ಶನಿವಾರ, ಜೂನ್ 20, 2015

ಮೌನ ಕಣಿವೆಯಲಿ...

ಸಂಚಾರ 3


ಆದ್ರೆ ಕಾವ್ಯಾಳ ಬದುಕು ನನ್ನಂತಾಗಬಾರದು, ಅದೆಷ್ಟೇ ಕಷ್ಟವಾದರೂ ಅವಳ ಓದು ಅರ್ಧಕ್ಕೇ ನಿಲ್ಲಬಾರದೆಂದು ಪಣ ತೊಟ್ಟೆ. ಈ ಮಧ್ಯೆ ಇಷ್ಟ ಇತ್ತೋ ಇಲ್ವೋ, ಮಾನಸಿಕವಾಗಿ ನಾನು ಸಂಸಾರ ನಡೆಸಲು ತಯಾರಾಗಿದ್ದೆನೋ ಇಲ್ವೋ, ನನಗೊಂದು ಮದುವೆ ಮಾಡಿ ಅಜ್ಜಿ ನನ್ನ ಮಡಿಲಲ್ಲೇ ಕಣ್ಣು ಮುಚ್ಚಿದರು. ತೀರಾ ಉಸಿರು ನಿಲ್ಲುವ ಒಂದೆರಡು ಕ್ಷಣಗಳ ಮುನ್ನ ನಡುವ ಕೈಗಳಿಂದಲೇ ನನ್ನ ಕೈ ಹಿಡಿದು "ಹುಡುಗು ಬುದ್ಧಿಯ ಕಾವ್ಯಾಳನ್ನು ದಡ ಸೇರಿಸುವ ಜವಾಬ್ದಾರಿ ನಿನ್ನದು ಮಗಳೇ" ಅಂತಂದಿದ್ದರು.

ನನ್ನ ಬದುಕಿನ ಹಲವು ’ಇಲ್ಲ’ಗಳ ಮಧ್ಯೆ ಬಹುದೊಡ್ಡ ’ಇದೆ’ಯಾಗಿ ನನ್ನವರು ನನ್ನ ಬದುಕನ್ನು ಪ್ರವೇಶಿಸಿದ್ದರು. ಅದುವರೆಗೂ ಬದುಕಲ್ಲಿ ಅನುಭವಿಸಿದ ಕಷ್ಟಗಳನ್ನು ಅವರ ಸಾನ್ನಿಧ್ಯದಲ್ಲಿ ನಾ ಮರೆಯತೊಡಗಿದೆ. ಅಪ್ಪನ ಪರಿಸ್ಥಿತಿಯ ಬಗ್ಗೆ ತಿಳಿದಿದ್ದ ನನ್ನ ಪತಿ ಅಪ್ಪನ ಜೊತೆಗೇ ಇರಲು ಅನುಮತಿ ಕೊಟ್ಟಿದ್ದರು. ತಿಂಗಳಿಗೆ ಎರಡು ಬಾರಿ, ಮೂರು ಬಾರಿ ಅವರೇ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಅಳಿಯ ಮನೆಗೆ ಬಂದಾಗೆಲ್ಲಾ ಅಪ್ಪ "ನನ್ನ ಮಗಳು ಭೂಮಿ ತೂಕದ ಹೆಣ್ಣು, ಅವಳಮ್ಮನೂ ಕಾವ್ಯಾಳನ್ನು ಇಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳೋ ಗೊತ್ತಿಲ್ಲ, ಕಾವ್ಯಾಳಿಗೆ ಎಂದೂ ಅಮ್ಮನ ಕೊರತೆ ಕಾಡದೆ ಹಾಗೆ ನೋಡಿಕೊಂಡಿದ್ದೇ ಇವಳು" ಅಂತನ್ನುತ್ತಿದ್ದರು. ನಾನು ಸುಮ್ಮನೆ ತಲೆ ತಗ್ಗಿಸಿ ನಗುತ್ತಿದ್ದೆ.

ಎರಡು ವರ್ಷಗಳ ನಮ್ಮಿಬ್ಬರ ಮಧುರ ಸಾಂಗತ್ಯದ ಫಲವೆಂಬಂತೆ ನನ್ನ ಉದರದಲ್ಲಿ ಹೊಸ ಜೀವವೊಂದು ಕುಡಿಯೊಡೆದಿತ್ತು. ಹೊರದೆ, ಹೆರದೆ ಅಮ್ಮನಾಗಿದ್ದ ನನಗೆ ಹೊಟ್ಟೆಯೊಳಗೆ ಹೊಸ ಜೀವವೊಂದು ಮಿಸುಕಾಡುವಾಗೆಲ್ಲಾ ವಿಚಿತ್ರ ಅನುಭೂತಿ, ವಿಶೇಷ ಅನುಭವವಾಗುತ್ತಿತ್ತು. ಆದ್ರೆ ಅಮ್ಮನ ಮರಣದ ಬರ್ಬರತೆಯನ್ನು ನೆನೆಸಿಕೊಂಡು ಅಪ್ಪ, ಮಗಳ ಜೀವವೂ ಬಲಿಯಾದರೆ ಅನ್ನುವ ತೊಳಲಾಟದಲ್ಲೇ ಮತ್ತಷ್ಟು ಕುಸಿದರು.

ಅದೊಂದು ರಾತ್ರಿ ಕಾವ್ಯ ನನ್ನ ಬೊಗಸೆ ಹಿಡಿದೆತ್ತಿ "ಅಕ್ಕಾ, ನಿನಗೆ ಮಗುವಾದ ಮೇಲೆ ನನ್ನ ಮರೆಯಲ್ಲ ಅಲ್ವಾ?" ಅಂತ ಕಣ್ಣಪೂರ್ತಿ ಕಣ್ಣೀರು ತುಂಬಿ ಕೇಳಿದ್ದಳು. ನಾನು "ಹುಚ್ಚೀ, ಎಷ್ಟು ಮಕ್ಕಳಿಗೆ ನಾ ಜನ್ಮ ಕೂಟ್ಟರೂ ನನ್ನ ಮೊದಲ ಮಗಳು ನೀನೆ" ಎಂದು ಅಷ್ಟೇ ಕಕ್ಕುಲಾತಿಯಿಂದೆ ಹೇಳಿದ್ದೆ. ಆ ರಾತ್ರಿ ಕಾವ್ಯ ನನ್ನ ಮತ್ತಷ್ಟು ಬಿಗಿಯಾಗಿ ತಬ್ಬಿಕೊಂಡು ಮಲಗಿದ್ದಳು. ಯಾಕೋ ಗೊತ್ತಿಲ್ಲ, ಹೆಸರಿಲ್ಲದ ಪಕ್ಷಿಯೊಂದು ಕಿವಿಯ ಪಕ್ಕದಲ್ಲಿ ವಿಕಾರವಾಗಿ ಕೂಗಿದಂತೆ ಕನಸು ಬಿದ್ದು ಅಪರಾತ್ರಿಯಲ್ಲಿ ಎದ್ದು ಕೂತಿದ್ದೆ ನಾನು. ಮನಸ್ಸಿನ ಪೂರ್ತಿ ಗೊಂದಲ, ಒಂದು ಅವ್ಯಕ್ತ ನೋವು.

ಈ ಘಟನೆ ಮರೆಯುವ ಮುನ್ನವೇ ಒಂದು ಮುಂಜಾನೆ ಕಾಫಿ ಕೊಡಲೆಂದು ಅಪ್ಪನ ರೂಮಿಗೆ ಹೋಗಿ ಅವರನ್ನು ತಟ್ಟಿ ಎಬ್ಬಿಸಲೆಂದು ಕೈ ಹಿಡಿದು ಒಮ್ಮೆ ಬೆಚ್ಚಿ ಹಿಂದೆಗೆದ. ನನ್ನ ಅನುಮಾನ ಸುಳ್ಳಾಗಿರಲಿ ಎಂದು ಮನಸ್ಸಿನಲ್ಲಿ ಪ್ರಾರ್ಥಿಸುತ್ತಾ ಆರ್ತ್ರಳಾಗಿ ಅಪ್ಪನನ್ನು ಕರೆಯುತ್ತ ಮತ್ತೆ ಕೈ ಹಿಡಿದೆದೆಳೆದೆ. ದೇಹ ತಣ್ಣಗಾಗಿತ್ತು, ಜೀವ ಆದಾಗಲೇ ಹಾರಿ ಹೋಗಿತ್ತು. ಬದುಕು ನಿಷ್ಕರುಣೆಯಿಂದ ಮತ್ತೊಂದು ದಾಳ ಉರುಳಿಸಿತ್ತು, ನಾನು ಮತ್ತೆ ಒಂಟಿಯಾದೆ.

ಕಾಲೇಜು, ಪಾಠ, ಪ್ರವಚನ, ಪರೀಕ್ಷೆ ಅಂತೆಲ್ಲಾ ಬ್ಯುಸಿಯಾಗಿದ್ದ ಕಾವ್ಯಾಳಿಗೆ ಅಪ್ಪನ ಸಾವು ತೀರಾ ಅನ್ನುವಷ್ಟು ತಟ್ಟಲಿಲ್ಲವಾದರೂ ನಾನು ಒಳಗೊಳಗೆ ಅಕ್ಷರಶಃ ಕುಸಿದು ಬಿಟ್ಟಿದ್ದೆ. ಮೇಲೆ ಮತ್ತದೇ ನಗುವಿನ ಮುಖವಾಡ, ಮಾತಿನ ಮೆರವಣಿಗೆ.

ನನ್ನ ಯಜಮಾನರು "ಹಳ್ಳಿಯಲ್ಲಿ ಇಬ್ಬರೇ ಇರುವುದು ಬೇಡ. ಆಫೀಸು-ಅಡುಗೆ ಅಂತ ನಾನೂ ಎರಡೆರಡು ಕಡೆ ಒದ್ದಾಡುವುದು ತಪ್ಪುತ್ತದೆ, ಕಾವ್ಯಾಳ ಮುಂದಿನ ಓದಿಗೂ ಸಹಾಯವಾಗುತ್ತದೆ. ಇಬ್ಬರೂ ಬೆಂಗಳೂರಿಗೆ ಬಂದು ಬಿಡಿ" ಅನ್ನತೊಡಗಿದರು . ಅಮ್ಮ, ಅಜ್ಜಿ, ಅಪ್ಪ ಬದುಕಿದ, ಮರಣಿಸಿದ ಈ ಮನೆಯನ್ನು ಬಿಟ್ಟು ಹೋಗಲು ನನ್ನ ಮನಸಿಗೆ ಕಷ್ಟವಾಗುತ್ತಿತ್ತು. ಈ ಮನೆ ಖಾಲಿ ಬೀಳುವುದನ್ನು ಕಲ್ಪಿಸಿಕೊಳ್ಳಲೂ ನನ್ನಿಂದಾಗುತ್ತಿರಲಿಲ್ಲ. ಆದ್ರೆ ಅವರ ಮಾತಿನಲ್ಲೂ ನ್ಯಾಯ ಇತ್ತು, ಕಾವ್ಯ ಬೇರೆ ಬೆಂಗಳೂರಿನ ಕಡೆ ಮುಖ ಮಾಡಲು, ಅಲ್ಲಿನ ಸರ್ವ ಸ್ವತಂತ್ರವನ್ನೂ ಅನುಭವಿಸಲು ತುದಿಗಾಲಲ್ಲಿ ನಿಂತಿದ್ದಳು.


( ಸಶೇಷ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ