ಸೋಮವಾರ, ಜೂನ್ 22, 2015

ಮೌನ ಕಣಿವೆಯಲಿ...

ಸಂಚಾರ 5



ಅಂತೂ ಹೆರಿಗೆ ಸುಸೂತ್ರವಾಗಿ ನಡೆದು ನಾನು ಅಧಿಕೃತವಾಗಿ ತಾಯಿಯಾದೆ. ನನ್ನ ಬದುಕಿನ ಎಲ್ಲಾ ಓರೆಕೋರೆಗಳ ನಡುವೆಯೂ ಮಗಳು ರಶ್ಮಿ ತೊಟ್ಟಿಲ ತುಂಬಾ ಅರಳಿಕೊಂಡಿದ್ದಳು. ತನ್ನ ಮುಗ್ಧ ಕಣ್ಣುಗಳಿಂದಲೇ ಪ್ರತಿಯೊಬ್ಬರನ್ನೂ ತನ್ನೆಡೆಗೆ ನೋಡಿಸುತ್ತಿದ್ದಳು. ನನ್ನೆದೆಯ ತಾಕಲಾಟಗಳು ಅಂತ್ಯವಾಗಿದ್ದವು. ಬದುಕು ಮತ್ತೆ ನೆಮ್ಮದಿಯ ಕಡಲು ಅನಿಸತೊಡಗಿತು. ನಾನು ಬಾಣಂತನಕ್ಕೆ ಅಣಿಯಾಗತೊಡಗಿದೆ. ಆಗೊಮ್ಮೆ ಈಗೊಮ್ಮೆ ಅಮ್ಮ ಇರಬೇಕಿತ್ತು ಅನಿಸುತ್ತಿದ್ದರೂ ಮಗಳ ನಗುವಿನ ಮುಂದೆ ಅವೆಲ್ಲಾ ಮರೆಯಾಗುತ್ತಿತ್ತು.

ಹೆರಿಗೆ, ಮಗು, ಬಾಣಂತನ ಅಂತೆಲ್ಲಾ ಕಾವ್ಯಾಳ ಕಡೆಗೆ ನನಗೆ ಗಮನ ಕೊಡಲಾಗಲಿಲ್ಲವೋ ಅಥವಾ ಹೊತ್ತು ಹೆತ್ತ ಸಂಭ್ರಮಕ್ಕೆ ನಿಜಕ್ಕೂ ನಾನವಳನ್ನು ಕಡೆಗಣಿಸಿದೆನಾ...? ಈ ಕ್ಷಣದಲ್ಲಿ ನಿಂತು ಒಮ್ಮೆ ಹಿಂದಿರುಗಿ ನೋಡಿದರೆ ಯಾವುದನ್ನೂ ಸ್ಪಷ್ಟವಾಗಿ ನಿರ್ಧರಿಸಲಾಗುತ್ತಿಲ್ಲ. ಆದ್ರೆ ಅವಳನ್ನು ಅನಾಥ ಭಾವ ಕಾಡಬಾರದೆಂದು ನಾ ಅನುಕ್ಷಣ ಪ್ರಯತ್ನಿಸಿದ್ದಂತೂ ಸತ್ಯ.

ಮಗುವಿನ ಅಳು, ನಗು, ಲಾಲನೆ, ಪೋಷಣೆಯಲ್ಲಿ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಗಂಡನದು ಎಂದಿನ ನಿರ್ಲಿಪ್ತತೆ. ಮಗು ರಶ್ಮಿಯನ್ನು ಪ್ರೀತಿಸುತ್ತಿದ್ದರಾದರೂ, ಆಗೊಮ್ಮೆ ಈಗೊಮ್ಮೆ ಮುದ್ದಿಸುತ್ತಿದ್ದರಾದರೂ ನನ್ನೆಡೆಗೆ ಅದೇ ದಿವ್ಯ ನಿರ್ಲಕ್ಷ್ಯ.

ನನಗದೆಲ್ಲಾ ಅಭ್ಯಾಸ ಆಗಿಬಿಟ್ಟಿದ್ದರಿಂದಲೋ ಏನೋ ಈಗೀಗ ಅವರ ನಿರ್ಲಿಪ್ತತೆ ನನ್ನ ಮನಸನ್ನು ಹಳ್ಳದೊಳಕ್ಕಿಳಿದು ಕೊಸರಾಡುವಂತೆ ಮಾಡುತ್ತಿರಲಿಲ್ಲ . ಆದ್ರೆ ನಿಜಕ್ಕೂ ನಂಗೆ ಆಶ್ಚರ್ಯ ಆದದ್ದು ಕಾವ್ಯಾಳ ವರ್ತನೆಯ ಬಗ್ಗೆ. ಎಂದೂ ಇಲ್ಲದ ಬದಲಾವಣೆಗಳು ಅವಳ ನಡವಳಿಕೆಯಲ್ಲಿ ಬಂದು ಬಿಟ್ಟಿದ್ದವು. ಸದಾ ಕಾಲೇಜ್, ಫ್ರೆಂಡ್ಸ್, ಮಾಲ್, ಶಾಪಿಂಗ್ ಎಂದು ಓಡಾಡುತ್ತಿದ್ದವಳು ಮನೆಯಲ್ಲೇ ಇರತೊಡಗಿದ್ದಳು. ಕೊನೆಗೂ ಬೇಜವಾಬ್ದಾರಿ ಬಿಟ್ಟು ಹೋಯ್ತಲ್ಲಾ ಅನ್ನುವ ಖುಶಿ ನನಗೆ. ಆದರೆ ಸದಾ ಯಾವುದೋ ಗುಂಗಿನಲ್ಲಿರುವುದು, ಏನೋ ಕೇಳಿದರೆ ಇನ್ನೇನೋ ಹೇಳುವುದು, ಮುಖದ ಮೇಲೆ ಲಾಸ್ಯವಾಡುವ ಯಾವುದೋ ಒಂದು ಸಂತೃಪ್ತಿಯ ಕಳೆ, ಎಂದೂ ಅಡುಗೆ ಮನೆಯ ಕಡೆಗೆ ಮನೆಗೆ ತಲೆ ಹಾಕದಿದ್ದವಳು ಸದಾ ಅಡುಗೆ ಮನೆಯಲ್ಲೇ ಇರುವುದರ ಮರ್ಮ ಒಂದಿಷ್ಟು ನನ್ನನ್ನು ಚಿಂತೆಗೀಡು ಮಾಡಿದರೂ ಬದಲಾದಳಲ್ಲ, ಅವಳ ಬದುಕನ್ನು ಅವಳೇ ಕೊಂಡೊಯ್ಯುವಷ್ಟು ಪ್ರಬುದ್ಧಳಾದಲಲ್ಲಾ ಅನ್ನುವ ಖುಶಿ ಆ ಚಿಂತೆಯನ್ನೂ ಮರೆಸಿಹಾಕಿತ್ತು.

ಅದೊಂದು ದಿನ ಮಗುವಿಗೆ ಮೂರು ತಿಂಗಳ ಚುಚ್ಚು ಮದ್ದು ಹಾಕಿಸಲು ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಗಡಿಯಿಟ್ಟೆ. ತೀರಾ ಚಪ್ಪಲಿ ಮೆಟ್ಟಿ ಹೊರಡುವ ಮುನ್ನ ಜೊತೆಗೆ ಬರುತ್ತಾರೇನೋ ಅನ್ನುವ ಸಣ್ಣ ನಿರೀಕ್ಷೆಯಲ್ಲಿ ಅವರತ್ತ ತಿರುಗಿ ನೋಡಿದೆ. ಇಲ್ಲ, ಮುಖದ ಮೇಲೆ ಅದೇ ನಿರ್ಲಿಪ್ತತೆ.

ಆದ್ರೆ ಅವತ್ತು ಬದುಕು ನನ್ಮೇಲೇಕೋ ಕರುಣೆ ತೋರಿದಂತಿತ್ತು. ಆಸ್ಪತ್ರೆಯಲ್ಲಿ ಕಾಯಬೇಕಾದ ಪ್ರಮೇಯವೇ ಬರಲಿಲ್ಲ. ಒಂದಿಬ್ಬರು ಮಹಿಳೆಯರು ಮಕ್ಕಳ ಚುಚ್ಚು ಮದ್ದಿಗೋಸ್ಕರ ಗಂಡಂದಿರ ಜೊತೆ ಬಂದಿದ್ದರು. ನನ್ನ ಸರದಿ ಬರುತ್ತಲೇ ಕೋಣೆಯ ಒಳಹೊಕ್ಕು ನರ್ಸ್ ಕೈಗೆ ಮಗುವನ್ನಿತ್ತೆ. ಆ ಎಳೆಮಗುವಿಗೆ ಚುಚ್ಚುವುದನ್ನು ನೋಡಲಾಗದೆ ಬಿಗಿಯಾಗಿ ಕಣ್ಣೂ ಮುಚ್ಚಿದೆ. ಮನಸು ’ಬದುಕಿನ ಚುಚ್ಚುವಿಕೆಯ ಪ್ರಾರಂಭ ಮಗಳೇ ಇದು’ ಎಂದುಸಿರಿತು.

ಅಲ್ಲಿಂದ ಆಟೋ ಹತ್ತಿ ಬಂದವಳು ಮನೆಯ ಗೇಟ್ ತೆರೆಯುತ್ತಿದ್ದಂತೆ ಅಂಗಳದಲ್ಲಿ ನಿಂತಿದ್ದ ನನ್ನವರ ಕಾರ್ ನನ್ನನ್ನು ಸ್ವಾಗತಿಸಿತ್ತು. ’ಅರೆ ಇವರಿನ್ನೂ ಆಫೀಸ್ ಗೆ ಹೋಗಿಲ್ಲವೇ’ ಅಂದುಕೊಳ್ಳುತ್ತಾ ಮನೆಯೊಳಗೆ ಕಾಲಿಟ್ಟೆ. ನನಗಾಗಿ ದಿಗ್ಭ್ರಾಂತಿಯೊಂದು ಕಾದು ಕುಳಿತಿತ್ತು.

 (ಸಶೇಷ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ