ಭಾನುವಾರ, ಜೂನ್ 28, 2015

ಮೌನ ಕಣಿವೆಯಲಿ...

ಸಂಚಾರ 9


ನೋಡ ನೋಡುತ್ತಿದ್ದಂತೆಯೇ ಇಪ್ಪತ್ತಮೂರು ವರ್ಷಗಳು ಕಳೆದು ಹೋದವು. ಮುಖ್ಯ ಶಿಕ್ಷಕರಾಗಿದ್ದ ಮನೋಹರ್ ರಾವ್ ಅವರು ನಿವೃತ್ತರಾಗಿ ಅವರ ಸ್ಥಾನವನ್ನು ನಾನು ಅಲಂಕರಿಸಿದ್ದೆ. ಅವರು ನನಗೆ ಅಧಿಕಾರ ಬಿಟ್ಟುಕೊಡಲು ನಿರ್ಧರಿಸಿದಾಗ ನನ್ನಿಂದ ನಿಭಾಯಿಸಲು ಸಾಧ್ಯವಿಲ್ಲವೆಂದು ನಾನು ನಿರಾಕರಿಸಿದ್ದೆ. ನನ್ನೊಳಗೆ ಧೈರ್ಯ ತುಂಬಿ ಈ ಹುದ್ದೆಗೆ ನಾನೇ ಅರ್ಹಳೆಂದು ನನಗೇ ನಂಬಿಕೆ ಹುಟ್ಟಿಸಿದ್ದರು. ತೀರಾ ಅವರ ಖುರ್ಚಿಯಲ್ಲಿ ಕುಳಿತುಕೊಳ್ಳುವ ಮುನ್ನ ನಾನು ಪುಟ್ಟ ಮಗುವಿನಂತೆ ಅತ್ತಿದ್ದೆ. ಅವರು ಒಂದು ಮಾತೂ ಹೇಳದೆ ಸುಮ್ಮನೆ ತಲೆ ನೇವರಿಸಿದ್ದರು. ಯಾವ ಜನ್ಮದಲ್ಲಿ ನನ್ನ ತಂದೆಯಾಗಿದ್ದರೋ?

ಇನ್ನು ಅಂಬೆಗಾಲಿಕ್ಕುತ್ತಾ ಹಿಂದೆ ಮುಂದೆ ಸುತ್ತಾಡಿಕೊಂಡು ಬಿಸಿಲ ಬೇಗೆಯಂತಹಾ ನನ್ನ ಒಂಟಿ ಬದುಕಿಗೆ ತಣ್ಣೀರ ಸಿಂಚನದಂತಿದ್ದ ಮಗಳೀಗ ಪದವೀಧರೆ, ಉದ್ಯೋಗಸ್ತೆ. ಶಿಕ್ಷಣದ ಜೊತೆಗೆ ಎಲ್ಲೂ ರಾಜಿಯಾಗದೆ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಮಲ್ಟಿನ್ಯಾಷನಲ್ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿ ತನ್ನ ಕಾಲ ಮೇಲೆ ನಿಂತಿದ್ದಾಳೆ. ನನ್ನ ಬದುಕಿನ ಎಲ್ಲಾ ಅರೆಕೊರೆಗಳಿಗೆ, ಪ್ರಶ್ನೆಗಳಿಗೆ ಉತ್ತರವಾಗಿ ಅವಳೀಗ ನನಗೆ ಆಸರೆಯಾಗಿದ್ದಾಳೆ.

ಇನ್ನೇನಿದ್ದರೂ ಒಳ್ಳೆಯ ಕಡೆ ನೋಡಿ ಅವಳಿಗೊಂದು ಮದುವೆ ಮಾಡಿಬಿಟ್ಟರೆ ನನಗೆ ನೆಮ್ಮದಿ. ಆಮೇಲೆ ನಾನು ನನ್ನ ಉಳಿದ ಜೀವನವನ್ನು ಶಾಲೆಗಾಗಿ ಮುಡಿಪಿಡಬಹುದು ಅಂದುಕೊಳ್ಳುತ್ತಿರುವಾಗಲೇ ಒಂದು ದಿನ ಅವಳು ಒಬ್ಬ ಹುಡುಗನನ್ನು ತಂದು ನನ್ನ ಮುಂದೆ ನಿಲ್ಲಿಸಿ "ಅಮ್ಮಾ, ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಿದ್ದೇವೆ. ನೀನೊಪ್ಪಿಗೆ ಕೊಟ್ಟರೆ ಮದುವೆಯಾಗುತ್ತೇವೆ" ಅಂದಳು. ಒಮ್ಮೆ ಬೆಚ್ಚಿ ಬಿದ್ದೆ. ಪ್ರೀತಿ ಪ್ರೇಮ ಎಂದೆಲ್ಲಾ ಹೋದರೆ ಎಲ್ಲಿ ಅವಳ ಬದುಕೂ ನನ್ನಂತಾಗಿಬಿಡುತ್ತೋ ಅನ್ನುವ ಭಯ ಕಾಡಿತು.

ಆದರೆ ಹುಡುಗನ ಇತಿಹಾಸ ಕೆದಕಿದಾಗ ಅವನು, ನನ್ನ ಬದುಕಿಗೆ ಹೊಸ ಬೆಳಕನ್ನು ತೋರಿದ ಮನೋಹರ್ ರಾವ್ ಅವರ ಪುತ್ರ ಅನ್ನುವುದು ತಿಳಿಯಿತು. ಮುಂದೇನೂ ಯೋಚಿಸಬೇಕಾಗಿರಲಿಲ್ಲ. ಅಂತಹಾ ಹೆಂಗರುಳಿನ ಹಿರಿಯರ ಮನೆಗೆ ನನ್ನ ಮಗಳು ಸೊಸೆಯಾಗಿ ಹೋದರೆ ಸುಖವಾಗಿ ಇರುತ್ತಾಳೆ ಅಂದುಕೊಂಡು ನನ್ನ ಕಣ್ಣಿಂದ ಎರಡು ಹನಿ ಸಂತೋಷದ ಅಶ್ರುಧಾರೆ ಜಾರಿತು, ಅದು ನೆಲ ಸೇರದಂತೆ ಮಗಳು ಕೈಯೊಡ್ಡಿ ಕಣ್ಣಿಗೊತ್ತಿಕೊಂಡಳು.

ಮುಂದೆ ಎಲ್ಲವೂ ಸಲೀಸಾಗಿಯೇ ನಡೆದು ಹೋಯಿತು. ಮನೋಹರ್ ರವರ ಮನೆಗೆ ಹೋಗಿ ನಾನೆ ಮದುವೆಯ ಪ್ರಸ್ತಾಪವನ್ನಿಟ್ಟೆ. ಆ ಹಿರಿ ಜೀವ ಯಾವ ತಕರಾರೂ ಮಾಡದೆ, ವರ ದಕ್ಷಿಣೆ ವರೋಪಚಾರ ಎಂದು ಯಾವ ರಗಳೆಯನ್ನೂ ಮಾಡದೆ, ಜಾತಕ ಜ್ಯೋತಿಷ್ಯದ ಗೊಡವೆಯೇ ಬೇಡವೆಂದು ಮದುವೆಗೆ ಒಪ್ಪಿಕೊಂಡರು. ಮೊದಲು ರಿಜಿಸ್ಟ್ರಾರ್ ಆಫೀಸಿನಲ್ಲಿ ನಂತರ ದೇವಸ್ಥಾನದಲ್ಲಿ ಸರಳವಾಗಿ ಇಬ್ಬರ ಮದುವೆ ಕೆಲವೇ ಕೆಲವು ಹಿತೈಷಿಗಳ ಸಮ್ಮುಖದಲ್ಲಿ ನಡೆದು ಹೋಯಿತು. ತೀರಾ ಧಾರೆ ಎರೆದುಕೊಡುವ ಹೊತ್ತಿಗೆ  ಅವಳ ಅಪ್ಪನ ನೆನಪಾದುದನ್ನು ಬಿಟ್ಟರೆ, ಕಾವ್ಯಾಳಿಗೆ ಮಕ್ಕಳಾಗಿದ್ದರೆ ಅವಳ ಮಕ್ಕಳೂ ಈಗ ಮದುವೆಯ ವಯಸ್ಸಿಗೆ ಬಂದಿರುತ್ತಾರೆ ಅಂತ ಅನ್ನಿಸಿರುವುದನ್ನು ಬಿಟ್ಟರೆ ಇನ್ನೆಲ್ಲೂ ಅವರಿಬ್ಬರಿರದಿರುವುದು ಕೊರತೆಯಾಗಿ ಕಾಡಲೇ ಇಲ್ಲ.  ಮನೋಹರ್ ರವರಂತಹ ಶುದ್ಧಮನಸ್ಕರು ರಶ್ಮಿಗೆ ಅಪ್ಪ, ಮಾವ ಎರಡೂ ಆಗುತ್ತಿರುವಾಗ ವಂಚಕರು ನೆನಪಾಗುವುದಾದರೂ ಹೇಗೆ?

ಮಗಳಿಲ್ಲದ ಅಮ್ಮನ ಮನೆಯಲ್ಲಿ ನಾನೀಗ ಮತ್ತೆ ಒಂಟಿ. ಈ ಒಂಟಿತನದಲ್ಲಿ ಕಿತ್ತು ತಿನ್ನುವ, ಇಂಚಿಂಚಾಗಿ ಕೊಲ್ಲುವ ಕಹಿ ಘಟನೆಗಳ ಕರಿ ನೆರಳಿಲ್ಲ. ೨೩ ವರ್ಷಗಳ ಜೀವನದ ಅನನ್ಯ ಅನುಭವಗಳ ಸಾರ್ಥಕ್ಯವಿದೆ. ಒಮ್ಮೆ ಪಾತಾಳಕ್ಕಿಳಿಸಿ ಮತ್ತೊಮ್ಮೆ ಆಕಾಶದೆತ್ತರೆಕ್ಕೆ ಏರಿಸಿದ ಏರಿಳಿತಗಳ ಬಾಳಿನೆಡೆಗಿನ ಹೆಮ್ಮೆಯಿದೆ. ನಾನೀಗ ಮತ್ತೆ ಅಪ್ಪನ ಫೊಟೋದ ಮುಂದೆ ನಿಂತಿದ್ದೇನೆ. ನನ್ನೊಳಗಿನ ಮೌನ "ಅಪ್ಪಾ, ಕೊನೆಗೂ ನಿನ್ನ ಈ ಭೂಮಿ ತೂಕದ ಮಗಳ ಸಹನೆ ಗೆದ್ದಿತು" ಅಂತ ಪಿಸುಗುಡುತ್ತಿದೆ. ಬದುಕೀಗ ದಾಳಗಳನ್ನೆಲ್ಲಾ ಚೆಲ್ಲಿ, ಆಟ ನಿಲ್ಲಿಸಿ ನನ್ನೆಡೆಗೆ ಮುಗಳ್ನಗು ಬೀರುತ್ತಿದೆ.


                                                                                                                               (ಮುಗಿಯಿತು)                 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ