ಶುಕ್ರವಾರ, ಜೂನ್ 5, 2015

ಮೌನ ಕಣಿವೆಯಲಿ...

 ಸಂಚಾರ 1


ಹೌದು. ಮೊದ ಮೊದಲು ನಾನು ಹೀಗೆ ಇರ್ಲೇ ಇಲ್ಲ. ನಾನೂ, ಮಾತೂ ಎಣ್ಣೆ ಸೀಗೆಕಾಯಿ ಅಂತಿದ್ವಿ. ನನ್ನ ಮೆಚ್ಚಿನ ಪುಸ್ತಕಗಳು, ಮುಳ್ಳು ಸೌತೆ ಬಳ್ಳಿ, ಲಿಂಬೆಕಾಯಿ ಗಿಡ, ಹಸಿ ಮಣ್ಣು, ಚಲಿಸೋ ಮೋಡ, ಸುರಿಯೋ ಮಳೆ, ಒಂದಿಷ್ಟು ಪ್ರಶ್ನೆಗಳು, ಅವಕ್ಕೆ ಅಪ್ಪ ಕೊಡುತ್ತಿದ್ದ ಉತ್ತರಗಳು... ಇವಿಷ್ಟೇ ನನ್ನ ಪ್ರಪಂಚ ಆಗಿತ್ತು. ಅಲ್ಲಿ ಮಾತಿಗೆ ಜಾಗ ಇರ್ಲಿಲ್ಲ. ಅದೊಂದು ದಿವ್ಯ ಮೌನದ ಸಂಭ್ರಮವಾಗಿತ್ತು. ಮೌನ ನನ್ನಿಷ್ಟ ಆಗಿತ್ತು, ನನ್ನಿಚ್ಛೆ ಆಗಿತ್ತು. ಆ ಮೌನದಲ್ಲಿ ನಾನು ನಾನಾಗಿಯೇ ಇರುತ್ತಿದ್ದೆ. ಆ ವಯಸ್ಸಿನ ಮಟ್ಟ ಏನಿತ್ತೋ ಆ ಪರಿಧಿಯೊಳಗೆ ನನ್ನಿರುವು ನನ್ನೊಳಗೆ ಪದೇ ಪದೇ ಸಾಬೀತಾಗುತ್ತಿತ್ತು.

ಆಮೇಲಾಮೇಲೆ ಏನಾಯ್ತೋ ಗೊತ್ತಿಲ್ಲ. ಬದುಕು ಮಾತಾಡುವುದನ್ನು ಕಲಿಸಿಬಿಡ್ತು. ಬಹುಶಃ ಯಾವುದೋ ಒಂದು ಅನಾಥ ಪ್ರಜ್ಞೆಯನ್ನು, ಅಭದ್ರತೆಯ ಭಾವವನ್ನು ಮರೆಸಲು ಮಾತಿನ ಮೊರೆ ಹೋದೆ. ಮುಂದೆ ಅನಿವಾರ್ಯತೆನೋ ಅಥವಾ ನನ್ನೊಳಗೆ ನಿಜಕ್ಕೂ ಮಾತಿನ ಒರತೆ ಇತ್ತೋ? ಗೊತ್ತಿಲ್ಲ. ಒಟ್ಟಿನಲ್ಲಿ ಮಾತಾಡ್ತಾನೇ ಹೋದೆ. ಅಗತ್ಯ ಇದ್ದೆಡೆ, ಇಲ್ಲದೆಡೆ ಎಲ್ಲಾ ಕಡೆನೂ ನಿರಂತರ ಮಾತಾಡ್ತಾನೇ ಹೋದೆ. ನನ್ನ ಭಾವನೆಗಳನ್ನು ಮುಚ್ಚಿಡಲು, ಬಚ್ಚಿಡಲು ಎರಡಕ್ಕೂ ಮಾತನ್ನೇ ಆಶ್ರಯಿಸಿದೆ. ಅಥವಾ ಹಾಗೆ ಆಶ್ರಯಿಸುವ ಅನಿವಾರ್ಯತೆಯನ್ನು ಬದುಕು ನನ್ನೆದರು ಸೃಷ್ಟಿಸಿತು. ಮೌನದ ಮುದ್ದೆಯಾಗಿದ್ದ ನಾನು ಮಾತಿನ ಮಲ್ಲಿ ಆದೆ. ಈ ಮಧ್ಯೆ ಆ ಮಾತುಗಳಲ್ಲೇ ನಾ ಗೊತ್ತೇ ಆಗದಂತೆ ಅಂತರ್ಧಾನವಾಗಿದ್ದಂತೂ ಸತ್ಯ.

ಆದ್ರೆ ನಿಜಕ್ಕೂ ನಾ ಮಾತು ಕಲಿತದ್ದು ಯಾವಾಗ? ಮೌನದ ಚಿಪ್ಪೊಳಗೆ ಸ್ವಾತಿ ಮುತ್ತಾಗಿದ್ದ ನನ್ನ, ಮಾತು ತನ್ನೆಡೆಗೆ ಸೆಳೆದದ್ದಾದರೂ ಯಾವಾಗ? ತಂಗಿ ಹುಟ್ಟಿದಾಗಲಾ? ಅಮ್ಮ ತೀರ್ಕೊಂಡಾಗಲಾ? ಅಪ್ಪ ಹಾಸಿಗೆ ಹಿಡಿದಾಗಲಾ? ಇಲ್ಲ ಅಜ್ಜಿ ಹಸುಗೂಸನ್ನು ತಂದು ನನ್ನ ಕೈಗಿತ್ತು "ತಾಯಿಯಿಲ್ಲದ ತಂಗಿಗೆ ನೀನೇ ಇನ್ನು ಅಮ್ಮ" ಅಂದಾಗಲಾ?

ಬಹುಶಃ ಇದೇ ಸರಿಯೆನಿಸುತ್ತದೆ. ಯಾವ ಅಶ್ವಿನಿ ದೇವತೆಗಳು ಅಸ್ತು ಎಂದರೋ ಗೊತ್ತಿಲ್ಲ, ಅಮ್ಮನ ಚಿತೆಗೆ ಬೆಂಕಿ ಬೀಳುವ ಮುನ್ನವೇ ನಾನು ಕಾವ್ಯಾಳಿಗೆ ಅಮ್ಮನಾದೆ. ಅಮ್ಮನಿನ್ನೂ ಪಂಚಭೂತಗಳಲ್ಲಿ ಲೀನವಾಗುವ ಮುನ್ನವೇ ನನ್ನೊಳಗೆ ಪ್ರವಹಿಸತೊಡಗಿದಳು. ನಾನು ಅಮ್ಮನಾದೆ, ನಿಜಾರ್ಥದಲ್ಲಿ; ಕಾವ್ಯ ಮಗಳಾದ್ಳಾ...?

ಎಷ್ಟಿದ್ದೀತು ಮಹಾ ನನಗಾಗ? ಏಳೋ, ಎಂಟೋ? ಸರಿಯಾಗಿ ನೆನಪಿಲ್ಲ. ನಾನಾಗ ಎರಡನೇ ತರಗತಿಯಲ್ಲಿದ್ದೆ. ಶಾಲಾ ದಾಖಲೆಗಳ ಪ್ರಕಾರ ನನಗಾಗ ಏಳು ವರ್ಷ. ಹಲವು ವರ್ಷಗಳ ಪೂಜೆ, ಪುನಸ್ಕಾರಗಳ ನಂತರ ಅಮ್ಮ ಮತ್ತೊಮ್ಮೆ ಗರ್ಭವತಿಯಾಗಿದ್ದಳು. ಇಡೀ ಮನೆಗೆ ಮನೇನೇ ಸಂಭ್ರಮದಲ್ಲಿ ತೇಲಿ ಹೋಗಿತ್ತು. ಸ್ವಭಾವತ ಅಂತರ್ಮುಖಿಯಾಗಿದ್ದ, ಭಾವನೆಗಳನ್ನು ಅಷ್ಟು ಸುಲಭವಾಗಿ ಹರಿಯಬಿಡಗೊಡದ ನಾನೂ ಕುಣಿದಾಡಿಬಿಟ್ಟಿದ್ದೆ. ಆದ್ರೆ ಅವತ್ತು ಯಾರಿಗೆ ತಾನೇ ಗೊತ್ತಿತ್ತು ಸಂಭ್ರಮದ ಹಿಂದೆಯೇ ಬಹುದೊಡ್ಡ ನೋವಿನ ಅಲೆಯೊಂದು ಅಪ್ಪಳಿಸಲಿದೆಯೆಂದು?

ಒಂಭತ್ತು ತಿಂಗಳು ಪೂರ್ತಿ ತುಂಬುವ ಮೊದಲೇ ಒಂದು ರಾತ್ರಿ ಅಮ್ಮ ನೋವಿನಿಂದ ಒದ್ದಾಡತೊಡಗಿದಳು. ನನಗಾಗ ಹೆರಿಗೆ, ನೋವು, ಅದರ ಕಷ್ಟ ಯಾವುದೂ ಅರ್ಥವಾಗುವ ವಯಸ್ಸಲ್ಲ. ಸುಮ್ಮನೆ ಅಮ್ಮನ ಪಕ್ಕ ಕೂತು ಅವಳ ಕಣ್ಣೀರೊರೆಸುತ್ತಿದ್ದೆ ಅಷ್ಟೆ. ಅಮ್ಮ ಪದೇ ಪದೇ ಛಾವಣಿ ದಿಟ್ಟಿಸುತ್ತಾ "ದೇವ್ರೇ ನನ್ನ ಮಗು ಸಲೀಸಾಗಿ ಭೂಮಿಗೆ ಬರ್ಲ್ಲಪಾ" ಅಂತ ಅನ್ನುವಾಗೆಲ್ಲಾ ’ಈ ಅಮ್ಮ ತುಂಬಾ ವಿಚಿತ್ರ’ ಅಂತೆಲ್ಲಾ ಅನಿಸುತಿತ್ತು. ಆಸ್ಪತ್ರೆಗೆ ಹೋದಾಗಲೂ ಅಷ್ಟೆ, ಅಮ್ಮ ಹೆರಿಗೆ ಕೋಣೆಯೊಳಗೆ ಹೊಕ್ಕ ಹೊಕ್ಕ ನಂತರ ಅಪ್ಪ ನನ್ನ ತಬ್ಬಿಕೊಂಡು ಅಳುವಾಗ ’ಈ ಅಪ್ಪ ಏಕೆ ಮಗುವಿನ ತರ ಅಳುತ್ತಿದ್ದಾರೆ’ ಅನ್ನಿಸಿ ನಗು ಬರುತ್ತಿತ್ತು. ನಕ್ಕರೆ ಎಲ್ಲಿ ಅಜ್ಜಿ ಬೈದುಬಿಡುತ್ತಾರೋ ಅನ್ನುವ ಭಯಕ್ಕೆ ಸುಮ್ಮನಾಗುತ್ತಿದ್ದೆ.

ಆಗಾಗ ಹೆರಿಗೆ ಕೋಣೆಯ ಬಾಗಿಲ ಬಳಿ ಠಳಾಯಿಸುತ್ತಿದ್ದ ಅಪ್ಪನ ನಿರೀಕ್ಷೆಯನ್ನು ನಿಜ ಮಾಡಲೋ ಎಂಬಂತೆ ತಲೆ ತಗ್ಗಿಸಿ ಬಂದ ಡಾಕ್ಟರ್ "ಹೆರಿಗೆ ಆಯ್ತು, ಮಗು ಚೆನ್ನಾಗಿದೆ. ಆದ್ರೆ ಅಮ್ಮನನ್ನು ಉಳಿಸಿಕೊಳ್ಳೋಕೆ ಆಗಲಿಲ್ಲ" ಎಂದು ನಿರ್ವಿಕಾರದಿಂದ ಹೇಳಿ ಹೊರಟು ಹೋದರು. ಎಷ್ಟು ಸಾವುಗಳನ್ನು ನೋಡಿದ ಜೀವವೋ ಅದು?
                                                     
                                                                                                                                                      (ಸಶೇಷ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ