ಗುರುವಾರ, ಮೇ 19, 2016

ಪದೇ ಪದೇ ಮನಸ್ಸಾಕ್ಷಿಯ ಮುಂದೆ ಮಂಡಿಯೂರುವಂತಾಗಬಾರದಲ್ಲವೇ?

ಅವೇನೂ ಅಂತಹ ತಲೆ ಹೋಗುವಂತಹಾ ತಪ್ಪುಗಳಾಗಿರುವುದಿಲ್ಲ. ಆ ಒಂದು ಸಣ್ಣ ಮಟ್ಟಿಗಿನ ವಂಚನೆಯಿಂದ ಯಾರ ಬದುಕೂ ಪೂರ್ತಿ ನಾಮಾವಶೇಷ ಆಗಿರುವುದಿಲ್ಲ. ಅದು ನಂಬಿಕೆ ದ್ರೋಹ ಅಂತಾಗಲೀ, ವಿಶ್ವಾಸಘಾತುಕತನ ಅಂತಾಗಲೀ ಎಲ್ಲೂ ದಾಖಲಾಗಿರುವುದೂ ಇಲ್ಲ. ಅಸಲಿಗೆ ಅಂತದ್ದೊಂದು ತಪ್ಪು ನಮ್ಮಿಂದ ಸಂಭವಿಸಿಬಿಟ್ಟಿದೆ ಅನ್ನುವುದು ನಮ್ಮಹೊರತು ಪಡಿಸಿ ಇನ್ಯಾರ ಅರಿವಿಗೂ ಬಂದಿರುವುದಿಲ್ಲ. ಅಷ್ಟರಮಟ್ಟಿಗಿನ ಕ್ಷುಲ್ಲಕ ತಪ್ಪದು. ಇಷ್ಟಾದರೂ ಬದುಕು, ಯಾವುದೋ ತಿರುವಿನಲ್ಲಿ ನಮ್ಮ ನಿಲ್ಲಿಸಿ ಬಿಟ್ಟು "ಹೀಗೇಕೆ ಮಾಡಿದೆ?" ಅಂತ ಕೇಳಿಯೇ ಕೇಳುತ್ತದೆ.

ತಪ್ಪಿಸಿಕೊಳ್ಳಲಾಗದ ಪ್ರಶ್ನೆಯದು. ಅಪ್ಪ ಪ್ರಶ್ನಿಸುವಾಗೆಲ್ಲಾ ಹಾರಿಕೆಯ ಉತ್ತರ ಕೊಡಬಹುದು, ಅಮ್ಮನ ಪ್ರಶ್ನೆಗಳಿಗೂ ಉತ್ತರಿಸಬಹುದು, ಆಪ್ತ ಸ್ನೇಹಿತರೆನಿಸಿಕೊಂದವರ ಕಣ್ಣನ್ನೂ ತಪ್ಪಿಸಿ ಓಡಾಡಬಹುದು, ಸಂಗಾತಿಗಳ ಪ್ರಶ್ನೆಗೂ ಸುಳ್ಳು ಉತ್ತರ ನೀಡಬಹುದು, ಗುರುಗಳೆನಿಸಿಕೊಂಡವರ ಪ್ರಶ್ನೆಗಳಿಗೂ ನಿರ್ಲಿಪ್ತರಾಗಿ ಇದ್ದುಬಿಡಬಹುದು. ಆದ್ರೆ ಬದುಕಿನ ಪ್ರಶ್ನೆಗಳಿಗೆ...? ಊಹೂಂ, ಅಲ್ಲಿ ಹಾರಿಕೆ, ಕಣ್ಣು ತಪ್ಪಿಸುವುದು, ಸಮಜಾಯಿಕೆ ನೀಡುವುದು, ನಿರ್ಲಿಪ್ತರಾಗುವುದು, ನಿರ್ಲಕ್ಷ್ಯತನ ಯಾವುದೂ ಉಪಯೋಗಕ್ಕೆ ಬರುವುದಿಲ್ಲ. ಅದು ಆಗಿರೋ ತಪ್ಪುಗಳಿಗೆ, ಮಾಡಿರೋ ಮೋಸಗಳಿಗೆ, ವಂಚನೆಗಳಿಗೆ ನೇರ ಮತ್ತು ಪ್ರಾಮಾಣಿಕ ಉತ್ತರ ಬಯಸುತ್ತದೆ. ಅದೆಷ್ಟೇ ಅಲವತ್ತುಕೊಂಡರೂ, ತಪ್ಪಿಸಿಕೊಂಡರೂ ಬದುಕಿನ ಪ್ರಶ್ನೆಗಳಿಗೆ ತಪ್ಪಿಲ್ಲದೆ, ತಪ್ಪಾಗದಂತೆ ಪ್ರಾಮಾಣಿಕವಾಗಿ ಉತ್ತರಿಸಲೇಬೇಕಾಗುತ್ತದೆ.

ತುಂಬು ನಂಬಿಕೆಯಿಂದ ಆಪ್ತರಾರೋ ಈ-ಮೈಲ್ ಪಾಸ್‍ವರ್ಡ್ ಕೊಟ್ಟಿರುತ್ತಾರೆ. ನಾವೆಂದೂ ಅವರ ಖಾಸಗೀ ಮೈಲ್‍ಗಳನ್ನು ಓದಲಾರೆವು ಅನ್ನುವ ವಿಶ್ವಾಸವದು. ಆದ್ರೆ ಯಾವುದೋ ಒಂದು ಕ್ಷಣದ ಪ್ರಲೋಭನೆಗೆ ಒಳಗಾಗಿ ಅವರ ಇನ್‍ಬಾಕ್ಸ್‌ನಲ್ಲಿ ಏನೇನಿದೆ ಎಂದು ತಡಕಾಡಿ ಬಿಡುತ್ತೇವೆ. ಅಲ್ಲಿ ನಮಗೆ ಬೇಕಾದ್ದು, ಬೇಡವಾದ್ದು ಏನೂ ಸಿಕ್ಕಿಲ್ಲ ಅಂದಮೇಲೆ ಸೈನ್‍ಔಟ್ ಮಾಡಿ ಸುಮ್ಮನಾಗುತ್ತೇವೆ. ಮೈಲ್ ತಡಕಾಡುತ್ತಿದ್ದ ಅಷ್ಟೂ ಹೊತ್ತು ಕಾಡದ ಆತ್ಮಸಾಕ್ಷಿ ಈಗ ಧುತ್ತೆಂದು ಪ್ರತ್ಯಕ್ಷವಾಗಿಬಿಡುತ್ತದೆ.

ಇದು ಕೇವಲ ಈ-ಮೈಲ್ ಪಾಸ್‍ವರ್ಡ್ ಅಂತಲ್ಲ. ಕೆಲವೊಮ್ಮೆ ನಿನಗೆ ಮಾತ್ರ ಗೊತ್ತಿರಲಿ ಅಂತ ಹೇಳಿದ ಅತ್ಯಾಪ್ತರ ಬದುಕಿನ ಗುಟ್ಟನ್ನು ಇನ್ಯಾರದೋ ಜೊತೆ ಹಂಚಿಕೊಳ್ಳುತ್ತೆವೆ. ತುಂಬಾ ಚೊಕ್ಕಟ ಅಂತನ್ನಿಸಿಕೊಂಡಿರುವ ಸಂಸಾರದ ಮಧ್ಯೆ ಇದ್ದೂ ಮತ್ತೊಂದು ನಿರುಪದ್ರವೀ ಸಂಬಂಧದೆಡೆ ಕೈ ಚಾಚುತ್ತೇವೆ, ಅದೂ ಸಂಸಾರದೊಳಗಿನವರಿಗೆ ಒಂದು ಚಿಕ್ಕ ಸುಳಿವೂ ಬಿಟ್ಟುಕೊಡದೆ. ಪ್ರಾಣ ಸ್ನೇಹಿತರು ಬಗಲ್ಲಲ್ಲಿರುವಾಗಲೇ ಅವರ ಬಗೆಗಿನ ಗೌಪ್ಯ ಸಂಗತಿಯನ್ನು ಮತ್ಯಾರಿಗೋ ತಲುಪಿಸಿರುತ್ತೇವೆ. ಜೀವಕ್ಕಿಂತ ಹೆಚ್ಚು ಪ್ರೀತಿಸೋ ಪ್ರೇಮಿಯ ಪಕ್ಕದಲ್ಲೇ ಕೂತು ಒಂದು ಅನುಪಯುಕ್ತ ಸುಳ್ಳು ಹೇಳಿರುತ್ತೇವೆ, ನಂಬಿಕೆಯ ಇನ್ನೊಂದು ಹೆಸರೇ ನಾವು ಅನ್ನುವಷ್ಟು ನಮ್ಮನ್ನು ನಂಬಿಕೊಂಡಿರುವ ಅಪ್ಪ-ಅಮ್ಮನನ್ನೇ ಸಣ್ಣದಾಗಿ ವಂಚಿಸಿರುತ್ತೇವೆ. ಹಾಗೆ ವಂಚಿಸುವಾಗ, ಸುಳ್ಳು ಹೇಳುವಾಗ, ತಪ್ಪು ಮಾಡುವಾಗೆಲ್ಲಾ ನಮಗೆ ಏನೂ ಅನಿಸಿರುವುದೂ ಇಲ್ಲ.

ಇಷ್ಟಕ್ಕೂ, ಇಂತಹ ಎಲ್ಲಾ ಸಂದರ್ಭಗಳಲ್ಲೂ ತಪ್ಪು ಮಾಡಬೇಕೆನ್ನುವ ಉದ್ದೇಶವಾಗಲಿ, ವಂಚಿಸುವ ಇರಾದೆಯಾಗಲೀ ಇರುವುದೇ ಇಲ್ಲ. ಆ ಕ್ಷಣಕ್ಕೆ ಮನಸ್ಸು ಅನಗ್ಯತದ ಆಸಕ್ತಿಗೆ, ಒಳಗೇನಿರಬಹುದು ಅನ್ನುವ ಚಪಲಕ್ಕೆ, ಅವರ ಬಗ್ಗೆ ನನಗಿಷ್ಟೆಲ್ಲಾ ಗೊತ್ತು ಅನ್ನುವುದನ್ನು ಮೂರನೆಯವರಿಗೆ ಗೊತ್ತು ಪಡಿಸಬೇಕು ಅನ್ನುವ ವಿಚಿತ್ರ ತೆವಲಿಗೆ, ಅಪ್ಪ-ಅಮ್ಮನಿಗಿಂತ ನಾವೇನು ಕಡಿಮೆ ತಿಳುವಳಿಕೆ ಇರುವವರಲ್ಲ ಅನ್ನುವ ಅಹಮ್ಮಿಗೆ ಬಿದ್ದು ಬಿಡುತ್ತದೆ. ಆಗಲೇ ಮನಸ್ಸು ಸಣ್ಣ ಪುಟ್ಟ ಎಲ್ಲೆ ಮೀರ ಬಯಸುವುದು.

ನಿಜ, ಅವೆಲ್ಲಾ ಗಹನವಾದ ತಪ್ಪುಗಳಾಗಿರುವುದಿಲ್ಲ, ಅಥವಾ ಆ ತಪ್ಪುಗಳಿಂದ ಯಾರ ಬದುಕೂ, ಯಾವ ಸಂಬಂಧಗಳೂ ಮೂರಾಬಟ್ಟೆಯಾಗಿರುವುದಿಲ್ಲ. ಆದರೆ, ಒಂದು ಸಣ್ಣ ಸುಳ್ಳಿನಿಂದ ಪ್ರಪಂಚವೇನೂ ಮುಳುಗಿ ಹೋಗುವುದಿಲ್ಲ ಅನ್ನುವುದು ಎಷ್ಟು ಸತ್ಯವೋ, ಒಂದು ಸಣ್ಣ ಸತ್ಯದಿಂದ ಮನುಷ್ಯನ ಮಾನಸ ಪ್ರಪಂಚ ವಿಸ್ತರಿಸುತ್ತಾ ಹೋಗುತ್ತದೆ ಅನ್ನುವುದೂ ಅಷ್ಟೇ ಸತ್ಯ. ಇಷ್ಟಕ್ಕೂ ಬದುಕಿಗೆ, ಮನಸ್ಸಾಕ್ಷಿಗೆ ಮುಖ್ಯವೆನಿಸುವುದು, ಪ್ರಶ್ನಿಸಬೇಕೆನಿಸುವುದು ತಪ್ಪುಗಳಷ್ಟನ್ನೇ ಹೊರತು ಅದರ ಗಹನತೆಯನ್ನಲ್ಲ.

ಬದುಕು ನಮ್ಮನ್ನೆಂದೂ ಪ್ರಶ್ನಿಸಲೇಬಾರದು, ಅಷ್ಟು ವ್ಯವಸ್ಥಿತವಾಗಿ, ಚೊಕ್ಕಟವಾಗಿ, ಅನ್ನದಲ್ಲಿ ಒಂದೇ ಒಂದು ಕಲ್ಲೂ ಸಿಗದಂತೆ ಬದುಕುತ್ತೇನೆ ಅಂದುಕೊಳ್ಳುವುದು, ಹಾಗೆಯೇ ಅವುಡುಗಚ್ಚಿ, ಪ್ರತಿಕ್ಷಣ ಪರಮ ಜಾಗರೂಕತೆಯಿಂದ ಬದುಕಲು ಪ್ರಯತ್ನಿಸುವುದು ಎರಡೂ ದೂರದಲ್ಲೆಲ್ಲೋ ಆಕಾಶ ಭೂಮಿಯನ್ನು ಸ್ಪರ್ಶಿಸುತ್ತದೆ ಎಂದು ಭಾವಿಸಿಕೊಳ್ಳುವಷ್ಟೇ ಅವಾಸ್ತವಿಕ. ಅಂತಹ ನಿರ್ಧಾರಗಳು ನಮ್ಮ ಬದುಕನ್ನು ಮತ್ತೊಂದು ಭ್ರಮಾದೀನ ಸ್ಥಿತಿಯಲ್ಲಿರಿಸುವುದನ್ನು ಹೊರತು ಪಡಿಸಿ ಇನ್ನೇನನ್ನೂ ಮಾಡದು. ಹಾಗೆಂದು, ಬದುಕಿನ ನ್ಯಾಯಯುತ ಪ್ರಶ್ನೆಗಳಿಗೆ ಉತ್ತರಿಸಲಾಗದೆ  ಪದೇ ಪದೇ ಮನಸ್ಸಾಕ್ಷಿಯ ಮುಂದೆ ತಲೆ ತಗ್ಗಿಸಿ ಮಂಡಿಯೂರುವ ಪರಿಸ್ಥಿತಿಯೂ ಎದುರಾಗಬಾರದು ಅಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ