ಶನಿವಾರ, ಜೂನ್ 6, 2015

ಮೌನ ಕಣಿವೆಯಲಿ...

ಸಂಚಾರ 2

ಆದ್ರೆ ಅಪ್ಪ ಕುಸಿದು ಬಿದ್ದರು. ಅಜ್ಜಿ ತಂಗಿಯನ್ನು ಎತ್ತಿಕೊಳ್ಳಲೆಂದು ಅಳುತ್ತಲೇ ಕೋಣೆಯೊಳಗೆ ಹೋದರು. ಅಲ್ಲಿ ಅಮ್ಮ ನಿಶ್ಚೇತನಳಾಗಿ ಮಲಗಿದ್ದಳು. ಆಗಷ್ಟೇ ಪರಿಸ್ಥಿತಿಯ ಗಂಭೀರತೆ ಸ್ವಲ್ಪವಾದರೂ ನನಗೆ ಅರ್ಥವಾದದ್ದು. ಹಲವು ಕಥೆಗಳಲ್ಲಿ ಓದಿ ಸಾವೆಂದರೆ ಏನು ಅನ್ನುವುದು ತಿಳಿದಿತ್ತು. ಆದರೆ ಅಮ್ಮನ ಚಿತೆಗೆ ಬೆಂಕಿ ಹಚ್ಚಿ ಅವಳಿಲ್ಲದ ಖಾಲಿ ಮನೆಯೊಳಗೆ ಪ್ರವೇಶಿಸಿದಾಗಲೇ ನಿಜಕ್ಕೊ ಸಾವೆಂಬ ದಿಗ್ಭ್ರಾಂತಿ ಅಂದರೇನು ಎಂಬುವುದು ನನ್ನ ಅರಿವಿಗೆ ನಿಲುಕಿದ್ದು.

ಅಮ್ಮನ ಎದೆಹಾಲಿಗಾಗಿ ರಚ್ಚೆ ಹಿಡಿದು ಅಳುವ ಮಗು, ಏನೂ ತೋಚದೆ ಅಂಗಳದ ಮೂಲೆಯೊಂದರ ಕಂಬಕ್ಕೆ ತಲೆ ಚಾಚಿ ಆಕಾಶ ದಿಟ್ಟಿಸಿತ್ತಿರುವ ಅಪ್ಪ, ನಿತ್ರಾಣದ ಮಧ್ಯೆಯೂ ಓಡಾಡಿ ತನಗೆ ತಿಳಿದಷ್ಟು ಸುಧಾರಿಸುವ ಅಜ್ಜಿ, ಇವೆಲ್ಲದರ ಮಧ್ಯೆ "ತಾಯಿಯನ್ನು ತಿಂದು ಹುಟ್ಟಿದವಳು" ಎಂದು ಕಾವ್ಯಾಳ ಕಡೆಗೆ ಬೆರಳು ತೋರುತ್ತಿದ್ದ ಅಕ್ಕಪಕ್ಕದವರ ಹೀಯಾಳಿಕೆ... ಆ ಕ್ಷಣಾನೇ ನನ್ನ ಬದುಕು ಅವಳಿಗೆ ಮುಡಿಪೆಂದು ನಿರ್ಧರಿಸಿಬಿಟ್ಟೆ, ಆ ಕ್ಷಣದಿಂದಲೇ ಅವಳು ನನ್ನ ಪ್ರಪಂಚ ಆದಳು. ನಾನು ತಾಯಿಯಲ್ಲದ ಅಕ್ಕ... ಅವಳು ಮಗಳಲ್ಲದ ತಂಗಿ.

ಅವಳ ಖುಶಿಗೆ, ಅವಳ ನಗುವಿಗೆ, ಅವಳ ಸಂಭ್ರಮಕ್ಕೆ, ಅವಳತ್ತಾಗ ಸಮಾಧಾನಪಡಿಸೋಕೆ, ರಂಪ ಮಾಡಿದಾಗ ಸಾಂತ್ವನಿಸೋಕೆ, ಅವಳು ನಿದ್ರಿಸುವಾಗ ಲಾಲಿ ಹಾಡೋಕೆ, ಅವಳಿಗೆ ನಿದ್ರೆ ಬಾರದಿದ್ದಾಗ ಕಥೆ ಹೇಳೋಕೆ ನಾ ಮಾತು ಕಲಿತೆ. ನನ್ನ ಮೌನವ, ಅದು ನನ್ನೊಳಗೆ ಮಥಿಸುತ್ತಿದ್ದ ಸಂಭ್ರಮದ ಸೆಲೆಯ ಮರೆತುಬಿಟ್ಟೆ.

ಮೊದಲಿಂದಲೂ ಹಾಗೆ, ಸಾಮಾನ್ಯವಾಗಿ ಹೆಣ್ಣು ಮಕ್ಕಳನ್ನು ಆಕರ್ಷಿಸುವ ದುಂಡು ಮಲ್ಲಿಗೆ, ಹಸಿರು ಬಳೆ, ಬಣ್ಣದ ಬಿಂದಿ, ಲಂಗ ದಾವಣಿ, ಇವ್ಯಾವುವೂ ನನ್ನ ಆಕರ್ಷಿಸಿರಲೇ ಇಲ್ಲ. ಕಾಡೋ ಕಾಡು, ದಟ್ಟ ಗುಡ್ಡ, ಹಸಿರು ಬೆಟ್ಟ, ಕಡಲ ತಡಿ, ಅಲೆಯ ಅಬ್ಬರ ಇಂತಹವುಗಳೇ ನನ್ನ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು. ಕಾವ್ಯ ನನ್ನ ಪ್ರಪಂಚವಾದ ಮೇಲಂತೂ ಸಣ್ಣ ಪುಟ್ಟ ಆಸೆಗಳೂ ನಂಗೆ ಗೌಣವೆನಿಸತೊಡಗಿದವು.

ಆದ್ರೆ ಬಿರು ಮಳೆಯ ರಾತ್ರಿಗಳಲ್ಲಿ ಕಾವ್ಯ ನಿದ್ದೆ ಹೋದ ನಂತರ ನಾನು ಎದ್ದು ಕಿಟಕಿಯ ಪಕ್ಕ ಕೂತು ಒಬ್ಬಳೇ ಧೇನಿಸುತ್ತಿದ್ದೆ, ತಾಯಿಗಾಗಿ ಹಂಬಲಿಸುತ್ತಿದ್ದೆ. ಅಮ್ಮನ ತೋಳಲ್ಲಿ ಕರಗಿಹೋಗಬೇಕೆಂದು ಬಯಸುತ್ತಿದ್ದೆ.  ನನ್ನ ಬದುಕಿನ ಖಾಲಿತನದ ಅನುಭವ ನನಗಾಗುತ್ತಿದುದೇ ಆವಾಗ.  ಮಂದ ಬೆಳಕಿನಲ್ಲಿ ನನ್ನ ನೆರಳು ಚಲಿಸಿದಂತಾಗಿ ಕೆಲವು ರಾತ್ರಿಗಳಲ್ಲಿ ಅಪ್ಪ ಎದ್ದು ಬಂದು ನನ್ನ ತಬ್ಬಿಕೊಂಡು ಅಳುತ್ತಿದ್ದರು. ಆಗೆಲ್ಲಾ ’ಇನ್ಮುಂದೆ ಅಮ್ಮನ ನೆನೆಸ್ಕೊಂಡು ಕೊರಗಲೇಬಾರದು’ ಅಂದುಕೊಳ್ಳುತ್ತಿದೆ. ಆದ್ರೆ ತುಂಬಾ ಮಳೆ ಸುರಿದಾಗ, ಮನೆಯ ಛಾವಣಿಯ ಮೇಲೆ ಮಳೆ ಹನಿಗಳ ಸದ್ದು ಕೇಳಿದಾಗೆಲ್ಲಾ ಆ ನಿರ್ಧಾರ ಮತ್ತೆ ಕಣ್ಣೀರಾಗಿ ಹರಿದು ಹೋಗುತ್ತಿತ್ತು. ಅಪ್ಪ ಎದೆಗವುಚಿಕೊಂಡು ತಲೆ ನೇವರಿಸುತ್ತಿದ್ದರೂ, ಮನಸು ಇದು ಅಮ್ಮನ ಕೈ ರೇಖೆಯ ಸ್ಪರ್ಶ ಅಲ್ಲವಲ್ಲ ಎಂದು ಚೀರಿ ಚೀರಿ ಅಳುತ್ತಿತ್ತು.

ಆದ್ರೆ ಅದು ಬೊಗಸೆಯಲ್ಲೇ ಸಮುದ್ರ ಹಿಡಿಯುವಷ್ಟು ಉತ್ಸಾಹ, ಹುಮ್ಮಸ್ಸು ಇದ್ದ ವಯಸ್ಸು. ಅರೆ ಕ್ಷಣ ನೋವಾದ್ರೂ ಮತ್ತೆ ಜೀವನ್ಮುಖಿಯಾಗುತ್ತಿದ್ದೆ. ತಂಗಿ ಅನ್ನುವ ಮುದ್ದು ಜೀವ ಬೇರೆ ಜೊತೆಗಿತ್ತು. ನನ್ನ ವಿಷಣ್ಣತೆ, ಎದೆಯಾಳದ ಗಾಯಗಳಾವುವೂ ಅವಳ ಬದುಕಿಗೆ ತಟ್ಟಬಾರದಿತ್ತು. ಹಾಗಾಗಿ ನನ್ನ ಭಾವನೆಗಳಿಗೆ ಬೇಲಿ ಹಾಕಿ ಬಂಧಿಸಿಡುತ್ತಿದ್ದೆ. ಮಾತಾಗಿ ಅಪ್ಪನ ಮುಂದೆ ಜಾರಬೇಕಿದ್ದ ನನ್ನಾಸೆಗಳು ಮನದ ಮಂಟಪದಲ್ಲಿ ಘನೀಭವಿಸಿದ ಮೌನಗಳಾಗಿ ಹರಳುಗಟ್ಟತೊಡಗಿದವು. ನಾನು ಮತಾಡುತ್ತಾ ಆಡುತ್ತಲೇ ಮೂಗಿಯಾದೆ.

ಬದುಕೊಂದು  ನಿರಂತರ ಯಾಗ. ಅದು ಅಪ್ಪ, ಅಮ್ಮ, ಅಜ್ಜಿ, ತಂಗಿ, ಖಾಲಿತನ ಇವ್ಯಾವುವನ್ನೂ ಗಣನೆಗೆ ತೆಗೆದುಕೊಳ್ಳದೆ ನಿರಂತರ ಉರಿಯುತ್ತಲೇ ಇರುತ್ತದೆ; ಕೊನೆಯ ಕಿಡಿ ಇರುವವರೆಗೂ. ಬಾಲ್ಯ ಜಾರಿ ಹೋಗದಿರಲೆಂದು ಅದೆಷ್ಟೇ ಪ್ರಯತ್ನಪಟ್ಟರೂ ಬದುಕು ಸಾಗುತ್ತಲೇ ಇತ್ತು. ಪಿ.ಯು.ಸಿ ಮುಗಿದು ಇನ್ನೇನು ಪದವಿ ಮೆಟ್ಟಿಲು ಹತ್ತಬೇಕೆನ್ನುವಷ್ಟರಲ್ಲಿ ಅಪ್ಪ ಅನಿರೀಕ್ಷಿತವಾಗಿ ಹಾಸಿಗೆ ಹಿಡಿದುಬಿಟ್ಟರು. ಮಂಚದಿಂದ ಬಿದ್ದುದೇ ನೆಪವಾಗಿ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡು ಬಿಟ್ಟವು. ಅನಿವಾರ್ಯವಾಗಿ ನನ್ನ ಓದಿಗೆ ಮಂಗಳ ಹಾಡಲೇಬೇಕಾಯ್ತು. ಬದುಕು ಮತ್ತೊಮ್ಮೆ ತನ್ನ ದಾಳ ಉರುಳಿಸಿತು, ನಾನು ಬರಿ ಕಾಯಿಯಷ್ಟೆ.      

(ಸಶೇಷ)

1 ಕಾಮೆಂಟ್‌: