ಭಾನುವಾರ, ಜೂನ್ 28, 2015

ಮೌನ ಕಣಿವೆಯಲಿ...

ಸಂಚಾರ  7



ಇನ್ನು ನನಗುಳಿದ್ದಿದ್ದುದು ಕಣ್ಣಾರೆ ಕಂಡಿರುವುದನ್ನು ಪರಾಂಬರಿಸುವ ಕೆಲಸವಷ್ಟೆ. ಆದರೆ ಇಂತಹ ಸೂಕ್ಷ್ಮ ವಿಚಾರವನ್ನು ಕಟ್ಟಿಕೊಂಡ ಗಂಡನಲ್ಲಿ, ಬೆನ್ನಿಗೆ ಬಿದ್ದ ತಂಗಿಯಲ್ಲಿ ಪ್ರಸ್ತಾಪಿಸುವುದಾದರೂ ಹೇಗೆ ಅನ್ನುವ ಗೊಂದಲವಿನ್ನೂ ಮುಗಿದಿರಲಿಲ್ಲ. ಒಂದೇ ಏಟಿಗೆ ಅಂತದ್ದೇನೂ ನಡೆದೇ ಇಲ್ಲ ಎಂದು ನಿರಾಕರಿಸಿ ಬಿಟ್ಟರೆ ಏನು ಮಾಡಲಿ ಅನ್ನುವ ಭಯ ಬೇರೆ ಕಾಡುತ್ತಿತ್ತು.

ಆದರೆ ಹಿಂದಿನ ದಿನ ಪೂರ್ತಿ ನನ್ನ ಕಣ್ಣು ತಪ್ಪಿಸಿ ಓಡಾಡುತ್ತಿದ್ದವರು ಅವತ್ತು ಯಾವ ಅಳುಕೂ ಇಲ್ಲವೆಂಬಂತೆ ಬಿಡುಬೀಸಾಗಿ ಸಲೀಸಾಗಿ ಓಡಾಡಿಕೊಂಡು ಸಹಜವಾಗಿದ್ದರು. ಬಹುಶಃ ವಂಚನೆಯ ಜಾಯಮಾನವೇ ಅಂತಹುದೇನೋ?  ಆರಂಭದಲ್ಲಿ ಕಾಡುವ ಅಳುಕು, ಹಿಂಜರಿಕೆಗಳು ಕೆಲ ಸಮಯ ಸಾಗುತ್ತಿದ್ದಂತೆ ಆತ್ಮದ್ರೋಹದ ಕರಿನೆರಳಿನ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತವೆಯೇನೋ? ಒಮ್ಮೆ ದೀರ್ಘ ಶ್ವಾಸ ಎಳೆದುಕೊಂಡು, ಅವರಿಬ್ಬರನ್ನು ಕೂರಿಸಿ ಆದಷ್ಟು ಶಾಂತವಾಗಿ ಅವರಿಬ್ಬರ ಸಂಬಂಧದ ಬಗ್ಗೆ ಕೇಳಿದೆ.

ಕಾವ್ಯಾಳೇ ಮೊದಲು ಮಾತು ಶುರುವಿಟ್ಟುಕೊಂಡಳು. "ಸರಿ ಅಕ್ಕಾ, ನಾವೇ ಇದನ್ನು ನಿನ್ನ ಬಳಿ ಚರ್ಚಿಸಬೇಕೆಂದಿದ್ದೆವು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆವು ಅಷ್ಟೆ. ಈಗ ನಿನಗೇ ಎಲ್ಲಾ ತಿಳಿದಿರುವಾಗ ಮುಚ್ಚು ಮರೆ ಮಾಡಲು ಎನೂ ಉಳಿದಿಲ್ಲ. ಹೌದು, ನಮ್ಮಿಂದ ತಪ್ಪಾಗಿದೆ. ನೀನು ಹೆರಿಗೆ, ಬಾಣಂತನ ಅಂತ ಒದ್ದಾಡುತ್ತಿರುವಾಗ ಒಂದು ದುರ್ಬಲ ಕ್ಷಣದಲ್ಲಿ ತಪ್ಪು ನಡೆದುಹೋಯಿತು. ನೀನು ಧೈರ್ಯಸ್ಥೆ, ನನಗಿಂತ ದೊಡ್ಡವಳು. ಪರಿಸ್ಥಿತಿಯನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿ. ಈಗ ನಡೆದುದರ ಬಗ್ಗೆ ವಿಚಾರ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದು ಒಂದಿಷ್ಟು ಮನಸ್ತಾಪಗಳಿಗೆ ಕಾರಣವಾಗುತ್ತದೆಯೇ ಹೊರತು ಇನ್ನೇನೂ ಆಗುವುದಿಲ್ಲ. ಹಾಗಾಗಿ ಮುಂದೆ ಏನು ನಡೆಯಬೇಕು ಅನ್ನುವುದರ ಬಗ್ಗೆ ಯೋಚಿಸು. ನಾನಂತೂ ಭಾವನನ್ನೇ ಮದುವೆಯಾಗಬೇಕು ಅಂತ ತೀರ್ಮಾನಿಸಿದ್ದೇನೆ" ಅಂದಳು. ಗೊತ್ತಿದ್ದ ಸತ್ಯವೇ ಆದರೂ ತೀರಾ ಮುಖಕ್ಕೆ ರಾಚಿದಾಗ ತತ್ತರಿಸಿಬಿಟ್ಟೆ. ಬಹುಶಃ ಒಳ ಮನಸು ಹಿಂದಿನ ದಿನ ನಾ ಕಂಡದ್ದೆಲ್ಲ ಸುಳ್ಳಾಗಿರಲಿ ಅಂತ ಆಶಿಸುತ್ತಿತ್ತೇನೋ?

ಮುಂದೇನು ಅಂತ ಗಂಡನೆನಿಸಿಕೊಂಡವನ ಮುಖ ನೋಡಿದೆ. ಅವನು "ಆಗಬಾರದ್ದು ಆಗಿ ಹೋಗಿದೆ ನಿಜ, ಹಾಗಂತ ಈ ಪ್ರಪಂಚದಲ್ಲಿ ಯಾರೂ ಮಾಡದ ತಪ್ಪನ್ನೇನೂ ನಾ ಮಾಡಿಲ್ಲ. ಈ ವಿಚಾರಣೆಯೆಂಬ ನಾಟಕವೇ ಬೇಡ. ನೀನಿರುವ ಹಾಗೆಯೇ ಅವಳನ್ನೂ ಮದುವೆಯಾಗಿ ಬಿಡುತ್ತೇನೆ. ಹೇಗೂ ರಕ್ತ ಹಂಚಿಕೊಂಡು ಹುಟ್ಟಿದ ಸೋದರಿಯರು. ಸವತಿ ಮಾತ್ಸರ್ಯದ ಪ್ರಶ್ನೆಯೂ ಬರುವುದಿಲ್ಲ. ಇಬ್ಬರೂ ಚೆನ್ನಾಗಿ ಹೊಂದಿಕೊಂಡು ಹೋಗಬಹುದು" ಎಂದು ಮಾತೆಲ್ಲಾ ಮುಗಿಯಿತು ಎಂಬಂತೆ ಎದ್ದು ಆಫೀಸ್ ಗೆ ಹೋದರು. ಅವರ ಬೆನ್ನ ಹಿಂದೆಯೇ ಕಾವ್ಯ ಕಾಲೇಜ್ ಗೆಂದು ಹೊರಟು ಹೋದಳು.

ಮನೆ ಪೂರ್ತಿ ಸ್ಮಶಾನ ಮೌನ. ನಡು ಮನೆಯಲ್ಲಿ ಒಂಟಿ ಪಿಶಾಚಿಯಂತೆ ನಾನು. ಇನ್ನೊಂದು ಹೆಣ್ಣಿನ ಜೊತೆ, ಆಕೆ ತಂಗಿಯೇ ಆಗಿದ್ದರೂ ಸಹ ಗಂಡನನ್ನು ಹಂಚಿಕೊಳ್ಳುವ ಕಲ್ಪನೆಯೇ ನನಗೆ ಅಸಹ್ಯ ಅನಿಸುತಿತ್ತು. ಕಾವ್ಯಾಳ ಯಾವ ಪ್ರಾಕ್ಟಿಕಾಲಿಟಿಯ ಬಗ್ಗೆ ನನಗೆ ಹೆಮ್ಮೆ ಇತ್ತೋ ಅದೇ ಪ್ರಾಕ್ಟಿಕಾಲಿಟಿ ತನ್ನೆಲ್ಲಾ ಪರಿಧಿಯನ್ನು ಮೀರಿ ಇವತ್ತು ಅಕ್ಕನ ಬದುಕನ್ನು ಮೂರಾಬಟ್ಟೆಯಾಗಿಸುವಲ್ಲಿಗೆ ಬಂದು ನಿಂತಿತ್ತು.

ಸಂಜೆ ಗಂಡ ಆಫೀಸಿನಿಂದ, ಕಾವ್ಯ ಕಾಲೇಜಿನಿಂದ ಬರುವ ಮುನ್ನ ನಾನೊಂದು ನಿರ್ಧಾರಕ್ಕೆ ಬರಬೇಕಿತ್ತು. ಮೊದಲ ಹೆಂಡತಿ ಬದುಕಿರುವಾಗಲೇ ಇನ್ನೊಂದು ಮದುವೆಯಾಗ ಹೊರಟ ಗಂಡನ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಬಹುದಿತ್ತೇನೋ? ಆದ್ರೆ ಕಾವ್ಯಾಳ ಬದುಕು ಅತಂತ್ರವಾಗಿ ಬಿಡುತ್ತಿತ್ತು. ಅಮ್ಮನ ಚಿತೆಗೆ ಬೆಂಕಿಯಿಡುವ ಮುನ್ನ ಅಜ್ಜಿ ಹೇಳಿದ ಮಾತು ಬೇರೆ ಕಿವಿಯಲ್ಲಿನ್ನೂ ಅನುರಣಿಸುತ್ತಿತ್ತು. ಹಾಗಂತ ಗಂಡನನ್ನು ಹಂಚಿಕೊಂಡು ಬದುಕಲೂ ನನ್ನಿಂದ ಸಾಧ್ಯ ಇರಲಿಲ್ಲ.

ಕೊನೆಗೆ ನಾನು ಸ್ವಾಭಿಮಾನದಿಂದ ಬದುಕಲು ಡೈವೋರ್ಸ್ ಒಂದೇ ಪರಿಹಾರ ಅಂದುಕೊಂಡು ಸಂಜೆ ಅವರಿಬ್ಬರು ಬಂದ ಬಳಿಕ ನನ್ನ ನಿರ್ಧಾರವನ್ನು ತಿಳಿಸಿದೆ. ಒಂದೆರಡು ದಿನ ಅತ್ತು ಕರೆದು ರಂಪ ಮಾಡಿ ಆಮೇಲೆ ಒಪ್ಪಿಕೊಳ್ಳುತ್ತೇನೆ ಅಂದುಕೊಂಡಿದ್ದರೋ ಏನೋ. ನನ್ನ ನಿರ್ಧಾರವನ್ನು ಕೇಳಿ ಇಬ್ಬರೂ ಅಪ್ರತಿಭರಾದರು. ಗಂಡನೆನೆಸಿಕೊಂಡವನಂತೂ ಸಮಾಜದಲ್ಲಿ ಒಂಟಿ ಹೆಣ್ಣು ಬದುಕುವುದರಲ್ಲಿರುವ ಕಷ್ಟವನ್ನು ಪರಿ ಪರಿಯಾಗಿ ವಿವರಿಸಲೆತ್ನಿಸಿದರು. ಇಬ್ಬರಲ್ಲಿ ಒಬ್ಬರನ್ನು ಆಯ್ದುಕೊಳ್ಳಿ ಅನ್ನುವ ನನ್ನ ಅಚಲ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸ್ಪಷ್ಟ ಧ್ವನಿಯಲ್ಲಿ ಹೇಳಿಬಿಟ್ಟೆ. ಅದೇನು ಚಿಂತನ ಮಂಥನ ನಡೆಸಿದರೋ ಗೊತ್ತಿಲ್ಲ, ಕೊನೆಗೂ ಅವಳ ಮೇಲಿನ ಮೋಹವೇ ಗೆದ್ದು ನನ್ನ ತೊರೆಯುವ ನಿರ್ಧಾರಕ್ಕೆ ಅವರೂ ಬಂದುಬಿಟ್ಟರು.

ಮೂರು ತಿಂಗಳುಗಳಲ್ಲಿ ವಿಚ್ಛೇದನ ಪ್ರಕ್ರಿಯೆಗಳೆಲ್ಲಾ ವಿಧಿವತ್ತಾಗಿ ನಡೆದು ಮೂರು ವರ್ಷಗಳ ದಾಂಪತ್ಯ ಜೀವನ ನಾಲ್ಕಾರು ಕಾಗದ ಪತ್ರಗಳಿಗೆ ಸಹಿ ಹಾಕುವಷ್ಟರಲ್ಲಿ ಮುಗಿದು ಹೋಯಿತು. ಗಂಟು ಮೂಟೆ ಕಟ್ಟಿಕೊಂಡು ಮಗಳೊಂದಿಗೆ ಮನೆ ಬಿಟ್ಟೆ. ತೀರಾ ಹೊರಡುವ ಮುನ್ನ ಕಾವ್ಯಾಳ ಮುಂದಲೆ ನೇವರಿಸಿ "ಚೆನ್ನಾಗಿರು" ಎಂದಷ್ಟೇ ಹೇಳಿ ಹೊರಗಡಿಯಿಟ್ಟಿದ್ದೆ. ಅವಳ ಕಣ್ಣುಗಳಲ್ಲಿ ಮತ್ತದೇ ಪ್ರಾಕ್ಟಿಕಾಲಿಟಿ. ಬದುಕು ಈ ಬಾರಿ ಉರುಳಿಸಿದ ದಾಳಕ್ಕೆ ನಾ ಪಾತಾಳಕ್ಕಿಳಿದುಬಿಟ್ಟಿದ್ದೆ.


(ಸಶೇಷ)   


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ