಮಾತನಾಡುತ್ತಾ ಕುಳಿತರೂ, ನೂರಾರು ವಿಷಯಗಳು ಮಾತಿನ ಮಧ್ಯೆ ಬಂದು ಹೋದರೂ, ಹೇಳಲೇಬೇಕಿದ್ದ, ಹಂಚಿ ಹಗುರಾಗಲೆ ಬೇಕಿದ್ದ ಒಂದು ಮಾತು ಮಾತ್ರ ತುಟಿ ಮೀರಿ ಹೊರ ಬರುವುದೇ ಇಲ್ಲ. ಯಾವುದೋ ಅಗೋಚರೆತೆಯೊಂದು ಅದೊಂದು ವಿಷಯದ ಸತ್ವನ್ನೆಲ್ಲಾ ತನ್ನೊಳಗೆ ಬಚ್ಚಿಟ್ಟುಕೊಳ್ಳಬಯಸುತ್ತಿದೆಯೇನೋ ಅನ್ನಿಸಿಬಿಡುತ್ತದೆ. ಮತ್ತೂ ಕೆಲವೊಮ್ಮೆ ಅಂತರಂಗದ ಮಾತುಗಳನ್ನು ಎದುರಿಗಿರುವವರು ಅದೆಷ್ಟೇ ಆಪ್ತರಾಗಿದ್ದರೂ ಅರುಹಲಾಗದೆ ಸುಮ್ಮನಾಗುತ್ತೇವೆ. ಅದು ಆ ವ್ಯಕ್ತಿಯ ಮೇಲೆ ನಂಬಿಕೆ ಇಲ್ಲದೆಯೋ ಅಥವಾ ಭಾವಗಳ ಏರುಪೇರಿನ ಹಿಂದಿನ ನಿಜದ ಕಾರಣಗಳು ಗೊತ್ತಿಲ್ಲದೆಯೋ ಅಲ್ಲ. ಅಲ್ಲಿ ಭಾವ ಪ್ರಪಂಚದ ತಳಮಳಗಳನ್ನು, ತಲ್ಲಣಗಳನ್ನು, ಕೋಲಾಹಲಗಳನ್ನು. ಅಲ್ಲೋಲಕಲ್ಲೋಲಗಳನ್ನು ಸರಿಯಾಗಿ ವ್ಯಕ್ತಪಡಿಸಲು ಪದ ಪ್ರಪಂಚದ ಅಷ್ಟೂ ಪದಗಳು ಸಾಲದು ಅನಿಸಿಬಿಟ್ಟಿರುತ್ತದೆ ಅಷ್ಟೆ. ಬಹುಶಃ ಮಾತು ಸತ್ತು ಮೌನ ವಿಜೃಂಭಿಸುವುದು ಇಂತಹ ಗಳಿಗೆಗಳಲ್ಲೇ.

ಹೀಗೆ, ಎಲ್ಲ ಭಾವಗಳನ್ನು ಹಂಚಿಕೊಂಡು ಬರಿದಾಗುವುದು ಅಂದಾಗೆಲ್ಲಾ ನನಗೆ ಆ ಮಾತಿನಲ್ಲೇ ಎಲ್ಲೋ ಅಪ್ರಾಮಾಣಿಕತೆಯ ಸಣ್ಣ ಎಳೆಯೊಂದು ಕಂಡಂತಾಗುತ್ತದೆ. ಪೂರ್ತಿ ತೆರೆದುಕೊಳ್ಳಲು ಯಾರಿಂದಲೂ ಸಾಧ್ಯವೇ ಇಲ್ಲ ಅನ್ನಿಸತೊಡಗುತ್ತದೆ. ಇಲ್ಲ, ಹಾಗೇನಿಲ್ಲ ತೀರಾ ತೆರೆದಿಟ್ಟ ಪುಸ್ತಕದಂತೆ ಬದುಕಲೂಬಹುದು ಅಂತ ನೀವನ್ನುವುದಾದರೆ, ಸರಿ, ಅಂತಹ ವಿದ್ಯೆಯ ನನಗೂ ಸ್ವಲ್ಪ ಕಲಿಸಿಕೊಡಿ. ಒಳಗೆ ಹುದುಗಿಸಿಟ್ಟ ಭರಿಸಲಾಗದ ಕೆಲ ಸತ್ಯಗಳ ಭಾರ ಇಳಿಸಿ ಒಂದಿಷ್ಟು ದಿನಗಳ ಕಾಲ ನನಗೂ ನಿರಾಳವಾಗಿ ಬದುಕಬೇಕಿದೆ.   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ