ಬುಧವಾರ, ಮೇ 11, 2016

ಇವೆಲ್ಲಾ ನಿನಗೆ ಮೂರು ವರ್ಷಕ್ಕೂ ಮುಂಚೆಯೇ ಗೊತ್ತಿತ್ತಾ?

ಮೊನ್ನೆ ಜೀವದ ಗೆಳತಿ ವಾಸ್ತವ್ಯವಿರುವ ಪಿ.ಜಿಯ ಪಕ್ಕದಲ್ಲಿರುವ ಮರದ ಕೆಳಗೆ ಕೂತು ಮಾತನಾಡುತ್ತಿದ್ದಾಗ ನಾನು ಅಪ್ಪಟ ತತ್ವಜ್ಞಾನಿಯ ಶೈಲಿಯಲ್ಲಿ "ಕಾಲ ಅದೆಷ್ಟು ಬೇಗ ಬದಲಾಗಿಬಿಡ್ತಲ್ವಾ?" ಅಂದೆ. ಯಾವತ್ತೂ ನನ್ನ ಇಂತಹ ಮಾತುಗಳಿಗೆಲ್ಲಾ ತಲೆಕೆಡಿಸಿಕೊಳ್ಳದ ಅವಳು ಅವತ್ತು ಮಾತ್ರ "ಬದಲಾಗಿರುವುದು ಕಾಲವಲ್ಲ, ನಮ್ಮ ಮನಸ್ಥಿತಿಗಳು ಅಷ್ಟೇ" ಅಂತಂದು ಮೌನವಾದಳು. ಸಾಫ್ಟ್ವೇರ್, ಟೀಂ ವರ್ಕ್, ನೈಟ್ ಶಿಫ್ಟ್ ಅಂತೆಲ್ಲಾ ಮಾತ್ರ ಮಾತಾಡುತ್ತಿದ್ದ ಹುಡುಗಿಯ ಬಾಯಲ್ಲಿ ಇವತ್ತೇಕೆ 'ಮನಸ್ಥಿತಿ'ಯ ಮಾತು ಪ್ರಸ್ತಾಪವಾಯಿತು ಅಂತ ಅಚ್ಚರಿಗೊಳ್ಳುತ್ತಾ ಅವಳತ್ತ ನೋಡಿದೆ. ಅವಳು ನನ್ನ ಅವಳ ಕೋಣೆಯೊಳಗೆ ಕರಕೊಂಡು ಹೋಗಿ, ಕೆಂಪು ಬಣ್ಣದ ಹೊದಿಕೆಯಲ್ಲಿ ಸುತ್ತಿಟ್ಟ, ಈಗ ತಾನೇ ಬರೆದಂತಿದ್ದ, ಶುದ್ಧಾನುಶುದ್ಧ ಕೈ ಬರಹದ ಪತ್ರ ಕೈಗಿಟ್ಟಳು. ಓದುತ್ತಾ ಹೋದಂತೆ ಆ ಎರಡು ಜೀವಗಳ ಪ್ರೀತಿ, ಬದುಕು, ಮುನಿಸು, ನೋವು, ವಿರಹ ನನ್ನ ಕಣ್ಣ ಚಕ್ರತೀರ್ಥದಲ್ಲಿ ಕದಲತೊಡಗಿದವು. ನಾನು ಓದಿ ಮುಗಿಸುವಷ್ಟರಲ್ಲಿ ಅವಳು "ನನ್ನ ನೋವ ಮರೆಯಲು ಇದನ್ನು ಬರೆದೆನಷ್ಟೇ, ಪೋಸ್ಟ್ ಮಾಡುವ ಯಾವ ಆಸಕ್ತಿಯೂ ನನಗಿಲ್ಲ" ಅಂತಂದು ಎತ್ತಲೋ ನೋಡುತ್ತಾ ನಿಂತಳು. ಹಲವು ವರ್ಷಗಳ ಒಡನಾಟದಿಂದ ಇನ್ನಿವಳ ಮಾತಾಡಿಸಿ ಅರ್ಥವಿಲ್ಲ ಅನ್ನುವುದು ಗೊತ್ತಾಗಿರುವುದರಿಂದ ಅದನ್ನು ಹಾಗೇ ಎತ್ತಿಕೊಂಡು ಮನೆಗೆ ಬಂದಿದ್ದೆ. ಈಗ ಅದೇ ಪತ್ರವನ್ನು ಟೈಪಿಸಿ (ಅವಳ ಒಪ್ಪಿಗೆಯ ಮೇರೆಗೆ) ನಿಮ್ಮುಂದೆ ಇಟ್ಟಿದ್ದೇನೆ, ಇನ್ನು ನೀವುಂಟು ನಿಮ್ಮ ಅಕ್ಕರೆಯ ಅಕ್ಷರಗಳುಂಟು...

ಪ್ರಿಯ ಶಿಶಿರ್,

ಈ ಅಕಾಲದ ಬಿಸಿಲಲ್ಲಿ, ಸಂಬಂಧಗಳೇ ಇಲ್ಲದ ಪಿ.ಜಿಯ ಟೆರೇಸ್ ಮೇಲೆ ನಿಂತು, ಉದ್ದಕ್ಕೆ ಚಾಚಿಕೊಂಡಿರುವ ರಸ್ತೆಯನ್ನು ದಿಟ್ಟಿಸುವಾಗೆಲ್ಲಾ ಆಕಸ್ಮಿಕ ಸ್ಪರ್ಶದ ಬಿಸುಪಿಗೆ ನಾಚುವ ಈಗಷ್ಟೇ ಪ್ರೀತಿಸಲು ಶುರು ಹಚ್ಚಿಕೊಂಡಿರುವ ಜೋಡಿಗಳು ಕಣ್ಣಿಗೆ ಬೀಳುತ್ತಾರೆ. ಆಗೆಲ್ಲಾ ಮುಂಜಾನೆಯ ಗರ್ಭದಲ್ಲಿ ಹುಟ್ಟಿ ಬಯಲು ತು೦ಬಾ ಹರಡಿ ಮನುಷ್ಯನ ಬೆನ್ನು ಮೂಳೆ ಕೂಡ ನಡುಗಿಸಿ ಹಾಕುತ್ತಿದ್ದ ಅದ್ಭುತ ಡಿಸೆ೦ಬರ್ ಚಳಿಯಲಿ ನೀನೇ ಕೊಡಿಸಿದ ತಿಳಿ ಆಕಾಶ ನೀಲಿ ಬಣ್ಣದ ಸ್ವೆಟರ್‍ನೊಳಗೆ ಮುದುಡಿಕೊ೦ಡು ಸಣ್ಣಗೆ ಕ೦ಪಿಸುತ್ತಾ ಹೂವಿನ ಗಿಡಗಳಿಗೆ ನೀರೆರೆಯುತ್ತಾ ಮನಸ ತು೦ಬಾ ನಿನ್ನ ಪ್ರೀತಿಯ ನಾದಕ್ಕೆ ತಲೆದೂಗುತ್ತಿದ್ದ, ಎಳೆ ಸೂರ್ಯ ಕಿರಣ ಮೈಯ ಸೋಕುತ್ತಿದ್ದರೆ ನಿನ್ನದೇ ಸ್ಪರ್ಶದ ಆಪ್ಯಾಯತೆಯ ಅನುಭವಿಸುತ್ತಿದ್ದ, ಎಲೆ-ಹೂವಿನ ಮೇಲೆ ಬಿ೦ಕದಿ೦ದ ಕುಳಿತಿರೋ ಮ೦ಜಹನಿಗಳು ಮುತ್ತ೦ತೆ ಪ್ರತಿಫಲಿಸುತಿರಲು ನಿನ್ನ ಕಣ್ಣೇ ಇಬ್ಬನಿಯಾಗಿ ನನ್ನ ಕೆಣಕುತಿವೆ ಅಂತ ಅನ್ನಿಸುತ್ತಿದ್ದ ಆ ದಿನಗಳು ತಪ್ಪದೇ ನೆನಪಾಗುತ್ತವೆ.

ಎಷ್ಟೊಂದು ಚೆನ್ನಾಗಿದ್ದವು ಕಣೋ ಆ ದಿನಗಳು. ಅದೆಷ್ಟೊಂದು ಪ್ರೀತಿಸುತ್ತಿದ್ದೆ? ನನ್ನ ಎಷ್ಟೊಂದು ಕ್ರಿಯೆಗಳಲ್ಲಿ ನೀನಿದ್ದೆ? ನಿನ್ನ ಎಷ್ಟೊಂದು ಪ್ರತಿಕ್ರಿಯೆಗಳಲ್ಲಿ ನಾನಿದ್ದೆ? ಬದುಕಿನ ಪ್ರತಿ ಕುತರ್ಕಗಳನ್ನು ದಾಟುವಾಗಲೂ ನಾನು ನೀನಾಗಿದ್ದೆ, ನೀನು ನಾನಾಗಿದ್ದೆ. ನಿನ್ನ ಮುಖದ ಕಳವಳಿಕೆಗಳು ಕತ್ತಲಲ್ಲಿ ಬದಲಾದರೂ ನನಗದು ತಟ್ಟನೆ ಗೋಚರವಾಗುತಿತ್ತು. ನಾನು ಕನಸಲ್ಲಿ ಸಣ್ಣಗೆ ಚೀರಿದರೂ ನಿನ್ನೆದೆಯ ನರಗಳು ಧಿಮ್ಮನೆ ಕದಲುತ್ತಿದ್ದವು.

ನೀನೆಂದರೆ ಕುರುಡುಗತ್ತಲಿಲ್ಲಿ ದೇದೀಪ್ಯಮಾನವಾಗಿ  ಉರಿಯುತ್ತಿದ್ದ ಪ್ರಣತಿ, ಮುಸ್ಸಂಜೆಯಾಗುತ್ತಿದ್ದಂತೆ ನನ್ನೊಳಗೆ ಮಿಡಿಯುತ್ತಿದ್ದ ಮೌನವೀಣೆ. ಕುವೆಂಪು ಭಾವಗೀತೆ ಕೇಳಿ ನಾನ್ನು ಹನಿಗಣ್ಣಾಗುತ್ತಿದ್ದಾಗಲೆಲ್ಲಾ ನೀನು ನೆತ್ತಿ ಸವರಿ ’ಬದುಕಲು ಕಲಿ ಹುಡುಗಿ’ ಅನ್ನುತ್ತಿದ್ದಾಗ ನಾನು ನಿನ್ನ ಮಡಿಲಲ್ಲಿ ಮಗುವಾಗುತ್ತಿದ್ದೆ. ನನ್ನ ಹುಡುಗ ಎಷ್ಟೊಂದು ಬುದ್ಧಿವಂತನಲ್ಲಾ ಎಂದು ಅಚ್ಚರಿ ಪಡುತಿದ್ದೆ, ಸಂಭ್ರಮಿಸುತ್ತಿದ್ದೆ.

ನಿನ್ನ ಮಾತು, ತುಟಿಯ ತಿರುವಲಿ ಮಾತ್ರ ತೇಲಿಸುತ್ತಿದ್ದ ಸಣ್ಣ ನಗು, ಕುರುಚಲು ಗಡ್ಡ, ಗಂಭೀರ ಕಣ್ಣುಗಳು, ಕುಡಿನೋಟ, ಅಪರೂಪಕ್ಕೊಮ್ಮೆ ಆಡುತ್ತಿದ್ದ ಕಪಿಚೇಷ್ಟೆ, ನನ್ನಂತಹ ಹುಟ್ಟು ತರಲೆಯನ್ನೂ ಸಂಭಾಳಿಸುತ್ತಿದ್ದ ನಿನ್ನ ತಾಳ್ಮೆ, ನೀ ಗುಣುಗುತ್ತಿದ್ದ ಹಾಡುಗಳು, ತೋಳಮೇಲಿನ ಹುಟ್ಟು ಮಚ್ಚೆ... ಊಹೂಂ, ಇವ್ಯಾವುವೂ ಭವಿಷ್ಯದಲ್ಲಿ ಒಂದು ಕರಾಳ ಸ್ವಪ್ನವಾಗಿ ನನ್ನ ಕಾಡುತ್ತದೆ ಅಂತ ನಾನಂದುಕೊಂಡಿರಲೇ ಇಲ್ಲ.

ನಾನು ಪ್ರತಿ ರಾತ್ರಿ ಕಣ್ಣುಮುಚ್ಚುವ ಮುನ್ನ, ನಿನ್ನ ಸುಂದರ ನಾಳೆಗಿರಲಿ ಅಂತ ಒಂದಿಷ್ಟು ಕನಸುಗಳನ್ನು ಎತ್ತಿಟ್ಟುಕೊಳ್ಳುತ್ತಿದ್ದೆ. ಅವೆಲ್ಲಾ ಕೇವಲ ನಿನ್ನ ಹಾಗೂ ನನ್ನನ್ನು ಮಾತ್ರ ಒಳಗೊಂಡ ಕನಸುಗಳಾಗಿದ್ದವು. ಅದು ಬಟ್ಟಬಯಲಲಿ ನಿನ್ನ ಹಿನ್ನಲೆಗಳು, ಭೂತಕಾಲಗಳು ಯಾವುವೂ ಇಲ್ಲದೆ ನಿನ್ನ ಜೊತೆ ಬದುಕು ಕಟ್ಟಿಕೊಳ್ಳುವ ಅಗಾಧ ಕನಸಾಗಿತ್ತು. ನಿನ್ನ ಕೇವಲ ನೀನಾಗಿಯೇ ಸ್ವೀಕರಿಸುವ, ನನ್ನೊಳಗೆ ಆಹ್ವಾನಿಸುವ, ನನ್ನದೆಲ್ಲವ ನಿನಗೆ ಧಾರೆಯೆರೆದುಕೊಡುವ, ನಿನ್ನ ಖುಶಿಯಲ್ಲಿ ನಾ ಸಂಭ್ರಮಿಸುವ, ನಿನ್ನ ಅಷ್ಟೂ ನೋವುಗಳನ್ನು ನನ್ನೊಳಗೆ ಇಳಿಸಿಕೊಳ್ಳುವ, ಜೀವನ ಪೂರ್ತಿ ನಿನ್ನನ್ನು ಒಲವ ಅಮೃತ ಸುಧೆಯಲಿ ತೇಲಿಸಿಬಿಡುವ ಅನನ್ಯ ಕನಸಾಗಿತ್ತು.

ಆದ್ರೆ ಏನೋ ಮಾಡಿಬಿಟ್ಟೆ ನೀನು? ನನ್ನ ಆ ಒಂದು ಸಾವಿರದ ತೊಂಬತ್ತೈದು ದಿನಗಳ (ಸರಿಯಾಗಿ ಲೆಕ್ಕ ಹಾಕುವುದಾದರೆ  ಒಂದು ಸಾವಿರದ ತೊಂಬತ್ತಾರು ದಿನಗಳು, ಅದರಲ್ಲಿ ಒಂದು ಅಧಿಕವರ್ಷವಿತ್ತು ನೋಡು) ಕನಸುಗಳನ್ನು ಅಥವಾ ನಿನ್ನ ಬದುಕಿನ ಮೂರು ವರ್ಷಗಳ ಕನಸನ್ನು ಕೇವಲ ಒಂದು ಘಳಿಗೆಯಲ್ಲಿ ನಿರ್ನಾಮ ಮಾಡಿಬಿಟ್ಟೆಯಲ್ಲೋ?

ಅವತ್ತು ಎಂದಿನಂತೆ, ದೇವಸ್ಥಾನಕ್ಕೆ ಒಮ್ಮೆ ಬರುತ್ತೀಯಾ ಅಂತ ನೀನು ಕೇಳಿದಾಗ, ನಿನ್ನೊಡನೆ ಮಾತ್ರ ಕಳೆಯುವಂತಹ ಕೆಲವು ಸಂಭ್ರಮದ ಕ್ಷಣಗಳನ್ನು ಇದಿರುಗೊಳ್ಳಲು ಸಿದ್ಧಳಾಗಿ, ಒಂದು ಬುತ್ತಿಯ ಪೂರ್ತಿ ನೀನು ಇಷ್ಟಪಟ್ಟು ತಿನ್ನುತ್ತಿದ್ದ ಕೇಸರಿಬಾತ್ ತುಂಬಿಕೊಂಡು ಬಂದಿದ್ದೆ. ನೀನು ಬರುವವರೆಗೂ ಕಲ್ಯಾಣಿಯ ಮೆಟ್ಟಿಲ ಮೇಲೆ ಕೂತು, ತಂದಿದ್ದ ಕೇಸರಿಬಾತನ್ನು ಇಷ್ಟೇಇಷ್ಟು ಮೀನುಗಳಿಗೆ ಎಸೆಯುತ್ತಿದ್ದೆ. ನೀನು ಬಂದ ಕೂಡಲೇ ಎಂದಿನಂತೆ ನಿನ್ನ ಕೊರಳಿಗೆ ಜೋತು ಬಿದ್ದಿದ್ದೆ. ನಿನಗೆ ಒಂದೊಂದು ಕೈತುತ್ತೀಯುವಾಗಲೂ ನಾನು ಆಸ್ಥೆಯಿಂದ ನಿನ್ನ ಪ್ರೀತಿಯಲ್ಲಿ ಕರಗಿ ಹೋಗುತ್ತಿದ್ದೆ.

ಆಗಲೇ ಅಲ್ಲವೇ ನೀನು ದೂರಾಗುವ ಮಾತಾಡಿದ್ದು? ಆಗಲೇ ಅಲ್ಲವೇ ನಾನು ನಿನ್ನ ಕಣ್ಣೊಳಗೇನಾದರೂ ನನ್ನ ಛೇಡಿಸುವ ಕುರುಹು ಇದೆಯಾ ಎಂದು ಇಣುಕಿ ನೋಡಿದ್ದು? ಆಗಲೆ ಅಲ್ಲವೇ ಎಲ್ಲಿಂದಲೋ ತೂರಿ ಬಂದ ಕಲ್ಲೊಂದು ಕಲ್ಯಾಣಿಯ ನೀರನ್ನು ಕದಡಿದ್ದು? ಆಗಲೇ ಅಲ್ಲವೇ ನೀರಲ್ಲಿನ ನಮ್ಮ ಪ್ರತಿಬಿಂಬ ಕದಲಿದ್ದು? ಆಗಲೆ ಅಲ್ಲವೇ ಆಳದಲ್ಲೆಲ್ಲೋ ಈಜುತ್ತಿದ್ದ ಮೀನೊಂದು ಸತ್ತು ತೇಲತೊಡಗಿದ್ದು? ಆಗಲೆ ಅಲ್ಲವೇ ನಾನು ಇವೆಲ್ಲಾ ರಾತ್ರಿ ಕಾಣುವ ಕೆಟ್ಟ ಕನಸೇನೋ ಎಂಬಂತೆ ನನ್ನ ಮತ್ತೆ ಮತ್ತೆ ಜಿಗುಟಿ ನೊಡಿದ್ದು? ನಿನ್ನ ಕಣ್ಣುಗಳಲ್ಲಿ ಆಗಲೂ ಇದ್ದದ್ದು ಶುದ್ಧ ಪ್ರಾಕ್ಟಿಕಾಲಿಟಿ ಮಾತ್ರ. ಈಗಲಾದರೂ ಹೇಳು ಶಿಶಿರ್, ಇವೆಲ್ಲಾ ನಿನಗೆ ಆ ಮೂರು ವರ್ಷಗಳ ಮುನ್ನವೇ ಗೊತ್ತಿತ್ತಾ? ಗೊತ್ತಿದ್ದೂ ಗೊತ್ತಿದ್ದೂ ನನ್ನ ಬದುಕಿನೊಳಕ್ಕೆ ಬಂದೆಯಾ?

ನೀನು ದೂರಾಗುವ ಮಾತಂದ ಮರುಕ್ಷಣವೇ ನನ್ನಿಂದ ದೂರ ದೂರ ಸರಿಯತೊಡಗಿದೆ. ನಾನು ಅದೇ ಕಲ್ಯಾಣಿಯ ಮೆಟ್ಟಿಲ ಮೇಲೆ ಕೂತು ಸುಮ್ಮನೆ ನಿನ್ನ ನೋಡುತ್ತಲೇ ಇದ್ದೆ. ನಿಜ ಹೇಳಲಾ? ಆ ಕ್ಷಣದಲ್ಲಿ ನನಗೆ ಸತ್ತ ಮೀನನ್ನು ನೀರಿಂದ ತೆಗೆದು ಹೊರಗೆಸೆಯಲಾ ಇಲ್ಲ ನನ್ನ ತೊರೆಯದಿರೆಂದು ನಿನ್ನ ಬೇಡಿಕೊಳ್ಳಲಾ ಅನ್ನುವುದೇ ಅರ್ಥವಾಗಿರಲಿಲ್ಲ. ಆದ್ರೆ, ಮನಸ್ಸು ಇದೆಲ್ಲಾ ಸುಳ್ಳು, ನನ್ನ ಶಿಶಿರ್ ಮತ್ತೆ ಬರುತ್ತಾನೆ ಅಂತ ಮತ್ತೆ ಮತ್ತೆ ಹೇಳುತ್ತಲೇ ಇತ್ತು. ಕೊನೆಪಕ್ಷ ನನ್ನ ತಲೆ ಸವರಿ ಕ್ಷಮಿಸು ಪುಟ್ಟಾ ಅಂತಾದರೂ ಅನ್ನುತ್ತಿಯೇನೋ ಅಂತಂದುಕೊಂಡಿದ್ದೆ. ಊಹೂಂ, ನೀನು ಅದ್ಯಾವುದನ್ನೂ ಮಾಡದೆ ನನಗೆ ಬೆನ್ನು ಹಾಕಿ ನಡೆಯತೊಡಗಿದೆ. ಆಗ ನಿನ್ನ ಕಣ್ಣಲ್ಲೂ ನೀರು ಗಿರಿಗಿಟ್ಲೆಯಾಡುತ್ತಿತ್ತಾ...? ಗೊತ್ತಿಲ್ಲ.

ಆದ್ರೆ ಯಾವಾಗ ನೀನು ನನ್ನ ಬದುಕಿನೊಳಕ್ಕೆ ಮತ್ತೆ ಬರಲಾರೆ ಅನ್ನುವುದು ಖಾತ್ರಿಯಾಯಿತೋ, ಆ ಕ್ಷಣದಲ್ಲೇ ನಿನ್ನ ಮನಸ್ಥಿತಿ, ಯೋಚನೆ, ನಿರ್ಧಾರಗಳ ಬಗ್ಗೆ ಒಂದು ಮಾತೂ ಆಡದೆ, ನಿನ್ನ ಹೋಗಗೊಡಬೇಕು ಅಂತ ತೀರ್ಮಾನಿಸಿಬಿಟ್ಟೆ. ನನ್ನೆಲ್ಲಾ ನೋವುಗಳನ್ನು ಬದುಕಿನ ಮುಂದೆ ಒತ್ತೆ ಇಟ್ಟು ಅವುಡುಗಚ್ಚಿ ಎಲ್ಲವನ್ನೂ ಸಹಿಸಿಕೊಳ್ಳಬೇಕು ಅಂತ ನಿರ್ಧರಿಸಿಕೊಂಡೆ. ನಿನಗಾಗಿ ರಚ್ಚೆ ಹಿಡಿದು ಅಳುವುದರಿಂದ ಪ್ರೀತಿ ಮತ್ತಷ್ಟು ಸಾಂದ್ರವಾಗುತ್ತದೆ ಅನ್ನುವುದು ಅರ್ಥವಾಗುತ್ತಿದ್ದಂತೆ ನನ್ನ ಕಣ್ಣೀರಿಗೂ ಬಲವಂತದ ಕಟ್ಟೆ ಕಟ್ಟಿಬಿಟ್ಟೆ.

ಅಲ್ಲಿಂದಾಚೆ, ನಿನ್ನೆಡೆಗೆ ನನಗಿದ್ದ ಪ್ರೀತಿ ಅಹಂಕಾರದೆಡೆ ಹೊರಳಿಕೊಂಡಿತು, ದಗ್ಧ ಕನಸುಗಳ ಜಾಗದಲ್ಲಿ ಸ್ವಪ್ರತಿಷ್ಠೆ ಮೆರೆಯೊತೊಡಗಿತು, ಭಾವುಕತೆಯ ಜೀವಂತ ಸಮಾಧಿ ಮಾಡಿ ಅದರ ಮೇಲೆ ನಿರ್ಭಾವುಕತೆಯ ಚಪ್ಪಡಿ ಕಲ್ಲು ಎಳೆದು ವಿಜೃಂಭಿಸತೊಡಗಿದೆ, ಕುವೆಂಪು ಮರೆತೇ ಹೋದರು, ಕಲ್ಯಾಣಿ ಅಪ್ರಸ್ತುತವಾಯಿತು. ನನಗಾದ ನೋವಿನಿಂದಾಗಿ ನಾನು ಬದುಕಿನ ಬಗ್ಗೆ ಮತ್ತಷ್ಟು ಸೂಕ್ಷ್ಮತೆ ಬೆಳೆಸಿಕೊಳ್ಳುತ್ತಿದ್ದೇನೆ ಅನ್ನುವ ಭ್ರಮೆಯಲ್ಲಿ ಕಠೋರಳಾಗುತ್ತಾ ಹೋದೆ. ಕೊನೆಗೆ ನನ್ನೊಳಗಿನ ನನ್ನನ್ನು ಕೊಂದುಕೊಂಡು ಕಾರ್ಪೋರೇಟ್ ಜಗತ್ತು ಬಯಸುವ ಒಬ್ಬ ಅಪ್ಪಟ ಯಂತ್ರಮಾನವಳಾದೆ. ಈಗಿರುವ ಮೆಘನಾ, ಅವತ್ತು ಊರಾಚಿನ ಗುಡ್ದದಂಚಿನ ಮುಗಿಲುಗಳಿಗೆ ಕಥೆ ಹೇಳೆಂದು ದುಂಬಾಲು  ಬೀಳುತ್ತಿದ್ದ ಮೇಘನಾ ಅಲ್ಲವೇ ಅಲ್ಲ. ಅಂದು ನೀನನ್ನುತ್ತಿದಂತೆ ನಾನೀಗ ಬದುಕಲು ಕಲಿತಿದ್ದೇನೆ, ಆದ್ರೆ ಇದು ನನ್ನ ಬದುಕು ಅಲ್ಲವೇ ಅಲ್ಲ. ನೋವಿಗೆ -ನಲಿವಿಗೆ ಅತೀತವಾಗಿರುವ ಬದುಕು ನನ್ನದು ಅಂತ ನಾನೂ ಅಹಂಕಾರ ಪಟ್ಟುಕೊಳ್ಳತೊಡಗಿದಾಗಲೇ ನನ್ನೆದೆಯ ನವಿರುಭಾವಗಳೆಲ್ಲವೂ ಆತ್ಮಹತ್ಯೆ ಮಾಡಿಕೊಂಡವು. ಮುರಿದ ಮನಸನ್ನು ತಹಬಂದಿಗೆ  ತಂದಿದ್ದೇನೆ ಅನ್ನುವ ಅಖಂಡ ಭ್ರಮೆಯಲ್ಲಿ ನಾನು ಉರಿದು ಬೂದಿಯಾಗಿದ್ದೇನೆ.

ನಿನಗಿವೆಲ್ಲಾ ಕಾಡುತ್ತವೋ, ಅಸಲಿಗೆ ನಿನ್ನ ಸ್ಮೃತಿ ಪಟಲದ ಒಂದು ಮೂಲೆಯಲ್ಲಾದರೂ ನಾನಿದ್ದೇನೋ ಇಲ್ಲವೋ ಗೊತ್ತಿಲ್ಲ. ಇಷ್ಟೊಂದು ವರ್ಷಗಳ ನಂತರ ಮತ್ತೆ ಪತ್ರ ಬರೆದಿದ್ದೇನೆ ಅಂದರೆ, ಇದು ಖಂಡಿತಾ ನಿನ್ನ ಡಿಸ್ಟರ್ಬ್ ಮಾಡಲಂತೂ ಅಲ್ಲ. ಇಷ್ಟು ವರ್ಷಗಳ ನಂತರ ಮೊದಲ ಬಾರಿ ಮಬ್ಬುಗತ್ತಲೆಯ ಓಡಿಸಲೆಂದು ಹಚ್ಚಿಟ್ಟ ಹಣತೆಯ ಎಣ್ಣೆಯಲಿ ನಿನ್ನ ಪ್ರತಿಬಂಬ ಕಂಡಂತಾಯಿತು. ಸಂತಸದ ಎಳೆ ಮನಸ್ಸಿನ ಪೂರ್ತಿ ತುಂಬಿಕೊಳ್ಳುವ ಮೊದಲೇ ಹಳೆ ಗಾಯ ಮತ್ತೆ ತಿವಿಯತೊಡಗಿತು. ಬೇಡ, ನೀನು ಮತ್ತೆ ನನ್ನ ಮನಸಿನೊಳಕ್ಕೆ, ಬದುಕಿನೊಳಕ್ಕೆ ಬರುವುದೇ ಬೇಡ. ನಿನ್ನ ಅನುಕಂಪದ ಕಂಬನಿಗಳು ನನ್ನೆದೆಯ ಮತ್ತೆ ತೋಯಿಸುವುದೂ ಬೇಡ. ನಾನು ಶಾಪಗ್ರಸ್ಥ ಅಹಲ್ಯೆಯಂತೆ ಬದುಕುತ್ತೇನೆ, ಸಾಕು.

ಇಂತಿ ನಿನ್ನವಳಲ್ಲದ
ಮೇಘನಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ