ಮಂಗಳವಾರ, ಜೂನ್ 2, 2015

ನಾ ಕಂಡಂತೆ ’ಕರ್ವಾಲೊ’.. .. ..


’ಕರ್ವಾಲೊ’

ಕಳೆದ ಐದು ವರ್ಷಗಳಲ್ಲಿ ನನ್ನ ಅನೇಕ ಖುಶಿಯ ಕ್ಷಣಗಳಿಗೆ, ಮಧುರ ನಿಮಿಷಗಳಿಗೆ, ಬೇಸರದ ಸಂಜೆಗಳಿಗೆ, ಏಕಾಂತ ರಾತ್ರಿಗಳಿಗೆ, ಸಿಹಿ ಸಿಹಿ ಬೆಳಗುಗಳಿಗೆ, ಬಿರು ಮಳೆಯ ಸ್ವಗತಗಳಿಗೆ, ದಟ್ಟ ಚಳಿಯ ನಡುಕಗಳಿಗೆ, ಮುಸ್ಸಂಜೆಯ ಕೆಲ ದಿವ್ಯ ಅನುಭೂತಿಗಳಿಗೆ ಸಾಕ್ಷಿಯಾದ, ಜೊತೆಯಾದ ಆತ್ಮ ಸಂಗಾತಿಯಿದು.

ತೇಜಸ್ವಿ ಅಂದ್ರೇನೇ ಖುಶಿ, ಅವರ ಬರಹಗಳಂದ್ರೇನೇ ಸಂಭ್ರಮ, ಇಷ್ಟ, ಪ್ರೀತಿ, ಅಭಿಮಾನ ಎಲ್ಲವೂ. ಅವರ ಎಲ್ಲಾ ಕೃತಿಗಳೂ ಸಂತೆಯೊಳಗೂ ಏಕಾಂತವನ್ನು ಒದಗಿಸಿ ಕೊಡುವ ಮಾಂತ್ರಿಕ ಶಕ್ತಿಯನ್ನು ಹೊಂದಿವೆ. ತುಸು ಹಾಸ್ಯ, ಸಹ್ಯ ವಿಡಂಬನೆ, ಕಟು ವ್ಯಂಗ್ಯ ಇವಿಷ್ಟೂ ತೇಜಸ್ವಿ ಅವರ ಪ್ರತಿಯೊಂದು ಹೊತ್ತಿಗೆಯಲ್ಲೂ ಎದ್ದು ಕಾಣುವ ಅಂಶಗಳು. ಒಂದು ಪುಸ್ತಕ ಓದಿಸಿಕೊಂಡು ಹೋಗಲು ಇನ್ನೇನು ಬೇಕು? ಕೊನೆಯ ಹಾಳೆ ಮಗುಚಿ ನಕ್ಕು ಪುಸ್ತಕವನ್ನಿಟ್ಟು ಹಾಸಿಗೆಗೆ ಒರಗಿದ ಮೇಲೆಯೋ, ನೀರು ಕುಡಿಯಲೆಂದು ಅರ್ಧ ರಾತ್ರಿಯಲ್ಲಿ ಎದ್ದಾಗಲೋ, ಕಣ್ಣಳತೆಯ ದೂರದಲ್ಲಿದಲ್ಲಿರುವ ಪುಸ್ತಕದ ಹೊರಪುಟದ ಸರಳತೆ ಎಷ್ಟು ಹೃದ್ಯವಾಗಿದೆ ಅಂತ ಅನಿಸುವಾಗಲೋ ಪಕ್ಕನೆ ’ಅರೆ ಈ ಕಥೆ ಎಷ್ಟು ಅದ್ಭುತವಾಗಿದೆಯಲ್ಲಾ’ ಅನ್ನುವ ಭಾವ ಮೂಡಿ ಮರೆಯಾಗುತ್ತದೆ. ಇದು ಬರಿ ನಗಲು ಅಥವಾ ಮನರಂಜನೆಗಾಗಿ ಮಾತ್ರ ಇರುವ ಪುಸ್ತಕವಲ್ಲ, ನಮ್ಮ ಅರಿವನ್ನೂ ಮೀರಿದ ಯಾವುದೋ ತಿರುಳೊಂದು ಇದರಲ್ಲಿದೆ ಅನಿಸತೊಡಗುತ್ತದೆ. ಅಲ್ಲಿಂದೀಚೆ ಇಡೀ ದಿನ, ಕೆಲವೊಮ್ಮೆ ವಾರಗಟ್ಟಲೆ ಅದೇ ಅಚ್ಚರಿ ಮುಂದುವರಿಯುತ್ತದೆ. ಕೆಲವೊಮ್ಮೆ ತೇಜಸ್ವಿ ಅವರ ಕಥೆಗಳು ಕಾಡತೊಡಗುವುದೇ ಅದನ್ನು ಪೂರ್ತಿ ಓದಿ ಮಗುಚಿಟ್ಟ ಮೇಲೇಯೇ ಅಂತ ಅನಿಸುವುದೂ ಇದೆ.

  ಅದರಲ್ಲೂ ’ಕರ್ವಾಲೋ’ ಅಂತೂ ನನ್ನ ಭಾವಕೊಶದ ಪ್ರತಿಯೊಂದು ಜೀವತಂತುಗಳಲ್ಲೂ ಅಚ್ಚರಿಯ, ಅನನ್ಯತೆಯ ಭಾವ ತರಂಗಗಳನು ಎಬ್ಬಿಸುವ ಮಾಂತ್ರಿಕ ಹೊತ್ತಿಗೆ. ಬಹುಶಃ ರಾಷ್ಟ್ರಕವಿ ಪುತ್ರ ಅನ್ನುವ ದಂತ ಗೋಪುರದ ಹಂಗನು ತೊರೆದು ಮೂಡಿಗೆರೆಯ ದಟ್ಟ ಕಾಡಿನ ಮಧ್ಯೆ ಪದ್ಮಾಸನ ಹಾಕಿ ಕುಳಿತುಕೊಂಡಂತೆ ಅಲ್ಲಿನ ಪ್ರತಿಯೊಂದು ಜೀವಚರಗಳ ಜೊತೆಗೂ ಅವರು ನಡೆಸಿದ ಮೌನ ಸಂಭಾಷಣೆಯ ಫಲಶ್ರುತಿಗಳೇ ಈ ಮೇರು ಕೃತಿಗಳು ಅಂತನ್ನಿಸುತ್ತದೆ ಕೆಲವೊಮ್ಮೆ ನನಗೆ.

ಹತ್ತು ವರ್ಷಗಳ ಹಿಂದೆ ಹೈಸ್ಕೂಲ್ ಹುಡುಗಿಯಾಗಿದ್ದಾಗ ಮೊದಲ ಬಾರಿ ಕರ್ವಾಲೋ ಓದಿ ಮುಗಿಸಿದಾಗ ನನ್ನಲ್ಲಿ ಉದಿಸಿದ ಅದೇ ಅಚ್ಚರಿಯ ಭಾವ, ಎತ್ತಿದ ಪ್ರಶ್ನೆಗಳು,  ಎಸೆದ ಸವಾಲುಗಳು ಪ್ರತಿ ಬಾರಿಯೂ ಪುನರಾವರ್ತನೆಯಾಗುತ್ತವೆ; ಒಂದಿಷ್ಟು ಹೊಸ ಅಚ್ಚರಿಗಳೊಂದಿಗೆ, ಹೊಸ ಪ್ರಶ್ನೆಗಳೊಂದಿಗೆ, ಹೊಸ ಸವಾಲುಗಳೊಂದಿಗೆ.

’ಕರ್ವಾಲೋ’ ಒಂದು ವಿಸ್ಮಯ, ಒಂದು ಅದ್ಭುತ. ಅಲ್ಲಿ ಬರುವ ಪ್ರತಿಯೊಂದು ಪಾತ್ರಗಳೂ ಜೀವ ತಳೆಯುತ್ತವೆ, ಜೀವಂತಿಕೆ ಸ್ಪುರಿಸುತ್ತವೆ. ಜೇನು ಸೊಸೈಟಿಯಿಂದ ಜೇನು ತರುವಲ್ಲಿಂದ ಆರಂಭವಾಗುವ ಕಥೆ,  ಭತ್ತದ ಗದ್ದೆಯನ್ನು ಭಾದಿಸುವ ಹುಳುವಿನ ನಿವಾರಣೆಗೋಸ್ಕರ ಪ್ರಕೃತಿ ವಿಜ್ಞಾನಿ ಕರ್ವಾಲೋ ಅವರನ್ನು ಭೇಟಿಯಾಗುವುದರಿಂದ ಮುಂದುವರಿದು ಅಜ್ಞಾತ ಲೋಕವೊಂದರ ಅಪರೂಪದ ಜೀವಿಯೊಂದನು ಪತ್ತೆ ಹಚ್ಚುವಲ್ಲಿ ಕೊನೆಯಾಗುತ್ತದೆ. ಅಲ್ಲಿ ಮನುಷ್ಯ ಕೇವಲ ಮನುಷ್ಯನಾಗುತ್ತಾನೆ. ಮೂಕ ಜೀವಿಗಳ ಜೊತೆ ಬೆರೆತು ತನ್ನ ಮಾತು ಕಳೆದುಕೊಳ್ಳುತ್ತಾನೆ, ಮನುಷ್ಯತ್ವ ಹುಡುಕಿಕೊಳ್ಳುತ್ತಾನೆ. ಅಲ್ಲಿ ಪ್ರಕೃತಿ ಮಾತೆಯಾಗುತ್ತಾಳೆ, ಓತಿ ಕಾಲಕ್ಕೊಂದು ಸವಾಲಾಗುತ್ತದೆ, ವಿಜ್ಞಾನ ತಬ್ಬಿಬ್ಬಾಗುತ್ತದೆ. ಸ್ವಾರ್ಥ ಪೂರಿತ ಮನುಷ್ಯ ಪ್ರಪಂಚ ತೀರಾ ನಿಕೃಷ್ಟವಾಗಿ ಕಾಣುವ ’ಮಂದಣ್ಣ’ನಂತಹ ಸಾಮಾನ್ಯರಲ್ಲಿ ಅತಿ ಸಾಮಾನ್ಯನು ಮಹಾನ್ ಜ್ಞಾನಿಯಾಗುತ್ತಾನೆ. ಪ್ರಾಪಂಚಿಕ ಜ್ಞಾನದ ಲವಲೇಶವೂ ಇಲ್ಲದ ವಿಜ್ಞಾನಿ ಕರ್ವಾಲೋ ಮಂದಣ್ಣನ ಹಿಂದೆ ಬಿದ್ದಿರುವುದನ್ನು ಸಮಾಜ ಛೇಡಿಸುತ್ತದೆ, ಅವಮಾನಿಸುತ್ತದೆ, ಅಸಹ್ಯಪಟ್ಟುಕೊಳ್ಳುತ್ತದೆ. ಆದರೆ ಮಂದಣ್ಣನಿಗಿರುವ ಪ್ರಕೃತಿ ಜ್ಞಾನದ ಅರಿವಿದ್ದ ಕರ್ವಾಲೋ ಕೋರ್ಟ್, ಪೊಲೀಸ್ ಸ್ಟೇಷನ್ ಎಂದು ಅಲೆಯಬೇಕಾಗಿ ಬಂದರೂ ಅವನ ಸಖ್ಯ ಬಿಡುವುದಿಲ್ಲ. ಎಲ್ಲೋ ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ಮಾತ್ರ ಇವೆ ಎಂದು ತಿಳಿದಿದ್ದ ಮೌಮೌ ಜೇನ್ನೊಣಗಳು ಮೂಡಿಗೆರೆಯ ಕಾಡಿನಲ್ಲೂ ಇವೆ ಎಂದು ತಿಳಿದು ಅಚ್ಚರಿಗೊಳಗಾಗುತ್ತಾರೆ.

ಕಥೆಯ ಮುಖ್ಯ ಪಾತ್ರವಾದ ಮಂದಣ್ಣ ತನಗೆಂಥಾ ಅದ್ಭುತ ಜ್ಞಾನವಿದೆ ಅನ್ನುವುದನ್ನೂ ತಿಳಿಯದ ಮುಗ್ಧ. ಅವನ ಲಿಮಿಟೆಡ್ ಪ್ರಪಂಚದಲ್ಲಿ ಮದುವೆಯೇ ಸರ್ವೋಚ್ಛ ಗುರಿಯಾಗಿತ್ತು. ಅದನ್ನು ಈಡೇರಿಸದೆ ಯಾವ ಸಂಶೋಧನೆಯೂ ಸಾಧ್ಯವಿಲ್ಲ ಅನ್ನುವುದನ್ನು ಅರಿತು ವಿಜ್ಞಾನಿ ಕರ್ವಾಲೋ ಮೂಡಿಗೆರೆಯ ಪ್ರತಿಷ್ಟಿತರು ಅನ್ನಿಸಿಕೊಂಡವರ ವಿರೋಧವನ್ನೂ ಲೆಕ್ಕಿಸದೆ ತಾವೇ ಮುಂದೆ ನಿಂತು ಅವನ ಮದುವೆ ಮಾಡಿಸುತ್ತಾರೆ. ಆ ಮದುವೆಗೆ ನಿರೂಪಕನಾದಿಯಾಗಿ ಕಥೆಯ ಎಲ್ಲಾ ಪಾತ್ರಗಳೂ ಸಾಥ್ ನೀಡುತ್ತವೆ. ಮದುವೆ, ಮದುವೆ ಮನೆಯಲ್ಲಾಗುವ ಫಜೀತಿಗಳನ್ನೆಲ್ಲಾ ಓದುವಾಗ ಒಮ್ಮೆ ನಗು ಉಕ್ಕಿ ಬಂದರೂ ಪುಸ್ತಕ ಮಡಿಚಿಟ್ಟ ಮೇಲೆ ಎರಡು ಮನೆಗಳು, ಮನಗಳು ಒಂದಾಗುವ ಸಂದರ್ಭದಲ್ಲೂ ಅದೆಷ್ಟು ರಾಜಕೀಯ ನಡೆಯುತ್ತದಲ್ಲಾ ಅನ್ನಿಸಿ ವಿಷಾದವೆನಿಸುತ್ತದೆ.

ಒಂದಿಷ್ಟು ಫಜೀತಿ, ಪೀಕಲಾಟ, ಅನುಮಾನಗಳ ಮಧ್ಯೆಯೇ ಮದುವೆ ಸಾಂಗವಾಗಿ ನೆರವೇರುತ್ತದೆ. ಅದಾದಮೇಲೆ ಕಥೆಯ ಮಧ್ಯದಲ್ಲಿ ಕಳ್ಳಭಟ್ಟಿ ತಯಾರಿಕೆಯ ವಿಷಯದಲ್ಲಿ ಮಂದಣ್ಣನ ಬಂಧನವಾಗುತ್ತದೆ. ಮತ್ತೊಂದಿಷ್ಟು ಪೀಕಲಾಟಗಳು, ರಾಜಕೀಯ ದೊಂಬರಾಟಗಳು, ತಣ್ಣಗೆ ಪ್ರಕಟವಾಗುವ ಜಾತಿ ಕ್ರೌರ್ಯ ಇವೆಲ್ಲಾ ಒಳಗಿಂದೊಳಗೇ ಹೊಗೆಯಾಡಿ ಕೊನೆಗೂ ಅವನ ಬಿಡುಗಡೆಯಾಗುತ್ತದೆ.

ಅಲ್ಲಿಂದೀಚೆಗೆ ಶುರುವಾಗುವುದೇ ಸೃಷ್ಟಿಯ ರಹಸ್ಯವನ್ನರಿಯುವ ಮಹಾಯಾನ. ಮಂದಣ್ಣ, ಕರ್ವಾಲೋ, ನಿರೂಪಕ, ಕರಿಯಪ್ಪ, ಪ್ಯಾರ,  ಪ್ರಭಾಕರ, ಎಂಗ್ಟ ನಿರೂಪಕನ ನಾಯಿ ಕಿವಿ... ಹೀಗೆ ಇವರನ್ನೆಲ್ಲಾ ಒಳಗೊಂಡ ತಂಡವೊಂದು ಎತ್ತಿನ ಗಾಡಿಯಲ್ಲಿ ಈಚಲು ಬಯಲಿನ ಮೂಲಕ ಯುಗಾಂತರಗಳ ಹಿಂದಕ್ಕೆ ಪ್ರಾಯಾಣಿಸುತ್ತದೆ. ಇವರ ಪೈಕಿ ನಿರೂಪಕ, ಕರ್ವಾಲೋ, ಪ್ರಭಾಕರ ಈ ಮೂವರನ್ನು ಹೊರತು ಪಡಿಸಿ ಉಳಿದವರು ತಾವೇನನ್ನು ಹುಡುಕಲು ಹೋಗುತ್ತಿದ್ದೇವೆ ಅನ್ನುವುದನ್ನೂ ತಿಳಿಯದಷ್ಟು ಮುಗ್ಧರು. ಇವರ ಜೊತೆ ಜೊತೆಗೆ ಓದುಗರಾದ ನಾವೂ ಇನ್ನೇನು ನಡೆಯಲಿದೆ ಅನ್ನುವ ಕುತೂಹಲದಿಂದ ಸಹಪ್ರಯಾಣಿಕರಂತೆ ಅವರ ಹೆಗಲು ಬಳಸಿ ಈಚಲು ಬಯಲಿನ ಅಗಾಧತೆಯೊಳಗೆ ಕಳೆದುಹೋಗುತ್ತೇವೆ.

ಪ್ರಯಾಣದ ಜೊತೆ ಜೊತೆಗೆ ಕಾಡಿನ ಸೌಂದರ್ಯ, ಅಗಾಧತೆ, ನೀರವ ಮೌನ, ಬೆಚ್ಚಿ ಬೀಳಿಸುವ ದಟ್ಟತೆ, ಕರಿಯಪ್ಪನ ಬಿರಿಯಾನಿ ಪ್ರೀತಿ, ಪ್ಯಾರನ ಅವಿವೇಕತನ ಅನಾವರಣವಾಗುತ್ತಾ ಹೋಗುತ್ತದೆ. ಹಾರುವ ಓತಿ ಹೀಗೆಯೇ ಇರುತ್ತದೆ ಅನ್ನುವ ಸ್ಪಷ್ಟ ಕಲ್ಪನೆಯನ್ನು ಓದುಗರಿಗೆ ಕಟ್ಟಿಕೊಡುವಷ್ಟು ಶಕ್ತಿಯುತ ಮತ್ತು ಸತ್ವಪೂರ್ಣ ಸರಳ ಭಾಷೆಯ ಪ್ರಯೋಗವು ಓದುಗರಲ್ಲಿ ಮತ್ತಷ್ಟು ರೋಚಕತೆಯನ್ನುಂಟು ಮಾಡುತ್ತದೆ.

ಅಂತೂ ಇಂತು ಹಾರುವ ಓತಿ ನಿರೂಪಕರ ಕಣ್ಣಿಗೆ ಬಿದ್ದು, ಎಂಗ್ಟ ಮತ್ತು ಕರಿಯ ಮರ ಹತ್ತಿ ಅದನ್ನು ಹಿಡಿದಾಗ ಓದುಗರ ಮನವೂ, ’ಅಬ್ಬಾ! ಕೊನೆಗೂ ಸಿಕ್ಕಿತಲ್ಲಾ’ ಅಂತ ನಿಟ್ಟುಸಿರು ಬಿಟ್ಟು ಸೃಷ್ಟಿಯ ರಹಸ್ಯ ಇನ್ನೇನು ತಿಳಿದೇಬಿಟ್ಟಿತು ಅನ್ನುವಷ್ಟರಲ್ಲಿ ಓತಿ ದಿಗಂತದತ್ತ ಹಾರಿ ಮರೆಯಾಗುತ್ತದೆ. ’ಛೆ, ಹೀಗಾಗಬಾರದಿತ್ತು’ ಅಂತ ಓದುಗ ಅಂದುಕೊಳ್ಳುತ್ತಿರುವಾಗಲೇ ಆ ಓತಿಯನ್ನು ಹಿಡಿಯಲು ಹರಸಾಹಸಪಟ್ಟು ಇನ್ನೇನು ಕೈಗೆ ಸಿಕ್ಕೇ ಬಿಡುತ್ತದೆ ಅನ್ನುವಷ್ಟರಲ್ಲಿ ಕೈ ಜಾರಿ ಹೋದ ಓತಿಯ ಬಗ್ಗೆ ಕರ್ವಾಲೋ ನಿರಾಸೆ ಪಟ್ಟುಕೊಳ್ಳುತ್ತಾರೇನೋ ಅಂದುಕೊಳ್ಳುವಷ್ಟರಲ್ಲಿ ಅವರು ನಮ್ಮೆಲ್ಲಾ ನಿರೀಕ್ಷೆಗಳನ್ನು ಮೀರಿ ಒಬ್ಬ ಅಪ್ಪಟ ತತ್ವಜ್ಞಾನಿಯಂತೆ "ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ" ಅಂದುಬಿಡುತ್ತಾರೆ.

ಅಲ್ಲಿಗೆ ಕಥೆ ಮುಗಿಯುತ್ತದೆ. ಆದರೆ ಅದು ಉಳಿಸುಹೋಗುವ ಅನನ್ಯತೆಯ ಭಾವ ತಿಂಗಳುಗಟ್ಟಲೆ ಹಾಗೇ ಉಳಿದುಬಿಡುತ್ತದೆ. ಬಹುತೇಕ ಐದನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗೂ ಜೀವಶಾಸ್ತ್ರ ಪುಸ್ತಕವನ್ನು ತಲೆಕೆಳಗು ಮಾಡಿ ಓದಿದಾಗಲೂ ಅರ್ಥವಾಗದ ಡಾರ್ವಿನ್ ನ ’ವಿಕಾಸವಾದ’ವನ್ನು ಕರ್ವಾಲೋ ಮೂಲಕ ತೇಜಸ್ವಿಯವರು ಎಷ್ಟು ಸುಲಭವಾಗಿ, ಸಹಜವಾಗಿ ಅರ್ಥ ಮಾಡಿಸಿದರಲ್ಲಾ ಅನ್ನುವ ಅಚ್ಚರಿ ಪದೇ ಪದೇ ಕಾಡತೊಡಗುತ್ತದೆ. ಹಲವು ಅಂಕಿ ಅಂಶ, ಎಣಿಸಲು ಬಾರದಿರುವಷ್ಟು ಗೋಜಲಾಗಿರುವ ಲೆಕ್ಕ, ಅರ್ಥವೇ ಆಗದ ಪದಗಳು ಇವೆಲ್ಲಾ ಸೇರಿ ಒಂದು ಅಪ್ಪಟ ಗಂಭೀರ ವೈಜ್ಞಾನಿಕ ಕೃತಿಯಾಗಬೇಕಿದ್ದ ಪುಸ್ತಕವೊಂದು ತೇಜಸ್ವಿಯವರ ಕೈಯಲ್ಲಿ ಪತ್ತೇದಾರಿ ಕಥೆಯಾಗಿ, ಜನರ ಮನಸ್ಸಿಗೆ ಆಪ್ತವಾಗಿ ಅರಳುವ ಪ್ರಕ್ರಿಯೆಯೇ ಒಂದು ಅದ್ಭುತ.

೧೯೮೦ರಲ್ಲಿ ಮೊದಲ ಬಾರಿ ಬಿಡುಗಡೆಯಾದ ಈ ಕೃತಿ ಇದುವರೆಗೆ ಸರಿಸುಮಾರು ೩೫ ಪ್ರಕಟಣೆಗಳನ್ನು ಕಂಡಿದೆ. ಪಕ್ಕದ ಮಲಯಾಳಂ, ಮರಾಠಿ, ರಾಷ್ಟ್ರಭಾಷೆ ಹಿಂದಿ, ಇಂಗ್ಲಿಷ್, ದೂರದ ಜಪಾನೀ ಮುಂತಾದ ಭಾಷೆಗಳಿಗೆ ಅನುವಾದಗೊಂಡಿದೆ. ಅದು ಕಂಡಿರುವ ಪ್ರಕಟಣೆಗಳೇ, ಅನುವಾದಗಳೇ ’ಕರ್ವಾಲೋ’ದ ಜನಪ್ರಿಯತೆಯನ್ನು, ಅನನ್ಯತೆಯನ್ನು ಪ್ರಶ್ನೆಗಳಿಗೆ ಎಡೆಯಿಲ್ಲದಂತೆ ಸಾಬೀತುಪಡಿಸಿವೆ. ಆದರೆ ’ಕರ್ವಾಲೋ’ ಈ ಅಂಕಿ ಅಂಶಗಳ ಆಚೆಗೂ ಇಷ್ಟ ಆಗುವುದು ತೇಜಸ್ವಿಯವರ ಸರಳ ನಿರೂಪಣೆಯಿಂದ ಮತ್ತು ಹೃದ್ಯ ಭಾಷೆಯಿಂದಾಗಿ. ನಿಜಕ್ಕೂ ’ಕರ್ವಾಲೋ’ ಮತ್ತು ತೇಜಸ್ವಿ ಕನ್ನಡ ಸಾಹಿತ್ಯ ಲೋಕದ ಬಹುದೊಡ್ಡ ಅಚ್ಚರಿಯೇ ಸರಿ.         

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ