ಶನಿವಾರ, ಜೂನ್ 20, 2015

ಮೌನ ಕಣಿವೆಯಲಿ...

ಸಂಚಾರ 4



ಅಂತೂ ಇಂತೂ ಒಂದು ದೃಢ ನಿರ್ಧಾರ ಮಾಡಿ ಮೂರು ಕಾಲ ಕೂಡುವ ಒಂದು ಮುಸ್ಸಂಜೆ ನಾ ಹುಟ್ಟಿದ, ಬೆಳೆದ, ಆಡಿದ, ನಲಿದ ಮನೆಗೂ, ಊರಿಗೂ ವಿದಾಯ ಹೇಳಿ ಬೆಂಗಳೂರಿನ ಗಾಡಿ ಹತ್ತಿದೆ. ಊರಿನ ಸರಹದ್ದು ಇನ್ನೇನು ದಾಟಬೇಕು ಅನ್ನುವಷ್ಟರಲ್ಲಿ ಅದೇನನಿಸಿತೋ ಏನೋ ಗೊತ್ತಿಲ್ಲ, ಕಾರಿಂದ ಇಳಿದು ಒಂದು ಹಿಡಿ ಮಣ್ಣು ತುಂಬಿಕೊಂಡು ಸೆರಗಿಗೆ ಕಟ್ಟಿ ಮತ್ತೆ ಕಾರು ಹತ್ತಿ ಕುಳಿತೆ. ಕಾವ್ಯ ಆತ್ಮೀಯತೆಯಿಂದ ಹಿತವಾಗಿ ಬೆನ್ನು ತಟ್ಟಿದಳು, ಯಾವ ಜನ್ಮದಲ್ಲಿ ಮಗಳಾಗಿದ್ದಳೋ ಇವಳು ಅನಿಸಿತು. ಹೊಟ್ಟೆಯೊಳಗಿನ ಮಗು ಒಮ್ಮೆ ಒದ್ದಾಡಿ ಸುಮ್ಮನಾದಂತಾಯಿತು.

ಬಾಲ್ಯದಿಂದಲೂ ಅಷ್ಟೆ, ಕಾವ್ಯ ಹಠಮಾರಿ, ಜಿದ್ದು ಹಿಡಿದು ತನ್ನ ಕಾರ್ಯ ಸಾಧಿಸಿಕೊಳ್ಳುತ್ತಿದ್ದಳು. ಯಾವತ್ತೂ  ಮನೆ ವಿಚಾರದಲ್ಲಿ ತಲೆ ಕೆಡಿಸಿಕೊಂಡವಳೇ ಅಲ್ಲ. ಅವಳಾಯ್ತು, ಅವಳ ಪಾಡಾಯ್ತು ಎಂಬಂತೆ ಇದ್ದಳು. ಅವಳ ಜಗತ್ತಿನಲ್ಲಿ ಮನೆಗೇನಿದ್ದರೂ ಎರಡನೇ ಸ್ಥಾನ. ಫ್ರೆಂಡ್ಸ್, ಪಾರ್ಟಿ ಅಂತ ಕಾಲ ಕಳೆದದ್ದೇ ಹೆಚ್ಚು. ಹಾಗಾಗಿಯೇ ಅಪ್ಪನ, ಅಜ್ಜಿಯ ಸಾವು ಅವಳನ್ನು ತುಂಬಾ ಬಾಧಿಸಿರಲಿಲ್ಲ. ಆಗೆಲ್ಲಾ ಬದುಕನ್ನು ತುಂಬಾ ಪ್ರಾಕ್ಟಿಕಲ್ ಆಗಿ ನೋಡುವ ಅವಳ ಬಗ್ಗೆ ಹೆಮ್ಮೆಯೆನಿಸುತ್ತಿತ್ತು.

ಬೆಂಗಳೂರಿಗೆ ಹೋದಮೇಲಾದರೂ ಅಷ್ಟೆ, ಹೊಸ ಕಾಲೇಜ್, ಫ್ರೆಂಡ್ಸ್ ಎಂದೆಲ್ಲಾ ಓಡಾಡಿಕೊಂದಿದ್ದಳೇ ಹೊರತು ಮನೆ ಕಡೆ ಒಮ್ಮೆಯೂ ಗಮನ ಕೊಟ್ಟವಳೇ ಅಲ್ಲ. ಅಪ್ಪನಿಲ್ಲದ ನೋವು ಅವಳನ್ನು ಕಾಡದಿರಲಿ ಅಂತ ನಾನೂ ಇದೆಲ್ಲಾ ಒಳ್ಳೆಯದಕ್ಕೇ ಅಂದುಕೊಂಡು ಸುಮ್ಮನಿದ್ದೆ, ಯಾವುದಕ್ಕೂ ಅವಳನ್ನು ಒತ್ತಾಯ ಪಡಿಸುತ್ತಿರಲಿಲ್ಲ. ಎಷ್ಟಾದರೂ ಹುಟ್ಟಿದಾರಭ್ಯದಿಂದಲೂ ನನಗೇ ಅಂಟಿಕೊಂಡ ಜೀವವಲ್ಲವೇ ಅದು?

ಸದಾ ನಿರ್ಲಪ್ತನಂತಿರುವ, ಯಾವ ವಿಷಯವನ್ನು ತುಂಬಾ ಹಚ್ಚಿಕೊಳ್ಳದ  ನನ್ನ ಗಂಡ ಅವಳ ಈ ನಡವಳಿಕೆಯನ್ನು ಮಾತ್ರ ವಿರೋಧಿಸುತ್ತಿದ್ದರು. "ತುಂಬು ಗರ್ಭಿಣಿ ಅಡುಗೆ ಮನೆಯಲ್ಲಿ ಒದ್ದಾಡುತ್ತಿರಬೇಕಾದರೆ ಅವಳ ತಂಗಿ ಅನಿಸಿಕೊಂಡವಳು ಹಾಲ್ ನಲ್ಲಿ ಕಾಲು ಚಾಚಿ ಕೂತು ಟಿ.ವಿ ನೋಡುವುದು ಅದೆಂಥಾ ನಿರ್ಭಾವುಕತೆ" ಎಂದು ಕಿಡಿಕಾರುತ್ತಿದ್ದರು. ನಾನು ಅವಳ ಪರವಹಿಸಿ ಮಾತಾಡಹೋದರೆ ನನಗೇ ದಬಾಯಿಸುತ್ತಿದ್ದರು. ಅವರ ಮಾತಲ್ಲೂ ಸತ್ಯವಿರುತ್ತಿದ್ದರಿಂದ ಅನಿವಾರ್ಯವಾಗಿ ನಾನೂ ಸುಮ್ಮನಾಗಬೇಕಾಗುತ್ತಿತ್ತು. ಬಸುರಿ ಬಯಕೆಯ ತೀರಿಸಲಾರದೆ ಅಮ್ಮನಿಲ್ಲದ ಕೊರತೆ ಬೇರೆ ಕಾಡುತ್ತಿತ್ತು, ಹಾಗಾಗಿ ಅವರು ಕಾವ್ಯಾಳಿಗೆ ಬಯ್ಯುತ್ತಿದ್ದಾಗಲೆಲ್ಲಾ ನಾನು ’ಅಮ್ಮನಿದ್ದಿದ್ದರೆ’ ಅನ್ನುವ ಪ್ರಶ್ನೆ ಹೊತ್ತುಕೊಂಡು ಸುಮ್ಮನೆ ಕುಳಿತುಬಿಡುತ್ತಿದ್ದೆ.

ಯಾರಿಗೂ ಕಾಯದ ಕಾಲ, ಎಲ್ಲಾ ಕೊರತೆಗಳನ್ನೂ ಮೀರಿ ನನ್ನನ್ನು ಹೆರಿಗೆಯ ದಿನದವರೆಗೆ ತಂದು ನಿಲ್ಲಿಸಿತ್ತು. ಪದೇ ಪದೇ ಕಾಡುತ್ತಿದ್ದ ಅಮ್ಮನ ನೆನಪು, ಅವಳ ಸಾವು, ಚೊಚ್ಚಲ ಹೆರಿಗೆಯ ಭಯ, ಅಂಟಿಯೂ ಅಂಟದಂತಿದ್ದ ಗಂಡನ ನಿರ್ಲಿಪ್ತತೆ, ತಂಗಿಯ ಬೇಜವಾಬ್ದಾರಿ ಎಲ್ಲಾ ಸೇರಿ ನನ್ನೊಳಗೊಂದು ಉದ್ವಿಗ್ನತೆಯನ್ನು ಹುಟ್ಟು ಹಾಕಿತ್ತು. ಆದ್ರೆ ಹೆರಲಿದ್ದೇನೆ ಅನ್ನುವ ಸಂಭ್ರಮ, ಹೊಟ್ಟೆಯೊಳಗೆ ಮಿಸುಕಾಡಿ ಮಧುರ ಅನುಭೂತಿ ಕೊಡುತ್ತಿದ್ದ ನನ್ನ ಕಂದ ಭೂಮಿಗೆ ಬಂದು ಬೆಚ್ಚನೆ ನನ್ನ ಮಡಿಲಲ್ಲಿರುತ್ತದೆ ಅನ್ನುವ ಕಲ್ಪನೆ ಆ ಉದ್ವಿಗ್ನತೆಯನ್ನೂ ಮೀರಿದ ಸಂತೃಪ್ತಿಯನ್ನು ಕೊಡುತ್ತಿತ್ತು. ಇಷ್ಟಕ್ಕೂ ಅಮ್ಮನ ಹೆರಿಗೆ ನಮ್ಮೆಲ್ಲರ ಬದುಕಲ್ಲಿ ಒಂದು ಸ್ಥಿತ್ಯಂತರಕ್ಕೆ ಕಾರಣವಾದರೆ ನನಗಾಗುವ ಹೆರಿಗೆ ಮತ್ತೊಂದು ಸ್ಥಿತ್ಯಂತರಕ್ಕೆ ಕಾರಣವಾಗುತ್ತದೆ ಅನ್ನುವುದನ್ನು ಅವತ್ತು ಯಾರು ತಾನೇ ಊಹಿಸಿದ್ದರು?

(ಸಶೇಷ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ