ಸೋಮವಾರ, ಜೂನ್ 22, 2015

ಮೌನ ಕಣಿವೆಯಲಿ...

ಸಂಚಾರ 6



ಒಳಕೋಣೆಯಲ್ಲಿ ಕಾವ್ಯ ಇದ್ದಳು. ನನ್ನ ಗಂಡ ಅನ್ನಿಸಿಕೊಂಡವನಿದ್ದ. ಕಡಲು ಭೋರ್ಗರೆಯುತ್ತಿತ್ತು. ಮನೆಯ ಮೂಲೆ ಮೂಲೆಯೂ ವಿಕಟಾಟ್ಟಹಾಸದಿಂದ ನಗುತ್ತಿತ್ತು. ಗೋಡೆಯಲ್ಲಿ ನೇತಾಡುತ್ತಿದ್ದ ಅಪ್ಪ-ಅಮ್ಮನ ಫೊಟೋ ಯಾಕೋ ಮುಸುಕಾದಂತಿತ್ತು. ನಾ ಕುಸಿದು ಬಿದ್ದೆ. ಮಗಳು ಅಂದುಕೊಂಡಿದ್ದ ತಂಗಿ ಬಟಾಬಯಲಲ್ಲೇ ಮೋಸ ಮಾಡಿದ್ದಳು. ಪರಮ ಸಂಭಾವಿತನಂದುಕೊಂಡಿದ್ದ ಗಂಡ ನಿರ್ಲಿಪ್ತತೆಯ ಸೋಗಿನಲ್ಲೇ ನೀಚತನಕ್ಕಿಳಿದಿದ್ದ.

ಏನೂ ಮಾಡಲು ತೋಚದೆ ಕೋಣೆಯ ಕದವಿಕ್ಕಿ ಸುಮ್ಮನೆ ಮನೆಯ ಹೊಸ್ತಿಲಲ್ಲಿ ಬಂದು ಕುಳಿತುಕೊಂಡೆ. ಏನೋ ವಿಚಿತ್ರ ತಳಮಳ. ತೀರಾ ಎದೆಯೊಳಗೆ ಕೈ ಹಾಕಿ ಹೃದಯವನ್ನು ಹಿಂಡಿ ಮಧ್ಯ ರಸ್ತೆಯಲ್ಲಿ ಬಿಸುಟಿ ಹೋದಂತಹಾ ಯಾತನೆ. ತನ್ನ ಮದುವೆಯಲ್ಲಿ ಲಂಗ ದಾವಣಿ ತೊಟ್ಟು, ಮೋಟುದ್ದ ಕೂದಲನು ನನ್ನಿಂದಲೇ ಹೆಣೆಯಿಸಿ, ಮುಡಿ ತುಂಬಾ ಹೂವು ಮುಡಿದು, ಕೈ ಪೂರ್ತಿ ಮುಚ್ಚುವಷ್ಟು ಹಸಿರು ಗಾಜಿನ ಬಳೆ ತೊಟ್ಟು, ಭಾವನಿಗೆ ಆರತಿ ಎತ್ತಿ ಕುಂಕುಮ ಇಟ್ಟು, ನನ್ನ ಕೈ ಹಿಡಿದು ಎಳೆದುಕೊಂಡು ಹೋಗಿ ಅವರ ಪಕ್ಕ ನಿಲ್ಲಿಸಿ "ಅಕ್ಕಾ, ಎಂಥಾ ಜೋಡೀನೇ ನಿಮ್ಮದು, ನೂರ್ಕಾಲ ಹೀಗೇ ಇರಿ" ಎಂದು ಕಣ್ಣು ತುಂಬಿ ಹಾರೈಸಿದ ಕಾವ್ಯಾಳ ಚಿತ್ರಣವನ್ನು ಕಣ್ಣಮುಂದಕ್ಕೆ ತಂದುಕೊಳ್ಳಲು ಅದೆಷ್ಟೇ ಪ್ರಯತ್ನಪಟ್ಟರೂ ಮಂಚದ ಮೇಲೆ ಅವರಿಬ್ಬರಿದ್ದ ಚಿತ್ರ ಮನಸಿಂದ ಮರೆಯಾಗುತ್ತಲೇ ಇರಲಿಲ್ಲ.

ನಾ ತಲೆಗೆ ಕೈ ಹೊತ್ತು ಕುಳಿತ ಭಂಗಿಯೇ ರೂಮಿಂದ ಕಳ್ಳ ಹೆಜ್ಜೆಯಿಟ್ಟುಕೊಂಡು ಹೊರಗೆ ಬಂದ ಅವರಿಗೆ ನನಗೆಲ್ಲಾ ಅರ್ಥ ಆಗಿದೆ ಅನ್ನುವ ಸತ್ಯವನ್ನು ವಿದ್ಯುಕ್ತವಾಗಿ ತಿಳಿಸಿತ್ತು. ಸಂಜೆ ಸತ್ತು ಕತ್ತಲು ಹುಟ್ಟಿಕೊಂಡರೂ ನನಗಿನ್ನೂ ಮನೆಯೊಳಗೆ ಹೋಗಬೇಕು ಅಂತ ಅನಿಸಿರಲೇ ಇಲ್ಲ. ಕಾವ್ಯಾಳಿಗಾಗಲೀ, ಅವಳ ಭಾವನೆನಿಸಿಕೊಂಡವನಿಗಾಗಲೀ ನನ್ನ ಒಳಗೆ ಕರೆಯುವ, ಸಮಜಾಯಿಷಿ ನೀಡುವ ಯಾವ ಎದೆಗಾರಿಕೆಯೂ ಇರಲಿಲ್ಲ. ನಾನೇನು ಮಾತಾಡಿಬಿಡುತ್ತೇನೋ ಅನ್ನುವ ಭಯದಲ್ಲಿ ಇಬ್ಬರೂ ಕಣ್ಣು ತಪ್ಪಿಸಿಯೇ ಓಡಾಡುತ್ತಿದ್ದರು. ನನಗಾದರೂ ಅಷ್ಟೆ, ಅವರಿಬ್ಬರ ಮುಖ ನೋಡಲೂ ಅಸಹ್ಯವಾಗುತ್ತಿತ್ತು.

ಆದರೆ ಬದುಕೆಂದ ಮೇಲೆ ಕೆಲವೊಮ್ಮೆ ಹೊಲಸುಗಳ ಮೇಲೆ ಕಾಲೂರಿ ನಿಲ್ಲಲೇಬೇಕಾಗುತ್ತದೆ. ಇನ್ನೂ ಹೊಸ್ತಿಲ ಮೇಲೆ ಕುಳಿತರೆ ಮಗುವಿಗೆ ಥಂಡಿಯಾಗಬಹುದೆಂದು ಮಗುವನ್ನೆತ್ತಿಕೊಂಡು ಒಳನಡೆದೆ. ಇಬ್ಬರೂ ಕತ್ತು ತಿರುಗಿಸಿ, ತಲೆ ತಗ್ಗಿಸಿ ಕುಳಿತಿದ್ದರು. ಒಂದು ಮಾತೂ ಆಡದೆ ಅವರಿಬ್ಬರನ್ನು ದಾಟಿ ಒಳಗೆ ಹೋದೆ.

ಮುಂದೇನು ಅನ್ನುವುದು ನನಗೆ ಗೊತ್ತಿರಲಿಲ್ಲ. ಹಸಿವಿಂದ ಚೀರಾಡುತ್ತಿದ್ದ ಮಗುವಿಗೆ ಹಾಲುಣಿಸಿ ಹಾಸಿಗೆಯ ಮೇಲುರುಳಿ ಬಿಕ್ಕಿ ಬಿಕ್ಕಿ ಅಳತೊಡಗಿದೆ. ಅಮ್ಮ ಸತ್ತಂದಿನಿಂದ ಆ ಕ್ಷಣದವರೆಗೂ ಕಟ್ಟಿಕೊಂಡಿದ್ದ ಕಣ್ಣೀರ ಕೋಡಿ ದಂಡೆಯ ಸಮೇತ ಹರಿಯ ತೊಡಗಿತು. ನನ್ನ ಬದುಕೇಕೆ ಹೀಗೆ ಗಾಳಿಗೊಡ್ಡಿದ ಸೊಡರಿನಂತಾಯಿತು ಅಂತ ಮನಸು ಪದೇ ಪದೇ ಪ್ರಶ್ನಿಸತೊಡಗಿತು. ಬಾಲ್ಯದಲ್ಲಿ ಅಮ್ಮನನ್ನು ಕಳ್ಕೊಂಡೆ, ಅಮೇಲೆ ಅಜ್ಜಿ, ಅಮೇಲೆ ಅಪ್ಪ, ಈಗ ಗಂಡ  ತಂಗಿ ಇಬ್ಬರನ್ನೂ ಒಟ್ಟಿಗೆ ಕಳ್ಕೋತಿದ್ದೇನೆ... ಯಾಕೆ ಹೀಗಾಯ್ತು? ಯಾವ ತಪ್ಪಿಗೆ ಈ ಶಿಕ್ಷೆ? ಅಗ್ನಿಸಾಕ್ಷಿಯಾಗಿ ನೂರಾರು ಜನರ ಸಮ್ಮುಖದಲ್ಲಿ "ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ" ಎಂದು ತಾಳಿ ಕಟ್ಟಿದ ಕ್ಷಣಗಳಿಗೆ, ಮಾಡಿದ ಪ್ರತಿಜ್ಞೆಗಳಿಗೆ ಯಾವ ಅರ್ಥವೂ ಇಲ್ವಾ? ಅಥವಾ ಗಂಡಸು ಪ್ರಪಂಚದ ನೀತಿ, ನಿಯತ್ತು, ನಿಷ್ಠೆಗಳ ವ್ಯಾಲಿಡಿಟಿ ತೀರಾ ಸಣ್ಣದೇ? ಹಾಗಿದ್ದರೆ ಅಪ್ಪನೂ ಗಂಡಸೇ ಅಲ್ಲವೇ? ನಮ್ಮಿಬ್ಬರಿಗೋಸ್ಕರ ಎರಡನೇ ಮದುವೆಯನ್ನೂ ಮಾಡಿಕೊಳ್ಳದೆ ಅಷ್ಟು ವರ್ಷ ಬದುಕಿರಲಿಲ್ಲವೇ? ಮತ್ತೆ ನನ್ನ ಗಂಡ ಮಾತ್ರ ಯಾಕೆ ಹೀಗೆ ಮಾಡಿದ? ನನಗೇ ಯಾಕೆ ಮೋಸ ಆಯಿತು...? ಹೀಗೆ ಮೊಗೆದಷ್ಟೂ ಮುಗಿಯದ ಪ್ರಶ್ನೆಗಳು, ಗೊಂದಲಗಳು... ಕಣ್ಣು ಮುಚ್ಚಿ ನಿದ್ರಿಸಲು ಪ್ರಯತ್ನಿಸುತ್ತಿದ್ದರೂ ನಿದ್ರೆ ಮಾತ್ರ ದೂರ ನಿಂತು ಅಣಕಿಸಿ ನಗುತ್ತಿತ್ತೇ ಹೊರತು ಕಣ್ಣ ಬಳಿಯೂ ಸುಳಿಯುತ್ತಿರಲಿಲ್ಲ.

ಆದರೆ ನನ್ನ ಬದುಕಿನ ಬಗ್ಗೆ ನಾನೊಂದು ನಿರ್ಧಾರಕ್ಕೆ ಬರಲೇಬೇಕಿತ್ತು. ಕೊನೇ ಪಕ್ಷ ಮಗಳಿಗೋಸ್ಕರ ಆದರೂ ನಾ ಬದುಕಬೇಕಿತ್ತು, ಅವಳಿಗೊಂದು  ಅಭದ್ರತೆಯಿಲ್ಲದ ಬದುಕನ್ನು ಕಟ್ಟಿಕೊಡುವುದಕ್ಕಾದರೂ ನಾನು ಧೈರ್ಯ ತಂದುಕೊಳ್ಳಬೇಕಿತ್ತು. ರಾತ್ರಿ ಪೂರ್ತಿ ನಿದ್ರೆ ಇರದಿದ್ದರೂ ಎಂದಿನಂತೆ ಮುಂಜಾನೆ ಎದ್ದು ಅಂಗಳ ಸಾರಿಸಿ ರಂಗೋಲಿ ಇಟ್ಟು ಒಂದು ಕ್ಷಣ ಅದರ ಮುಂದೆ ನಿಂತು ’ನನ್ನ ಬದುಕಿನ ರಂಗವಲ್ಲಿಯ ಚುಕ್ಕಿಗಳೇಕೆ ಅದಲು ಬದಲಾಯ್ತು’ ಅಂತ ನಿಟ್ಟುಸಿರಿಟ್ಟು ಪಕ್ಕದ ಗಿಡದಲ್ಲಿದ್ದ ಹೂವನ್ನು ಕಿತ್ತು ದೇವರ ಮುಡಿಗೆ ಸಿಕ್ಕಿಸಿ ಕಣ್ಣು ಮುಚ್ಚಿ ’ಎಲ್ಲವನ್ನೂ ಎದುರಿಸುವ ಧೈರ್ಯ ಕೊಡು’ ಎಂದು ಕೈ ಮುಗಿದು ದೇವರ ಕೋಣೆಯಿಂದ ಹೊರ ಬಂದೆ.


                                                                                                                                                      (ಸಶೇಷ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ