ಭಾನುವಾರ, ಜೂನ್ 28, 2015

ಮೌನ ಕಣಿವೆಯಲಿ...

ಸಂಚಾರ 8



ನನ್ನ ಬದುಕಿನ ಯಾನ ಮತ್ತೆ ಹುಟ್ಟಿ ಬೆಳೆದ ಹಳ್ಳಿಯ ಕಡೆ ಹೊರಳಿತು. ಪುಟ್ಟ ಮಗುವನ್ನೆತ್ತಿಕೊಂಡು ಅಮ್ಮನಿಲ್ಲದ ತವರಿಗೆ ಮರಳಿದೆ. ನನ್ನ ಬದುಕಿನಂತೆಯೇ ಮನೆ ಪೂರ್ತಿ ಜೇಡರ ಬಲೆ ತುಂಬಿಕೊಂಡಿತ್ತು.  ನಾನು ಮಗುವಾಗಿದ್ದಾಗ ಅಪ್ಪ ನನಗೆಂದು ತಂದ ತೊಟ್ಟಿಲನ್ನು ಮೊದಲು ಸ್ವಚ್ಛಗೊಳಿಸಿ ಮಗಳನ್ನು ಮಲಗಿಸಿದೆ. ಬಿಟ್ಟು ಹೋಗಿ ಒಂದು ವರ್ಷವಾಗಿದ್ದರೂ ಈ ಮನೆಯ ಪ್ರತಿ ಇಂಚಲ್ಲೂ ಅಮ್ಮ, ಅಜ್ಜಿ, ಅಪ್ಪನ ನೆನಪುಗಳಿವೆ ಅನಿಸುತಿತ್ತು. ಧೂಳು ತುಂಬಿಕೊಂಡಿದ್ದ ಫೊಟೋ ಒರೆಸಿ ಅಪ್ಪನ ಮುಂದೆ ನಿಂತು "ಅಪ್ಪಾ, ಭೂಮಿಗೂ ಪಾಸಿಟಿವ್ ಮತ್ತು ನೆಗೆಟಿವ್ ಗಳೆಂಬ ಎರಡು ಅಂತ್ಯಗಳಿವೆ. ಜೀವಜಲ ಬಚ್ಚಿಟ್ಟುಕೊಂಡಿರುವ ಅದೇ ಭೂಮಿಯೆದೆಯೊಳಗೆ ಹಲವು ರೋಷಗಳ, ಅಸಹಾಯಕತೆಗಳ, ನೋವುಗಳ ಒಟ್ಟು ಮೊತ್ತವಾದ ಜ್ವಾಲಾಮುಖಿಯೂ ಇದೆ. ಒತ್ತಡ ಹೆಚ್ಚಾದರೆ ಭೂಮಿಯೂ ಸ್ಪೋಟಿಸಿಬಿಡುತ್ತಾಳೆ. ಇನ್ನು ಹುಲುಮಾನವರಾದ ನಾವು ಯಾವ ಲೆಕ್ಕ? ಆದ್ರೆ ನಿನ್ನ ಮಗಳು ಅಳಿಯನಿಗೆ ಈ ಸರಳ ಸತ್ಯ ಅರ್ಥ ಆಗಲೇ ಇಲ್ಲ. ಅಪ್ಪಾ, ನಿನ್ನ ಈ ಭೂಮಿ ತೂಕದ ಮಗಳು ಸ್ಪೋಟಿಸಬಾರದೆಂದು ಮನೆ ಬಿಟ್ಟು ಬಂದಿದ್ದಾಳೆ. ಆಶಿರ್ವಾದಿಸು." ಅಂದೆ. ಯಾಕೋ ಅಪ್ಪ, ಅಮ್ಮನ ಕಣ್ಣಲ್ಲೂ ತೆಳುವಾಗಿ ನೀರು ಓಲಾಡುತ್ತಿದೆ ಅನಿಸಿತು. ಬದುಕು ನಗುತ್ತಿತ್ತಾ...? ಗೊತ್ತಿಲ್ಲ.

ಜೇಡರ ಬಲೆ ತೆಗೆದು, ಧೂಳು ಒರೆಸಿ ಮನೆ ಸ್ವಚ್ಚವಾದ ಮೇಲೆ ಮನಸ್ಸಿಗೇನೋ ಸಮಾಧಾನ, ಯಾವುದೋ ಹೊಸ ಬೆಳಕು ಗಾಳಿ ಬಂದಂತಾಯಿತು. ಆದರೆ ಜೀವನ..? ಅದು ಬರಿ ಗಾಳಿ ಬೆಳಕಿಂದ ಸಾಗದಲ್ಲಾ? ವಿದ್ಯಾಭ್ಯಾಸ ಬೇರೆ ಪಿ.ಯು.ಸಿ ಗೆ ಮೊಟಕುಗೊಂಡಿತ್ತು. ಸ್ವಾಭಿಮಾನದ ಬದುಕಿಗಾಗಿ ಅಸಹ್ಯದ ಬದುಕನ್ನು ಬಿಟ್ಟು ಬಂದಾಗಿತ್ತು. ಮತ್ತೆ ಅದೇ ಹೊಲಸಿನೊಳಕ್ಕೆ ಕಾಲಿಡುವ ಯಾವ ಇರಾದೆಯೂ ನನಗಿರಲಿಲ್ಲ. ಆದ್ರೆ ಬದುಕಿಗೊಂದು ನೆಲೆ ಬೇಕಾಗಿತ್ತು. ತಾನು ಓದಿದ ಪ್ರಾಥಮಿಕ ಶಾಲೆಯಲ್ಲೇ ಶಿಕ್ಷಕಿಯಾಗಿ ಕೆಲಸ ಕೇಳಿಕೊಂಡು ಹೋದೆ. ನನ್ನ ಬದುಕಿನ ಏರಿಳಿತಗಳ ಬಗ್ಗೆ ತಿಳಿದಿದ್ದ ಮುಖ್ಯ ಶಿಕ್ಷಕ ಮನೋಹರ್ ರಾವ್ ಅವರು ಯಾವ ತಕರಾರೂ ಮಾಡದೆ ಕೆಲಸ ಕೊಟ್ಟರು. ಬದುಕಿಗೊಂದು ದಾರಿಯಾಯಿತು. ಬರುವ ಅಲ್ಪ ಸಂಬಳದಲ್ಲೇ ಮನೆಯನ್ನೂ ಸಂಭಾಳಿಸಿ ಮಗಳ ಭವಿಷ್ಯಕ್ಕಾಗಿ ಉಳಿತಾಯ ಮಾಡುತ್ತಿದ್ದೆ.

ಆದರೆ ಒಮ್ಮೊಮ್ಮೆ ಕಾಡುತ್ತಿದ್ದ ಒಂಟಿತನ, ಯಾರೂ ಇಲ್ಲದ ಅನಾಥಭಾವ, ಎಲ್ಲಾ ಶೂನ್ಯ ಅಂತ ಅನ್ನಿಸಿಬಿಡುವ ಖಾಲಿತನವನ್ನು ಎದುರಿಸಲಾಗದೆ ತತ್ತರಿಸಿಬಿಡುತ್ತಿದ್ದೆ. ಬೆಳೆಯುತ್ತಿದ್ದ ಮಗಳು "ಫ್ರೆಂಡ್ಸ್ ಗೆಲ್ಲಾ ಇರುವ ಅಪ್ಪ ನನಗೇಕಿಲ್ಲ?" ಎಂದು ಅಳುವಾಗೆಲ್ಲಾ ನನ್ನ ಬದುಕಿನ ಅಸಹಾಯಕತೆಯ ನೆನೆದು ಅಸಹನೀಯ ದುಃಖವಾಗುತ್ತಿತ್ತು. ಬರಬರುತ್ತಾ ಅದೇ ಜೀವನವಾಯ್ತು. ಒಂಟಿತನವೇ ಸಂಗಾತಿಯಾಯ್ತು. ನನಗಾಗಿ ಮಗಳು...ಮಗಳಿಗಾಗಿ ನಾನು ಅನ್ನುವುದೇ ಬದುಕಿನ ಸೂತ್ರವಾಯಿತು. ರಶ್ಮಿ ದೊಡ್ಡವಳಾಗುತ್ತಿದ್ದಂತೆ ನನ್ನ ಬದುಕಿನ ಹೋರಾಟವನ್ನೆಲ್ಲಾ ತಾನೇ ತಾನಾಗಿ ಅರ್ಥ ಮಾಡಿಕೊಂಡಳೋ ಎಂಬಂತೆ ಅಪ್ಪನ ಬಗ್ಗೆ ಕೇಳುವುದನ್ನೇ ನಿಲ್ಲಿಸಿಬಿಟ್ಟಳು. ಆ ಮಟ್ಟಿಗಿನ ಪರಿಪಕ್ವತೆ ಅವಳಲ್ಲಿರುವುದಕ್ಕೆ ಅದೆಷ್ಟು ಬಾರಿ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದೇನೋ ನನಗೇ ಗೊತ್ತಿಲ್ಲ.

ಈ ಮಧ್ಯೆ ಒಂದು ದಿನ ಮನೋಹರ್ ರಾವ್ ಅವರು ನನ್ನನ್ನು ಕಛೇರಿಗೆ ಕರೆಯಿಸಿ "ಮೂರು ವರ್ಷಗಳಲ್ಲಿ ನಮ್ಮ ಶಾಲೆಗೆ ಹೈಸ್ಕೂಲ್ ಸೆಕ್ಷನ್ ಸ್ಯಾಂಕ್ಷನ್ ಆಗಲಿದೆ. ಹೇಗೂ ನೀವು ಇದೇ ಶಾಲೆಯಲ್ಲಿ ಓದಿರುವವರು. ಖಾಸಗಿಯಾಗಿ ಪದವಿ ಕಟ್ಟಿ ಏಕೆ ಇಲ್ಲೇ ಹೈಸ್ಕೂಲ್ ಶಿಕ್ಷಕಿ ಮುಂದುವರಿಯಬಾರದು?" ಎಂದು ಪ್ರಶ್ನಿಸಿದರು. ಆ ಕ್ಷಣಕ್ಕೆ ಏನು ಹೇಳಬೇಕೆಂದು ತೋಚಲಿಲ್ಲ. ಒಂದೆರಡು ದಿನಗಳ ಸಮಾಯಾವಕಾಶ ಕೇಳಿದೆ. ಒಂದು ಕಡೆ ಕೆಲಸದ ಒತ್ತಡ, ಇನ್ನೊಂದೆಡೆ ಮಗಳ ಜವಾಬ್ದಾರಿ. ಇವೆರಡರ ಮಧ್ಯೆ ಓದೋಕೆ, ಬರೆಯೋಕೆ ನನ್ನಿಂದ ಸಾಧ್ಯಾನಾ ಅಂತೆಲ್ಲಾ ಅನಿಸುತ್ತಿತ್ತು.

ಆದರೆ ಆಗೊಮ್ಮೆ ಈಗೊಮ್ಮೆ ಕಾಡುವ ಒಂಟಿತನವನ್ನು, ಸೂಚನೆಯೇ ಇಲ್ಲದೆ ಧುತ್ತೆಂದು ಪ್ರತ್ಯಕ್ಷವಾಗಿಬಿಡುವ ಬೇಸರವನ್ನು, ಏಕಾಂತದಲ್ಲಿ ಹಿಂಡಿ ಹಿಪ್ಪೆ ಮಾಡಿಬಿಡುವ ಹಳೆ ನೆನಪುಗಳಿಂದ ಬಿಡುಗಡೆ ಪಡೆದುಕೊಳ್ಳಲು ನಿಂತು ಹೋಗಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸುವುದೋ ಸೂಕ್ತ ಮಾರ್ಗ ಎಂದು ತೋರಿದ ಕ್ಷಣವೇ ಖಾಸಗಿಯಾಗಿ ಪದವಿ ಕಟ್ಟಲು ನಿರ್ಧರಿಸಿದೆ.

ಅಲ್ಲಿಂದೀಚೆಗೆ ಬದುಕು ಬದಲಾಯಿತು. ರಶ್ಮಿಯ ವಿದ್ಯಾಭ್ಯಾಸದ ಜೊತೆ ಜೊತೆಗೆ ನನ್ನ ಓದೂ ಸಾಗುತ್ತಿತ್ತು. ಅವಳಿಗೆ ನಾನು, ನನಗೆ ಅವಳು ಪರಸ್ಪರ ಸಹಕರಿಸುತ್ತಿದ್ದೆವು. ಮನೆ, ಶಾಲೆ, ಅವಳ ಓದು, ನನ್ನ ಓದು ಅಂತೆಲ್ಲಾ ಹಿಂದಿನ ಬದುಕಿನೆಡೆಗೆ ತಿರುಗಿ ನೋಡಲೂ ಪುರುಸೊತ್ತಿಲ್ಲವೆಂಬಷ್ಟು ಇಂದಿನ ಬದುಕಿನಲ್ಲಿ ವ್ಯಸ್ತಳಾಗಿಬಿಟ್ಟೆ. ಮಗಳಾದರೂ ಅಷ್ಟೆ. ಬುದ್ಧಿವಂತೆ, ಎಂದೂ ನನ್ನ ಸಾಮರ್ಥ್ಯವನ್ನು ಮೀರಿದ ಬೇಡಿಕೆ ಇಟ್ಟವಳೇ ಅಲ್ಲ. ನನ್ನೆಲ್ಲಾ ಮಿತಿಗಳನ್ನು ಅರಿತುಕೊಂಡೇ ಎಲ್ಲೂ ನನಗೆ ನಿರಾಶೆಯಾಗದಂತೆ, ಹೊರೆಯಾಗದಂತೆ ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದಳು.

ಮೂರು ವರ್ಷ ಕಳೆಯುತ್ತಿದ್ದಂತೆ ನನ್ನ ಪದವಿ ಮುಗಿದು ಹೈಸ್ಕೂಲ್ ಶಿಕ್ಷಕಿಯಾಗಿ ಬಡ್ತಿ ಪಡೆದೆ. ವೈಯಕ್ತಿಕ ಬದುಕಿನ ದುಃಖ, ದುಮ್ಮಾನ, ನೋವುಗಳನ್ನು ಮೀರಿ ವೃತ್ತಿ ಜೀವನ ನನ್ನ ಕೈ ಹಿಡಿದಿತ್ತು. ಶಾಲೆಯ ವಿದ್ಯಾರ್ಥಿಗಳಂತೂ ನನ್ನ ತುಂಬಾ ಹಚ್ಚಿಕೊಂಡು ಬಿಟ್ಟಿದ್ದರು. ಈಗೀಗ ಹಳೆ ಬದುಕು, ಅದರ ನೋವು, ನನಗಾದ ಪ್ರಚ್ಛನ್ನ ಮೋಸ ಯಾವುದೂ ನೆನಪಾಗುತ್ತಲೇ ಇರಲಿಲ್ಲ.



                                                                                                                                                      (ಸಶೇಷ)




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ