ಶನಿವಾರ, ಮೇ 14, 2016

ನಿರ್ಧಾರಕ್ಕೆ ಬರುವ ಮುನ್ನ ಒಂದಿಷ್ಟಾದರೂ ಯೋಚಿಸಿ.

ಬೆಳ್ಳಂಬೆಳಗ್ಗೆ ಎದ್ದು, ಕಣ್ಣುಜ್ಜಿಕೊಳ್ಳುತ್ತಾ ಮೊಬೈಲ್ ಸ್ಪರ್ಶಿಸಿದರೆ, ಇನ್‍ಬಾಕ್ಸ್ ಒಳಗೊಂದು ಮೆಸೇಜ್ ಬೆಚ್ಚನೆ ಕೂತಿತ್ತು. ತೆರೆದು ನೋಡಿದ್ರೆ, 'ಹುಡುಗನೊಬ್ಬ ಪ್ರೀತಿಸುತ್ತಿದ್ದರೆ ಅದು ಸಂಬಂಧಪಟ್ಟ ಹುಡುಗಿಯನ್ನು ಹೊರತು ಪಡಿಸಿ ಉಳಿದೆಲ್ಲರಿಗೂ ತಿಳಿದಿರುತ್ತದೆ. ಹಾಗೆಯೇ ಹುಡುಗಿಯೊಬ್ಬಳು ಪ್ರೀತಿಸುತ್ತಿದ್ದರೆ ಅದು ಅವಳೊಬ್ಬಳನ್ನು ಹೊರತುಪಡಿಸಿ ಇನ್ಯಾರಿಗೂ ತಿಳಿಯುವುದಿಲ್ಲ' ಅಂತಿತ್ತು. ಓದಿದಾಕ್ಷಣ ಫನ್ನಿ ಅಂತ ಅನ್ನಿಸಿದರೂ ತುಸು ಹೊತ್ತು ಕಳೆದ ನಂತರ, ಅರೆ ಹೌದಲ್ವಾ? ಅಂತ ಅನಿಸತೊಡಗಿತು.

ಹಲವು ಸಂದರ್ಭಗಳಲ್ಲಿ,  ಪಕ್ಕದ ಬೆಂಚಲ್ಲಿ ಕೂರೋ ಹುಡುಗಿಯೋ, ಇಲ್ಲ ಎದುರು ಮನೆ ಅಂಕಲ್ ಮಗಳೋ, ಅತ್ತಿಗೆಯ ತಂಗಿಯೋ, ತಂಗಿಯ ಗೆಳತಿ, ಸೋದರತ್ತೆಯ ದೊಡ್ಡಣ್ಣನ ಮಗಳು, ದಿನಾ ವಾಕಿಂಗ್‍ಗೆ ಜೊತೆಯಾಗೋ ಹುಡುಗಿ,  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಸಮಾನ ಅಭಿರುಚಿಯ ಹೆಣ್ಣು ಮಗಳು... ಮುಂತಾದವರೆಲ್ಲಾ ನಿಮ್ಮನ್ನು ಅಂದರೆ ಹುಡುಗರನ್ನು ತುಂಬಾ ಆತ್ಮೀಯವಾಗಿ ಮಾತಾಡಿಸುತ್ತಾರೆ, ಹತ್ತಿರವಿದ್ದರೆ ಹೆಗಲ ಮೇಲೊಂದು ಕೈ ಇಟ್ಟುಕೊಂಡೇ ಹರಟುತ್ತಾರೆ, ವಿಪರೀತ ಅನ್ನುವಷ್ಟು ಹಚ್ಚಿಕೊಳ್ಳುತ್ತಾರೆ.

ನೀವು ಮಧ್ಯ ರಾತ್ರಿ ಕರೆ ಮಾಡಿದರೂ ಅದನ್ನು ನಿದ್ದೆಗಣ್ಣಿನಲ್ಲೇ ಅಟೆಂಡ್ ಮಾಡುತ್ತಾರೆ, ನಂಗೊಂದು ಹೆಲ್ಪ್ ಆಗ್ಬೇಕಿತ್ತು ಕಣೇ ಅಂದ್ರೆ ತಮ್ಮ ಜೀವ ಒತ್ತೆ ಇಟ್ಟಾದರೂ ಸಹಾಯ ಮಾಡೋಕೆ ಸಿದ್ಧರಾಗುತ್ತಾರೆ, ನನ್ ಹುಡುಗಿ ನಂಗೆ ಮೋಸ ಮಾಡಿದ್ಳು ಕಣೇ ಅಂದ್ರೆ ನಿಮ್ಮ ಹತ್ತಿರ ಕೂತು ಹೋಗ್ಲಿ ಬಿಡೋ, ಅವಳಿಗೆ ನಿನ್ನ ಪಡಕೊಳ್ಳುವ ಯೋಗ್ಯತೆ ಇಲ್ಲ ಬಿಡು ಎಂದು ಸಮಾಧಾನಿಸುತ್ತಾಳೆ, ಯಾಕೋ ಕ್ಲಾಸ್ ಬೋರಾಗ್ತಿದೆ ಬಂಕ್ ಮಾಡ್ತೀನಿ ಅಂದ್ರೆ ನೀನಿಲ್ದಿರೋ ಕ್ಲಾಸಲ್ಲಿ ಕೂರೋಕೆ ನಂಗೂ ಬೋರ್, ನಾನು ಬರ್ತೀನಿ ಇರು ಅಂತಾಳೆ. ಅಪ್ಪಿತಪ್ಪಿ ಏನಾದ್ರೂ ’ಈ ಲೈಫ್ ಬೇಜಾರಾಗೋಗಿದೆ’ ಅಂತ ರಾತ್ರಿ ಮಲಗೋ ಮುನ್ನ ವಾಟ್ಸಾಪ್ ಸ್ಟೇಟಸ್ ಹಾಕೊಂಡ್ರೆ ಪ್ರಪಂಚಾನೇ ಅಲ್ಲೋಲಕಲ್ಲೋಲ ಆಯ್ತೇನೋ ಎಂಬಂತೆ ಆಕ್ಷಣಾನೇ ಕರೆ ಮಾಡಿ ಬೆಳಕು ಹರಿಯುವವರೆಗೂ ನಿಮ್ಮನ್ನು ಎಂಗೇಜಲ್ಲಿರಿಸುತ್ತಾಳೆ, ನೀವು ಕೇಳದೇನೇ ನಿಮ್ಮ ಅಸೈನ್‍ಮೆಂಟ್ ಬರೆದಿಡ್ತಾಳೆ, ಅಪ್ಪನ ಜೊತೆ ಶಾಪಿಂಗ್ ಹೋದ್ರೂ ಅಲ್ಲಿಂದಲೇ ಫೋನ್ ಹಚ್ಚಿ ಯಾವ ಕಲರ್ ಡ್ರೆಸ್ ತಗೋಬೇಕು ಹೇಳೋ ಅಂತ ನಿಮ್ಮ ತಲೆ ತಿನ್ನುತ್ತಾಳೆ, ಒಂದೇ ಒಂದು ದಿನ ಸಿಗದೇ ಇದ್ರೂ ಇಷ್ಟಗಲ ಕಣ್ಣರಳಿಸಿ ನಿನ್ನೆ ಎಲ್ಲಿ ಸಾಯೋಕೆ ಹೋಗಿದ್ದೆ ಅಂತ ಕೇಳ್ತಾಳೆ ಅಥವಾ ಮೂತಿನಾ ಇಷ್ಟುದ್ದ ಮಾಡ್ಕೊಂಡು ನಿನ್ನ ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಾ ಅಂತ ಪ್ರಶ್ನಿಸ್ತಾಳೆ. ನೀನಿಲ್ದೇ ನನ್ನ ಬದುಕು ಇನ್‍ಕಂಪ್ಲೀಟ್ ಕಣೋ ಎಂದು ಸಾವಿರ ಬಾರಿ ಹೇಳಿರುತ್ತಾಳೆ ಮತ್ತು ಹಾಗೆ ನಡ್ಕೊಂಡಿರುತ್ತಾಳೆ ಕೂಡ.

ಅದರೆ ಹುಡುಗರಾ, ನೀವಂದುಕೊಂಡಿರುವಂತೆ ಅದು ಪ್ರೀತಿಯಾಗಿರುವುದಿಲ್ಲ. ಅಲ್ಲಿ ನಿಮ್ಮನ್ನು ಜೀವನಸಂಗಾತಿಯಾಗಿ ಪಡೆದುಕೊಳ್ಳಬೇಕು ಅನ್ನುವ ಆಸೆ ಇರುವುದಿಲ್ಲ. ಅವಳು ನಿಮ್ಮನ್ನೆಂದೂ ಪ್ರೇಮಿಯಾಗಿ ಕಲ್ಪಿಸಿಕೊಂಡಿರುವುದಿಲ್ಲ. ಅಲ್ಲಿರುವುದು ಶುದ್ಧಾನುಶುದ್ಧ ಸ್ನೇಹ ಮಾತ್ರ. ಅವನು ನನ್ನ ಜೀವದ ಗೆಳೆಯ ಅನ್ನುವ ನಿಷ್ಕಳಂಕ ಭಾವ ಮಾತ್ರ. ನನ್ನ ಪ್ರತಿ ಸೋಲಲ್ಲೂ, ಪ್ರತಿ ಗೆಲುವಲ್ಲೂ ನನ್ನೀ ಗೆಳೆಯನಿರುತ್ತಾನೆ ಅನ್ನುವ ಭರವಸೆಯದು. ನನ್ನ ಪ್ರತೀ ನಲಿವನ್ನೂ, ಪ್ರತಿ ಸೋಲನ್ನೂ ಹಂಚಿಕೊಳ್ಳೋಕೆ ಒಂದು ಜೀವವಿದೆ ಅನ್ನುವ ನಂಬಿಕೆಯದು.

ನೀವು ನೊಂದಾಗ ಎಲ್ಲೇ ಇದ್ದರೂ ಓಡೋಡಿ ಬಂದು ನಿಮ್ಮನ್ನವಳು ಸಮಾಧಾನಿಸುತ್ತಾಳೆ ಅಂದರೆ ಅದು ಪ್ರೇಮವಲ್ಲ, ಅವಳ ಒಳ್ಳೆಯತನ. ಪ್ರತೀ ಹೆಣ್ಣು ಹುಟ್ತುತ್ತಲೇ ತಾಯಿಯಾಗಿಯೇ ಹುಟ್ಟುತ್ತಾಳಂತೆ. ಮಗಳಾಗಿ, ತಂಗಿಯಾಗಿ, ಅಕ್ಕನಾಗಿ, ಅತ್ತಿಗೆಯಾಗಿ, ಗೆಳತಿಯಾಗಿ ಕೊನೆಗೆ ಪ್ರೇಮಿಯಾಗಿ ಕೂಡ ಆಕೆ ನಿಭಾಯಿಸುವುದು, ನಿರ್ವಹಿಸುವುದು ತಾಯ್ತನದ ವಿವಿಧ ಮಜಲುಗಳನ್ನೇ, ವಿವಿಧ ಪದರುಗಳನ್ನೇ. ಇಲ್ಲೂ ಅಷ್ಟೆ, ನೀವು ನೊಂದಿದ್ದೀರಿ ಅಂದಾಕ್ಷಣ ಅವಳಲ್ಲಿ ಒಳಗೆಲ್ಲೋ ಸುಪ್ತವಾಗಿದ್ದ ತಾಯ್ತನ ಜಾಗೃತವಾಗುತ್ತದೆ. ಅದರಿಂದಾಗೇ ಆಕೆ ನಿಮ್ಮ ಬಳಿ ಓಡಿ ಬರುತ್ತಾಳೆ, ಎಷ್ಟು ಸಾಧ್ಯವೋ ಅಷ್ಟೂ ಕಂಫರ್ಟ್ ಫೀಲ್ ಕೊಡೋಕೆ ಪ್ರಯತ್ನಿಸುತ್ತಾಳೆ. ಹಾಗೆ ಕೊಡೋಕೆ ಆಗದೇ ಇದ್ದಾಗೆಲ್ಲಾ ತಾನು ಈ ಸಂಬಂಧವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲವೇನೋ ಅನ್ನುವ ತೊಳಲಾಟಕ್ಕೆ ಬಿದ್ದುಬಿಡುತ್ತಾಳೆ.

ಅದನ್ನೇ, ಆ ಒಳ್ಳೆಯತನವನ್ನೇ ನೀವು ಪ್ರೀತಿ ಅಂದುಕೊಳ್ಳುತ್ತೀರಿ. ನೀನಿಲ್ಲದೇ ನನ್ನ ಬದುಕು ಇನ್‍ಕಂಪ್ಲೀಟ್ ಕಣೋ ಅಂದಿರುವುದನ್ನೇ ಪ್ರೇಮದ ತೀವ್ರತೆಯೆಂದು ಪರಿಗಣಿಸುತ್ತೀರಿ. ಒಂದೇ ಒಂದು ಕ್ಷಣಕ್ಕೂ ಅದು ಆಕೆಯ ಸ್ನೆಹದ ಆಳ, ನಿರ್ಮಲತೆ ಅಂತ ನಿಮಗನಿಸುವುದೇ ಇಲ್ಲ. ಅವಳನ್ನು ಒಂದು ಮಾತೂ ಕೇಳದೇ, ನಿಮಗೆ ನೀವೇ ಪ್ರೀತಿಸುತ್ತಿರುವುದಕ್ಕೇ ಇಷ್ಟೊಂದು ಕಾಳಜಿ ತೋರುತ್ತಿದ್ದಾಳೆ ಎಂದು ನಿರ್ಧರಿಸಿಬಿಡುತ್ತೀರಿ.

ಸರಿ, ಹಾಗೆ ನಿರ್ಧರಿಸಿದ ಮೇಲಾದರೂ, ನಿಮ್ಮ ಅಷ್ಟೊಂದು ಹಚ್ಚಿಕೊಂಡ ಹುಡುಗಿಯ ಹತ್ತಿರ ಕೂತು, ಆತ್ಮೀಯತೆಯಿಂದ, ನನಗೇನೋ ನೀನು ನನ್ನ ಪ್ರೀತಿಸುತಿದ್ದಿ ಅನ್ನಿಸುತ್ತದೆ, ನೀನೇನು ಹೇಳುತ್ತಿ ಎಂದು ಕೇಳುವುದೋ, ಇಲ್ಲ ನಮ್ಮಿಬ್ಬರ ಸ್ನೇಹವನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೊಯ್ದು ಸಂಗಾತಿಗಳಾಗೋಣ ಅಂತಲೋ ಹೇಳುತ್ತೀರೇನೋ ಅಂದರೆ ಅದೂ ಇಲ್ಲ. ಹಾಗೇನೂ ಮಾಡದೆ, ಮುಂಜಾವಿನ್ನೂ ಕಣ್ಣುಬಿಡುವ ಮುನ್ನವೇ ಅವಳು ಕಳುಹಿಸಿದ್ದ  good morning  ಮೆಸೇಜನ್ನೋ ಅಥವಾ ಗೆಳತಿಯರ ಜೊತೆಗೆ ಟ್ರಿಪ್ ಹೋದಾಗ ಬಿಡುವು ಮಾಡಿಕೊಂಡು ಕಳುಹಿಸಿದ miss you  ಮೆಸೇಜನ್ನೋ ಆಧಾರವಾಗಿಟ್ಟುಕೊಂಡು, ಅವಳೊಬ್ಬಳನ್ನು ಹೊರತುಪಡಿಸಿ ಊರಿಡೀ ಅವಳು ನನ್ನ ಪ್ರೀತಿಸುತ್ತಿದ್ದಾಳೆ ಅಂತ ಡಂಗುರ ಸಾರಿಕೊಂಡು ಬರುತ್ತೀರಿ.

ಒಂದಿಷ್ಟು ದಿನಗಳ ಕಾಲ ನಿಮ್ಮ ಡಂಗುರ ಗುಟ್ಟಾಗಿಯೇ ಉಳಿದಿರುತ್ತದೆ. ಆಮೇಲೊಂದಿನ ಮೂರನೆಯವರ ಮೂಲಕ ಅದು ಅವಳ ಕಿವಿ ತಲುಪುತ್ತದೆ. ಮೊದಮೊದಲು ತಮಾಷೆ ಇರಬಹುದೇನೋ ಅಂದುಕೊಂಡು ಅವಳೂ ಸುಮ್ಮನಿರುತ್ತಾಳೆ. ಆಮೇಲೆ, ಇಲ್ಲವೇ ಇಲ್ಲ, ನಮ್ಮ ಸ್ನೇಹವನ್ನು ಕೆಡಿಸಲು ನೀವೆ ಇಲ್ಲಸಲ್ಲದ ಕಥೆ ಕಟ್ಟುತ್ತಿದ್ದೀರಿ ಎಂದು ವಾದಿಸುತ್ತಾಳೆ. ಮತ್ತೂ ಅವರು ಸುಮ್ಮನಾಗದಿದ್ದರೆ, ನನ್ ಫ್ರೆಂಡ್ ಹಾಗೆಲ್ಲಾ ಹೇಳಿರಲ್ಲ ಅನ್ನುವುದನ್ನು ಜಗತ್ತಿಗೇ ಸಾಬೀತು ಪಡಿಸಬೇಕು ಅನ್ನುವ ಹಠಕ್ಕೆ ಬಿದ್ದು ಬಿಡುತ್ತಾಳೆ. ಆಗಲೇ ಎಲ್ಲರೆದುರು ನಿಮ್ಮ ಕರೆದು, ಇವರೆಲ್ಲಾ ನಿನ್ನ ಬಗ್ಗೆ ಏನೇನೋ ಕಥೆ ಕಟ್ಟಿ ಹೇಳುತ್ತಿದ್ದಾರೆ, ಅವನ್ನೆಲ್ಲಾ ಒಮ್ಮೆ ನಿರಾಕರಿಸಿಬಿಡು ಅನ್ನುವುದು. ನೀವಾಗ ಅದನ್ನು ನಿರಾಕರಿಸಲಾಗದೆ, ಪೆಕರು ಪೆಕರಾಗಿ ಅವರಂದಿರುವುದೆಲ್ಲಾ ನಿಜ ಕಣೇ, ನೀನೂ ನನ್ನ ಪ್ರೀತಿಸುತ್ತಿದ್ದಿ ಅಂತ ನಾನಂದುಕೊಂಡಿದ್ದೆ ಎಂದು ಒಗರೊಗಾದ ಧ್ವನಿಯಲ್ಲಿ ಹೇಳಿ ತಲೆ ತಗ್ಗಿಸಿ ನಿಂತುಬಿಡುತ್ತೀರಿ.

ಅಲ್ಲಿಗೆ, ನಿಮ್ಮ ಮೇಲೆ, ಸ್ನೇಹದ ಮೇಲೆ, ಆಕೆಗಿದ್ದ ಅಖಂಡ ನಂಬಿಕೆ ಸಂಪೂರ್ಣ ಕುಸಿದುಬಿಡುತ್ತದೆ. ನೀವಾಕೆಯನ್ನು ಪ್ರೀತಿಸಿದಿರಿ ಅನ್ನುವುದಕ್ಕಿಂತಲೂ ಯಾರೋ ಮೂರನೆಯವರ ಮುಖಾಂತರ ಅದನ್ನುr ತಿಳಿದುಕೊಳ್ಳುವಂತಾಯಿತಲ್ಲಾ ಅನ್ನುವುದವಳನ್ನು ಹೆಚ್ಚು ಭಾದಿಸತೊಡಗುತ್ತದೆ. ಇವೆಲ್ಲದರ ತಾಯಿ ಬೇರು ಅಪನಂಬಿಕೆ ಅನಿಸತೊಡಗುತ್ತದೆ. ಯಾವ ಸಂಬಂಧವನ್ನು  ಕಣ್ಣರೆಪ್ಪೆಯೊಳಗಿತ್ತು ಕಾಯ್ದಿದ್ದಳೋ ಅದೇ ಸಂಬಂಧದಿಂದ ಹೊರಬರಲು ಮನಸು ಚಡಪಡಿಸತೊಡಗುತ್ತದೆ. ಅಲ್ಲಿಂದಾಚೆ ನೀವು ಎಷ್ಟೇ ವಿವರಣೆ ಕೊಟ್ಟರೂ, ಸಮಜಾಯಿಷಿ ನೀಡಿದರೂ ಅದನ್ನು ಅವಳು ಒಪ್ಪಿಕೊಳ್ಳುವುದಿಲ್ಲ. ಒಪ್ಪಿಕೊಳ್ಳುವುದು ಬಿಡಿ, ನಿಮ್ಮ ವಿವರಣೆಗಳನ್ನು, ಸಮಜಾಯಿಷಿಗಳನ್ನು ಕೇಳಿಸಿಕೊಳ್ಳಲೇ ತಯಾರಿರುವುದಿಲ್ಲ. ಪರಿಣಾಮ, ಮಧುರ ಸಂಬಂಧವೊಂದು ಅಕಾಲಕ್ಕೇ ಆತ್ಮಹತ್ಯೆ ಮಾಡಿಬಿಡುತ್ತದೆ.

ಹೀಗೆ, ಬದುಕಿನ ಹಲವು ಸಂಭ್ರಮದ ಘಳಿಗೆಗಳನ್ನು, ನೋವಿನ ಕ್ಷಣಗಳನ್ನು ಹಂಚಿಕೊಂt ಸಂಬಂಧವೊಂದು ಏಕಾಏಕಿ ಕೈಬಿಟ್ಟುಹೋಗುತ್ತದಲ್ಲಾ, ಅದನ್ನು ಭರಿಸುವುದು, ಆ ಕಳೆದುಕೊಂಡ ನೋವಿನೊಂದಿಗೇ ಜೀವನ ಪೂರ್ತಿ ಏಗುವುದು ಅಷ್ಟೊಂದು ಸುಲಭವಲ್ಲ. ಬದುಕಿನ ಪ್ರತಿ ಕ್ಷಣಾನೂ ಆ ಸಂಬಂಧದ ಮಧುರ ನೆನಪುಗಳು ಮತ್ತು ಅದು ಈಗ ಜೀವಂತವಾಗಿಲ್ಲ ಅನ್ನುವ ನಿರಾಸೆ ಕಾಡುತ್ತಲೇ ಇರುತ್ತದೆ. ಹಾಗಾಗಬಾರದು ಅಂತಿದ್ದರೆ,  ಸಂಬಂಧಗಳ ಬಗ್ಗೆ ಒಂದು ನಿರ್ಧಾರಕ್ಕೆ ಬರುವ ಮುನ್ನ, ನೂರು ಮಂದಿಯ ಮುಂದೆ ಒಂದು ಮಾತು ಆಡುವ ಮುನ್ನ ದಯವಿಟ್ಟು ಒಂದಿಷ್ಟಾದರೂ ಯೋಚಿಸಿ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ